ಮೂಡಿಗೆರೆಯಲ್ಲಿ ವಿಜಯ ಕರ್ನಾಟಕ, ಜೇಸಿ ಸಂಸ್ಥೆಯಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಮಾರ್ಗದರ್ಶನ*…
1 min read
*ಮೂಡಿಗೆರೆಯಲ್ಲಿ ವಿಜಯ ಕರ್ನಾಟಕ, ಜೇಸಿ ಸಂಸ್ಥೆಯಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಮಾರ್ಗದರ್ಶನ*




ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಶಿಕ್ಷಣ ಪ್ರಮುಖ ಮಾತ್ರ ವಹಿಸುತ್ತದೆ. ಶಿಕ್ಷಣದ ಮುಂದಿನ ಹಂತ ಸುಗಮವಾಗಲು ಎಸ್.ಎಸ್.ಎಲ್ಸಿ ಪರೀಕ್ಷೆ ದಾರಿದೀಪವಾಗುತ್ತದೆ ಎಂದು ತಾ.ಪಂ. ಇಒ ದಯಾವತಿ ಹೇಳಿದರು.
ಅವರು ಗುರುವಾರ ಪಟ್ಟಣದ ಜೇಸಿ ಭವನದಲ್ಲಿ ಜಿಲ್ಲಾಡಳಿತ, ತಾಲಾ ಶಿಕ್ಷಣ ಇಲಾಖೆ, ವಿಜಯ ಕರ್ನಾಟಕ, ಜೇಸಿಐ ಸಂಸ್ಥೆ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವ ಸಿದ್ಧತೆಗಾಗಿ ಆಯೋಜಿಸಿದ್ದ ವಿಜಯೀಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತರಬೇತಿಯಿಂದ ಎನರ್ಜಿ ಸಿಗುತ್ತದೆ. ಅದರ ಮೂಲಕ ಅತ್ಮವಿಶ್ವಾಸ, ನಿರಂತರ ಪರಿಶ್ರಮದಿಂದ ಅಧ್ಯಯನ ನಡೆಸಿದಾಗ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಜೆಸಿ ಪ್ರೌಢಶಾಲೆ ವಿಭಾಗದ ಉಪ ಪ್ರಾಂಶುಪಾಲ ಜಗದೀಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಬ್ಬಗಳು ಪ್ರತಿ ವರ್ಷ ಮರುಕಳಿಸುತ್ತದೆ. ಆದರೆ ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಲಘಟ್ಟವಾಗಿದೆ. ಹಾಗಾಗಿ ಸಮಯ ವ್ಯರ್ಥ ಮಾಡದೇ ತಮ್ಮ ಆರೋಗ್ಯ ಕಾಪಾಡಿಕೊಂಡು ಪರೀಕ್ಷೆ ಎದುರಿಸಲು ಸಿದ್ದರಾಗಬೇಕೆಂದು ಸಲಹೆ ನೀಡಿದರು.
ಜೇಸಿಐ ಅಧ್ಯಕ್ಷ ಎಂ.ಎಲ್.ಸುನೀಲ್ ಮಾತನಾಡಿ, ಪರೀಕ್ಷೆ ಹತ್ತಿರ ಬಂದಾಗ ಆತಂಕಪಡಬಾರದು. ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸುವ ತರಬೇತಿಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಕೆ.ಪಿ.ನವೀನ್ ಮಾತನಾಡಿ, ಯಾವುದೇ ವಿಷಯದ ಬಗ್ಗೆ ಗೊಂದಲವಿದ್ದರೆ ಅಥವಾ ಕಷ್ಟವಾದರೆ ಅದನ್ನು ಶಿಕ್ಷಕರೊಂದಿಗೆ ಚರ್ಚಿಸಿ ಕೂಡಲೇ ಬಗೆಹರಿಸಿಕೊಳ್ಳಬೇಕು. ಇದರಿಂದ ಮುಂದಿನ ಅಭ್ಯಾಸಕ್ಕೆ ಸಹಕಾರಿಯಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಪಿ.ಶಿವರಾಮೇಗೌಡ ಮಾತನಾಡಿ, ಸೂತ್ರಗಳನ್ನು ಒಂದು ಚೀಟಿಯಲ್ಲಿ ಬರೆದು ಅದನ್ನು ಜೇಬಿನಲ್ಲಿಟ್ಟುಕೊಂಡು ಸಮಯ ಸಿಕ್ಕಾಗಲೇಲ್ಲಾ ಓದಿ ಕಲಿಯಬೇಕು. ವಿಷಯವನ್ನು ಮನದಲ್ಲಿಟ್ಟುಕೊಳ್ಳಲು ಈ ವಿಧಾನ ನೆರವಾಗುತ್ತದೆ ಎಂದರು.
ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಭಯ ಬಿಟ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಪಠ್ಯವನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಓದಬೇಕು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ನಿದ್ರೆ ಆರೋಗ್ಯದ ಕಡೆಯೂ ಗಮನವಿರಬೇಕು. ಹಳೆ ಪ್ರಶ್ನೆ ಪತ್ರಿಕೆಗಳ ಸ್ವರೂಪ ತಿಳಿದುಕೊಳ್ಳಬೇಕು. ಉತ್ತರವನ್ನು ಸುಲಭ ಹಾಗೂ ಸ್ಪಷ್ಟತೆಯಿಂದ ಬರೆಯಬೇಕು. ಶಿಸ್ತುಬದ್ಧ ಅಧ್ಯಯನ ಮೂಲಮಂತವನ್ನಾಗಿಸಿಕೊಳ್ಳಬೇಕು. ಪೌಷ್ಠಿಕ ಆಹಾರ ಮತ್ತು ವ್ಯಾಯಾಮ ಅಗತ್ಯವಿದೆ. ಓದಿನ ಬಗ್ಗೆ ಸಮಯಪಟ್ಟಿ ಮಾಡಿಕೊಳ್ಳಬೇಕು. ಕಷ್ಟವಿರುವ ವಿಷಯವನ್ನು ಹೆಚ್ಚಾಗಿ ಅಭ್ಯಾಸ ಮಾಡಬೇಕು. ಸೂತ್ರಗಳನ್ನು ಚೀಟಿಯಲ್ಲಿ ಬರೆದು ಹಾಗಾಗ ಓದುತ್ತಿರಬೇಕೆಂದು ಸಲಹೆ ನೀಡಲಾಯಿತು.
ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ಕರಿಯಪ್ಪ, ಜೇಸಿ ಕಾರ್ಯದರ್ಶಿ ಸಂದೀಪ್ ಉಪಸ್ಥಿತರಿದ್ದರು.

