लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆಪ್ತರೊಬ್ಬರ ಮಗಳಿಗೆ ವಸತಿ ಸೌಲಭ್ಯವನ್ನು ಹುಡುಕುತ್ತಾ,  ಹೆಣ್ಣುಮಕ್ಕಳ ಕೆಲವು ಪಿಜಿಗಳನ್ನು ನೋಡಿ ಬಂದೆ.  ಅಬ್ಬಾ…..

1 min read

ಆಪ್ತರೊಬ್ಬರ ಮಗಳಿಗೆ ವಸತಿ ಸೌಲಭ್ಯವನ್ನು ಹುಡುಕುತ್ತಾ,  ಹೆಣ್ಣುಮಕ್ಕಳ ಕೆಲವು ಪಿಜಿಗಳನ್ನು ನೋಡಿ ಬಂದೆ.  ಅಬ್ಬಾ! ಜನರೇಶನ್ ಗ್ಯಾಪ್ ಎನ್ನುವುದು ಇಷ್ಟು ದೊಡ್ಡದಿರುತ್ತದೆ ಎನ್ನುವುದು ನನ್ನ ಅರಿವಿಗೆ ಬಂದಿರಲಿಲ್ಲ.

‎ ಅಲ್ಲಿಗೆ ನಾವು ಹೋದಾಗ ಸುಮಾರು ಬೆಳಗಿನ 10 ಘಂಟೆ. ಅಲ್ಲಿಯ ವ್ಯವಸ್ಥಾಪಕರು ಮೂರು ರೂಂ ಕದ ತಟ್ಟಿ, ಆ ಹೆಣ್ಣುಮಕ್ಕಳನ್ನು ಕರೆದರು.  ಅಷ್ಟು ಹೊತ್ತಿಗೆ ಸಹ ಅವರಿಗೆ ಬೆಳಗಾಗಿರಲಿಲ್ಲ. ಅತ್ಯಂತ ಚಿಕ್ಕ ಬಟ್ಟೆಯನ್ನು ಧರಿಸಿದ್ದ ಅವರು, ಕಣ್ಣು ಮುಚ್ಚಿಕೊಂಡು ಬಾಗಿಲು ತೆಗೆದು ಮತ್ತೆ ಧೊಪ್ಪನೆ ಹಾಸಿಗೆಯ ಮೇಲೆ ಉರುಳಿದರು.  ‘ಬಂದವರು ಯಾರು? ಏಕೆ ಬಂದಿದ್ದಾರೆ? ನಮ್ಮ ರೂಮಿನಲ್ಲಿ ಇರುತ್ತಾರಾ?’ ಇತ್ಯಾದಿ ಯಾವ ಪ್ರಶ್ನೆಗಳು, ಕಾಳಜಿಗಳು ಅವರಲ್ಲಿ ಇರಲಿಲ್ಲ.

ಖಾಲಿಯಿದ್ದ  ಮಂಚದ ಮೇಲೆ ಸಾಸಿವೆ ಕಾಳು ಹಾಕಲು ಸಹ ಜಾಗವಿಲ್ಲದಂತೆ ಹರಡಿದ್ದ ವಸ್ತುಗಳು, ಅರ್ಧ ತಿಂದು ಕೈ ತೊಳೆದು ಬಿಟ್ಟ ತಟ್ಟೆಗಳು, ಕಾಫಿ ಕುಡಿದ ಲೋಟಗಳು, ಸ್ವಿಗ್ಗಿ,  ಝೋಮ್ಯಾಟೋ ಸುತ್ತಿಕೊಂಡು ಬಂದ ಕಸದ ರಾಶಿಗಳು, ಹಾಕಿ ಬಿಸಾಡಿದ ಬಟ್ಟೆಗಳು, ಎಲ್ಲೆಂದರಲ್ಲಿ ಎಸೆದಿದ್ದ ಚಪ್ಪಲಿಗಳು, ಕೈಕಾಲಡಿಯಲ್ಲಿ ಇಟ್ಟುಕೊಂಡಿದ್ದ ಬಕೆಟ್, ಮಗ್…
ಇಷ್ಟರ ಮೇಲೆ ಎಲ್ಲಾ ರೂಮುಗಳ, ಎಲ್ಲಾ ಕಿಟಕಿ, ಬಾಗಿಲುಗಳು ಮುಚ್ಚಲ್ಪಟ್ಟಿದ್ದವು ಮತ್ತು ಸಂಪೂರ್ಣ ಕತ್ತಲು ಆವರಿಸಿತ್ತು. ಜೋರಾಗಿ ಫ್ಯಾನ್ ತಿರುಗುತ್ತಿದ್ದವು. ಹೊರಗಿನ ಗಾಳಿ ಆಡದೆ ಗುಂ ಎನ್ನುವ ವಾತಾವರಣ.
ಇಷ್ಟು ನೋಡುವಾಗ ನನಗೆ ತಲೆಸುತ್ತಿದ ಅನುಭವ. ಈ ಹೆಣ್ಣುಮಕ್ಕಳು ಅದೆಷ್ಟು ಅಸಡ್ಡಾಳ ಬದುಕು ಬದುಕುತ್ತಿದ್ದಾರೆ ಎಂದು ನೋಡಿ ಜಿಗುಪ್ಸೆಯಾಯಿತು.

‎ ನಾನು ಎಂಟನೇ ತರಗತಿಯಿಂದ ಹಾಸ್ಟೆಲ್ ನಲ್ಲಿ ಇದ್ದು ಓದಿದವಳು. ಸುಮಾರು 12 ವರ್ಷಗಳ ಕಾಲ ಹಾಸ್ಟೆಲ್ ಜೀವನದ ಅನುಭವ ಇದೆ.  ಹೆಣ್ಣುಮಕ್ಕಳ ಹಾಸ್ಟೆಲ್ ಸುತ್ತ ಬಟ್ಟೆ ಒಣಗಿಸುತ್ತಾರೆ ಎನ್ನುವ ಕಂಪ್ಲೇಂಟ್ ಬಿಟ್ಟರೆ ಬೇರೆ ಇರುತ್ತಿರಲಿಲ್ಲ. ಯುನಿವರ್ಸಿಟಿ ಹಾಸ್ಟೆಲ್ ಸೇರುವ ಮೊದಲಿದ್ದ ಹಾಸ್ಟೆಲ್ ನಲ್ಲಿ  ನಮ್ಮ ರೂಮುಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವ ವ್ಯವಸ್ಥೆ ಇತ್ತು. ಆದರೆ ನಾವು ಸರತಿಯಂತೆ ಒಬ್ಬೊಬ್ಬರು ಒಂದೊಂದು ದಿನ ಸ್ವಚ್ಛಗೊಳಿಸಿಕೊಳ್ಳುತ್ತಿದ್ದೆವು. ಜೊತೆಗೆ, ಒಗೆದ ಬಟ್ಟೆಗಳನ್ನು ಅಚ್ಚುಕಟ್ಟಾಗಿ ಮಡಚಿ, ಇರುವ ಪುಟ್ಟ ಜಾಗದಲ್ಲಿ ತುಂಬಿಸಿಟ್ಟುಕೊಳ್ಳುತ್ತಿದ್ದೆವು. (ಇರುತ್ತಿದ್ದದು ಮೂರು ನಾಲ್ಕು ಜೊತೆ ಬಟ್ಟೆ ಎನ್ನಿ) ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುವುದು,  ಒಗೆಯಬೇಕಾದ ಬಟ್ಟೆಗಳನ್ನು ರಾಶಿ ಹಾಕಿಕೊಳ್ಳದೆ, ಅಂದಂದೇ ಒಗೆದುಕೊಳ್ಳುವುದು, ಚಪ್ಪಲಿಯನ್ನು ರೂಮಿನ ಬಾಗಿಲ ಬಳಿ ಬಿಟ್ಟು ಒಳ ಬರುವುದು…. ಹೀಗೆ ಅನೇಕ ವಿಧಿ ನಿಷೇಧಗಳನ್ನು ನಾವಾಗಿಯೇ ಅಳವಡಿಸಿಕೊಳ್ಳುತ್ತಿದ್ದೆವು.
ಯುನಿವರ್ಸಿಟಿ ಹಾಸ್ಟೆಲ್ ನಲ್ಲಿ ಇದ್ದಾಗ ಎರಡು ದಿನಕ್ಕೊಮ್ಮೆ ರೂಮು ಸ್ವಚ್ಛಗೊಳಿಸಲು ಜನ ಬರುತ್ತಿದ್ದರಾದರೂ, ಮತ್ತೊಂದು ದಿನ ನಾವೇ ಸ್ವಚ್ಛ ಮಾಡಿಕೊಳ್ಳುತ್ತಿದ್ದೆವು.  ನಮಗಾಗಿ ಇರುವ ವಾರ್ಡ್ರೋಬ್ ನಲ್ಲಿ ಬಟ್ಟೆಗಳನ್ನು, ಪುಸ್ತಕಗಳನ್ನು ಅದೆಷ್ಟು ಆಸಕ್ತಿಯಿಂದ ಜೋಡಿಸುತ್ತಿದ್ದೆವು ಎಂದರೆ, ಅದು ನಮ್ಮ ಸ್ವಂತ ಮನೆಯೇನೋ ಎನ್ನುವ ಹಾಗೆ.

ನಮಗೆ ಬೇರೆ ಕೆಲಸ ಇರಲಿಲ್ಲ, ನಮ್ಮ ಕೈಯಲ್ಲಿ ಮೊಬೈಲ್ ಇರಲಿಲ್ಲ, ನಮ್ಮ ಕಾಲದಲ್ಲಿ ಸ್ವಿಗ್ಗಿ, ಜೊಮ್ಯಾಟೊ ಇರಲಿಲ್ಲ, ಆನ್ಲೈನ್ ಆರ್ಡರ್ ಮಾಡುವ ಯಾವುದೇ ಅವಕಾಶ ಇರಲಿಲ್ಲ, ಇವೆಲ್ಲವನ್ನು ಒಪ್ಪಿಕೊಂಡರೂ, ಸ್ವಚ್ಛತೆಯ ಬಗೆಗಾದರೂ ನಮಗೆ ಕಾಳಜಿ ಇತ್ತು. ನಾವಿರುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮನುಷ್ಯ ಸಹಜ ಧರ್ಮ. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಸ್ಥಳವನ್ನು ಹೆಚ್ಚು ಅಚ್ಚುಕಟ್ಟಾಗಿ ಇಟ್ಟುಕೊಳ್ಳುತ್ತಾರೆ ಎಂದು ನಂಬಿದ್ದೆ.
‎ ಏಕೆಂದರೆ ನಾನು ಇವತ್ತಿನವರೆಗೂ ಕೇಳಿದ್ದು ಗಂಡು ಮಕ್ಕಳ ರೂಮು, ಹಾಸ್ಟೆಲ್ಲು ಕೊಳಕಾಗಿರುತ್ತದೆ, ಶಿಸ್ತಿರುವುದಿಲ್ಲ ಎನ್ನುವ ನೆರೆಟಿವನ್ನು ಮಾತ್ರ.  ಸಿನಿಮಾಗಳಲ್ಲಿ ತೋರಿಸಿದ್ದು ಸಹ ಅದನ್ನೇ. ನಾಯಕನ ಗಲೀಜಾಗಿರುವ ರೂಮಿಗೆ ಬರುವ ನಾಯಕಿ, ಅದನ್ನೆಲ್ಲಾ ಸ್ವಚ್ಛ ಮಾಡುವ ದೃಶ್ಯವಿರುವ ಅನೇಕ ಸಿನಿಮಾಗಳನ್ನು ನಾವೆಲ್ಲ ನೋಡಿದ್ದೇವೆ. ತಾವು ಊರಿಗೆ ಹೋಗಿ, ತಿರುಗಿ ಬರುವಾಗ ಮನೆಯೆಲ್ಲಾ ಗಲೀಜಾಗಿರುತ್ತೆ ಎಂದು ಹೇಳುವ ಅನೇಕ ಹೆಂಗಸರನ್ನು ನೋಡಿದ್ದೇನೆ. (ನನಗೆ ಎಂದೂ ಆ ಅನುಭವ ಆಗಿಲ್ಲ)

‎ಇದೇ ಅಂದಾಜಿನಲ್ಲಿ ಅಲ್ಲಿ ಹೋದ ನನಗೆ ಗಾಬರಿ ಆಗದಿದ್ದೀತೇ?

‎ಹೆಣ್ಣುಮಕ್ಕಳೆಂದರೆ ಅಡುಗೆ ಮನೆಗೆ ಸೀಮಿತವಾಗಬಾರದು ನಿಜ. ಆದರೆ ತೀರಾ ಬದುಕಿನ ಮೌಲ್ಯಗಳನ್ನು, ಶಿಸ್ತುಗಳನ್ನು ಈ ಪರಿ ಬಿಟ್ಟು, ಆಧುನಿಕತೆಗೆ ಮುಖ ಮಾಡಬೇಕು ಎನ್ನುವ ಮನಸ್ಥಿತಿ ಏಕೆ ಬರುತ್ತಿದೆ? ಅಥವಾ ಆಧುನಿಕತೆಯನ್ನು ಹೀಗೂ ಅಳವಡಿಸಿಕೊಳ್ಳಬೇಕಾ? ಇವರ ಪೋಷಕರಿಗೆ ಇವರು ಹೀಗಿರುವುದು ಸಮ್ಮತವೇ? ಇನ್ನು ಒಂದೆರಡು ವರ್ಷಗಳಲ್ಲಿ ಮದುವೆಯಾಗುವ ಇವರು ಅದ್ಯಾವ ರೀತಿ ಸಂಸಾರ ನಿರ್ವಹಿಸುತ್ತಾರೋ ಗೊತ್ತಿಲ್ಲ. ‘ಅದ್ಯಾಕೆ ಹೆಣ್ಣುಮಕ್ಕಳೇ ಸಂಸಾರ ನಿರ್ವಹಿಸಬೇಕು? ಅವರ ಬದುಕು, ಅವರಿಚ್ಚೆ’ ಎನ್ನುವವರೊಂದಿಗೆ ನನಗೆ ವಾದವಿಲ್ಲ. ಆದರೆ ಇದಂತೂ ತೀರಾ ಅಸಹ್ಯಕರ ಬೆಳವಣಿಗೆ ಎನ್ನುವುದು ನನ್ನ ಅಭಿಪ್ರಾಯ ಅಷ್ಟೇ.
‎
‎ಮಾನಸಾ ಕೀಳಂಬಿ

About Author

Leave a Reply

Your email address will not be published. Required fields are marked *

You may have missed