ನಮಗೊಂದು ಪೊಲೀಸ್ ಸ್ಟೇಷನ್ ಕಟ್ಟಿಸಿಕೊಡಿ” ಎಂದು ಪೊಲೀಸರು ಕೇಳಿಕೊಂಡರೆ ಅದನ್ನು ಕಟ್ಟಿಸಿಕೊಡಲು ಓಡೋಡಿ ಬರುವವರು ಯಾರು?…
1 min read
”ನಮಗೊಂದು ಪೊಲೀಸ್ ಸ್ಟೇಷನ್ ಕಟ್ಟಿಸಿಕೊಡಿ” ಎಂದು ಪೊಲೀಸರು ಕೇಳಿಕೊಂಡರೆ ಅದನ್ನು ಕಟ್ಟಿಸಿಕೊಡಲು ಓಡೋಡಿ ಬರುವವರು ಯಾರು?
ಆ ವ್ಯಾಪ್ತಿಯ ರೌಡಿಗಳು, ಗೂಂಡಾಗಳು, ಕಳ್ಳರು, ಖದೀಮರು, ಅತ್ಯಾಚಾರಿಗಳು, ಕೊಲೆಗಡುಕರೇ ಮುಂತಾದ ಸಮಾಜದ್ರೋಹಿ, ಸಮಾಜಘಾತುಕ ಶಕ್ತಿಗಳು.
ಅದೇ ರೀತಿಯಲ್ಲಿ, “ನಮಗೊಂದು ತಾಲ್ಲೂಕು ಕಚೇರಿ ಕಟ್ಟಿಸಿಕೊಡಿ” ಎಂದು ಕಂದಾಯ ಇಲಾಖೆ ಅಧಿಕಾರಿಗಳು ಕೇಳಿದರೆ ಮುಂದೆ ಬರುವವರು ಯಾರು?
ಭೂಗಳ್ಳರು. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು, ಆಯಕಟ್ಟಿನ ಸರ್ಕಾರಿ ಭೂಮಿಯನ್ನು ಮತ್ತು ಬಡವರ ಭೂಮಿಯನ್ನು ಕೊಳ್ಳೆ ಹೊಡೆಯುವ ಭೂಮಾಫಿಯಾ ವಂಚಕರು, ವೈಟ್ ಕಾಲರ್ ಕ್ರಿಮಿನಲ್ಗಳು.
ಇಂತಹವರಿಂದ ಈ ರೀತಿಯ ಸಹಾಯ ಪಡೆದರೆ ಅಲ್ಲಿ Conflict of Interest ಉದ್ಭವಿಸುತ್ತದೆ ಎನ್ನುವ ಪ್ರಜ್ಞೆ ಇಲ್ಲದ ಮತಿಗೇಡಿಗಳು ಅಥವಾ ಖದೀಮರು ನಮ್ಮ ಸರ್ಕಾರಿ ಅಧಿಕಾರಿಗಳು ಮತ್ತು ಭ್ರಷ್ಟ ಹಾಗೂ ಅಯೋಗ್ಯ ರಾಜಕಾರಣಿಗಳು, ಶಾಸಕರು, ಮಂತ್ರಿಗಳು.
ದೇವನಹಳ್ಳಿ ತಾಲ್ಲೂಕು ಕಚೇರಿಯ ಕಟ್ಟಡ ನಿರ್ಮಿಸಿಕೊಟ್ಟಿರುವ ಈ ರೊನಾಲ್ಡ್ ಕೊಲಾಸೋ ಎನ್ನುವ ವ್ಯಕ್ತಿ ದೇವನಹಳ್ಳಿ ತಾಲ್ಲೂಕಿನ ಅನೇಕ ಕಡೆ ಸರ್ಕಾರಿ ಭೂಮಿಯನ್ನು ಲೂಟಿ ಹೊಡೆದಿದ್ದಾರೆ ಎಂದು ಅಲ್ಲಿಯ ಅನೇಕ ರಾಜಕಾರಣಿಗಳೂ ಸೇರಿದಂತೆ ನೂರಾರು ಸ್ಥಳೀಯರು ಆರೋಪ ಮಾಡುತ್ತಾರೆ. ಹೀಗಿರುವಾಗ, ಆತನ ಮೇಲೆ ಆರೋಪ ಮಾಡಿ ಸರ್ಕಾರಕ್ಕೆ ದೂರು ನೀಡಿದರೆ, ಆತ ನಿರ್ಮಿಸಿಕೊಟ್ಟಿರುವ ಕಟ್ಟಡದಲ್ಲಿ ಕುಳಿತು ಕೆಲಸ ಮಾಡುವ ಕಂದಾಯ ಇಲಾಖೆ ಅಧಿಕಾರಿಗಳ ನಿಷ್ಠೆ ಯಾರಿಗಿರುತ್ತದೆ? ಅವರೇನು ತನಿಖೆ ಮಾಡುತ್ತಾರೆ? ಯಾವ ರೀತಿಯ ವರದಿ ಕೊಡುತ್ತಾರೆ?
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಈ ಮೂಲಕ ನಾವು ಆಗ್ರಹಿಸುವುದೇನೆಂದರೆ, ಹೀಗೆ ಸರ್ಕಾರಿ ಕಟ್ಟಡದ ಮೇಲೆ ನಾಮಫಲಕ ಅಳವಡಿಸಿರುವುದು ಕಾನೂನುಬಾಹಿರ ಮತ್ತು ಅನೈತಿಕ ಕೃತ್ಯ. ನಿಮಗೆ ಸ್ವಲ್ಪವಾದರೂ ಪ್ರಜಾಡಳಿತ ಮತ್ತು ಸಂವಿಧಾನದ ಕುರಿತು ಪ್ರಜ್ಞೆ ಇದ್ದಲ್ಲಿ ಈ ಕೂಡಲೇ ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಿ. ಈ ಪತ್ರದ ಹಿನ್ನೆಲೆಯಲ್ಲಿ ನಾವು ನಿಮಗೆ ಒಂದೆರಡು ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ನೀವು ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ – KRS Party ಸೈನಿಕರು ಈ ಕಚೇರಿಗೆ ಹೋಗಿ ಅದನ್ನು ಕಿತ್ತೆಸೆಯುವುದು ಅನಿವಾರ್ಯವಾಗುತ್ತದೆ.
ಧನ್ಯವಾದಗಳು.
- ರವಿ ಕೃಷ್ಣಾರೆಡ್ಡಿ
ಗೌರವಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.

