ಜಗತ್ತಿನ ಎಲ್ಲ ಸಾಹಿತ್ಯಕ್ಕೂ ಜಾನಪದವೇ ತಾಯಿಬೇರು ~ ದೇವನೂರಿನಲ್ಲಿ ಜಾನಪದ ಸಂಭ್ರಮ….
1 min read
ಅವಿನ್ ಟಿವಿ ಸುದ್ದಿಜಾಲ ✒️: ಜಗತ್ತಿನ ಎಲ್ಲ ಸಾಹಿತ್ಯಕ್ಕೂ ಜಾನಪದವೇ ತಾಯಿಬೇರು ~ ದೇವನೂರಿನಲ್ಲಿ ಜಾನಪದ ಸಂಭ್ರಮ.
••••••••••••••••••••••••••••••
.ಚಿಕ್ಕಮಗಳೂರು ಡಿ 29,ಜಾನಪದ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿ ನಮ್ಮ ಹಿರಿಯರಿಂದ ನಮಗೆ ಬಂದ ಬಹುದೊಡ್ಡ ಬಳುವಳಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಜಯಕುಮಾರ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಸಖರಾಯಪಟ್ಟಣ ಹೋಬಳಿ ಘಟಕ ತಾಲೂಕು ಮತ್ತು ಜಿಲ್ಲಾ ಘಟಕ, ಕಡೂರು ತಾಲೂಕಿನ ದೇವನೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಜಾನಪದ ಕಲಾ ವೈಭವ, ಜಾನಪದ ಕಲೆಗಳ ತರಬೇತಿ ಶಿಬಿರ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ನಮ್ಮ ಬಹುದೊಡ್ಡ ಆಸ್ತಿ, ಜಾನಪದದಿಂದ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ, ಸೌಹಾರ್ದತೆ, ಭಾವೈಕ್ಯತೆ ಮೂಡುತ್ತದೆ, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಜಾನಪದ ಸಹಕಾರಿ ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ ಜಾನಪದ ಭಾರತೀಯ ಸಂಸ್ಕೃತಿಯ ತಾಯಿಬೇರಾಗಿದೆ, ಜಾನಪದ ಭಾರತೀಯರ ಆಹಾರ ಪದ್ಧತಿ, ವೇಷಭೂಷಣ, ಉಡುಗೆ, ತೊಡುಗೆ, ಸಾಹಿತ್ಯ, ಕಲೆ, ಸಂಗೀತ, ಕೃಷಿ, ರಾಜಕೀಯ, ಕೈಗಾರಿಕೆ, ವಾಣಿಜ್ಯ, ವ್ಯಾಪಾರ ಮುಂತಾದ ಎಲ್ಲಾ ಕ್ಷೇತ್ರಗಳಿಗೂ ಭದ್ರ ಬುನಾದಿ ಯಾಗಿದೆ, ಈ ಎಲ್ಲಾ ಕ್ಷೇತ್ರಗಳ ಸಾಧಕ ಬಾದಕಗಳನ್ನು ಅನಾದಿಕಾಲದಿಂದಲೇ ನಮ್ಮ ಜನಪದರು ನಮಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.
ಜಾನಪದ ಎಲ್ಲಾ ಜನಾಂಗದವರ ಭಾಷೆ, ಸಾಹಿತ್ಯ, ಸಂಗೀತ, ಕಲೆಗಳ ತಾಯಿ ಬೇರು. ಹಾಗಾಗಿ ಇಂದಿನ ಯುವಕ ಯುವತಿಯರು ಕಾಲೇಜು ವಿದ್ಯಾರ್ಥಿಗಳು ಜಾನಪದ ಕಲೆ, ಸಾಹಿತ್ಯ, ಸಂಗೀತಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಲೇಖಕ ಡಿ.ಎಂ. ಮಂಜುನಾಥ ಸ್ವಾಮಿ ಮಾತನಾಡಿ ಜಾನಪದವೆಂದರೆ ಅದೊಂದು ಜ್ಞಾನ ಪದ. ಅದೊಂದು ಬೃಹತ್ ಗ್ರಂಥ ಭಂಡಾರ, ಇಡೀ ಸಮಾಜವೇ ಒಂದು ದೊಡ್ಡ ವಿಶ್ವವಿದ್ಯಾನಿಲಯವಾಗಿದೆ. ಜಾನಪದ ನಮ್ಮ ಮಣ್ಣಿನಲ್ಲಿ ಮತ್ತು ಪರಿಸರದಲ್ಲಿ ಬೆರೆತುಹೋಗಿದೆ, ಜಾನಪದವಿಲ್ಲದ ಸಮಾಜವೇ ಇಲ್ಲ. ಅನೇಕ ಕವಿಪುಂಗವರು, ಜನಪದರು, ಸಾಹಿತಿಗಳು, ಶರಣರು ನಮ್ಮ ನಾಡಿನ ಮತ್ತು ಗ್ರಾಮೀಣ ಭಾರತದ ಜಾನಪದ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಸಖರಾಯಪಟ್ಟಣ ಹೋಬಳಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಮಾತನಾಡಿ ನಮ್ಮ ಹೋಬಳಿಯಲ್ಲಿ ಹುಟ್ಟಿ ಬೆಳೆದ ಯಾವುದೇ ಜಾನಪದ ಕಲೆ ನಶಿಸಿ ಹೋಗದಂತೆ ಕ್ರಿಯಾಶೀಲವಾಗಿ ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾವಿನಕೆರೆ ದಯಾನಂದ, ಸಾಹಿತಿ ಬಿ. ರಾಜಪ್ಪ, ಕರ್ನಾಟಕ ಜಾನಪದ ಪರಿಷತ್ತಿನ ಕಡೂರು ತಾಲೂಕು ಅಧ್ಯಕ್ಷ ಜಗದೀಶ್ವರಾಚಾರ್ ಮಾತನಾಡಿದರು.
ದೇವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ಅಧ್ಯಕ್ಷತೆ ವಹಿಸಿದ್ದರು, ಜಯಣ್ಣ, ಗಾಯತ್ರಮ್ಮ, ವಸಂತ, ಶೈಲಜಾ, ಶಂಕ್ರಪ್ಪ, ಷಣ್ಮುಖಪ್ಪ, ದಕ್ಷಿಣಾಮೂರ್ತಿ, ಪ್ರಾಂಶುಪಾಲ ಪುಟ್ಟಸ್ವಾಮಿ ನಾಯಕ್, ಮುಖ್ಯ ಶಿಕ್ಷಕ ಎನ್.ಸಿ.ಗುರುಮೂರ್ತಿ, ಸಾಹಿತಿ ಬಿಳಿಗಿರಿ ವಿಜಯಕುಮಾರ್, ತಿಪ್ಪೇಶ ಉಪಸ್ಥಿತರಿದ್ದರು.
••••••••••••••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

