ಅಂಗನವಾಡಿ ಕಾರ್ಯಕರ್ತೆ ಕೆ.ಸಿ. ವಿಜಯಕುಮಾರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ…..
1 min read
ಅವಿನ್ ಟಿವಿ ಸುದ್ದಿಜಾಲ ✍️: ಅಂಗನವಾಡಿ ಕಾರ್ಯಕರ್ತೆ ಕೆ.ಸಿ. ವಿಜಯಕುಮಾರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ.
ತಮಿಳುನಾಡು.ಹೊಸೂರು ಮಾ ೨೮: ಅಮೇರಿಕನ್ ವಿಸ್ಡಂ ಪೀಸ್ ಯುನಿವರ್ಸಿಟಿಯಿಂದ ಮಾನ್ಯತೆ ಪಡೆದಿರುವ ಭಾರತದ ಅಂತರಾಷ್ಟ್ರೀಯ ಅರ್ಥಶಾಸ್ತ್ರ ಮತ್ತು ಸಮಾಜ ಸೇವಾ ವಿಭಾಗದಿಂದ ಸಮಾಜ ಸೇವೆಗಾಗಿ ಕೊಡ ಮಾಡುವ ಈ ಸಾಲಿನ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಕಾಟಿಗನೆರೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಕೆ ಸಿ ವಿಜಯಕುಮಾರಿಯವರು ಭಾಜನರಾಗಿದ್ದಾರೆ.
ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾಗಿರುವ ಕೆ.ಸಿ. ವಿಜಯಕುಮಾರಿಯವರು ಸುಮಾರು 35 ವರ್ಷಗಳ ಕಾಲದಿಂದ ಅಜ್ಜಂಪುರ ತಾಲೂಕಿನ ಮೆಣಸಿನಕಾಯಿ ಹೊಸಳ್ಳಿಯಲ್ಲಿರುವ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವೃತ್ತಿ ಬದುಕಿನ ಜೊತೆ ಜೊತೆಗೆ ಪ್ರವೃತ್ತಿಯಾಗಿ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಲ್ಕು ದಶಕಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಉತ್ತಮ ಹಾಡುಗಾರ್ತಿ ಯಾಗಿರುವ ವಿಜಯಕುಮಾರಿ ಅವರು ಸಾಕ್ಷರತಾ ಆಂದೋಲನ, ಭಾರತ ಜ್ಞಾನವಿಜ್ಞಾನ ಸಮಿತಿಯ ಕಲಾಜಾಥ, ಭಾರತೀಯ ಜನಕಲಾ ಮಂಡಳಿ (ಇಪ್ಟಾ ) ಸಮತಾ ಸಂಘಟನೆ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಬೀದಿ ನಾಟಕಗಳ ಮೂಲಕ ಕಲಾವಿದೆಯಾಗಿ ಜನಜಾಗೃತಿ ಮೂಡಿಸುವ ಮೂಲಕ ಜನಪರ ಆಂದೋಲನದಲ್ಲಿ ಇವರ ಸಕ್ರಿಯ ಭಾಗವಹಿಸುವಿಕೆಯನ್ನು ಕಾಣಬಹುದು.
ಯುವಕ ಯುವತಿ ಮಂಡಳಿಯನ್ನು ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟು ಹಾಕುವುದು, ಸ್ವಸಹಾಯ ಸಂಘಗಳ ರಚನೆ, ಮಹಿಳಾ ಸಂಘಟನೆ, ವಿದುವಾ ವೇತನ, ವೃದ್ಧಾಪ್ಯ ವೇತನ, ದಿವ್ಯಾಂಗ ಚೇತನರಿಗೆ ಸರ್ಕಾರದಿಂದ ಕೊಡ ಮಾಡುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಕೊಡಿಸುವುದರ ಮೂಲಕ ಈ ಜನವರ್ಗದ ಪ್ರೀತಿಗೆ ಪಾತ್ರರಾಗಿದ್ದಾರೆ.
ವೃತ್ತಿ ಬದುಕಿನ ಜೊತೆ ಜೊತೆಗೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಒಕ್ಕೂಟದ ಅಜ್ಜಂಪುರ ತಾಲೂಕು ಅಧ್ಯಕ್ಷರಾಗಿ 28 ವರ್ಷಗಳ ಕಾಲ ಇಂದಿಗೂ ಈ ಸಂಘಟನೆಯ ಅಧ್ಯಕ್ಷರಾಗಿ ದುಡಿಯುತಿ ದ್ದಾರೆ, ಜೊತೆಗೆ ಎಐಟಿಯು ಸಿ ಸಂಘಟನೆಯ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಮಂಡಳಿಯ ಸದಸ್ಯರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಯುವಜನ ಪ್ರಶಸ್ತಿ, ಅಜ್ಜಂಪುರ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಯಚೂರಿನ ಬೆಳಗು ಸಂಸ್ಥೆ ಕೊಡ ಮಾಡುವ ಸಮಾಜ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ, ತರೀಕೆರೆಯ ಸೀನಿಯರ್ ಚೇಂಬರ್ಸ್ ಕೊಡ ಮಾಡುವ ವಿಜಯ ಸ್ಮೃತಿ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೊಡಮಾಡುವ ಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ, ಚಿಕ್ಕಮಗಳೂರಿನ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕೂಡ ಮಾಡುವ ಸಾಧನೆ ಮನ್ನಣೆ ಸೇರಿದಂತೆ ಹಲವು ಗೌರವಕ್ಕೆ ವಿಜಯಕುಮಾರಿ ಅವರು ಭಾಜನರಾಗಿದ್ದಾರೆ.
ಸೋಲು ಅಂತಿಮವಲ್ಲ ಅದು ಗೆಲುವಿನ ಮೊದಲ ಪಾಠ ಎನ್ನುವಂತೆ ಬದುಕಿನಲ್ಲಿ ಎದುರಾದ ಹಲವು ಸಂಕಷ್ಟಗಳನ್ನು ಮೀರುತ್ತಾ, ಸಮಯಕ್ಕಿಂತ ಮುಂಚೆಯೇ ತುಸು ಹೆಚ್ಚು ಹಾಗೂ ಮುಂಗಡವಾಗಿ ಮಾತನಾಡುವ ಸ್ನೇಹ ಸ್ವಭಾವವಿರುವ ಈ ಸಹೋದರಿಗೆ ದಕ್ಕಿರುವ ಗೌರವ ಡಾಕ್ಟರೇಟ್ ಪುರಸ್ಕಾರವು ಕೇವಲ ಸುದ್ದಿಗೆ ಮಾತ್ರ ಸೀಮಿತವಾಗದೆ ಇತರರಿಗೆ ಪ್ರೇರಣೆಯಾಗಲಿ ಎಂಬುದು ಈ ಬರಹದ ಆಶಯ.
ಜ್ಞಾನಗಳು ಪುರಸ್ಕಾರಗಳು ಹೆಚ್ಚಾದಂತೆ ನಮ್ಮ ಜವಾಬ್ದಾರಿ ಹೆಚ್ಚಾಗಿ ವಿನಮ್ರತೆ ಅಮೃತದಂತೆ ಮೈದುಂಬಿಕೊಳ್ಳಬೇಕು, ಹಾಡು ನಾಟಕ ಹೋರಾಟಗಳ ಮೂಲಕ, ಹಲವು ಏಳುಬೀಳುಗಳೊಂದಿಗೆ ನಾಲ್ಕಾರು ದಶಕಗಳ ಕಾಲದಿಂದ ನೀವು ಇಟ್ಟ ಹೆಜ್ಜೆ ಗುರುತುಗಳನ್ನು ಮತ್ತೊಮ್ಮೆ ಇಣುಕಿ ನೋಡುತ್ತಾ ಮತ್ತಷ್ಟು ಮಾದರಿ ಜೀವನವನ್ನು ಹೊತ್ತುಸಾಗಿ ಎಂಬುದು ಹೋರಾಟದ ಸಂಗಾತಿ ವಿಜಯಕುಮಾರಿ ಅವರಿಗೆ ಅವಿನ್ ಟಿವಿ ಸುದ್ದಿಜಾಲ ಹೇಳುವ ಶುಭಾಶಯದ ಕಿವಿಮಾತಾಗಿದೆ.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

