लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಶ್ವ ರಂಗಭೂಮಿ ದಿನದ 2026ರ ಅಧಿಕೃತ ಘೋಷವಾಕ್ಯ ~ “ಶಾಂತಿಗಾಗಿ ರಂಗಭೂಮಿ”…

1 min read

ಅವಿನ್ ಟಿವಿ ಸುದ್ದಿಜಾಲ ✍️: ವಿಶ್ವ ರಂಗಭೂಮಿ ದಿನದ 2026ರ ಅಧಿಕೃತ ಘೋಷವಾಕ್ಯ ~ “ಶಾಂತಿಗಾಗಿ ರಂಗಭೂಮಿ”.

Peace of Theater

ಪ್ರತಿ ವರ್ಷದ ಮಾರ್ಚ್ 27ರಂದು ಜಗತ್ತಿನಾದ್ಯಂತ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತದೆ, 1961ರಿಂದ ಈ ಆಚರಣೆ ಜಾರಿಗೆ ಬಂದಿದೆ.

ರಂಗಭೂಮಿಗಾಗಿ ಹಿರಿದಾದ ಸೇವೆ ಸಲ್ಲಿಸಿದವರು ಪ್ರತಿ ವರ್ಷ ಈ ಸಂದರ್ಭದಲ್ಲಿ ರಂಗಭೂಮಿಯ ಮಹತ್ವ,ಮೌಲ್ಯ ಹಾಗೂ ರಂಗಭೂಮಿಯ ಜವಾಬ್ದಾರಿಯನ್ನ ಜಗತ್ತಿಗೆ ಸಾರುತ್ತಾರೆ.

2026ರಲ್ಲಿಇಂತಹ ಸಂದೇಶವನ್ನು ಜಗತ್ತಿಗೆ ಈ ಬಾರಿ ಪಸರಿಸುವ ಅವಕಾಶ ಸಿಕ್ಕಿರುವುದು
ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಸಿದ್ಧ ಚಲನಚಿತ್ರ ಹಾಗೂ ರಂಗಭೂಮಿಯ ಹಿರಿಯ ನಟರಾದ *ವಿಲಿಯಂ ಡೆಪೊ* ಅವರಿಗೆ.

ರಂಗಭೂಮಿ ಕೇವಲ ವ್ಯಾಪಾರಿ ಮನರಂಜನೆಗೆ ಅಥವಾ ಬೇಡವಾದ ಪರಂಪರೆಗಳ ಒಣ ಸಂರಕ್ಷಣೆಗೆ ಸೀಮಿತಗೊಳಿಸಿಕೊಳ್ಳದೆ ಜನ ಸಮುದಾಯಗಳ ಮೂಲಕ ಸಂಸ್ಕೃತಿಗಳನ್ನು ಸಂಪರ್ಕಿಸುವ ಶಕ್ತಿಯನ್ನಾಗಿ ಬಳಸುವುದು ರಂಗಭೂಮಿಯ ಮುಂದಿರುವ ಸವಾಲು ಎಂದು ವಿಲಿಯಂ ಡೆಪೊ ಹೇಳಿದ್ದಾರೆ.

ರಂಗಭೂಮಿಯ ನಟ ನಟಿಯರು ಬೋಧಕರು ಅಲ್ಲ, ಉಪದೇಶಕರು ಅಲ್ಲ ಅವರೆನಿದ್ದರೂ ಸುಗಮಕಾರರು ಅಥವಾ ಸಂವಹನಕಾರರು ಅಷ್ಟೇ.

ರಂಗಭೂಮಿ ಎಂಬುದು ದ್ವೇಷವನ್ನು ಪಸರಿಸುವುದಿಲ್ಲ ಪ್ರೀತಿಯನ್ನು ಹಂಚುತ್ತದೆ, ಪರಸ್ಪರ ಇಬ್ಬರು ಶತ್ರುಗಳನ್ನು ರಂಗಮಂಚಕ್ಕೆ ಕರೆತಂದು ಅವರಿಬ್ಬರಿಗೆ ರಾಮ ಲಕ್ಷ್ಮಣರ ಪಾತ್ರವನ್ನು ಕೊಟ್ಟರೆ ಇವರಿಬ್ಬರ ಒಳಗಿದ್ದ ದ್ವೇಷ ಮರೆಯಾಗಿ ಸಹೋದರರ ಭಾವ ಬೆಳೆಯುತ್ತದೆ, ಇದು ರಂಗಭೂಮಿಗಿರುವ ಶಕ್ತಿ.ಹಾಗಾಗಿ ರಂಗಭೂಮಿ ಎಂಬುದು ಯಾವಾಗಲೂ ಶಾಂತಿಯನ್ನು ಪ್ರತಿಪಾದಿಸುತ್ತದೆ.

ಈ ನಿಟ್ಟಿನಲ್ಲಿ 2026ರ ವಿಶ್ವ ರಂಗಭೂಮಿ ಸಂದೇಶವನ್ನು ಸಾರಿರುವ ಅಮೆರಿಕ ಸಂಯುಕ್ತ ಸಂಸ್ಥಾನದ ಹಿರಿಯ ರಂಗಭೂಮಿ ನಟರಾದ ವಿಲಿಯಂ ಡೆಪೊ ಅವರು *ಶಾಂತಿಗಾಗಿ ರಂಗಭೂಮಿ* ಎಂಬ ಸಂದೇಶವನ್ನು ಜಗತ್ತಿಗೆ ಪಸರಿಸಿ ಈ ಕೆಳಕಂಡಂತೆ ವಿಶ್ವ ರಂಗಭೂಮಿಯನ್ನು ಕುರಿತು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಇವರ ಇಂಗ್ಲೀಷ್ ಅವತರಣಿಕೆಯಲ್ಲಿದ್ದ ಭಾಷಣವನ್ನು ಕನ್ನಡಕ್ಕೆ ರಂಗನಟ ಪ್ರಶಾಂತ್ ಅನಂತವಾಡಿ ರವರು ಅನುವಾದ ಮಾಡಿದ್ದಾರೆ.

ಭಾಷಾಂತರದ ಈ ಕೆಳಕಂಡ ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶವನ್ನು ಅವಿನ್ ಟಿವಿ ಸುದ್ದಿಜಾಲವು ತನ್ನ ಓದುಗರಿಗಾಗಿ ಕೊಡ ಮಾಡುತ್ತಿದೆ. 👇
•••••••••••••••
ನಾನು ಮೂಲತಃ ಒಬ್ಬ ನಟ. ಮುಖ್ಯವಾಗಿ ಸಿನೆಮಾ ನಟನಾಗಿ ಈ ಪ್ರಪಂಚಕ್ಕೆ ಪರಿಚಿತನಾಗಿದ್ದರೂ, ನನ್ನ ಬೇರುಗಳು ರಂಗಭೂಮಿಯಲ್ಲಿವೆ. 1977ರಿಂದ 2003ರವರೆಗೆ ನಾನು The Wooster Group ಎಂಬ ರಂಗಭೂಮಿ ತಂಡದ ಸದಸ್ಯನಾಗಿದ್ದು, ನ್ಯೂಯಾರ್ಕ್ ನಗರದಲ್ಲಿನ The Performing Garage ನಲ್ಲಿ ಹಲವು ಕೃತಿಗಳನ್ನು ತಂಡವಾಗಿ ರಚಿಸಿ, ಪ್ರದರ್ಶಿಸಿದ್ದೆವು, ಮತ್ತು ಈ ತಂಡದ ಜೊತೆ ಜಗತ್ತಿನಾದ್ಯಂತ ಪ್ರವಾಸ ಮಾಡಿದ್ದೆವು. ನಾನು Richard Foreman, Robert Wilson ಮತ್ತು Romeo Castellucci ಅವರೊಂದಿಗೆ ಸಹ ಕೆಲಸ ಮಾಡಿದ್ದೇನೆ. ಪ್ರಸ್ತುತ, ನಾನು Venice Theatre Biennale ಯ ಕಲಾ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನದಾದ ಈ ತೊಡಗಿಸಿಕೊಳ್ಳುವಿಕೆ, ಜಗತ್ತಿನ ವರ್ತಮಾನದ ಆಗುಹೋಗುಗಳು ಹಾಗೂ ಮತ್ತೆ ರಂಗಭೂಮಿಗೆ ಮರಳುವ ನನ್ನ ಆಸೆ – ಇವೆಲ್ಲವು ನನ್ನಲ್ಲಿ ರಂಗಭೂಮಿಯ ಬಗೆಗಿನ ವಿಶಿಷ್ಟ ಸಕಾರಾತ್ಮಕ ಶಕ್ತಿ ಮತ್ತು ಅದರ ಮಹತ್ವದ ಕುರಿತಾದ ನನ್ನ ನಂಬಿಕೆಯನ್ನು ಗಟ್ಟಿಗೊಳಿಸಿವೆ.

The Wooster Group ನಲ್ಲಿ ನನ್ನ ವಿನಮ್ರವಾದ ಪ್ರಾರಂಭಿಕ ದಿನಗಳಲ್ಲಿ, ನಮ್ಮ ಪ್ರದರ್ಶನಗಳಿಗೆ ಕೆಲವು ಸಲ ತುಂಬಾ ಕಡಿಮೆ ಪ್ರೇಕ್ಷಕರು ಬರುತ್ತಿದ್ದರು. ಕಲಾವಿದರಿಗಿಂತಲೂ ಪ್ರೇಕ್ಷಕರು ಕಡಿಮೆ ಇದ್ದರೆ ಪ್ರದರ್ಶನ ರದ್ದುಪಡಿಸಬಹುದು ಎಂಬ ಅವಕಾಶವಿತ್ತು. ಆದರೆ ನಾವು ಎಂದಿಗೂ ಹಾಗೆ ಮಾಡಲಿಲ್ಲ. ನಮ್ಮ ನಾಟಕ ತಂಡದ ಸದಸ್ಯರಲ್ಲಿ ಹಲವರು ಯಾವುದೇ ರೀತಿಯ ವೃತ್ತಿಪರ ನಾಟಕ ತರಬೇತಿ ಪಡೆಯದ ರಂಗಭೂಮಿ ಕಲಾವಿದರಿದ್ದರು. ಅವರೆಲ್ಲ ವಿಭಿನ್ನ ಕ್ಷೇತ್ರಗಳಿಗೆ ಸೇರಿದ ರಂಗಭೂಮಿ ಪ್ರೀತಿಯ ಸಮಾನಮನಸ್ಕರಾಗಿದ್ದರು. “Show must go on” ಎಂಬುದು ನಮ್ಮ ಮಂತ್ರವಾಗಿರಲಿಲ್ಲವಾದರೂ ಪ್ರೇಕ್ಷಕರೊಂದಿಗೆ ನಮ್ಮ ಮುಖಾಮುಖಿಯು ಮುಂದುವರಿಯಬೇಕೆನ್ನುವುದು ನಮ್ಮ ಆಶಯವಾಗಿತ್ತು. ನಾವು ಹಗಲಿನ ವೇಳೆಯಲ್ಲಿ ನಾಟಕಾಭ್ಯಾಸ ಮಾಡಿ, ಸಂಜೆಗೆ ಅದನ್ನೇ ಇನ್ನೂ “ಅಭ್ಯಾಸದಲ್ಲಿರುವ ಕೃತಿ” ಎಂದು ಪ್ರದರ್ಶಿಸುತ್ತಿದ್ದೆವು. ಕೆಲವು ಸಲ ಒಂದು ಪ್ರದರ್ಶನಕ್ಕಾಗಿ ವರ್ಷಗಳ ಕಾಲ ಕೆಲಸ ಮಾಡುತ್ತಿದ್ದೆವು ಮತ್ತು ಜೀವನೋಪಾಯಕ್ಕಾಗಿ ಹಳೆಯ ನಾಟಕಗಳನ್ನು ಪ್ರದರ್ಶಿಸುತ್ತಾ ಪ್ರವಾಸ ಮಾಡುತ್ತಿದ್ದೆವು. ಒಮ್ಮೊಮ್ಮೆ ವರ್ಷಗಳ ಕಾಲ ಒಂದೇ ಕೃತಿಯಲ್ಲಿ ತೊಡಗಿರುವುದು ನಮಗೆ ನೀರಸ ಭಾವನೆ ಮೂಡಿಸುತ್ತಿತ್ತು. ಆದರೆ ಈ ಅಭ್ಯಾಸ ಕೃತಿಯ ಪ್ರದರ್ಶನಗಳು ಸದಾ ಉತ್ಸಾಹ ನೀಡುತ್ತಿದ್ದವು. ಪ್ರೇಕ್ಷಕರ ಸಂಖ್ಯೆ ಕಡಿಮೆಯೆನ್ನುವುದು ಪರಿಗಣಿಸಬೇಕಾದ ವಿಚಾರವಲ್ಲ, ಪ್ರೇಕ್ಷಕರು ಸಾಕ್ಷಿಗಳಾಗಿ ಹಾಜರಾಗುವುದೇ ರಂಗಭೂಮಿಗೆ ನಿಜವಾದ ಅರ್ಥ ಮತ್ತು ಜೀವಂತಿಕೆ ನೀಡುವ ವಿಚಾರ ಎಂಬ ಸತ್ಯ ದರ್ಶನ ನನಗಾದುದು ಇದೇ ಸಂದರ್ಭದಲ್ಲಿ.

“ಗೆಲ್ಲಲು ನೀವು ತೊಡಗಿಸಿಕೊಳ್ಳಬೇಕು“ ಎಂಬುದಾಗಿ ಜೂಜಿನ ಕೇಂದ್ರದ ಫಲಕದಲ್ಲಿ ಬರೆದಿರುವಂತೆ ಒಂದು ಸೃಜನಶೀಲ ಕೃತಿಯ ಸೃಷ್ಟಿಯ ಸಂದರ್ಭದಲ್ಲಿ ಹಂಚಿಕೊಳ್ಳುವ ಸೃಜನಾತ್ಮಕ ಅನುಭವ, ಪ್ರತಿ ಬಾರಿಯು ವಿಭಿನ್ನವಾಗಿ ದೊರಕುವ ಅನುಭವಗಳು – ರಂಗಭೂಮಿಯ ನಿಜವಾದ ಶಕ್ತಿ. ಸಾಮಾಜಿಕವಾಗಿ, ರಾಜಕೀಯವಾಗಿ ನಮ್ಮನ್ನು ಮತ್ತು ನಮ್ಮ ಜಗತ್ತನ್ನು ಅರಿತುಕೊಳ್ಳಲು ರಂಗಭೂಮಿಯು ಹಿಂದೆಂದಿಗಿಂತಲೂ ಇಂದು ಮಹತ್ವಪೂರ್ಣ ಮಾಧ್ಯಮ.

ಇದು ಹೇಗೆಂದರೆ, ಕೊಠಡಿಯಲ್ಲಿ ಇರುವ ಆನೆಯ ಹಾಗೆ. ಅಂದರೆ ಹೊಸ ತಂತ್ರಜ್ಞಾನಗಳು ಮತ್ತು ಸಾಮಾಜಿಕ ಜಾಲತಾಣಗಳು ಪರಸ್ಪರ ಸಂಪರ್ಕದ ಭರವಸೆಯನ್ನು ನೀಡುತ್ತವೆ. ಜೊತೆಯಲ್ಲಿ ಜನರನ್ನು ಒಬ್ಬರಿಗೊಬ್ಬರು ದೂರ ಮಾಡುತ್ತಿರುವಂತೆಯೂ ಕಾಣುತ್ತವೆ

ನಾನು ಪ್ರತಿದಿನ ಕಂಪ್ಯೂಟರ್ ಬಳಸುತ್ತೇನೆ; ಸಾಮಾಜಿಕ ಜಾಲತಾಣಗಳಿಲ್ಲದಾಗಲೂ ನನ್ನ ಬಗ್ಗೆ ಗೂಗಲ್‌ನಲ್ಲಿ ಹುಡುಕಿದ್ದೇನೆ. ಮಾಹಿತಿಗಾಗಿ ಕೃತಕ ಬುದ್ಧಿಮತ್ತೆಯನ್ನೂ ಬಳಕೆ ಮಾಡಿದ್ದೇನೆ. ಆದರೆ ಇಂತಹ ಅತಿರೇಕಗಳು ಉಂಟುಮಾಡುತ್ತಿರುವ ಅಪಾಯಗಳ ಕುರಿತು ಜಾಣ ಕುರುಡುತನವನ್ನು ಪ್ರದರ್ಶಿಸುವುದು ಸರಿಯಲ್ಲ. ಈ ಆಧುನಿಕ ಸಾಧನಗಳ ಮೂಲಕ ಬದಲಾಗುತ್ತಿರುವ ಮಾನವ ಸಂಬಂಧಗಳ ಅಪಾಯದ ಅರಿವೂ ನಮ್ಮಲ್ಲಿರಬೇಕು.

ತಂತ್ರಜ್ಞಾನವು ಇಂದು ಬಹುವಾಗಿ ನಮ್ಮ ಸೇವೆಗೆ ಒದಗುತ್ತದೆ. ಆದರೆ ಈ ಸಂಪರ್ಕದ ಮತ್ತೊಂದು ತುದಿಯಲ್ಲಿ ಯಾರು ಇದ್ದಾರೆ ಎಂಬ ಅಸ್ಪಷ್ಟ ಸತ್ಯವು ವಾಸ್ತವದ ಸಂಕಟವನ್ನು ಗಂಭೀರಗೊಳಿಸುತ್ತದೆ. ಆಧುನಿಕ ತಂತ್ರ ಒದಗಿಸುವ ಅವಕಾಶಗಳು ನಮಗೆ ಮಾಹಿತಿಗಳನ್ನು ಕೊಡಬಹುದು. ಆದರೆ ರಂಗಭೂಮಿಯೆಂಬ ಜೀವಂತಿಕೆಯ ಅವಕಾಶವು ಉಂಟುಮಾಡುವ ಸಂವೇದನಾ ಭಾವವನ್ನು ಅದು ಎಂದಿಗೂ ಕಟ್ಟಿಕೊಡಲಾರದು.

ರಂಗಭೂಮಿಯು ನಮ್ಮಲ್ಲಿ ಅವಧಾನದ ಗುಣ, ನಿರಂತರ ತೊಡಗಿಸಿಕೊಳ್ಳುವಿಕೆಯ ಗುಣವನ್ನು ಬೆಳೆಸುತ್ತದೆ. ಒಬ್ಬ ನಟನಾಗಿ ಮತ್ತು ರಂಗಸೃಷ್ಟಿಕರ್ತನಾಗಿ ನನ್ನ ರಂಗಭೂಮಿಯ ಶಕ್ತಿಯ ಮೇಲೆ ನನಗೆ ಅತೀವ ನಂಬಿಕೆಯಿದೆ. ಯಾಂತ್ರಿಕವಾದ, ಪರಸ್ಪರ ಅಪನಂಬಿಕೆಯ ಮತ್ತು ಹಿಂಸೆಯ ದಿಕ್ಕಿಗೆ ಜಗತ್ತು ಸಾಗುತ್ತಿರುವಾಗ, ರಂಗಭೂಮಿಯನ್ನು ಕೇವಲ ವ್ಯಾಪಾರಿ ಮನರಂಜನೆಗೆ ಅಥವಾ ಸನಾತನ ಪರಂಪರೆಗಳ ಒಣ ಸಂರಕ್ಷಣೆಗೆ ಸೀಮಿತಗೊಳಿಸದೆ, ಜನರು, ಸಮುದಾಯಗಳು ಮತ್ತು ಸಂಸ್ಕೃತಿಗಳನ್ನು ಸಂಪರ್ಕಿಸುವ ಶಕ್ತಿಯನ್ನಾಗಿ ಬೆಳೆಸುವುದು ನಮ್ಮ ಮುಂದಿರುವ ಸವಾಲು. ನಮ್ಮ ಕನಸುಗಳೇನು ಎಂಬುದನ್ನು ತೆರೆದಿಡಲು ನಿಜವಾದ ರಂಗಭೂಮಿ ಪ್ರೇರೇಪಿಸುತ್ತದೆ.

ನಾವು ಸಮಾಜಜೀವಿಗಳು. ಜಗತ್ತಿನೊಂದಿಗೆ ತೊಡಗಿಸಿಕೊಳ್ಳಲು ಜೀವಶಾಸ್ತ್ರೀಯವಾಗಿ ರೂಪುಗೊಂಡವರು. ನಮ್ಮ ಪ್ರತಿಯೊಂದು ಇಂದ್ರಿಯವೂ ವಿವಿಧ ಅನುಭವಗಳನ್ನು ಪಡೆದುಕೊಳ್ಳಲು ಹೊಂದಿರುವ ಅವಕಾಶ. ಮತ್ತು ಈ ಮೂಲಕ ನಾವು ಈ ಪ್ರಪಂಚದ ಅತಿದೊಡ್ಡ ಜಿಜ್ಞಾಸೆಯಾದ “ನಾನು ಯಾರು?” ಎಂಬುದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕಥನ, ಸೌಂದರ್ಯಶಾಸ್ತ್ರ, ಭಾಷೆ, ಚಲನ, ದೃಶ್ಯ ವಿನ್ಯಾಸಗಳ ಸಮಗ್ರ ಕಲಾರೂಪವಾದ ಈ ರಂಗಭೂಮಿ ನಮಗೆ “ಹಿಂದೆ ಏನಿತ್ತು? ಈಗ ಏನಿದೆ? ಮತ್ತು ನಮ್ಮ ಜಗತ್ತು ಹೇಗಿರಲು ಸಾಧ್ಯವಿದೆ? ಎಂಬುದನ್ನು ತೋರಿಸುವ ಒಂದು ಅನನ್ಯವಾದ ಚೇತೋಹಾರಿ ಅವಕಾಶ.
•••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …… ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed