ಸಜ್ಜನರಿಂದ ಏರ್ಪಟ್ಟ ಸಂಬಂಧವು ಒಳ್ಳೆಯದನ್ನೇ ಮಾಡುತ್ತದೆ ಎಂಬ ಮಾತಿದೆ, ಇದನ್ನು ಸಜ್ಜನ ಪ್ರಣೀತ ಸಂಬಂಧ ಎನ್ನುತ್ತಾರೆ…..
1 min read
ಅವಿನ್ ಟಿವಿ ಸುದ್ದಿಜಾಲ ✒️:
ಸಜ್ಜನರಿಂದ ಏರ್ಪಟ್ಟ ಸಂಬಂಧವು ಒಳ್ಳೆಯದನ್ನೇ ಮಾಡುತ್ತದೆ ಎಂಬ ಮಾತಿದೆ, ಇದನ್ನು ಸಜ್ಜನ ಪ್ರಣೀತ ಸಂಬಂಧ ಎನ್ನುತ್ತಾರೆ…..
ಈ ಬದುಕು ಎಲ್ಲ ವ್ಯಾಖ್ಯಾನಗಳನ್ನು ಮೀರಿದ್ದು, ನಿಸರ್ಗದಲ್ಲಿ ಅನೇಕ ವಿಷಯಗಳು ಮನುಷ್ಯನಿಗೆ ಮಾರ್ಗದರ್ಶಕಗಳಾಗಿವೆ, ಪಂಚಭೂತಗಳಲ್ಲಿ ಒಂದಾದ ಬೆಂಕಿಯು ಎಲ್ಲರನ್ನೂ ಎಲ್ಲ ವಸ್ತುಗಳನ್ನು ಭೇದ ಭಾವವಿಲ್ಲದೆ ಒಂದೇ ರೀತಿ ದಹಿಸಿ ಬಸ್ಮ ಮಾಡುತ್ತದೆ, ಪ್ರಕೃತಿಯೊಳಗೆ ಸಮಾನತೆಯ ಮಂತ್ರದಂತಿರುವ ಈ ರೀತಿಯ ಅನೇಕ ನಿಸರ್ಗ ತತ್ವವು ಭೂ ಒಡಲಲ್ಲಿ ನೆಲೆಗೊಂಡಿವೆ, ಇಂತಹ ನಿಸರ್ಗದ ಎಲ್ಲ ತತ್ವವು ಮಾನವೀಯ ತತ್ವವಾಗಿ, ಅದು ನಮ್ಮ ನಿತ್ಯ ಜೀವನದಲ್ಲಿ ಅನುಷ್ಠಾನಕ್ಕಿಳಿದಾಗ ಮಾತ್ರ ಮನುಷ್ಯನ ಬದುಕಿಗೆ ಅಂತಸತ್ವ ಪ್ರಾಪ್ತವಾಗುತ್ತದೆ.
ಇಂತಹ ನಿಸರ್ಗ ತತ್ವವನ್ನು ಅನುಷ್ಠಾನಗೊಳಿಸಲು ನಮ್ಮೊಳಗೆ ಒಂದು ಸೌಂಡ್ ಮೈಂಡ್ ಬೇಕು. *A Sound Maind In a Sound Body* ಎನ್ನುತ್ತಾರೆ. ಭಾರತೀಯ ಸಂಸ್ಕೃತಿಯ ಮೂಲ ದ್ರವ್ಯವೇ ಈ ಸೌಂಡ್ ಮೈಂಡ್. ಇಂತಹ ಸೌಂಡ್ ಮೈಂಡ್ ಒಮ್ಮೆ ನಮ್ಮದಾದರೆ ನಮ್ಮೊಳಗೊಂದು ಸಾತ್ವಿಕ ಶಕ್ತಿಯ ಸಂಚಯವಾಗಿ,ಸಂಯಮ ಎಂಬ ಸಂಪತ್ತು ದಕ್ಕುತ್ತದೆ. ಸಾತ್ವಿಕ ಶಕ್ತಿ ಮತ್ತು ಸಂಯಮ ನಮ್ಮದಾದಾಗ ಜಗತ್ತು ಈ ಎರಡಕ್ಕೂ ಶಿರಬಾಗಿ ನಮಿಸುತ್ತದೆ.
ಈ ನಮಿಸುವಿಕೆ ಎಂಬುದು ಧರ್ಮದ ಚೌಕಟ್ಟಿನಲ್ಲಿ ನಿಲ್ಲದೆ ಅದು ಆಧ್ಯಾತ್ಮದ ಪಥವಾಗಬೇಕು, ಧರ್ಮ ಮತ್ತು ಆಧ್ಯಾತ್ಮಕ್ಕೂ ವ್ಯತ್ಯಾಸವಿದೆ ಎಂಬುದನ್ನು ಇಲ್ಲಿ ಮನಗಾಣಬೇಕು.
ಯಾವುದೇ ತಪೋವನವನ್ನು ವಿನೀತವಾಗಿ ಪ್ರವೇಶಿಸಬೇಕು ಎಂದು ಮಹಾಕವಿ ಕಾಳಿದಾಸ ಹೇಳಿದರೆ, ತಪೋವನ ಮಾತ್ರವಲ್ಲ ಕಾಡನ್ನು ಕೂಡ ಒಂದು ವಿನೀತ ಭಾವದೊಂದಿಗೆ ಶಾಂತವಾಗಿ, ನಿಶಬ್ದವಾಗಿ ಪ್ರವೇಶಿಸಬೇಕು ಎಂದು ಸಾಹಿತಿ ಪೂರ್ಣಚಂದ್ರತೇಜಸ್ವಿಯು ಮಾತನಾಡುತ್ತಾರೆ.
ಮೊನ್ನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪ, ತಪೋವನದಂತಿರುವ ಶ್ರೀ ಬೇರುಗಂಡಿ ಬೃಹನ್ಮಠಕ್ಕೆ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಗೆ ಈ ರೀತಿ ವಿನೀತನಾಗಿ ಪ್ರವೇಶಿಸಿ, ಭಾರತೀಯ ತತ್ವಜ್ಞಾನದೊಳಗಿರುವ ಆಧ್ಯಾತ್ಮವನ್ನು ಕುರಿತು ಹೇಳಿರುವ ವಿಚಾರಧಾರೆಗಳ ಮೇಲೆ ಬೆಳಕು ಚೆಲ್ಲಿ, ಬೇರುಗಂಡಿ ಬೃಹನ್ಮಠದ ಶ್ರೀಗಳ ಕೃಪೆಗೆ ಪಾತ್ರನಾಗಿ ನಮಸ್ಕರಿಸಿದೆ.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ✒️
ಚಿಕ್ಕಮಗಳೂರು

