ಕನ್ನಡದ ತೇಜಸ್ಸು ಪೂರ್ಣಚಂದ್ರ ತೇಜಸ್ವಿ*..
1 min read
ಅವಿನ್ ಟಿವಿ ಸುದ್ದಿಜಾಲ ✒️: *ಕನ್ನಡದ ತೇಜಸ್ಸು ಪೂರ್ಣಚಂದ್ರ ತೇಜಸ್ವಿ*
ತಾನು ಬಯಸಿದಂತೆ ಬದುಕಬೇಕು ಅಂದುಕೊಂಡು, ಅಂದುಕೊಂಡಂತೆ ಬದುಕಿದವರು ತೇಜಸ್ವಿ.
ವಿಸ್ಮಯ ಜಗತ್ತಿನ ನಿಗೂಢ ನಡಿಗೆಗಾರ ~ ಶೋಧಕ ಬರಹಗಾರ ~ ನಿರುತ್ತರದ ಮಾಲೀಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ದೈಹಿಕವಾಗಿ ಬದುಕಿದ್ದರೆ ಇದೇ ಸೆಪ್ಟೆಂಬರ್ 08ಕ್ಕೆ 88ನೇ ವರ್ಷಕ್ಕೆ ಕಾಲಿಡುತ್ತಿದ್ದರು.
ಪೂಚಂತೇ ಅವರ 88ನೇ ಜನ್ಮದಿನಾಚರಣೆಯನ್ನು ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು , ಬಣಕಲ್ ಜೂನಿಯರ್ ಕಾಲೇಜ್ ಸಭಾಂಗಣದಲ್ಲಿ ವಿಶಿಷ್ಟ ರೀತಿಯಲ್ಲಿ ಹಮ್ಮಿಕೊಂಡು, ತೇಜಸ್ವಿ ಅವರ ಜೀವನ ಚಿತ್ರ ಮತ್ತು ಸಾಹಿತ್ಯ ಚಿಂತನೆ ಕುರಿತು ವಿದ್ಯಾರ್ಥಿ ಯುವಜನರೊಟ್ಟಿಗೆ ಚಿಂತನ ಮಂಥನ ನಡೆಸಿತು.
ಮಲೆನಾಡಿನ ಮೂಡಿಗೆರೆಯ ಕಾಡಂಚಿನ ಒಂದು ಮೂಲೆಯೊಂದನ್ನು ತನ್ನ ಬದುಕಿನ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡು, ಯಾವ ಬಿಗುಮಾನಗಳು ಇಲ್ಲದೆ ಮಂಕುತಿಮ್ಮನಂತೆ ಎಲ್ಲರೊಳಗೊಂದಾಗಿ, ಪ್ರಶಸ್ತಿ, ಪ್ರಚಾರ, ಭಾಷಣ, ಜನಪ್ರಿಯತೆಯ ವ್ಯಸನಕ್ಕೆ ಒಳಗಾಗದೆ ತನ್ನಂತೆ ತಾನು ಬದುಕಿ ಒಂದು ಪರಿಪೂರ್ಣ ಚಂದ್ರನಂತೆ ಗೋಚರಿಸಿದವರು ಪೂರ್ಣಚಂದ್ರ ತೇಜಸ್ವಿ.
ಕಾಡಿನ ಸಂತನಂತೆ ನಿಗೂಢವಾಗಿ ಧ್ಯಾನಸ್ತನಾಗಿ ಕುಳಿತುಕೊಂಡು, ಮಲೆನಾಡಿನ ಪರಿಸರ, ಆ ಪರಿಸರದೊಳಗಿನ ಜೀವ ಜಗತ್ತಿನ ಒಡನಾಟದ ಅನುಭವ ಹಾಗೂ ಅವುಗಳ ದರ್ಶನವನ್ನು ತಮ್ಮ ಬರಹಗಳ ಮೂಲಕ ಓದುಗರಿಗೆ ಹಂಚಿದವರು ಈ ತೇಜಸ್ವಿ.
ಇಂತಹ ಕಾಡಂಚಿನಲ್ಲಿ ಕುಳಿತುಕೊಂಡು ಅವರು ನೋಡಿದ್ದು ಕೇವಲ ಪ್ರಾಣಿ ಪಕ್ಷಿ ಜೀವ ಜಗತ್ತಿನ ವಿಸ್ಮಯಗಳನ್ನು ಮಾತ್ರವಲ್ಲ ಹಾಗೂ ಇವಿಷ್ಟೇ ಪ್ರಕೃತಿ ಮತ್ತು ಪರಿಸರ ಅಲ್ಲ, ಪ್ರಕೃತಿ ಎಂದರೆ ಅದರೊಳಗೆ ಮನುಷ್ಯನು ಇದ್ದಾನೆ, ಮನುಷ್ಯನು ಪ್ರಕೃತಿಯ ಒಂದು ಭಾಗವಾಗಿದ್ದಾನೆ, ಮನುಷ್ಯನನ್ನು ಹೊರಗಿಟ್ಟು ಪ್ರಕೃತಿಯನ್ನು ನೋಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಕಾಡಿನಂಚಿನಲ್ಲಿ ಕುಳಿತುಕೊಂಡು ಅವರು ನೋಡಿದ್ದು ಹೆಚ್ಚಾಗಿ ಈ ಸಮಾಜದ ಕಟ್ಟ ಕಡೆಯ ಜನರನ್ನು.
ಸಮಾಜದ ಕಟ್ಟ ಕಡೆಯ ಜನರು ಆಡುವ ನಾಡ್ನುಡಿಯನ್ನು , ಆ ನಾಣ್ನುಡಿಯಲ್ಲಿರುವ ಬದುಕಿನ ಅನುಭವದ ದರ್ಶನವನ್ನು ಗ್ರಹಿಸಿ, ಅದನ್ನು ವ್ಯಾಪಕವಾಗಿ ವೈಚಾರಿಕವಾಗಿ ವಿಶಿಷ್ಟವಾಗಿ ವಿಸ್ತರಿಸಿ ಮುನ್ನೆಲೆಗೆ ತಂದವರು ತೇಜಸ್ವಿ ಅವರು.
ಈ ಹಿನ್ನೆಲೆಯಲ್ಲಿ ತೇಜಸ್ವಿಯವರನ್ನು ನಾವು ನೋಡಿದರೆ, ಅವರು ನೋಡ ಬಯಸಿದ್ದು ಈ ಕಟ್ಟ ಕಡೆಯ ಜನರಾದ ಹಾವು ಹಿಡಿಯುವವರನ್ನು, ಮೀನು ಹಿಡಿಯುವವರನ್ನು, ಸಂತೆಯಲ್ಲಿ ಟೆಂಟ್ ಹಾಕಿ ಕುಳಿತುಕೊಂಡು ವ್ಯಾಪಾರ ಮಾಡುವವರನ್ನು, ತೋಟದಲ್ಲಿ ಕೆಲಸ ಮಾಡುವವರನ್ನು, ಮನೆಮನೆಗೆ ಟಪಾಲು ನೀಡುವ ಅಂಚೆಪೇದೆಯನ್ನು, ಜೀವನ್ಮರಣದೊಂದಿಗೆ ಕೆಲಸ ಮಾಡುವ ಕರೆಂಟ್ ಲೈನ್ ಮ್ಯಾನ್ ಅನ್ನು, ಬಿರಿಯಾನಿ ಹೋಟೆಲ್ ಸಾಬಣ್ಣನನ್ನು, ಸಣ್ಣಕಿರಾಣಿ ಅಂಗಡಿಯ ಭಟ್ಟರನ್ನು, ಹೀಗೆ ನಾವು ಸಮಾಜದಲ್ಲಿ ಅತೀ ಸಾಮಾನ್ಯರು ಅಂತ ನಾವು ಅಂದುಕೊಂಡವರನ್ನೆಲ್ಲ, ತೇಜಸ್ವಿಯವರು ಬೆರಗುಗಣ್ಣಿನಿಂದ ನೋಡಿ ಅವರಿಗೆ ಮಹತ್ವದ ಪ್ರಾಮುಖ್ಯತೆಯನ್ನು ನೀಡಿ ತಮ್ಮ ಬರಹದ ಮೂಲಕ ಈ ಸಮಾಜಕ್ಕೆ ವಿಶಿಷ್ಟವಾಗಿ ಪರಿಚಯ ಮಾಡಿಕೊಟ್ಟು, ಅವರನ್ನೆಲ್ಲ ಈ ಆಧುನಿಕ ಸಮಾಜ ತಿರುಗಿ ನೋಡುವಂತೆ ಮಾಡಿದವರು ಪೂರ್ಣಚಂದ್ರ ತೇಜಸ್ವಿಯವರು.
ಈ ಕಾರಣಕ್ಕಾಗಿ ನಮಗೆ ಹಾವು ಹಿಡಿಯುವ ವೆಂಕಟ, ಆ ವೆಂಕಟನ ಹೆಂಡತಿ, ಬಿರಿಯಾನಿ ಕರಿಯಪ್ಪ, ಪ್ಯಾರಾ, ದಾನಮ್ಮ, ಮಂದಣ್ಣ, ಶಿವು ಒಂದೇ ಎರಡೇ ಈ ತರಹದ ಸಾಮಾನ್ಯರ ಅನೇಕ ಹೆಸರುಗಳು, ಅವರೊಳಗಿದ್ದ ಬದುಕಿನ ಅನುಭವದ ದರ್ಶನಗಳನ್ನು ದಕ್ಕಿಸಿಕೊಂಡವರು ಈ ತೇಜಸ್ವಿ.
ರಾಷ್ಟ್ರಕವಿ ಕುವೆಂಪು ಅವರ ಮಗನಾಗಿದ್ದರೂ ಕೂಡ ಅವರ ಪ್ರಭಾವವನ್ನು ಎಲ್ಲಿಯೂ ಬಳಸಿಕೊಳ್ಳದೆ, ತನ್ನ ಅಪ್ಪನ ಕರೆಯಂತೆ, ವಿಶ್ವಮಾನವರಾಗಿ, ಮಾನವೀಯ ಮೌಲ್ಯಗಳಿಗೆ ಪ್ರಾಶಸ್ತ್ಯ ಕೊಟ್ಟು, ಮತ ಧರ್ಮ ಜಾತಿಗಳ ವ್ಯಸನಕ್ಕೆ ಬಲಿಯಾಗದೆ, ಜಾತಿ ವ್ಯವಸ್ಥೆಯನ್ನು ವಿರೋಧಿಸಿ, ಮೂಲಭೂತವಾದವನ್ನು ಕಟು ಶಬ್ದಗಳಲ್ಲಿ ಟೀಕಿಸಿ ಒಂದು ಭಿನ್ನ ನೋಟದೊಂದಿಗೆ ಬದುಕನ್ನು ಕಟ್ಟಿಕೊಂಡಿದ್ದನ್ನು ನೋಡಿದರೆ ಅದೊಂದು ಆಶ್ಚರ್ಯ ಮತ್ತು ಬೆರಗಿನಂತಿದೆ.
ಯಾವುದೇ ಸಾಹಿತಿಯ ಅಂತಿಮ ಗೆಲುವು ಇರುವುದು ಪ್ರಶಸ್ತಿ ಪಡೆಯುವುದರಲ್ಲಿ ಅಲ್ಲ, ಅದು ಓದುಗರನ್ನು ತಲುಪುವುದರಲ್ಲಿ ಎಂಬುದನ್ನು ಬದುಕಿನದ್ದಕ್ಕೂ ಸಾಬೀತು ಮಾಡುತ್ತಲೇ ಸಾಗಿದ ತೇಜಸ್ವಿಯವರು, ಪ್ರಶಸ್ತಿ ಪುರಸ್ಕಾರದ ಬೆನ್ನು ಹತ್ತದೆ ಓದುಗರ ಬೆನ್ನು ಹತ್ತಿದ್ದು ಈ ಶತಮಾನದ ಒಂದು ಸೋಜಿಗ ಎನ್ನಬಹುದು.
ಈ ಎಲ್ಲ ಕಾರಣಗಳಿಗಾಗಿ, ಈ ದುರಿತಕಾಲದಲ್ಲಿ, ಪ್ರತಿರೋಧದ ಶಕ್ತಿಗಳೆಲ್ಲ ಚಲ್ಲಾಪಿಲ್ಲಿ ಆಗಿರುವ ಈ ಸಮಯದಲ್ಲಿ ತೇಜಸ್ವಿಯವರು ಮತ್ತೆ ಮತ್ತೆ ನೆನಪಾಗುತ್ತಲೇ ಹೋಗುತ್ತಿದ್ದಾರೆ..
ಇಂತಹ ಒಂದು ನೆನಪಿನೊಂದಿಗೆ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ 88ನೇ ಜನ್ಮ ದಿನಾಚರಣೆಯನ್ನು ಬಣಕಲ್ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ವಿಶಿಷ್ಟವಾಗಿ ಆಚರಿಸಿತು, ವಿದ್ಯಾರ್ಥಿಗಳಿಂದ ಅವರ ಭಾವಚಿತ್ರವನ್ನು ಬಿಡಿಸುವ ಸ್ಪರ್ಧೆ ಏರ್ಪಡಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಕೊಟ್ಟು ಗೌರವಿಸಿ, ತೇಜಸ್ವಿಯವರನ್ನು ಕಂಡಂತೆ ಕಂಡ ಜನರ ಹತ್ತಿರ ಅವರ ನೆನಪುಗಳನ್ನು ಮೆಲುಕು ಹಾಕಿಸಿತು.
•••••••••••••••ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

