ಶ್ರಾವಣ ಸಾಹಿತ್ಯ ಸಂಭ್ರಮ..ತರಿಕೆರೆ…
1 min read
‘ಶ್ರಾವಣ ಸಾಹಿತ್ಯ ಸಂಭ್ರಮ
ತರೀಕೆರೆ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಯಶೋದಮ್ಮ ನಾಗತಿ ಪ್ರೌಢ ಶಾಲೆಯ ಆವರಣದಲ್ಲಿ ಎರಡನೇ ದಿನದ ‘ಶ್ರಾವಣ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮನಸುಳಿ ಮೋಹನ್ ಕುಮಾರ್ ವಿದ್ಯಾರ್ಥಿಗಳು ದುರಭ್ಯಾಸದಿಂದ ದೂರವಿದ್ದು, ನಾಡು-ನುಡಿಯ ಜೊತೆಗೆ ನಮ್ಮ ನಾಡಿನ ಕಲೆ, ಸಂಗೀತ, ಸಾಹಿತ್ಯವನ್ನು ಓದುವ ಮೂಲಕ ಜ್ಞಾನ ಸಂಪಾದನೆ ಮಾಡಿಕೊಂಡು ಉತ್ತಮ ವಿಚಾರಗಳನ್ನು ತಿಳಿದುಕೊಂಡು ಸಮಾಜಕ್ಕೆ ಮಾದರಿ ಆಗಬೇಕು ಎಂದು ತಿಳಿಸಿದರು.
ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್ ಅವರು ತಂದೆ -ತಾಯಿ, ಗುರುಗಳನ್ನು ಗೌರವದಿಂದ ಕಾಣಬೇಕು. ಪ್ರತಿ ದಿನದ ಕಲಿಕೆಯೂ ನಮಗೆ ಜೀವನದ ಅನುಭವಾಗಿ, ಸಾಧಿಸುವ ಛಲ ನಮ್ಮದಾಗಬೇಕು ಎಂದರು.
‘ಸರ್ಜಾ ಹನುಮಪ್ಪ ನಾಯಕ ತರೀಕೆರೆಗೆ ನೀಡಿದ ಕೊಡುಗೆ’ ಎಂಬ ವಿಷಯವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ದತ್ತಾತ್ರೇಯ ಉಪನ್ಯಾಸ ನೀಡುತ್ತಾ ಸರ್ಜಾ ಹನುಮಪ್ಪ ನಾಯಕರು ತರೀಕೆರೆಯ ಇತಿಹಾಸ ಪುರುಷರಾಗಿದ್ದರು. ಕೋಟೆ ಕಟ್ಟಿ ಪಾಳೆಗಾರಿಕೆ ಮಾಡಿದವರು.
ಸಮಾಜ ಸೇವೆ ಮಾಡುವ ಮೂಲಕ ಜನರ ಪ್ರೀತಿ ಗಳಿಸಿದವರು. ಹುಲಿ ಕಾಳಗದಲ್ಲಿ ಗೆದ್ದ ಪರಿಣಾಮವಾಗಿ ಸರ್ಜಾ ಎಂಬ ಬಿರುದು ಬಂದಿದೆ. ಬಾಬಾ ಬುಡನಗಿರಿ ಮತ್ತು ಕೆಮ್ಮಣ್ಣುಗುಂಡಿಗೆ ಇವರು ನೀಡಿರುವ ಕೊಡುಗೆ ಅಪಾರ. ತರೀಕೆರೆಯ ಪಟ್ಟಣವನ್ನು ಆ ಸಮಯದಲ್ಲೇ ಆಧುನಿಕ ನಗರೀಕರಣದ ಸೌವಲತ್ತಿನ ಪಟ್ಟಣ ನಿರ್ಮಾಣ ಮಾಡಿದವರು. ಹಾಗೆಯೆ ಚನ್ನಗಿರಿ, ಚಿತ್ರದುರ್ಗ, ಶಿವಮೊಗ್ಗ, ಮಲೆಬೇನ್ನೂರೂ ಹಾಗೂ ಇತರೆ ಊರುಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲ್ಲೂಕು ಅಧ್ಯಕ್ಷ ರವಿ ದಳವಾಯಿ ವಹಿಸಿದ್ದರು. ಉದ್ಘಾಟನೆಯನ್ನು ಮುಖ್ಯ ಶಿಕ್ಷಕ ಟಿ. ಯಲ್ಲಪ್ಪ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಪುರಸಭಾ ಮಾಜಿ ಸದಸ್ಯ ಟಿ.ಆರ್. ಶ್ರೀಧರ್ ಮಾತನಾಡಿದರು. ಕಸಾಪ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಸುನಿತಾ ಕಿರಣ್ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿ ಮತ್ತು ನಾಡಗೀತೆ ಹಾಡಿದರು. ಶಿಕ್ಷಕ ಕುಮಾರ್ ನಾಯಕ್ ನಿರೂಪಿಸಿ, ಶಾಂತಮ ಸಾಗತಿಸಿ, ಸುನಿತಾ ಕಿರಣ್ ವಂದಿಸಿದರು.
ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….

