लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಬ್ಬದ ಸಿಹಿ ಮತ್ತು ಬದುಕಿನ ಕಹಿ: ಶೋಷಣೆ ಮರೆಯಾಗಿಲ್ಲ

ನಿನ್ನೆ ಪಕ್ಕದೂರಿನ ಪೊಲೀಸ್ ಠಾಣೆಗೆ ಹೋಗಲೆಂದು ಮನೆಯಿಂದ ಹೊರಟಾಗ, ರಸ್ತೆಯಲ್ಲಿ ನಮ್ಮ ಮುಸ್ಲಿಂ ಬಾಂಧವರು ಹಬ್ಬದ ಪ್ರಯುಕ್ತ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗುತ್ತಿತ್ತು. ಅಲ್ಲಲ್ಲಿ ನಮ್ಮ ಹಿಂದೂ ಸಹೋದರರು ಸಿಹಿ ತಿಂಡಿಗಳನ್ನು ಹಂಚುತ್ತಿದ್ದರು. ಈ ದೃಶ್ಯ ನೋಡಿದಾಗ ನನಗೆ ಸಂತೋಷವಾಯಿತು. ಅವರ ಹಬ್ಬಗಳಲ್ಲಿ ಇವರು ಇವರ ಹಬ್ಬಗಳಲ್ಲಿ ಅವರು ಸಿಹಿ ಹಂಚುತ್ತಿರುವುದನ್ನು ನೋಡಿ ನಮ್ಮ ಸಮಾಜದಲ್ಲಿ ಸೌಹಾರ್ದತೆ ಹೀಗೆ ಮುಂದುವರಿಯಲಿ ಎಂದು ಮನದಲ್ಲೇ ಆಶಿಸಿದೆ. ಆದರೆ, ಮನಸ್ಸಿನ ಒಂದು ಮೂಲೆಯಲ್ಲಿ ಮುಳ್ಳು ಚುಚ್ಚಿದಂತೆ ಒಂದು ಯೋಚನೆ ಕಾಡತೊಡಗಿತು.

ಇದೇ ಸಹೋದರತೆ, ಇದೇ ಸೌಹಾರ್ದತೆ ನಮ್ಮ ಸಮಾಜದ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಬಹುದೇ? ಇಷ್ಟೇ ಸುಲಭವಾಗಿ, ಬಡವರ ಭೂಮಿ ಒತ್ತುವರಿ ಮಾಡಿಕೊಂಡಿರುವ ಶ್ರೀಮಂತರು, ಸಿಹಿ ಹಂಚಿದಷ್ಟೇ ಸುಲಭವಾಗಿ ಭೂಮಿಗಳನ್ನು ಹಂಚಿ ಬಿಟ್ಟರೆ, ಬಡವರ ಜೀವನ ಎಷ್ಟು ಸಿಹಿಯಾಗಿರುತ್ತಿತ್ತು ಎಂದು ಯೋಚಿಸುತ್ತಾ ಬಸ್ ನಿಲ್ದಾಣದೆಡೆಗೆ ಹೆಜ್ಜೆ ಹಾಕಿದೆ.

ಹಬ್ಬಗಳೆಂದರೆ ಸಂಭ್ರಮ, ಸಡಗರ. ಬಣ್ಣದ ಬೆಳಕು, ಹೊಸಬಟ್ಟೆ, ಬಂಧುಬಳಗಗಳ ಭೇಟಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪರಸ್ಪರ ಸಿಹಿ ವಿನಿಮಯ. ಕರ್ನಾಟಕದ ಹಳ್ಳಿಗಳಿಂದ ಹಿಡಿದು ಭಾರತದ ಮಹಾನಗರಗಳವರೆಗೆ, ಹಬ್ಬಗಳು ಜಾತಿ-ಮತಗಳ ಬೇಧವಿಲ್ಲದೆ ಎಲ್ಲರನ್ನೂ ಒಂದೇ ಸೂರಿನಡಿ ತರುತ್ತವೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಫೋಟೋಗಳು ಮತ್ತು ವೀಡಿಯೋಗಳು ನಮ್ಮ ಸಮಾಜದ ಸೌಹಾರ್ದತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಆದರೆ, ಈ ಹೊಳಪಿನ ಹಿಂದೆ ಮಸುಕಾದ ಮತ್ತೊಂದು ವಾಸ್ತವ ಅಡಗಿದೆ. ಹಬ್ಬಗಳ ಆಚರಣೆ ಮುಗಿದ ನಂತರವೂ, ಶೋಷಣೆ, ಅನ್ಯಾಯ ಮತ್ತು ದಬ್ಬಾಳಿಕೆಗಳು ಹಾಗೆಯೇ ಉಳಿದುಕೊಂಡಿವೆ.

ಕಳೆದ ಕೆಲವು ವರ್ಷಗಳಿಂದ, ಭಾರತದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ಬಡ ರೈತರು ಮತ್ತು ದಲಿತರ ಭೂಮಿಯನ್ನು ಒತ್ತುವರಿ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಪ್ರಭಾವಶಾಲಿ ವ್ಯಕ್ತಿಗಳು, ರಾಜಕಾರಣಿಗಳು, ಮತ್ತು ಶ್ರೀಮಂತರು ಕಾನೂನುಬಾಹಿರವಾಗಿ ಬಡವರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಭೂಮಿಯೇ ಅವರ ಜೀವನದ ಏಕೈಕ ಆಧಾರ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ, ಹಬ್ಬಗಳ ಸಮಯದಲ್ಲಿ ಸಿಹಿ ಹಂಚಿ, “ಎಲ್ಲರೂ ಒಂದೇ” ಎಂದು ಹೇಳುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತದೆ. ಹಬ್ಬದ ಸಂಭ್ರಮವು ಕೇವಲ ಮೇಲ್ನೋಟದ ಒಗ್ಗಟ್ಟನ್ನು ತೋರಿಸುತ್ತದೆಯೇ ಹೊರತು, ಆಂತರಿಕ ಬಿರುಕುಗಳನ್ನು ಮುಚ್ಚಲು ಸಾಧ್ಯವಿಲ್ಲ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ, “ನಾನು ಒಂದು ಸಮುದಾಯದ ಪ್ರಗತಿಯನ್ನು ಆ ಸಮುದಾಯದ ಮಹಿಳೆಯರು ಸಾಧಿಸಿರುವ ಪ್ರಗತಿಯ ಮಟ್ಟದಿಂದ ಅಳೆಯುತ್ತೇನೆ”. ಅವರ ಈ ಮಾತುಗಳನ್ನು ವಿಸ್ತರಿಸಿ, ಸಮುದಾಯದ ಪ್ರಗತಿಯನ್ನು ಕೇವಲ ಆರ್ಥಿಕ ಯಶಸ್ಸಿನಿಂದ ಅಳೆಯಲಾಗದು. ಅದು ನ್ಯಾಯ, ಸಮಾನತೆ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಒಳಗೊಂಡಿರಬೇಕು. ಕೇವಲ ಸಿಹಿ ಹಂಚುವುದರಿಂದ ಈ ಆಶಯಗಳು ಈಡೇರುವುದಿಲ್ಲ.
ಹಬ್ಬಗಳು ಕೇವಲ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತವಾಗಬಾರದು.
ಅವು ಸಾಮಾಜಿಕ ಪರಿವರ್ತನೆಗೆ ವೇದಿಕೆಯಾಗಬೇಕು. ಸಿಹಿ ಹಂಚುವ ಕೈಗಳು, ಬಡವರ ಹಕ್ಕುಗಳನ್ನು ರಕ್ಷಿಸಲು, ಅವರಿಗೆ ನ್ಯಾಯ ಒದಗಿಸಲು ಮುಂದಾಗಬೇಕು. ಬಡವರ ಕಣ್ಣೀರು ಒರೆಸುವುದು, ದಬ್ಬಾಳಿಕೆಗೆ ಒಳಗಾದವರಿಗೆ ಆಶ್ರಯ ನೀಡುವುದು, ಒತ್ತುವರಿಯಾದ ಭೂಮಿಯನ್ನು ಮರಳಿ ಕೊಡಿಸುವುದು – ಇವು ನಿಜವಾದ ಮಾನವೀಯತೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಮತ್ತೊಂದು ಪ್ರಮುಖ ಹೇಳಿಕೆ ಇಲ್ಲಿದೆ: “ಸಮಾನತೆ ಇಲ್ಲದ ಸ್ವಾತಂತ್ರ್ಯವನ್ನು ನಾನು ವಿರೋಧಿಸುತ್ತೇನೆ.” ಇದೇ ರೀತಿ, ಸಮಾನತೆ ಮತ್ತು ನ್ಯಾಯ ಇಲ್ಲದ ಹಬ್ಬದ ಸಂಭ್ರಮವೂ ಅಪೂರ್ಣ.

ಮುಂದಿನ ಬಾರಿ ಹಬ್ಬದ ಸಿಹಿ ತಿನಿಸುಗಳನ್ನು ಹಂಚುವ ಮೊದಲು, ನಮ್ಮ ಸಮಾಜದ ಕಹಿಯಾದ ವಾಸ್ತವವನ್ನು ನೆನಪಿಸಿಕೊಳ್ಳೋಣ. ಬಡವರು, ಶೋಷಿತರು ಅನುಭವಿಸುತ್ತಿರುವ ನೋವನ್ನು ಅರಿತುಕೊಳ್ಳೋಣ. ಸಿಹಿಯೊಂದಿಗೆ ನ್ಯಾಯವನ್ನು, ಸಡಗರದೊಂದಿಗೆ ಸಮಾನತೆಯನ್ನು ಹಂಚೋಣ. ಏಕೆಂದರೆ, ನಿಜವಾದ ಹಬ್ಬ ಇರುವುದು ಸಮಾನತೆಯ ಸಮಾಜದಲ್ಲಿ, ಎಲ್ಲರಿಗೂ ನ್ಯಾಯ ದೊರೆತಾಗ ಮಾತ್ರ. ಅಲ್ಲಿಯವರೆಗೆ ಹಬ್ಬಗಳ ಸಂಭ್ರಮ ಅಪೂರ್ಣ.
#ಜೈಭೀಮ್ #ಜೈಸಂವಿಧಾನ #ಜೈಪ್ರಬುದ್ಧ_ಭಾರತ
✍️ ಆಶಾ ಸಂತೋಷ್ ಮೂಡಿಗೆರೆ

About Author

Leave a Reply

Your email address will not be published. Required fields are marked *

You may have missed