ಇಳೇಖಾನ್ ಯುವಜನತೆಯಿಂದ ಲೆಕ್ಕೆ ಹಬ್ಬ ಆಚರಣೆ.*
1 min read
ಅವಿನ್ ಟಿವಿ ಸುದ್ದಿಜಾಲ ✒️ಆಲ್ದೂರು : *ದೀಪಾವಳಿಯು ಗ್ರಾಮ ಜಗತ್ತಿನ ಬಹುರೂಪಿ ಸಂಸ್ಕೃತಿ : ಇಳೇಖಾನ್ ಯುವಜನತೆಯಿಂದ ಲೆಕ್ಕೆ ಹಬ್ಬ ಆಚರಣೆ.*
ಭಾರತೀಯ ಸಂಸ್ಕೃತಿಯಲ್ಲಿ ಹಲವು ಆಚರಣೆ ಸಂಪ್ರದಾಯಗಳು ಭಿನ್ನತೆಗಳ ಜತೆ, ಹಲವು ಸಮುದಾಯಗಳ ಜತೆ, ಬೇರೆ ಬೇರೆ ದೈವಗಳ ಜತೆ ವಿವಿಧ ಆಕಾರಗಳಲ್ಲಿ ಮೈದಾಳಿದೆ. ಹಾಗಾಗಿ ಗ್ರಾಮ ಜಗತ್ತಿನ ಬಹುರೂಪಿ ಆಚರಣೆ ದೀಪಾವಳಿ ಎನ್ನಬಹುದು.
ಗ್ರಾಮ ಜಗತ್ತು ದೀಪಾವಳಿಯನ್ನು ಹೇಗೆಲ್ಲಾ ಪರಿಭಾವಿಸಿದೆ ಎಂದು ನೋಡ ತೊಡಗಿದರೆ ಅಚ್ಚರಿಯಾಗುವಷ್ಟು ವೈವಿಧ್ಯತೆಯನ್ನು ತನ್ನೊಳಗೆ ಒಳಗೊಂಡಿದೆ.
ಕೇವಲ ಇಪ್ಪತ್ತು ಮೂವತ್ತು ಕಿಲೋಮೀಟರ್ ದೂರಕ್ಕೆ ಈ ದೀಪಾವಳಿ ಆಚರಣೆಯು ಹಲವಷ್ಟು ರೀತಿ ವಿಭಿನ್ನವಾಗಿ ಕಂಡುಬರುತ್ತದೆ.
ಜಗತ್ತು ಏಕರೂಪವಾಗುತ್ತಿರುವ ಈ ಹೊತ್ತಿನಲ್ಲಿ ದೀಪಾವಳಿಯು ತನ್ನ ಬಹು ಸಂಸ್ಕೃತಿಯ ನೆಲೆಯಲ್ಲಿ ತನ್ನನ್ನು ತಾನು ತೆರೆದುಕೊಳ್ಳುತ್ತದೆ.
ಈ ಎಲ್ಲಾ ಹಿನ್ನೆಲೆಯಲ್ಲಿ, ಗ್ರಾಮ್ಯ ಸೊಗಡಿನೊಂದಿಗೆ ಲೆಕ್ಕೆ ಹಬ್ಬವನ್ನು ಸಂಭ್ರಮದಿಂದ ಇಳೇಖಾನ್ ಯುವ ಜನತೆ ಆಚರಿಸಿದ್ದು ಕಂಡುಬಂದಿತು.
ಉದ್ಯೋಗ ಮತ್ತು ಹೆಚ್ಚಿನ ವಿದ್ಯಾಭ್ಯಾಸದ ಕಾರಣಕ್ಕಾಗಿ ಇಂದು ಹಳ್ಳಿಗಳಲ್ಲಿ ಯುವ ಜನತೆ ನೋಡ ಸಿಗದಂತೆ ಕಣ್ಮರೆಯಾಗಿದ್ದಾರೆ, ದೊಡ್ಡ ದೊಡ್ಡ ಮಹಲಿನಂತಹ ಮನೆಗಳು ಬಿಕೋ ಎನ್ನುತ್ತವೆ, ವಯಸ್ಸಾದ ತಂದೆ-ತಾಯಿಗಳು ಮಾತ್ರ ಆ ಮನೆಯೊಳಗೆ ಇರುತ್ತಾರೆ, ಹಬ್ಬ ಹರಿದಿನಗಳು ಬಂದಾಗ ಮಾತ್ರ ದೂರ ದೂರದ ಬೇರೆ ಬೇರೆ ಜಾಗಗಳಲ್ಲಿ ಇರುವ ಮಕ್ಕಳು, ಸೊಸೆಯಂದಿರು ತಮ್ಮ ತಮ್ಮ ಹಳ್ಳಿಗಳಿಗೆ ಬಂದು ಪರಂಪರೆ ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿರುವ ಹಬ್ಬಗಳಲ್ಲಿ ಅತ್ಯಂತ ಸಂತೋಷ ಮತ್ತು ಸಡಗರದಿಂದ ಊರಿನಲ್ಲಿ ನೆಲೆಗೊಂಡವರ ಜೊತೆ ಭಾಗಿಯಾಗುತ್ತಾರೆ,
ಬೇರೆ ಬೇರೆ ಊರುಗಳಲ್ಲಿದ್ದ ಇಳೇಖಾನ್ ಯುವಜನತೆ ದೀಪಾವಳಿಯ ಹಬ್ಬದ ದಿನ ಊರಿಗೆ ಆಗಮಿಸಿ,ಒಂದೆಡೆ ಸೇರಿ, ನರಕ ಚತುರ್ದಶಿಯಂದು ಸೂರ್ಯೋದಯದ ಮುಂಚೆ ಎದ್ದು, ಮಂಜು ಮುಸುಕಿನ ನಡುವೆ ಬರಿಗಾಲಲ್ಲಿ ಹೊರಟು, ಊರಿನಲ್ಲಿ ಬೆಳೆದಿರುವ ಬೆಳೆಗಳು ಸೇರಿದಂತೆ, ಪ್ರಕೃತಿದತ್ತವಾಗಿ ಸಿಗುವ ಔಷಧಿಯ ಗುಣಗಳಿರುವ ಲೆಕ್ಕೆ ಸೊಪ್ಪು, ವಿವಿಧ ಜಾತಿಯ ಹುಲ್ಲು, ಉತ್ರಾಣಿ ಕಡ್ಡಿ, ಹಾವಿನಮೂತಿ,ನರಿ ಬಾಲ, ಗಾಳಿಬೀಜ, ಕೆಂಜಿಗೆ, ನೊಜ್ಜೆ, ವಿವಿಧ ಜಾತಿಯ ಚೆಂಡು ಹೂವು ಸೇರಿದಂತೆ ಅನೇಕ ರೀತಿಯ ಗಿಡಮೂಲಿಕೆಗಳನ್ನು ತಮ್ಮ ಜಮೀನು ಮತ್ತು ಕಾಡು ಮೇಡುಗಳಲ್ಲಿ ಸಂಗ್ರಹಿಸಿ ಗ್ರಾಮಕ್ಕೆ ತಂದರು .
ನಮ್ಮ ಹಬ್ಬ ನಮ್ಮ ಸಂಸ್ಕೃತಿ ನಮ್ಮೆಲ್ಲರ ಹೆಮ್ಮೆ ಎಂಬ ಭಾವ ದೊಂದಿಗೆ “ಲೆಕ್ಕೆ ಲೆಕ್ಕ್ಯೋ.. ಗದ್ದೆಗೆ ಲೆಕ್ಕ್ಯೋ, ಗ್ಗಣಕ್ಕೆ ಲೆಕ್ಕ್ಯೋ, ಭೂಮಿ ತಾಯಿಗೆ ಲೆಕ್ಕ್ಯೋ, ಎಂದು ಘೋಷಣೆ ಕೂಗುತ್ತ ದೇವಸ್ಥಾನ~ ಸ್ಮಶಾನ ಸೇರಿದಂತೆ ತಮ್ಮ ತಮ್ಮ ಜಮೀನುಗಳಿಗೆ ಲೆಕ್ಕೆಯನ್ನು ಇಟ್ಟು, ನಂತರ ಒಂದೆಡೆ ಸೇರಿ, ವಿವಿಧ ಜಾತಿಯ ಔಷಧಿ ಗುಣಗಳಿರುವ ಗಿಡಮೂಲಿಕೆಗಳನ್ನು ಕಾಡುಮೇಡುಗಳನ್ನೆಲ್ಲ ಸುತ್ತಾಡಿ ಸಂಗ್ರಹಿಸಿ , ಹೀಗೆ ಸಂಗ್ರಹಿಸಿದ ಲೆಕ್ಕೆಯನ್ನು ಮನೆಗಳಿಗೆ ತೆಗೆದುಕೊಂಡು ಬಂದು, ಒಂದು ಮಣೆಯ ಮೇಲೆ ಇರಿಸಿ, ನೀರು ಹಾಲಿನ ತನು ಎರೆದು ಅದಕ್ಕೆ ಪೂಜೆ ಸಲ್ಲಿಸಿ , ಮನೆ ಅಥವಾ ದನದ ಕೊಟ್ಟಿಗೆಯಲ್ಲಿ ಈ ಲೆಕ್ಕೆಯನ್ನು ಕಟ್ಟುಕಟ್ಟಿ ಇಡುವ ಮೂಲಕ ಬೆಳಕಿನ ಹಬ್ಬ ದೀಪಾವಳಿಗೆ ಚಾಲನೆ ನೀಡಿ ಪುನೀತರಾದರು.
•••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

