ಮಂತ್ರಿಗಳಿಗೆ ಕಾರ್ಯದರ್ಶಿಗಳಿಗೆ ಸಭಾಧ್ಯಕ್ಷರ ಖಡಕ್ ಚೀಮಾರಿ, ರಾಜ್ಯ ಸರ್ಕಾರಕ್ಕೆ ಮುಖಭಂಗ, ಇದು ವಿಧಾನಸಭಾಧ್ಯಕ್ಷರೊಬ್ಬರ ಸ್ವಾಭಿಮಾನದ ಮತ್ತು ಮಾದರಿ ನಡೆಗೆ….
1 min read
ಅವಿನ್ ಟಿವಿ ಸುದ್ದಿಜಾಲ ✍️:
ಮಂತ್ರಿಗಳಿಗೆ ಕಾರ್ಯದರ್ಶಿಗಳಿಗೆ ಸಭಾಧ್ಯಕ್ಷರ ಖಡಕ್ ಚೀಮಾರಿ, ರಾಜ್ಯ ಸರ್ಕಾರಕ್ಕೆ ಮುಖಭಂಗ, ಇದು ವಿಧಾನಸಭಾಧ್ಯಕ್ಷರೊಬ್ಬರ ಸ್ವಾಭಿಮಾನದ ಮತ್ತು ಮಾದರಿ ನಡೆಗೆ.
ಬೆಂಗಳೂರು ಮಾ ೧೬: ವಿಧಾನಸಭೆ ಎಂದರೆ ಅದು ಕೇವಲ ಗೋಡೆಗಳಲ್ಲ, ಜನರ ಧ್ವನಿ. ಆದರೆ, ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸರ್ಕಾರಿ ಯಂತ್ರವೇ ಮೌನಕ್ಕೆ ಶರಣಾದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವೆಲ್ಲಿ?
ಶಾಸಕರು ಕೇಳಿದ 230 ಪ್ರಶ್ನೆಗಳ ಪೈಕಿ ಕೇವಲ 84ಕ್ಕಷ್ಟೇ ಉತ್ತರ ಸಿಗುತ್ತದೆ ಎಂದರೆ, ಉಳಿದ 146 ಪ್ರಶ್ನೆಗಳು ಕಸದ ಬುಟ್ಟಿಗೆ ಸೇರಿದಂತೆಯೇ ಸರಿ.
ಸರ್ಕಾರದ ಸಚಿವರು ಸದನಕ್ಕೆ ಗೈರು, ಉತ್ತರ ನೀಡಬೇಕಾದ ಅಧಿಕಾರಿಗಳು ನಾಪತ್ತೆ – ಈ ನಿರ್ಲಕ್ಷ್ಯ ಮತ್ತು ನಿರ್ಲಜ್ಜತನದ ವಿರುದ್ಧ ಸ್ಪೀಕರ್ ಯು.ಟಿ. ಖಾದರ್ ಅವರು ತೋರಿದ ಆಕ್ರೋಶ ಕೇವಲ ಸಿಟ್ಟಲ್ಲ, ಅದು ಸಾಂವಿಧಾನಿಕ ಸ್ಥಾನದ ಘನತೆ ಎಂದು ಬಣ್ಣಿಸಲಾಗುತ್ತಿದೆ.
ಹೌದು,
ಸಭಾಧ್ಯಕ್ಷರ ಪೀಠದ ಮಹತ್ವ ಮತ್ತು ಮೌಲ್ಯವೇ ಹೀಗೆ, ಇದೆ ಪ್ರಜಾಪ್ರಭುತ್ವದ ಸಿರಿವಂತಿಕೆ, ಸಭಾಧ್ಯಕ್ಷರಾದವರು ಪಕ್ಷಗಳಿಗೆ ಪೂರ್ವಗ್ರಹ ಪೀಡಿತರಾಗಿ ಅಂಟಿಕೊಳ್ಳದೆ ರಾಜಕೀಯ ಪಕ್ಷದಿಂದ ಹೊರತಾಗಿ ವಿಧಾನಸಭೆಯ ಎಲ್ಲ ಪಕ್ಷದ ಶಾಸಕರ ದನಿಗಳಿಗೆ ಸರ್ಕಾರದಿಂದ ಉತ್ತರ ಕೊಡಿಸಿ ಅದನ್ನು ಪರಿಹರಿಸುವ ಜವಾಬ್ದಾರಿ ಸಭಾಧ್ಯಕ್ಷರದಾಗಿರುತ್ತದೆ.
ವಿಧಾನಸಭಾ ಅಧಿವೇಶನಗಳನ್ನು ಕಾಲಕಾಲಕ್ಕೆ ನಿಯಮಗನುಗುಣವಾಗಿ ನಡೆಸುವುದು ಮಂತ್ರಿಗಳಿಗಾಗಿ ಹಿರಿಯ ಅಧಿಕಾರಿಗಳಿಗಾಗಿ ಅಲ್ಲ, ಅದು ಎಲ್ಲ ಪಕ್ಷಗಳ ಶಾಸಕರಿಗಾಗಿ, ನಾಡಿನ ಜನಮತದ ಹಿತಕ್ಕಾಗಿ.
ಪಕ್ಷಭೇದ ಮರೆತು ಸಭಾಧ್ಯಕ್ಷರ ಪೀಠದ ಘನತೆ ಮೊದಲು ಎನ್ನುವ ಕಾರ್ಯತತ್ಪರತೆಯನ್ನು ಸಭಾಧ್ಯಕ್ಷರು ಎತ್ತಿ ಹಿಡಿದಿದ್ದಾರೆ,ಸಭಾಧ್ಯಕ್ಷರ ಪೀಠದಲ್ಲಿದ್ದರೂ ತನ್ನದೇ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಖಾದರ್ ಅವರು ಮಣಿಯಲಿಲ್ಲ. ಸಂವಿಧಾನದತ್ತವಾಗಿ ಬಂದ 230 ಪ್ರಶ್ನೆಗಳಲ್ಲಿ ಕೇವಲ 84 ಪ್ರಶ್ನೆಗಳಿಗಷ್ಟೇ ಉತ್ತರ ಹೇಳಿ ಇನ್ನೂ 146 ಪ್ರಶ್ನೆಗಳಿಗೆ ಉತ್ತರ ಹೇಳಿದ ಸಚಿವರ ಕಾರ್ಯದರ್ಶಿಗಳ ವಿರುದ್ಧ ಕೆಂಡಮಂಡಲವಾಗಿ,ಸಾತ್ವಿಕ ಸಿಟ್ಟನ್ನು ಹೊರಹಾಕಿ
ಸದನದಿಂದ ಹೊರನಡೆಯುವ ಮೂಲಕ ಅವರು ಆಳುವ ಸರ್ಕಾರದ ನಡೆತೆಗೆ ಕನ್ನಡಿ ಹಿಡಿದು ಸದನದಿಂದ ಹೊರ ನಡೆದಿದ್ದಾರೆ .
ಅಷ್ಟೇ ಅಲ್ಲ,ಸೌಜನ್ಯದ ಹೆಸರಲ್ಲಿ ಅಶಿಸ್ತನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಅತಿ ಸ್ಪಷ್ಟವಾಗಿ ರವಾನಿಸುವ ಮೂಲಕ ನ್ಯಾಯಪರತೆಯನ್ನು ಎತ್ತಿ ಹಿಡಿದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಮನವೊಲಿಕೆ ಮಾಡಿದ ಬಳಿಕ ಕೆಲವು ಅಧಿಕಾರಿಗಳ ತಲೆದಂಡವಾಗಬಹುದು, ಆದರೆ, ಇಲ್ಲಿ ಮುಖ್ಯವಾಗುವುದು ಕೇವಲ ಸಸ್ಪೆನ್ಷನ್ ಅಲ್ಲ, ಬದಲಾಗಿ ಉತ್ತರದಾಯಿತ್ವ.
ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳು ಮತ್ತು ಜನರ ಪರವಾಗಿ ಧ್ವನಿ ಎತ್ತಬೇಕಾದ ಸಚಿವರು ಅಧಿವೇಶನವನ್ನೇ ಲಘುವಾಗಿ ಪರಿಗಣಿಸಿದರೆ, ಅದು ಮತದಾರರಿಗೆ ಮಾಡುವ ದ್ರೋಹ.
ಸ್ಪೀಕರ್ ಅವರ ಧರಣಿ ಮತ್ತು ಮುಖ್ಯಮಂತ್ರಿಗಳ ಶಿಸ್ತು ಕ್ರಮ, ಇನ್ನು ಮುಂದೆಯಾದರೂ ವಿಧಾನಸಭೆಯನ್ನು ಗಂಭೀರವಾಗಿ ಪರಿಗಣಿಸಲು ಸರ್ಕಾರಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಲಿ.
ಸ್ಪೀಕರ್ ಖಾದರ್ ಅವರ ಸಾತ್ವಿಕ ಸಿಟ್ಟು ಮತ್ತು ಜವಾಬ್ದಾರಿ ನೆಡೆ ಸದನಕ್ಕೆ ಕಳೆ ತಂದು ಮಂತ್ರಿಗಳಿಗೆ ಅಧಿಕಾರಿಗಳಿಗೆ ಚಾಟಿ ಏಟು ಬಿಸದಂತಾಗಿದೆ .
ಜನಪರ ಕಾಳಜಿಗಿಂತ ಹಿರಿದಾದುದು ಯಾವುದೂ ಇಲ್ಲ ಎಂದು ಸಾರಿದ ಈ ಘಟನೆ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಒಂದು ಅಪರೂಪದ ಮತ್ತು ಶ್ಲಾಘನೀಯ ನಡೆ. ಸಭಾಧ್ಯಕ್ಷರ ಸ್ಥಾನವನ್ನು ಯಾವಾಗ ಮತ್ತು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಖಾದರ್ ಅವರು ಸರಿಯಾದ ಸಂದರ್ಭದಲ್ಲೇ ಸಾಬೀತುಪಡಿಸಿದ್ದಾರೆ.
•••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

