ವಂದನೆ ಅಭಿವಂದನೆ ಪ್ರತಿ ವಂದನೆ ಎಂಬ ಈ ಸಂಸ್ಕಾರ ಮತ್ತು ಸಂಪ್ರದಾಯ ಹುಟ್ಟಿ ಬೆಳೆದು ಬಂದಿದ್ದಕ್ಕೆ ಒಂದು ಇತಿಹಾಸವಿದೆ…..
1 min read

ಅವಿನ್ ಟಿವಿ ಸುದ್ದಿಜಾಲ ✍️: ವಂದನೆ ಅಭಿವಂದನೆ ಪ್ರತಿ ವಂದನೆ ಎಂಬ ಈ ಸಂಸ್ಕಾರ ಮತ್ತು ಸಂಪ್ರದಾಯ ಹುಟ್ಟಿ ಬೆಳೆದು ಬಂದಿದ್ದಕ್ಕೆ ಒಂದು ಇತಿಹಾಸವಿದೆ…..
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷರಾದ ಮಾನ್ಯ ಡಾ.ಸಿ.ಸೋಮಶೇಖರ್ ಅವರಿಂದ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿಗೆ ಕೊಡ ಮಾಡಿದ ಈ ಅಭಿನಂದನೆಯು ನಮ್ಮೆಲ್ಲರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂಬುದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವೀಶ್ ಕ್ಯಾತನಬೀಡು ಅವರ ಅಭಿಪ್ರಾಯ.
ಶರಣ ಸಾಹಿತ್ಯ ಪರಿಷತ್ತಿನ 40ರ ಸಂಭ್ರಮದ ಸಂತಸದ ಸಮಯವಿದು.
40ರ ಸಂಭ್ರಮಕ್ಕೆ 45 ದಿನಗಳು ತುಂಬಿ ಹೋದವು, 40ರ ಸಂಭ್ರಮದಲ್ಲಿ ಚರ್ಚಿಸಿದಂತೆ ಸಂವಾದಿಸಿದಂತೆ ವಚನದ ಆಶಯಗಳನ್ನು ತಿಳಿದುಕೊಳ್ಳುವುದು ಅದನ್ನು ಪುನರ್ ಮನನ ಮಾಡಿಕೊಳ್ಳುವುದು ಹಾಗೂ ನಿಜ ಬದುಕಿಗೆ ಒಂದು ಹಿಡಿಯಷ್ಟಾದರೂ ಹತ್ತಿರ ತಂದುಕೊಳ್ಳುವ ಬಗ್ಗೆ ನಾವೆಲ್ಲ ತೆರೆದುಕೊಳ್ಳಬೇಕಾಗಿದೆ.
ಹೀಗೆ ತೆರೆದುಕೊಳ್ಳುವ ಮುಂಚೆ ಒಮ್ಮೆ ನಾವೆಲ್ಲ ಆ ವಿಶ್ವಗುರು ಬಸವಣ್ಣನವರನ್ನು ಹಿಂತಿರುಗಿ ನೋಡಬೇಕಿದೆ.
ಕಾರಣ,
ಕಲ್ಯಾಣದ ಸತ್ಕ್ರಾಂತಿಯ ಅ ಮಹಾ ಚಳುವಳಿಯಲ್ಲಿ ಬಸವಣ್ಣನವರು ಎಲ್ಲಾ ಶರಣ ಶರಣೆಯರಿಗೆ ಅದೆಂತಹ ಮಹತ್ವದ ಸ್ಥಾನವನ್ನು ಕೊಟ್ಟು ಎದೆ ತುಂಬಿಕೊಳ್ಳುತ್ತಿದ್ದರು ಎಂಬುದನ್ನು ಗಮನಿಸಿದರೆ ಅವರ ವಿಶಾಲವಾದ ನಾಯಕತ್ವ ನಮಗೆ ಅರಿವಾಗುತ್ತದೆ.
*ಕಲ್ಯಾಣದ ಚಳುವಳಿಯಲ್ಲಿ ಧುಮುಕಿದ ಎಲ್ಲರನ್ನೂ ಕೇಂದ್ರ ಸ್ಥಾನದಲ್ಲಿಟ್ಟು ತಾವು ಮಾತ್ರ ಅಂಚಿನಲ್ಲಿ ಇರಬಯಸಿದ್ದರು, ಇದು ಬಸವಣ್ಣನವರು ಸರ್ವ ಶರಣರನ್ನು ಗೌರವಿಸಿದ ಪರಿ, ಈ ಪರಿ ಸಮಾಜಮುಖಿಯಾಗಿ ದುಡಿಯುತ್ತಿರುವ ಯಾವುದೇ ಸಂಘಟನೆಯ ಮುಖ್ಯಸ್ಥರು ಬಹಳ ಪ್ರಮುಖವಾಗಿ ಗಮನಿಸಬೇಕಾದ ಅಂಶವಾಗಿದೆ.*
ಇನ್ನೂ ಮುಂದೆ ಹೋಗಿ ನೋಡಿದರೆ,ಬಸವಣ್ಣನವರು ತನ್ನನ್ನು ತಾನು ಎತ್ತರಿಸಿಕೊಳ್ಳದೆ ಮಾದಾರ ಚೆನ್ನಯ್ಯನ ಮಗ ನಾನೆಂದು ವಜ್ರಕ್ಕೆ ಸಾಣೆ ಹಿಡಿಯುವ ರೀತಿಯಲ್ಲಿ ಮಾತನಾಡಿದ ಬಸವಣ್ಣನವರ ಆ ಆಲೋಚನಾ ಕ್ರಮವನ್ನು ನಾವುಗಳು ಕಲಿಕಾರ್ಥಿಗಳಂತೆ ಅವಲೋಕನ ಮಾಡಿಕೊಳ್ಳಬೇಕಾಗಿದೆ.
ಇಂತಹ ಘನ ಅರಿವು ಒಂದು ಸಣ್ಣ ಪ್ರಮಾಣದಲ್ಲಾದರೂ ನಮ್ಮೊಳಗೆ ಇಳಿಯದಿದ್ದರೆ ನಿಜವಾದ ಶರಣ ಅಥವಾ ಶರಣೆಯರಾಗಿ ಒಡಮೂಡಿ ಹೊರಬರಲು ಸಾಧ್ಯವಿಲ್ಲ.
ಈ ನಿಟ್ಟಿನಲ್ಲಿ
ನಮ್ಮ ನಮ್ಮ ವ್ಯಕ್ತಿತ್ವಗಳು ದಿಕ್ಕೆಟ್ಟ ಪಾತ್ರಗಳಂತೆ ಛಿದ್ರ ಛಿದ್ರವಾಗದೆ ಧರ್ಮವನ್ನು ದಾಟಿ ದಯೆಯ ಮೇಲೆ ಹೊರಬಂದು ನಿಂತು, ನಾನೇ ಶ್ರೇಷ್ಠ ನಮ್ಮದೇ ಶ್ರೇಷ್ಠ ಎಂಬ ವ್ಯಸನವನ್ನು ಕಳಚಿಕೊಂಡು, ಜಗತ್ತಿನ ಪ್ರತಿಯೊಂದು ಜೀವಿಯನ್ನು ಸಮಾನತೆಯಿಂದ ನೋಡ ಹೊರಟ 12ನೇ ಶತಮಾನದ ವಚನಕಾರರು/ ವಚನಗಾರ್ತಿಯರನ್ನು ತಿಳಿಯಬೇಕಾಗಿದೆ.
ಈ ರೀತಿಯ ನೋಟದ ಪರಿಯು ನಮ್ಮೆಲ್ಲರದಾಗಬೇಕೆಂಬುದು 2026ರ ಫೆಬ್ರವರಿ 9.10.ಮತ್ತು 11 ರಂದು ಚಿಕ್ಕಮಗಳೂರಿನಲ್ಲಿ ನಡೆದ ವಿಚಾರ ಸಂಕಿರಣದ ಪ್ರಮುಖ ಆಶಯವಾಗಿತ್ತು, ಇಂತಹ ಆಶಯಗಳಿಗೆ ನಾವೆಲ್ಲ ನೀರುಣಿಸಿ ಮತ್ತಷ್ಟು ಸಮೃದ್ಧಿಯಾಗಿ ಬೆಳೆಸುವ ಪಥದಲ್ಲಿ ಸಾಗಬೇಕಾಗಿರುವುದು ಶರಣ ಸಾಹಿತ್ಯ ಪರಿಷತ್ತಿನ ನಡೆಯಾಗಬೇಕಿದೆ.
•••••••••••••••••••••••••✍️
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

