ಇಂದು ಸಂಜೆ ಚಿಕ್ಕಮಗಳೂರಿನಲ್ಲಿ ರಂಗಪ್ರಯೋಗ~ “ನನ್ನ ತೇಜಸ್ವಿ”*….
1 min read
ಅವಿನ್ ಟಿವಿ ಸುದ್ದಿಜಾಲ ಡಿ 20: *ಇಂದು ಸಂಜೆ ಚಿಕ್ಕಮಗಳೂರಿನಲ್ಲಿ ರಂಗಪ್ರಯೋಗ~ “ನನ್ನ ತೇಜಸ್ವಿ”*





*ನನ್ನ ತೇಜಸ್ವಿ ಎಂಬ ಈ ನಾಟಕ ದಾಂಪತ್ಯದ ದೀವಿಗೆ ಇದ್ದಂತೆ*
•••••••••••••••
ಯಾವ ಆಯಾಮದಿಂದ ನೋಡಿದರೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಒಂದು ವಿಶೇಷ,ಹಾಗೆಯೇ ತೇಜಸ್ವಿ ಅವರ ಹೆಸರು ಕೇಳಿದೊಡನೆ ನಾವು ಕೂಡ ಒಂದು ಪರಿಸರದ ಭಾಗವಾಗಬೇಕು, ಸಂವೇದನಾಶೀಲರಾಗಬೇಕು, ಮಾನವತವಾದಿಗಳಾಗಬೇಕು ಅನಿಸುತ್ತದೆ,
ಅದೇ ರೀತಿ ಅವರ ಪ್ರೇಮದ ಆಯಾಮದಿಂದ ತೇಜಸ್ವಿಯವರನ್ನು ನೋಡಿದರೆ ಅವರು ಒಂದು ಕಥನವಾಗಿ~ ಕುತೂಹಲವಾಗಿ ಚಡಪಡಿಕೆಯೊಂದಿಗೆ ಕಾಣುತ್ತಾರೆ.
ಒಬ್ಬ ಯಾವುದೇ ಗಂಡನ ಇಂತಹ ಪ್ರೀತಿ ಪ್ರೇಮದ ಚಟಪಟಿಕೆ ಆತನ ಹೆಂಡತಿಗಿಂತ ಚೆನ್ನಾಗಿ ಇತರರಿಗೆ ಗೊತ್ತಿರಲು ಸಾಧ್ಯವಿಲ್ಲ ಎಂದು ರಾಜೇಶ್ವರಿ ಅವರು ತಮ್ಮ ನನ್ನ ತೇಜಸ್ವಿ ಪುಸ್ತಕದಲ್ಲಿ ಬರೆದಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ರಚಿಸಿದ ಮಂತ್ರ ಮಾಂಗಲ್ಯಕ್ಕೆ ಮೊದಲು ಸಾಕ್ಷಿಯಾದವರು ಅವರ ಮಗ ತೇಜಸ್ವಿ~ ರಾಜೇಶ್ವರಿ ದಂಪತಿಗಳು. ಇವರಿಬ್ಬರೂ ಕಾಲೇಜು ದಿನಗಳಲ್ಲಿ ಪ್ರೀತಿಸಿ ಪ್ರೇಮ ವಿವಾಹ ಆದವರು,
ಈ ದಂಪತಿಗಳ ಪ್ರೇಮದ ಒಳತುಡಿತಗಳನ್ನು, ದಾಂಪತ್ಯದ ಬದುಕಿನ ಒಲವಿನ ಒರತೆಗಳು, ಸತಿಪತಿಗಳ ಪರಸ್ಪರ ಗೌರವದ ಬಾಂಧವ್ಯ, ಸಿಟ್ಟು ಸೆಡುವಿನ ಮದ್ಯೆ ಎಡವಿ ಬಿದ್ದರೂ ಅದನ್ನು ತಿದ್ದಿಕೊಳ್ಳುವ ಮೆಚುರಿಟಿತನ ಮತ್ತು ಪ್ರೀತಿಯ ಬ್ಯಾಲೆನ್ಸ್, ಈ ಎಲ್ಲವನ್ನು ರಾಜೇಶ್ವರಿ ತೇಜಸ್ವಿಯವರು *ನನ್ನ ತೇಜಸ್ವಿ* ಎಂಬ ಪುಸ್ತಕದಲ್ಲಿ , ತೇಜಸ್ವಿ ಅವರ ಪತ್ನಿಯಾಗಿ ತೇಜಸ್ವಿ ಅವರನ್ನು ನೋಡಿದ ಬಗೆಯನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆ.
420 ಪುಟಕ್ಕೋ ಹೆಚ್ಚು ಇರುವ ನನ್ನ ತೇಜಸ್ವಿ ಎಂಬ ಮೇರು ಕೃತಿಯನ್ನು 50 ಪುಟಕ್ಕೆ ತಂದು, ರಂಗರೂಪಕ್ಕೆ ಇಳಿಸಿದ್ದಾರೆ ನಿರ್ದೇಶಕ ಬಿ. ಎಂ.ಗಿರಿರಾಜ ಅವರು.
ಕಲಾ ಮಾಧ್ಯಮದ ಕನ್ನಡದ ಜನಪ್ರಿಯ ಯೂಟ್ಯೂಬರ್ಸ್ ಗಳಲ್ಲಿ ಒಬ್ಬರಾದ, ಪರಂ ಎಂದೆ ಚಿರಪರಿಚಿತರಾದ, ರಂಗಭೂಮಿಯ ಹಿನ್ನೆಲೆ ಇರುವ ಪರಮೇಶ್ವರ್ ಮತ್ತು ಸವಿತಾ ಪರಮೇಶ್ವರ್ ದಂಪತಿಗಳು ಈ ನಾಟಕದಲ್ಲಿ ತೇಜಸ್ವಿ ಮತ್ತು ರಾಜೇಶ್ವರಿ ದಂಪತಿಗಳ ಪಾತ್ರಧಾರಿಗಳಾಗಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸಿದ್ದಾರೆ. ಉಳಿದ ಕಲಾ ಮಾಧ್ಯಮದ ಎಲ್ಲ ಗೆಳೆಯ ಗೆಳತಿಯರು ನಾಟಕಕ್ಕೆ ಜೀವ ಕಳೆ ತುಂಬಿದ್ದಾರೆ.
ತೇಜಸ್ವಿಯವರ ಜನ್ಮದಿನ ಸೆಪ್ಟೆಂಬರ್ 8ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಈ ನನ್ನ ತೇಜಸ್ವಿ ನಾಟಕ ಮೊದಲ ರಂಗಪ್ರಯೋಗಗೊಂಡು, ನಂತರ ವಿದೇಶದಲ್ಲೂ ಪ್ರದರ್ಶನವಾಗಿ ಈಗ ಇಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ತನ್ನ 12ನೇ ರಂಗಪ್ರಯೋಗವನ್ನು ಕಾಣಲಿದೆ.
ದಾಂಪತ್ಯದ ಬದುಕಿನ ದೀವಿಗೆಯಂತಿರುವ ಈ ಪ್ರೇಮಕಥನದ ನಾಟಕವನ್ನು ಪರಂ ಮತ್ತು ಸವಿತಾಪರಂ ದಂಪತಿಗಳು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ,
ಇಂದು ಸಂಜೆ 6:00ಘಂಟೆಗೆ ಆರಂಭಗೊಳ್ಳಲಿರುವ ಈ ರಂಗ ಪ್ರಯೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಂಪತಿಗಳು ಆಗಮಿಸಿ, ಈ ದಾಂಪತ್ಯ ಜೀವನದ ದೀವಿಗೆಯಂತಿರುವ ಈ ನಾಟಕಕ್ಕೆ ತೇಜಸ್ವಿ ಅವರ ನೆಲದ ಈ ಜಿಲ್ಲೆಯ ಜನತೆ ಸಾಕ್ಷಿ ಆಗಬೇಕೆಂದು , ನಾಟಕದ ಆಯೋಜಕರಾದ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಕೋರಿದೆ.
*ನಾಟಕ :* ನನ್ನ ತೇಜಸ್ವಿ.
*ದಿನಾಂಕ :* 20 ಡಿಸೇಂಬರ್ 2025ರ ಇಂದು ಸಂಜೆ ಘಂಟೆ 6:00ಕ್ಕೆ.
*ಸ್ಥಳ:* ಕುವೆಂಪು ಕಲಾಮಂದಿರ
ಚಿಕ್ಕಮಗಳೂರು.
*ಪ್ರವೇಶದರ :* 50ರೂ.
•••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

