ಸಾಮಾಜಿಕ ಬದಲಾವಣೆಯ ಹೋರಾಟದಲ್ಲಿ ತೊಡಗಿಸಿಕೊಳ್ಳದ ವ್ಯಕ್ತಿ ಸಾಮಾಜಿಕ ಕಸವಾಗುತ್ತಾನೆ”
1 min read
ಅವಿನ್ ಟಿವಿ ಸುದ್ದಿಜಾಲ ✒️: “ಸಾಮಾಜಿಕ ಬದಲಾವಣೆಯ ಹೋರಾಟದಲ್ಲಿ ತೊಡಗಿಸಿಕೊಳ್ಳದ ವ್ಯಕ್ತಿ ಸಾಮಾಜಿಕ ಕಸವಾಗುತ್ತಾನೆ” ಎಂದು ಈ ರೀತಿ ಹೇಳಿದವರು ರೈತ ಚೈತನ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು,
*ಇಂದು ಪ್ರೊ. ಎಂಡಿಎನ್ ಅವರ 91ನೇ ಜನ್ಮದಿನಾಚರಣೆ*
ಎರಡು ದಶಕಗಳಿಗೂ ಹೆಚ್ಚು ಕಾಲ ರೈತ ಸಮುದಾಯದ ದನಿಯಾಗಿ, ಅಧಿಕಾರಿಗಳ, ರಾಜಕಾರಣಿಗಳ ಮರ್ಜಿಗೆ ತಲೆಬಗ್ಗಿ ಗೂನು ಬೆನ್ನಾಗಿದ್ದ ರೈತರನ್ನು ಸೆಟೆದು ನೆಟ್ಟಗೆ ನಿಲ್ಲಿಸಿ ಅವರ ಎದೆಯ ಗೂಡೊಳಗೆ ಆತ್ಮವಿಶ್ವಾಸ ತುಂಬಿ, ಹೆಗಲ ಮೇಲೆ ಹಸಿರು ಶಾಲು ಹೊಂದಿಸಿ ಆತ್ಮಗೌರವದ ಹಾದಿಯನ್ನು ತೋರಿಸಿದ ಪ್ರೊ. ಎಂಡಿಎನ್ ಅವರ ನಿಜ ಆಶಯ ಎಷ್ಟರಮಟ್ಟಿಗೆ ಇಂದು ಹಳ್ಳಿ ರೈತ ಸಮುದಾಯದೊಳಗೆ ಪ್ರತಿದ್ವನಿಸುತ್ತಿದೆ ? ಆ 70ರ ದಶಕದ ರೈತ ಹೋರಾಟದ ಕಾವು ಎಷ್ಟರ ಮಟ್ಟಿಗೆ ಉಳಿದುಕೊಂಡಿದೆ ? ಸ್ವ ಚಿಂತನೆ ಮುಂದಾಗಿ ಸ್ವ ವಿಮರ್ಶೆಯಿಂದ ರೈತ ನಾಯಕರು ದೂರ ಉಳಿದುಬಿಟ್ಟಿದ್ದಾರೆಯೇ?, ಇಡೀ ರೈತ ರೈತ ಸಮುದಾಯದ ಒಟ್ಟು ಚಿಂತನೆಗೆ ಎಷ್ಟರ ಮಟ್ಟಿಗೆ ನ್ಯಾಯ ಒದಗಿಸಲಾಗುತ್ತಿದೆ ? 70ರ ಕಾಲಘಟ್ಟದಲ್ಲಿದ್ದ ರೈತ ಸಮಸ್ಯೆ ಮತ್ತು ಸವಾಲುಗಳು ವರ್ತಮಾನದ ಈ ಹೊತ್ತಿನಲ್ಲಿ ಇಲ್ಲವೆ ? ಇಂತಹ ಹತ್ತು ಹಲವು ವಿಚಾರಗಳೊಂದಿಗೆ ಯಾವುದೇ ಪೂರ್ವಗ್ರಹಪೀಡಿತರಾಗದೆ ಪ್ರಾಮಾಣಿಕವಾದ ಸ್ವ ವಿಮರ್ಶೆಗೆ ರೈತ ಸಂಘಗಳು ತನ್ನನ್ನು ತಾನು ಒಡ್ಡಿಕೊಳ್ಳಬೇಕಾಗಿದೆ. ಸಂಘಟನಾತ್ಮಕವಾಗಿ ಹಾಗೂ ಮಾನಸಿಕವಾಗಿ ಹಂಚಿ ಹರಿದು ಹೋಗಿರುವ ರೈತ ಸಂಘಗಳು ಮತ್ತು ರೈತ ನಾಯಕರುಗಳ ಒಂದು ಒಳಗೊಳ್ಳುವಿಕೆ ಆಗಲೇಬೇಕಾಗಿದೆ.
ರೈತ ಸಂಘದ ಚಟುವಟಿಕೆಗಳು ಕೇವಲ ನಗರ ಕೇಂದ್ರೀತವಾದರೆ ಸಾಕೇ? ಸ್ವಾತಂತ್ರ್ಯ ಸಂಗ್ರಾಮದ ನಂತರ ಈ ನೆಲದ ಕಟ್ಟಕಡೆಯ ಹಳ್ಳಿಗೂ ರಾಜಕೀಯ ಚಳುವಳಿಯಾಗಿ ವಿಸ್ತರಿಸಿದ ಕರ್ನಾಟಕ ರಾಜ್ಯ ರೈತ ಸಂಘ ಚಳುವಳಿ ಇಂದು ಎಲ್ಲಿಗೆ ಬಂದು ನಿಂತಿದೆ ? ಮತ್ತೆ ಮುಂದೆ ಅದು ಎಲ್ಲಿಗೆ ಸಾಗಬೇಕಾಗಿದೆ ಎಂಬ ಆತ್ಮಾವಲೋಕನದೊಂದಿಗೆ ಅವಲೋಕನ ಮಾಡಿಕೊಳ್ಳುತ್ತಾ ತಾವು ಹೆಗಲ ಮೇಲೆ ಹೊದ್ದ ಅ ಹಸಿರು ಶಾಲನ್ನು ಕೊಡಕಿ , ತಮ್ಮ ತಮ್ಮ ಹೆಗಲುಗಳನ್ನು ತಾವೇ ಮುಟ್ಟಿಕೊಂಡು ನೋಡುತ್ತಾ ಮತ್ತೊಮ್ಮೆ ಅ ಹಸಿರು ಶಾಲನ್ನು ಹೆಗಲ ಮೇಲೆ ಧರಿಸಿ ಹೊಸ ಸಂಕಲ್ಪ ಮತ್ತು ನವ ಸಂಚಲನದೊಂದಿಗೆ ಪ್ರೊ. ಎಂ.ಡಿ ನಂಜುಂಡಸ್ವಾಮಿಯವರ 91ನೇ ಜನ್ಮದಿನಾಚರಣೆಯನ್ನು ನೆನಪು ಮಾಡಿಕೊಳ್ಳಬೇಕಾಗಿದೆ.
ನಮ್ಮ ಸನ್ಮಿತ್ರರು, ಜನಪರ ಬರಹಗಾರರು ಆದ ಜ್ಞಾನ ಭಿಕ್ಷಾ ಪಾದಯಾತ್ರಿ ಹೆಚ್. ಕೆ. ವಿವೇಕಾನಂದ ಅವರು ಬರೆದ ಈ ಕೆಳಕಂಡ ಅಂಕಣವನ್ನು ಅವಿನ್ ಟಿವಿ ಸುದ್ದಿಜಾಲ ತನ್ನ ಓದುಗರಿಗಾಗಿ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ ಜನ್ಮದಿನಾಚರಣೆಯ ಪ್ರಯುಕ್ತ ಕೂಡ ಮಾಡುತ್ತಿದೆ. 👇
••••••••••••••••••
ಪ್ರತಿಭಟನೆಗಳು – ಹೋರಾಟಗಳು ಕೇವಲ ಸಾಂಕೇತಿಕವಾಗುತ್ತಿರುವ ಸನ್ನಿವೇಶದಲ್ಲಿ,
ಪ್ರೊಫೆಸರ್ ಎಂ. ಡಿ. ನಂಜುಂಡ ಸ್ವಾಮಿಯವರನ್ನು ಅವರ ಜನ್ಮದಿನದ – ಫೆಬ್ರವರಿ 13 – ನೆನಪಿನ ಸಂದರ್ಭದಲ್ಲಿ ಸ್ಮರಿಸುತ್ತಾ….
ಕರ್ನಾಟಕದ ರೈತ ಚಳವಳಿಯ ಅತ್ಯಂತ ಪ್ರಮುಖ ಹೆಸರು ಪ್ರೊಫೆಸರ್ ಎಂ. ಡಿ. ನಂಜುಂಡ ಸ್ವಾಮಿಯವರದು…..
ರೈತ ಹೋರಾಟಕ್ಕೆ ತನ್ನ ಸಮಕಾಲೀನರ ಜೊತೆ ಸೇರಿ ಸಂಘಟನಾತ್ಮಕ ಧ್ವನಿ ನೀಡಿದ ಕೀರ್ತಿ ನಂಜುಂಡಸ್ವಾಮಿಯವರಿಗೆ ಸಲ್ಲುತ್ತದೆ…..
ರಾಜಕೀಯ ಆಡಳಿತಗಾರರು, ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಎಂಬ ಮೂರು ವರ್ಗಕ್ಕೂ ಒಂದು ರೀತಿಯಲ್ಲಿ ಸಿಂಹ ಸ್ವಪ್ನವಾಗಿದ್ದವರು ಎಂ ಡಿ ಎನ್……
ಖಾಸಗೀಕರಣದ ವಿರುದ್ಧ, ಕೃಷಿ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಿ ಕಂಪನಿಗಳ ಮಾರುಕಟ್ಟೆ ಪ್ರವೇಶದ ವಿರುದ್ಧ, ಬ್ಯಾಂಕುಗಳ ಸಾಲ ವಸೂಲಾತಿಯ ದೌರ್ಜನ್ಯದ ವಿರುದ್ಧ, ರೈತರ ಅನೇಕ ಬೇಡಿಕೆಗಳ ಪರವಾಗಿ ನಿರಂತರ ಪ್ರತಿಭಟನೆ ಮತ್ತು ಹೋರಾಟ ರೂಪಿಸಲು ಶ್ರಮಿಸಿದವರು ನಂಜುಂಡಸ್ವಾಮಿಯವರು….
ಅಲ್ಲಿಯವರೆಗೂ ರೈತರನ್ನು ಬಹಳ ಲಘುವಾಗಿ ಪರಿಗಣಿಸಲಾಗುತ್ತಿತ್ತು. ಅವರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯದ ಮನೋಭಾವ ಪ್ರದರ್ಶಿಸಲಾಗುತ್ತಿತ್ತು. ನಂಜುಂಡ ಸ್ವಾಮಿ ಮತ್ತು ಅವರ ಸಮಕಾಲೀನ ಹೋರಾಟಗಾರರು ರೈತ ಶಕ್ತಿಯ ಮಹತ್ವವನ್ನು ವಿಧಾನಸೌಧಕ್ಕೆ ಮನವರಿಕೆ ಮಾಡಿಕೊಟ್ಟು ಒಂದು ಸಂದರ್ಭದಲ್ಲಿ ವಿಧಾನಸೌಧವನ್ನೇ ನಡುಗಿಸಿದ್ದರು.
ಎಪ್ಪತ್ತು ಎಂಬತ್ತರ ದಶಕದ ಕನ್ನಡ ಚಳವಳಿ, ದಲಿತ ಚಳವಳಿ, ಬಂಡಾಯ ಚಳವಳಿ ಸಮಯದಲ್ಲಿಯೇ ರೈತ ಚಳವಳಿ ಸಹ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆಗ ವಿಧಾನಸೌಧದ ಮುಂದಿನ ಕಬ್ಬನ್ ಪಾರ್ಕ್ ನಲ್ಲಿ ಸೇರುತ್ತಿದ್ದ ಲಕ್ಷಾಂತರ ರೈತ ಸಮುದಾಯದ ಜನರ ಹೋರಾಟಗಳು ಈಗಲೂ ಮನಸ್ಸಿನಾಳದಲ್ಲಿ ಕಣ್ಣಿಗೆ ಕಟ್ಟುವಂತೆ ಹಸಿಹಸಿಯಾಗಿದೆ…..
ಹಸಿರು ಶಾಲುಗಳು, ಊಟದ ಬುತ್ತಿಗಳು, ಹೋರಾಟದ ಹಾಡುಗಳು, ಆಕ್ರೋಶದ ಆಡಿಯೋ ಕ್ಯಾಸೆಟ್ ಗಳು, ಕೈಯಲ್ಲಿ ಭಿತ್ತಿ ಪತ್ರಗಳು, ಲಾರಿ, ಟ್ರ್ಯಾಕ್ಟರು, ಎತ್ತಿನ ಗಾಡಿಗಳು, ಸರ್ಕಾರ ವಿರುದ್ಧ ಉಗ್ರ ಭಾಷಣಗಳು, ಮಧ್ಯೆ ಪೋಲೀಸರು ಎಲ್ಲವೂ ಯುದ್ಧ ಭೂಮಿಯಂತೆ ಕಾಣುತ್ತಿತ್ತು.
ಆಗಿನ ಪತ್ರಿಕೆಗಳಲ್ಲಿ ಈ ಬಗ್ಗೆ ರೋಚಕ ಸುದ್ದಿಗಳು ಮುಖಪುಟದಲ್ಲಿಯೇ ಪ್ರಸಾರವಾಗುತ್ತಿತ್ತು. ಮುಖ್ಯವಾಗಿ ಲಂಕೇಶ್ ಪತ್ರಿಕೆ ಈ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ಭರಿತವಾಗಿ ಇದಕ್ಕೆ ಬೆಂಬಲ ನೀಡಿತು. ಹಾಗಾಗಿ ಆಗಿನ ಎಲ್ಲಾ ಚಳವಳಿಗಳು ಜನ ಮತ್ತು ಸರ್ಕಾರದ ಗಮನ ಸೆಳೆದವು ಹಾಗೂ ಅತ್ಯಂತ ಪರಿಣಾಮಕಾರಿಯಾಗಿದ್ದವು.
ಈ ದೇಶದ ಬೆನ್ನೆಲುಬು ರೈತರು. ಅವರು ಮಹಾನ್ ಸ್ವಾಭಿಮಾನಿಗಳು. ಅವರಿಗೆ ಸಿಗಬೇಕಾದ ಗೌರವ ಮತ್ತು ಸೌಕರ್ಯಗಳನ್ನು ಒದಗಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯ ಎಂದು ಬಲವಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಕೀರ್ತಿ ಅಂದಿನ ರೈತ ನಾಯಕರಿಗೆ ಸಲ್ಲುತ್ತದೆ. ಅದು ಸ್ವಲ್ಪ ಹೆಚ್ಚು ಕಡಿಮೆ ಈಗಲೂ ಅದೇ ಅಭಿಪ್ರಾಯ ಮುಂದುವರಿದಿದೆ.
ಮಹತ್ವಾಕಾಂಕ್ಷಿಯಾಗಿದ್ದ ನಂಜುಂಡ ಸ್ವಾಮಿಯವರು ರಾಜಕೀಯ ಪ್ರವೇಶಿಸಿ ಚುನಾವಣಾ ಅಖಾಡದಲ್ಲಿ ರೈತ ಸಂಘಟನೆಯ ಮುಖಾಂತರ ಅಧಿಕಾರಕ್ಕೇರುವ ಕನಸು ಕಂಡವರು. ಜನರೇ ತಮ್ಮ ಕ್ಷೇತ್ರದ ಶಾಸಕರನ್ನು ತಮ್ಮಲ್ಲಿಯೇ ಒಬ್ಬರನ್ನು ಅಭ್ಯರ್ಥಿಯಾಗಿಸಿ ಆಯ್ಕೆ ಮಾಡಿಕೊಳ್ಳುವ ಮುಖಾಂತರ ರಾಜಕೀಯ ಕ್ರಾಂತಿ ಸಾಧ್ಯವಾಗಿಸಬಹುದು ಎಂಬ ಅಭಿಪ್ರಾಯ ಹೊಂದಿದ್ದರು. ಆದರೆ ಅದರಲ್ಲಿ ಅಷ್ಟಾಗಿ ಯಶಸ್ವಿಯಾಗಲಿಲ್ಲ ಮತ್ತು ರೈತ ಸಂಘಟನೆ ಹಲವು ವಿಭಾಗಗಳಾಗಿ ಒಡೆದು ಹೋಯಿತು ಎಂಬುದು ನಂತರದ ಇತಿಹಾಸ. ಅವರು ಕೇವಲ ಶಾಸಕರಾಗುವಷ್ಟು ಮಾತ್ರ ಯಶಸ್ವಿಯಾದರು.
ಎಲ್ಲಕ್ಕಿಂತ ಮುಖ್ಯವಾಗಿ ಅಂದಿನ ದಿನಗಳಲ್ಲಿ ಹೋರಾಟಗಳಿಗೆ ಜನರು ಸ್ಪಂದಿಸುತ್ತಿದ್ದ ರೀತಿಯನ್ನು ಗಮನಿಸಿದರೆ ಇಂದು ಬಹುತೇಕ ಜನ ನೀರ್ವೀರ್ಯವಾಗಿದ್ದಾರೆ ಎಂಬ ಭಾವನೆ ಉಂಟಾಗುತ್ತದೆ. ಬೆಲೆ ಏರಿಕೆ, ಅಮಾಯಕರ ಮೇಲಿನ ದೌರ್ಜನ್ಯ, ರಾಜಕೀಯ ಭ್ರಷ್ಟಾಚಾರ, ಖಾಸಗಿ ಕಂಪನಿಗಳ ವಂಚನೆ ಮುಂತಾದ ವಿಷಯಗಳಲ್ಲಿ ಆಗಿನ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸ್ವತಃ ತಾವೇ ಮುನ್ನುಗ್ಗಿ ಭಾಗವಹಿಸುತ್ತಿದ್ದರು.
ಸಾಮಾಜಿಕ ಜಾಲತಾಣಗಳು ಇಲ್ಲದಿದ್ದ ಸಮಯದಲ್ಲಿಯೇ ಇದು ಸಾಧ್ಯವಾಗಿತ್ತು.
ಆದರೆ ಇಂದು ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನಸ್ಥಿತಿಯೇ ಕಡಿಮೆಯಾಗಿದೆ. ಇಲ್ಲದ ಉಸಾಬಾರಿ ನಮಗೇಕೆ ಎಂಬ ಗುಲಾಮಿ ಮನೋಭಾವದ ಭಕ್ತಗಣ ಸಮುದಾಯ ಸೃಷ್ಟಿಯಾಗಿದೆ. ಬಹಳಷ್ಟು ಜನರು ತಮ್ಮ ಸ್ವಾಭಿಮಾನವನ್ನೇ ಜಾತಿ, ಧರ್ಮ, ಹಣಕ್ಕಾಗಿ ಮಾರಿಕೊಂಡಿದ್ದಾರೆ.
ಇಂತಹ ಸಂದರ್ಭದಲ್ಲಿ ಕೆಚ್ಚೆದೆಯ ಹೋರಾಟಗಾರ – ದೂರದೃಷ್ಟಿಯ ನಾಯಕ – ಧೈರ್ಯವಂತ ಮುಂದಾಳು ಪ್ರೊಫೆಸರ್ ನಂಜುಂಡ ಸ್ವಾಮಿಯವರು ಪದೇ ಪದೇ ನೆನಪಾಗುತ್ತಾರೆ.
ಬಹುತೇಕ ಸರ್ಕಾರಿ ಆಸ್ತಿಗಳು ದಿನೇ ದಿನೇ ಮುಕ್ತ ವ್ಯಾಪಾರ ನೀತಿಯ ಫಲವಾಗಿ ಮಾರಾಟವಾಗುತ್ತಿರುವ ಸನ್ನಿವೇಶದಲ್ಲಿ ಆಗಿನ ಕೇವಲ ಒಂದು ಈಸ್ಟ್ ಇಂಡಿಯಾ ಕಂಪನಿ ನಮ್ಮ ಸಂಪೂರ್ಣ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿತು. ಈಗ ಆ ರೀತಿಯ ಹಲವಾರು ಇನ್ನೂ ಬಲಿಷ್ಠ ಕಂಪನಿಗಳು ನಮ್ಮನ್ನು ಆಕ್ರಮಿಸುತ್ತಿವೆ. ಜನ ಆರ್ಥಿಕ ಅನಿವಾರ್ಯತೆಯ ಜೀತದಾಳುಗಳಾಗುತ್ತಿದ್ದಾರೆ. ಮೇಲ್ನೋಟಕ್ಕೆ ಅಭಿವೃದ್ಧಿ ಎಂದು ಕಾಣುತ್ತಿದ್ದರೂ ಆಂತರ್ಯದಲ್ಲಿ ಸ್ವಾತಂತ್ರ್ಯ ಕಳೆದುಕೊಂಡು ಗುಲಾಮರಾಗುತ್ತಿದ್ದಾರೆ. ಅದರ ಅರಿವು ಕೂಡ ಇವರಿಗೆ ಆಗುತ್ತಿಲ್ಲ.
ಇಂದಿನ ಯುವ ಪೀಳಿಗೆಗೆ ಸಂಘಟನೆ ಮತ್ತು ಹೋರಾಟದ ದೃಷ್ಟಿಯಲ್ಲಿ ನಂಜುಂಡ ಸ್ವಾಮಿಯವರು ಒಂದು ಮಾದರಿ. ಅವರಿಗೆ ಜನುಮ ದಿನದ ಶುಭಾಶಯಗಳು ಮತ್ತು ಯುವ ಜನಾಂಗಕ್ಕೆ ಅವರನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತಾ ರೈತ ಸಮುದಾಯದ ಕಷ್ಟಗಳಿಗೆ ಸ್ಪಂದಿಸುವುದು ಪ್ರತಿ ಆಹಾರ ಸೇವಿಸುವ ಮನುಷ್ಯ ಪ್ರಾಣಿಯ ಪ್ರಪ್ರಥಮ ಕರ್ತವ್ಯ ಎಂದು ಜವಾಬ್ದಾರಿಯನ್ನು ನೆನಪಿಸುತ್ತಾ…..
ಮಾಧ್ಯಮಗಳು ಕೆಟ್ಟ ಬ್ರೇಕಿಂಗ್ ನ್ಯೂಸ್ ಗಳ ಹಿಂದೆ ಬಿದ್ದಿದ್ದಾರೆ. ಸಾಮಾನ್ಯ ಜನರಾದ ನಾವು ಆದರ್ಶಗಳನ್ನು ಸ್ಮರಿಸುವ ಮೌಲ್ಯಗಳ ಹಿಂದೆ ಸಾಗೋಣ.
ಏಕೆಂದರೆ ಈ ಸಮಾಜದ ನಿಜವಾದ ಬಹುಸಂಖ್ಯಾತರು ಸಾಮಾನ್ಯ ಜನರು….
ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಮತ್ತೊಮ್ಮೆ ಟಿಸಿಲೊಡೆಯುವ ಸಂದರ್ಭ ಕೂಡಿಬಂದಿದೆ. ಆದ್ದರಿಂದ ಈ ಸಂದರ್ಭದಲ್ಲಿ ನಿಸ್ವಾರ್ಥ ಹೋರಾಟಗಾರರು, ಸಂವೇದನಾಶೀಲ ಬರಹಗಾರರು, ಜವಾಬ್ದಾರಿಯುತ ಜಾಗೃತ ಮತದಾರರು ಒಟ್ಟಾಗಿ ಸೇರಲು ಈ ಸುಸಂದರ್ಭವನ್ನು ಉಪಯೋಗಿಸಿಕೊಳ್ಳಬೇಕಾಗಿದೆ.
•••••••••••••••••••••ಸಂಗ್ರಹ
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

