ಆಗುಂಬೆ ಘಾಟಿ ಪ್ರದೇಶದ ನಿಜವಾದ ಸಮಸ್ಯೆ ಮತ್ತು ಪರಿಹಾರ ಈ ಕೆಳಗಿನಂತಿದೆ:
1 min read
ಆಗುಂಬೆ ಘಾಟಿ ಪ್ರದೇಶದ ನಿಜವಾದ ಸಮಸ್ಯೆ ಮತ್ತು ಪರಿಹಾರ ಈ ಕೆಳಗಿನಂತಿದೆ:



ಈಗಿರುವ ರಸ್ತೆ ಸಾಕಾಗದಷ್ಟು ಸಂಚಾರ ದಟ್ಟಣೆ ಆಗುಂಬೆ ಘಾಟಿಯಲ್ಲಿ ಇಲ್ಲ. ಅಲ್ಲಿನ 6, 7 ಮತ್ತು 8 ನೇ ತಿರುವುಗಳಲ್ಲಿ ರಸ್ತೆ ಕಿರಿದಾಗಿದೆ. ಇಲ್ಲಿ ಕೆಳಭಾಗದಿಂದ ಅಂದರೆ, ಉಡುಪಿ ಭಾಗದಿಂದ ಬಂದ ವಾಹನಗಳು ಮೇಲೆ ಹೋಗಲು ಮೊದಲು ಅವಕಾಶ ಕಲ್ಪಿಸಬೇಕು. ಇದು ಮಾಮೂಲಿ ಓಡಾಡುವ ವಾಹನಗಳ ಚಾಲಕರಿಗೆ ಗೊತ್ತಿರುತ್ತದೆ. ಆದರೆ ಹೊಸತಾಗಿ ಬಂದವರು, ಅದರಲ್ಲೂ ಮುಖ್ಯವಾಗಿ ಪ್ರವಾಸಿಗರಿಗೆ ಇದರ ಅರಿವಿರುವುದಿಲ್ಲ. ಅವರು ಕೆಳಗಿನಿಂದ ಬಂದವರಿಗೆ ಅವಕಾಶ ಕಲ್ಪಿಸದೆ, ತಾವೇ ಮೇಲಿನಿಂದ ಕೆಳಗೆ ಬರಲು ಅವಸರಿಸಿ ತಿರುವುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಕೆಲವೊಮ್ಮೆ ಟೂರಿಸ್ಟ್ ಬಸ್, ಮಿನಿ ಲಾರಿ, ಟಿಪ್ಪರ್ ಗಳು ಬಂದು ಸಿಕ್ಕಿ ಹಾಕಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಒಮ್ಮೊಮ್ಮೆ ಗಾಡಿಗಳು ಆಫ್ ಆಗಿ ಬಿಡುತ್ತವೆ. ಪುನಃ ಅವುಗಳು ಪಿಕಪ್ ತೆಗೆದುಕೊಂಡು, ಮುಂದೆ ಹೋಗಲು ಒಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ವಾರಾಂತ್ಯಗಳಲ್ಲಿ ವಾಹನ ದಟ್ಟಣೆ ಸ್ವಲ್ಪ ಜಾಸ್ತಿ ಇರುತ್ತದೆ ಆಗ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚು. ಇದೆಲ್ಲದು ಆಸ್ಪತ್ರೆಗೆ ಹೋಗುವವರಿಗೆ, ತುರ್ತು ಸೇವೆಗಳಿಗೆ, ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿದೆ. ಇದಕ್ಕೆಲ್ಲಾ ಪರಿಹಾರ ಈ ಕೆಳಗಿನಂತಿದೆ:
(1) ಆಗುಂಬೆ ಘಾಟಿಯ 6, 7 ಮತ್ತು 8 ನೇ ತಿರುವಿನ ಟ್ರಾಫಿಕ್ ನಿರ್ವಹಣೆ ಮಾಡಲು ಕನಿಷ್ಠ ಇಬ್ಬರು ಸಿಬ್ಬಂದಿಗಳನ್ನು ನೇಮಿಸಬೇಕು.
(2) ರಸ್ತೆಯ ಗುಂಡಿಗಳನ್ನು ಮುಚ್ಚಬೇಕು ಮತ್ತು ರಸ್ತೆಯ ಗುಣಮಟ್ಟ ಹೆಚ್ಚಿಸಬೇಕು. ಜೊತೆಗೆ 6,7,8,9,10,11,12,13 ನೇ ತಿರುವು ಸೇರಿದಂತೆ ರಸ್ತೆ ಬದಿಯ ಎಲ್ಲಾ ಕಟ್ಟೆಗಳನ್ನು, ತಡೆಗೋಡೆಗಳನ್ನು ದುರಸ್ತಿ ಮಾಡಬೇಕು.
(3) ಅಕ್ರಮವಾಗಿ ಮರಳು, ಕಲ್ಲು, ಜೆಲ್ಲಿ ಮತ್ತಿತರ ಸರಕು ಸಾಮಗ್ರಿ ಸಾಗಿಸುವ ವಾಹನಗಳು, ಟಿಪ್ಪರ್ ಗಳು, ಮಿನಿ ಲಾರಿಗಳು ಮೊದಲಾದವುಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ದೊಡ್ಡ ಟೂರಿಸ್ಟ್ ಬಸ್ ಗಳ ಓಡಾಟಕ್ಕೆ ಅವಕಾಶ ಕಲ್ಪಿಸಬಾರದು. ಇವರೆಲ್ಲಾ ಪರ್ಯಾಯ ರಸ್ತೆಗಳಾಗಿರುವ ಹುಲಿಕಲ್ ಘಾಟಿ, ಕೆರೆಕಟ್ಟೆ ಘಾಟಿ ಬಳಸುವಂತೆ ಕ್ರಮ ವಹಿಸಬೇಕು.
(4) ಆಧುನಿಕ ಜಿಯೋ-ಗ್ರಿಡ್ ಮತ್ತು ಬಯೋ-ಇಂಜಿನಿಯರಿಂಗ್ ತಂತ್ರಜ್ಞಾನ ಬಳಸಿ ಈಗಿರುವ ರಸ್ತೆಯ ಸ್ಥಿರತೆ ಹೆಚ್ಚಿಸಬೇಕು.
(5) ಘಾಟಿಯಲ್ಲಿ ವಾಹನಗಳ ವೇಗ ನಿಯಂತ್ರಣ ಅವಶ್ಯಕ. ಘಾಟಿಯಲ್ಲೂ ವೇಗವಾಗಿ ವಾಹನ ಚಲಾಯಿಸಬೇಕು ಎಂಬ ಮನಸ್ಥಿತಿ ಜನರಲ್ಲಿ ಬೆಳೆಯುತ್ತಿರುವುದು ದುರದೃಷ್ಟಕರ.
ಈಗಾಗಲೇ ಕರಾವಳಿಯನ್ನು ಸಂಪರ್ಕಿಸಲು ತೀರ್ಥಹಳ್ಳಿಯವರಿಗೆ ಹುಲಿಕಲ್ ಘಾಟಿಯಿದೆ. ಶೃಂಗೇರಿಯವರಿಗೆ ಕೆರೆಕಟ್ಟೆ ಘಾಟಿಯಿದೆ. ಜೊತೆಗೆ ಆಗುಂಬೆ ಘಾಟಿಯಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಗತ್ಯ ರಸ್ತೆ ಕೂಡಾ ಇದೆ. ಹೀಗಿರುವಾಗ ಪಶ್ಚಿಮ ಘಟ್ಟದ ಸೂಕ್ಷ್ಮ ಆಗುಂಬೆ ಪರಿಸರ, ಸೋಮೇಶ್ವರ ವನ್ಯಜೀವಿ ಧಾಮವನ್ನು ಹಾಳು ಮಾಡುವ ಅವೈಜ್ಞಾನಿಕ ದ್ವಿಪಥ ರಸ್ತೆ ಮತ್ತು ಸುರಂಗ ಮಾರ್ಗ ಯೋಜನೆಗಳನ್ನು ಮಾಡುವುದು ತೆರಿಗೆ ಹಣದ ಲೂಟಿ. ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತೀ ಅಗತ್ಯ, ಧ್ವಂಸದ ಕ್ರಮಗಳು ಬೇಡ.
#stopagumbetunnelproject #ಶುಭಾಶಯಗಳು
ಚಿತ್ರ: ಆಗುಂಬೆ ಘಾಟಿಯ ದುಸ್ಥಿತಿ. 🌹🌹. ರವಿಕುಮಾರ್. 🌹🌹. ಬೆಂಗಳೂರು. 🌹🌹🌹.

