ಶ್ರೀಮತಿ ಸುಶೀಲಾ ಕರ್ಕಿ ಅವರು ಈಗ ನಮ್ಮ ನೆರೆ ರಾಷ್ಟ್ರ ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿ ……
1 min read
ಅವಿನ್ ಟಿವಿ ಸುದ್ದಿಜಾಲ ✒️:
ಭಾರತದ ಬನಾರಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದ ಶ್ರೀಮತಿ ಸುಶೀಲಾ ಕರ್ಕಿ ಅವರು ಈಗ ನಮ್ಮ ನೆರೆ ರಾಷ್ಟ್ರ ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿ .
ಭಾರತದ ನರೆ ರಾಷ್ಟ್ರಗಳಾದ ,ಶ್ರೀಲಂಕಾ, ಬಾಂಗ್ಲಾ, ನೇಪಾಳ ದೇಶಗಳಲ್ಲಿ ಭ್ರಷ್ಟಾಚಾರ,ನಿರುದ್ಯೋಗದ ವಿರುದ್ಧ ಯುವ ಜನತೆ ಸಿಡಿದೆದ್ದು ಆಳುವ ಸರ್ಕಾರಕ್ಕೆ, ಭ್ರಷ್ಟ ರಾಜಕಾರಣಿಗಳಿಗೆ ಬೀದಿಗಿಳಿದು ಪ್ರತಿರೋಧದ ಪಾಠವನ್ನು ಅತ್ಯಂತ ಹಿಂಸಾತ್ಮಕವಾಗಿ ಆರಂಭಿಸಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಗಣನೀಯ ಮಟ್ಟದಲ್ಲಿ ಲೂಟಿ ಮಾಡಿದ್ದಾರೆ.
ಪತ್ರಿಕಾರಂಗದಲ್ಲಿ ಮಾಧ್ಯಮಗಳು ಕಾವಲು ನಾಯಿಗಳಂತಿರಬೇಕು ಎಂಬ ಪಾಠವಿದೆ, ಹೀಗಿದ್ದೂ ಕೂಡ, ಪತ್ರಿಕಾರಂಗ ಎಂಬುದು ಪತ್ರಿಕೋದ್ಯಮವಾದ ಮೇಲೆ ಮಾಧ್ಯಮಗಳು, ವಿಶೇಷವಾಗಿ ದೃಶ್ಯಮಾಧ್ಯಮಗಳು ಒಂದೊಂದು ರಾಜಕೀಯ ಪಕ್ಷದ ಮುಖವಾಣಿಯಂತೆ, ಕಾವಲು ನಾಯಿಯಾಗಿ ಕೆಲಸ ಮಾಡುವುದನ್ನು ಬಿಟ್ಟು ಎಂಜಲು ನಾಯಿಗಳಾಗಿ, ಪತ್ರಿಕಾ ರಂಗ ಸಂಪಾದಿಸಿಕೊಂಡಿದ್ದ ಹಿರಿದಾದ ಘನತೆ ಗೌರವವನ್ನು ಅಡಯಿಟ್ಟ ದೃಶ್ಯ ಮಾಧ್ಯಮಗಳ ಕಚೇರಿಗೂ ಕೊಡ ಬೆಂಕಿ ಇಟ್ಟು ಬಸ್ಮ ಮಾಡಿ ಗೋದಿ ಮೀಡಿಯಾಗಳಿಗೆ ಎಚ್ಚರಿಸಿದ್ದಾರೆ .
ಲೂಟಿ ಮೇಲೆ ಲೂಟಿ ಹೊಡೆದು ಕೋಟಿ ಕೋಟಿ ಬೇನಾಮಿ ಹೆಸರಿನಲ್ಲಿ ಆಸ್ತಿ ಸಂಪಾದಿಸಿಕೊಂಡು, ಸಮಾಜದ ಸ್ವಾಸ್ಥವನ್ನು ಕೆಡಸಿ, ನಾವೇ ಸಾಚಾ ನಾವೇ ಶುದ್ಧ ಎಂದು ಪ್ರಚೋದನಕಾರಿ ಭಾಷಣ ಮಾಡುತ್ತಿರುವ ಭಾರತದ ಹಲವು ಭ್ರಷ್ಟ ರಾಜಕಾರಣಿಗಳಿಗೆ ಶ್ರೀಲಂಕಾ ಬಾಂಗ್ಲಾ ನೇಪಾಳದ ಈ ಘಟನೆಗಳು ಒಂದು ಎಚ್ಚರಿಕೆಯ ಪಾಠವಿದ್ದಂತೆ ಇದೆ.
ಈ ಕುರಿತು, ಕರ್ನಾಟಕದ ಉಚ್ಚ ನ್ಯಾಯಾಲಯದ ನನ್ನ ವಕೀಲ ಮಿತ್ರ ಜಿ ಟಿ ನರೇಂದ್ರ ಬರೆದಿರುವ ಈ ಕೆಳಕಂಡ ಲೇಖನವೊಂದನ್ನು ಅವಿನ್ ಟಿವಿ ಸುದ್ದಿಜಾಲವು ತನ್ನ ಓದುಗರಿಗಾಗಿ ಕೂಡ ಮಾಡುತ್ತಿದೆ.
ಪ್ಲೀಸ್ 👇
••••••••••••••••••••
ಆತ್ಮೀಯರೇ ನಮಸ್ಕಾರ,
ಅಭಿನಂದನೆಗಳು ಮತ್ತು ಶುಭಾಶಯಗಳು ನ್ಯಾಯಮೂರ್ತಿ ಶ್ರೀಮತಿ ಸುಶೀಲಾ ಕರ್ಕಿ ಅವರಿಗೆ,
ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್ ಆಫ್ ನೇಪಾಳ.ನೇಪಾಳ ದೇಶದ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಕ್ರಾಂತಿಕಾರಿಗಳು ಆಯ್ಕೆ ಮಾಡಿದ್ದಾರೆ.
ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ನಿರುದ್ಯೋಗದಿಂದ ಬೇಸತ್ತ ವಿದ್ಯಾರ್ಥಿಗಳು ಮತ್ತು ಯುವಜನರು, ಕ್ರಾಂತಿಕಾರಿ ಹೋರಾಟದ ಮೂಲಕ ಚುನಾಯಿತ ಸರ್ಕಾರ ಕಿತ್ತೊಗೆದಿದ್ದಾರೆ ಮತ್ತು ಪಾರ್ಲಿಮೆಂಟನ್ನು ರಾಷ್ಟ್ರಪತಿಗಳು ವಿಸರ್ಜಿಸಿದ್ದಾರೆ.
ನಮ್ಮ ದೇಶದ ಹಿಂದೂ ಬನಾರಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಪಡೆದಿರುವ ಶ್ರೀಮತಿ ಕರ್ಕಿ ಯವರು ನೇಪಾಳದ ಸರ್ವೋಚ್ಚ ನ್ಯಾಯಾಲಯದ ವಕೀಲರಾಗಿ, ಹಿರಿಯ ಪದಾಂಕಿತ ವಕೀಲರಾಗಿ, ನ್ಯಾಯಮೂರ್ತಿಯಾಗಿ ಮತ್ತು ನೇಪಾಳದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾದ ಪ್ರಥಮ ಮಹಿಳೆ. ತಮ್ಮ ವೃತ್ತಿ ಜೀವನದುದ್ದಕ್ಕೂ ತಮ್ಮ ದಕ್ಷತೆ, ಪ್ರಾಮಾಣಿಕತೆ, ಧೈರ್ಯದಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದಾರೆ. ನ್ಯಾಯಾಂಗ, ಕಾರ್ಯಾಂಗ ಗಳನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದವರು.
ನೇಪಾಳದ ಯುವಜನರು ದಶಕಗಳ ಹಿಂದೆ ರಾಜಸತ್ತೆಯನ್ನು ಕೆಳಗಿಳಿಸಿ ಪ್ರಜಾಪ್ರಭುತ್ವಕ್ಕೆ ಮಣೆ ಹಾಕಿದ್ದರು. ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಧಿಕಾರಕ್ಕೇರಿದ ನೇಪಾಳಿ ಕಮ್ಯೂನಿಸ್ಟರು, ವಿವಿಧ ರಾಜಕೀಯ ಪಕ್ಷಗಳು ಒಮ್ಮೆಯೂ ಅಧಿಕಾರಾವಧಿಯನ್ನು ಪೂರೈಸಿಲ್ಲ. ಪಕ್ಷಾಂತರ , ಅವಿಶ್ವಾಸ ಇತ್ಯಾದಿ ಕಾರಣಗಳಿಂದಾಗಿ. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ನಮ್ಮ ಡಿಕೆಶಿ ಅವರು ಒದ್ದು ಒಳಗಾಕ್ತೀವಿ, ನಾವೆಲ್ಲ ಕಂಡಿದ್ದೀವಿ ಎಂಬ ಭಾಷೆಯಲ್ಲಿ ಹೇಳುವುದಾದರೆ ನೇಪಾಳದ ಜನರು ರಾಜಕಾರಣಿಗಳನ್ನು,ಭ್ರಷ್ಟ ಅಧಿಕಾರಿಗಳನ್ನು ಅಧಿಕಾರದಿಂದ ಒದ್ದು ಹೊರಗಾಕುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ನೇಪಾಳಿ ಸೇನೆ ಅಪಾರ ಸಂಯಮ ತೋರಿದ್ದು,ಅಲ್ಲಿನ ಪೊಲೀಸರು,ಭಟ್ಟಂಗಿ ಮಾಧ್ಯಮಗಳು ಕ್ರಾಂತಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ನೆರೆಯ ಪಾಕಿಸ್ತಾನ, ಶ್ರೀಲಂಕಾ,ಬಾಂಗ್ಲಾ ದೇಶಗಳಲ್ಲಿ ರಾಜಕಾರಣಿಗಳು ಅಧಿಕಾರಿಗಳು ಉದ್ಯಮಿಗಳ ದುಷ್ಟಕೂಟ ದೇಶವನ್ನು ಲೂಟಿ ಹೊಡೆದು ಜನರಿಗೆ ಇನ್ನಿಲ್ಲದ ತೊಂದರೆ ಕಷ್ಟ ನಷ್ಟಗಳನ್ನು ಉಂಟು ಮಾಡಿದ್ದರ ಪರಿಣಾಮವಾಗಿ ಆ ದೇಶಗಳಲ್ಲಿಯೂ ರಾಜಕಾರಣಿಗಳು ಪಲಾಯನ ಮಾಡಿದ್ದಾರೆ,ಹಲವಾರು ಜೇಲಿನಲ್ಲಿ ಕೊಳೆಯುತ್ತಿದ್ದಾರೆ.
ನಮ್ಮ ದೇಶದಲ್ಲಿ ಉದ್ಯೋಗ ಕೇಳಿದ ಜನರಿಗೆ ಪಕೋಡಾ ಮಾರಲು ಸೂಚಿಸಿದವರು, ರೈತರ ಕೃಷಿ ಭೂಮಿಯನ್ನು ಕಿತ್ತು ಬಂಡವಾಳಶಾಹಿಗಳಿಗೆ ಕೊಟ್ಟು ರೈತರನ್ನು ಒಕ್ಕಲೆಬ್ಬಿಸುವ ರಾಜಕಾರಣಿಗಳು ಜಾತಿ ಮತಧರ್ಮ ಪುಕ್ಕಟೆ ಸ್ಕೀಮುಗಳ ಮೂಲಕ ಜನರನ್ನು ಹಿಡಿತದಲ್ಲಿಟ್ಟು ಕೊಂಡಿದ್ದಾರೆ. ಅನವಶ್ಯಕ ಕಾಮಗಾರಿಗಳು,ಅನವಶ್ಯಕ ವೆಚ್ಚ,ಸರ್ಕಾರಿ ಖಜಾನೆ ಲೂಟಿ, ಬಂಡವಾಳಶಾಹಿಗಳಿಗೆ ಅನುಕೂಲಕರ ಕಾನೂನುಗಳ ರಚನೆ, ನಿಯಮಗಳ ಸಡಿಲಿಕೆ, ವರ್ಗಾವಣೆ ದಂಧೆ ಒಂದೇ ಎರಡೇ.
ಇತ್ತೀಚೆಗೆ ದೇವನಹಳ್ಳಿಯ ರೈತ ಹೋರಾಟಕ್ಕೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಶ್ರೀ ಗೋಪಾಲ ಗೌಡರು ತಾರ್ಕಿಕ ಅಂತ್ಯವನ್ನು ಕಾಣಿಸಿದ್ದಾರೆ. ಜಾತಿ ಮತಗಳನ್ನು ಮರೆತು,ದುಬಾರಿ ಶಿಕ್ಷಣ, ನಿರುದ್ಯೋಗದ ಕುರಿತು ವಿದ್ಯಾರ್ಥಿ ಯುವಜನರು ಜಾಗೃತರಾಗುವ ಕಾಲ ಸನ್ನಿಹಿತವಾಗಿದೆ. ಮುಂದಿನ ಪೀಳಿಗೆಯ ಜನರಾದರೂ ಭ್ರಷ್ಟಾಚಾರ ಮುಕ್ತ ಸೌಹಾರ್ದತ ನೈಜ ಪ್ರಗತಿಪರ ರಾಷ್ಟ್ರ ಮತ್ತು ರಾಜ್ಯವನ್ನು ಕಟ್ಟುವರೆಂದು ಆಶಾವಾದಿಯಾಗಿರೋಣ.
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

