ಜನಪದ ಸಾಹಿತ್ಯವು ಒಂದು ಮೌಖಿಕ ಮಹಾಕಾವ್ಯ, ಇಂತಹ ಮಹಾಕಾವ್ಯದೊಳಗೆ ಮಾನವೀಯತೆಯ ಪ್ರಜ್ಞೆಯು ನಿಖರತೆ ಮತ್ತು ನಿಷ್ಟೂರತೆಯೊಂದಿಗೆ ಅರಳಿರುವುದನ್ನು ಕಾಣಬಹುದು: ಬಿ.ತಿಪ್ಪೆರುದ್ರಪ್ಪ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಜನಪದ ಸಾಹಿತ್ಯವು ಒಂದು ಮೌಖಿಕ ಮಹಾಕಾವ್ಯ, ಇಂತಹ ಮಹಾಕಾವ್ಯದೊಳಗೆ ಮಾನವೀಯತೆಯ ಪ್ರಜ್ಞೆಯು ನಿಖರತೆ ಮತ್ತು ನಿಷ್ಟೂರತೆಯೊಂದಿಗೆ ಅರಳಿರುವುದನ್ನು ಕಾಣಬಹುದು: ಬಿ.ತಿಪ್ಪೆರುದ್ರಪ್ಪ
ಚಿಕ್ಕಮಗಳೂರು ಏ ೨೭: ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಪಠ್ಯದಲ್ಲಿ ಜಾನಪದವನ್ನು ಅಳವಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ 6 ನೇ ಜಿಲ್ಲಾ ಜಾನಪದ ಸಮ್ಮೇಳನ ಕೈಗೊಂಡಿದೆ.
ರಾಜ್ಯ ಸರ್ಕಾರದ ಆದೇಶದಂತೆ ಡಿಗ್ರಿ ಕಾಲೇಜುಗಳಲ್ಲಿ ನಡೆಸಲಾಗುತ್ತಿರುವ ಜಾನಪದ ಕಲೋತ್ಸವ ಕಾರ್ಯಕ್ರಮವನ್ನು ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೂ ವಿಸ್ತರಿಸಬೇಕು, ಜಾನಪದ ಕಾರ್ಯಕ್ರಮಗಳನ್ನು, ಜಾನಪದ ಸಮ್ಮೇಳನಗಳನ್ನು ನಡೆಸುವ ಸಂಘ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನೀಡಬೇಕು,
ಗ್ರಾಮೀಣ ಭಾಗದಲ್ಲಿ ಎಲೆ ಮರೆಯ ಕಾಯಿಯಂತಿರುವ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಮಾಸಾಶನ ನೀಡಬೇಕು, ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ಯುವ ಕಲಾವಿದರಿಗೂ ನೀಡಬೇಕು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ಕಲೆಗಳ ಕುರಿತ ತರಬೇತಿ ಕಾರ್ಯಗಾರಗಳನ್ನು ನಡೆಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.
ಸಮಾರೋಪ ನುಡಿಗಳನ್ನಾಡಿದ ಸಾಹಿತಿ ಬಿ.ತಿಪ್ಪೇರುದ್ರಪ್ಪ ಜಾನಪದ ಸಾಹಿತ್ಯ ಒಂದು ಮೌಖಿಕ ಮಹಾಕಾವ್ಯ,
ಅನಕ್ಷರಸ್ಥ ಗ್ರಾಮೀಣ ಭಾಗದ ರೈತರು, ಶ್ರಮಿಕರು, ದಲಿತರು, ಮಹಿಳೆಯರು,
ಕಾರ್ಮಿಕರು,ಮನೆ,ಗದ್ದೆ, ಹೊಲಗಳಲ್ಲಿ ದುಡಿಮೆಯ ಶ್ರಮದಲ್ಲಿ ಹಾಡುತ್ತ ನೋವುಗಳನ್ನು ಮರೆತು, ಆನಂದ ಕಂಡುಕೊಳ್ಳುತ್ತಿದ್ದರು. ಹೀಗೆ ಮೌಖಿಕವಾಗಿ ಜಾನಪದರು ಕಟ್ಟಿ ಕೊಟ್ಟ ಸಾಹಿತ್ಯವೇ ಜಾನಪದ ಸಾಹಿತ್ಯವಾಗಿ ಹೊರಹೊಮ್ಮಿದೆ ಎಂದರು.
ಜಾನಪದ ಮಹಾಕಾವ್ಯ ಸರ್ವಕಾಲಕ್ಕೂ ಸಲ್ಲುವಂತದ್ದು,ಮಹಿಳೆಯರು ಹಬ್ಬ ಹರಿದಿನದಲ್ಲಿ, ಮದುವೆ, ಶುಭ ಕಾರ್ಯಗಳಲ್ಲಿ ಸೋಬಾನೆ ಪದಗಳು, ಹಸೆಮಣೆ ಹಾಡುಗಳು, ಒಡಪುಗಳು ಗಾದೆಗಳನ್ನೂ ಹಾಡಿ ಸಂಭ್ರಮಿಸುತ್ತಿದ್ದರು ಮಕ್ಕಳು ಮತ್ತು ಯುವ ಜನತೆ ಚಿನ್ನಿದಾಂಡು, ಕೋಲಾಟ, ಲಗೋರಿ, ಕಬಡ್ಡಿಯಂತಹ ಜಾನಪದ ಆಟಗಳನ್ನು ಆಡುತ್ತಿದ್ದರು, ಆದರೆ ಅವೆಲ್ಲವೂ ಇಂದು ಬದಲಾಗಿ ಟಿವಿ ಧಾರಾವಾಹಿಗಳು, ಮೊಬೈಲ್ ಮತ್ತು ಕಂಪ್ಯೂಟರ್ ಗಳಲ್ಲಿ ಮುಳುಗಿದ್ದಾರೆ ಎಂದು ವಿಷಾದಿಸಿದರು.
ಆಶಯ ನುಡಿಗಳನ್ನಾಡಿದ ಸಾಹಿತಿ ರಮೇಶ್ ಬೊಂಗಾಳೆ ಜಾನಪದ ವಿಶಿಷ್ಟವಾದಂತಹ ಸಾತ್ವಿಕ ನೆಲಗಟ್ಟಿನ ಮೇಲೆ ನಿಂತಿರುವ ಕಲೆ, ಜಾನಪದ ನಮಗೆ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಮಾನವೀಯ ಮೌಲ್ಯಗಳನ್ನು ಕಲಿಸುತ್ತದೆ ಎಂದರು.
ಆಧುನಿಕತೆಯ ಅಬ್ಬರದಲ್ಲಿ, ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಲ್ಲಿ, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕೈ ಬಿಟ್ಟಿರುವ ಇಂದಿನ ಯುವಪೀಳಿಗೆಯನ್ನು ಸರಿದಾರಿಗೆ ತರಲು ಇಂತಹ ಸಮ್ಮೇಳನಗಳು ಸಹಕಾರಿ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ನಮ್ಮ ಹಿರಿಯರು ಕಟ್ಟಿಕೊಟ್ಟಿರುವ ಜಾನಪದವನ್ನು ಎಲ್ಲರೂ ಜತನದಿಂದ ಕಾಪಾಡಬೇಕು ಎಂದು ಹೇಳಿದರು.
ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ ಜಾನಪದದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ 15 ಜನ ಸಾಧಕರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ಹಳೆಕೋಟೆ ರಮೇಶ್. ಪರಿಸರವಾದಿ ಗುರುವೇಶ್ ಗೌಡ, ಕೆಸವಿನಮನೆ ಬೈರೇಗೌಡ,ಆಶ್ರಯ ಫೌಂಡೇಶನ್ ಸಂಸ್ಥಾಪಕಿ ವರ್ಷ, ಕ ಸಾ ಪ ತಾಲೂಕು ಮಾಜಿ ಅಧ್ಯಕ್ಷರಾದ ಬಿಸ್ಲೆಹಳ್ಳಿ ಸೋಮಶೇಖರ್.ಮಾವಿನಕೆರೆ ದಯಾನಂದ್, ಕಸಾಪ ತಾಲೂಕು ಅಧ್ಯಕ್ಷ ಎಚ್ಎಮ್ ಲೋಕೇಶ್ವರಪ್ಪ.ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಿ ಬಿ ಪವನ್,ಉಪನ್ಯಾಸಕ ಸುಭಾಷ್ ಮುಂತಾದವರು ಉಪಸ್ಥಿತರಿದ್ದರು.
••••••••••••••••
ಡಿ.ಎಂ.ಮಂಜುನಾಥಸ್ವಾಮಿ ಅವಿನ್ ಟಿವಿ ಸುದ್ದಿಜಾಲ …… ✍️
ಚಿಕ್ಕಮಗಳೂರು

