लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಾವು ದೊಡ್ಡ ಹೊಟ್ಟೆಯ ಮುಗ್ಧ ಜೀವಿಗಳು….* *ಕೇಳಿ ನಮ್ಮೊಡಲ ವ್ಯಥೆಯಾ….!*

1 min read

*ನಾವು ದೊಡ್ಡ ಹೊಟ್ಟೆಯ ಮುಗ್ಧ ಜೀವಿಗಳು….*
*ಕೇಳಿ ನಮ್ಮೊಡಲ ವ್ಯಥೆಯಾ….!*

 

*ಕಾ* ಡಂಚಿನ ಪ್ರದೇಶಗಳಲ್ಲಿ ಈಗ ಎಲ್ಲಿ ನೋಡಿದರೂ ಕಾಡಾನೆಗಳದ್ದೇ ಸದ್ದು – ಸುದ್ದಿ.
ಅದರಲ್ಲೂ ನೆಲ್ಲಿ ಹುದಿಕೇರಿ – ಸಿದ್ದಾಪುರ, ಹೆರೂರು, ಅತ್ತೂರು, ಯಡವನಾಡು ವ್ಯಾಪ್ತಿಳಲ್ಲಂತೂ ನಿತ್ಯವೂ ಕಾಡಾನೆಗಳದ್ದೇ ಗದ್ದಲ.

ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಕಾಡಾನೆಗಳ ಆವಾಸ ಸ್ಥಾನವೀಗ ಜನವಸತಿಯಾಗಿ ಬದಲಾಗಿದೆ.

ಗಿಡ – ಮರ, ಸಸ್ಯ ಶಾಮಲೆಯಿಂದ ಕೂಡಿ ಕಾಡಾನೆಗಳಿಗೆ ಹುಲ್ಲುಗಾವಲಾಗಿದ್ದ ಪ್ರದೇಶ ಈಗ ಬಟಾಬಯಲಾಗಿದೆ.

ಹಾಗಾಗಿ ದೊಡ್ಡ ಹೊಟ್ಟೆಯ ಮುಗ್ಧ ಪ್ರಾಣಿಗಳು ತಮ್ಮ ಆಹಾರಕ್ಕೆ ಎಲ್ಲಿ ತಾನೇ ಹೋಗಬೇಕು‌.
ಏನು ತಾನೇ ಮಾಡಬೇಕು ?

ಈ ಬಗ್ಗೆ ಕಾಡಾನೆಗಳು ಗುಂಪು ಸೇರಿ ತಮ್ಮದೇ ಆದ ಹಿತ ರಕ್ಷಣಾ ಸಮಿತಿ ಮಾಡಿಕೊಂಡು ತಮ್ಮ ರಕ್ಷಕರಾಗಿರುವ ಅರಣ್ಯ ಇಲಾಖೆಗೆ ತಮ್ಮ ಅಹವಾಲು ಅರ್ಪಿಸಿದಂತಿದೆ ಈ ಚಿತ್ರಣ.

ಕಾಡಾನೆಗಳ ಅಹವಾಲು, ವೇದನೆ, ಅರಣ್ಯ ರೋಧನ ಹೀಗೂ ಇರಬಹುದಾ….
ಈ ಬಗ್ಗೆ ಒಂದು ಬರಹ….

ಸಣ್ಣ ಹೊಟ್ಟೆಯ ಮನುಷ್ಯ ತನ್ನ ಬಳಿಯೇ ಬೇಕಾದಷ್ಟು ಇದ್ದರೂ ಕೂಡ ದುರಾಸೆಯಿಂದ ಮತ್ತೊಬ್ಬರದ್ದು ಕದ್ದು ತಿನ್ನುತ್ತಿರುವ ಈ ಹೊತ್ತಿನಲ್ಲಿ ದೊಡ್ಡ ಹೊಟ್ಟೆಯವರಾದ ನಮ್ಮ ವ್ಯಥೆಯನ್ನು ಇಲಾಖೆ ಅರಿಯಬೇಕು.
ನಮ್ಮ ಆವಾಸಸ್ಥಾನ ಅರಣ್ಯದಲ್ಲಿ ಸರಿಯಾದ ಆಹಾರದ ಗಿಡ – ಮರಗಳು, ಸಸ್ಯ ಪ್ರಬೇಧಗಳಿಲ್ಲದೇ ಹಸಿವು ನೀಗಿಸಿಕೊಳ್ಳಲು ನಾವು ನಿತ್ಯವೂ ಪರದಾಡುತ್ತಿದ್ದೇವೆ. ಹಸಿದ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕಿರುವ ಕಾರಣ ನಾವು ರಾತ್ರಿ ವೇಳೆ ಆಹಾರದ ಹುಡುಕಾಟದಲ್ಲಿ ತೊಡಗಿದ್ದೇವೆ.
ನಮಗೆ ಸಿಕ್ಕ ಸಿಕ್ಕ ಕೃಷಿ ಫಸಲು ತಿನ್ನುತ್ತೇವೆ.
ಹಾಗಾಗಿ ಕಾಡಂಚಿನ ಕೃಷಿಕರು ಅಯ್ಯೋ ನಾನು ಬೆಳೆದ ಕೃಷಿ ನಾಶವಾಗಿ ಹೋಯ್ತು ಎಂದು ಬೊಬ್ಬೆ ಹೊಡೆಯೋದು ಬೇಡ.
ನಮ್ಮನ್ನು ಹಿಡಿಯಿರಿ –
ಬಂಧಿಸಿರಿ ಎಂದು ನಮ್ಮ ಮೇಲೆ ಯಾರೂ ಕೂಡ ದೂರು ಕೊಡೋದು ಬೇಡ.
ಇಲ್ಲಿ ಮನುಷ್ಯನ ಆವಾಸಸ್ಥಾನಕ್ಕೆ ಕಾಡಾನೆಗಳಾದ ನಾವು ಹೋಗಲಿಲ್ಲ.
ನಮ್ಮ ಆವಾಸಸ್ಥಾನಕ್ಕೆ ಮನುಷ್ಯನೇ ಬಂದು ಮನೆ ಕಟ್ಟಿ ವಾಸವಿದ್ದಾನೆ.
ಇಂತಹ ಸನ್ನಿವೇಶದಲ್ಲಿ ನಾವೇನು ಮಾಡಬೇಕು ?
ನೀವೇ ನಿರ್ಧರಿಸಿ.
ಪೂರ್ವಜರು ನಮಗೆಂದೇ ಬಿಟ್ಟು ಹೋಗಿದ್ದ ನಮ್ಮ ಆವಾಸಸ್ಥಾನವನ್ನು ನಮಗೆ ಮರಳಿಸಿಕೊಡಬೇಕಾಗಿ ನಮ್ಮೆಲ್ಲರ ಒಕ್ಕೊರಲ ಆಗ್ರಹ.

*ಇಷ್ಟೇ ಅಲ್ಲಾ,*
ಮನುಷ್ಯ ಸಂತತಿಯಿಂದ ನಮಗೆ ಆಗುತ್ತಿರುವ ಅನ್ಯಾಯ ದಿಂದ ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ ಎಂದೆಲ್ಲಾ ತಮ್ಮ ದುಗುಡ ದುಃಖ ಹೇಳಿಕೊಂಡಂತಿದೆ.
ಹಾಗೆಯೇ ಈ ಗುಂಪಿನಲ್ಲಿರುವ ತಂಡದ ನಾಯಕನ ಆಕ್ರೋಷ ಇಂತಿದೆ…..

*ಹೇ* *…ಮನುಜನೇ,* ನಮ್ಮದಾಗಿದ್ದ ಎಲ್ಲಾ ಭೂ ಸಂಪತ್ತನ್ನು ನೀವು ದೋಚಿದ್ದೀರಿ.
ಅರಣ್ಯ ಸಂಪತ್ತನ್ನೆಲ್ಲಾ ಹಣದಾಸೆಗೆ ಲೂಟಿಗೈದ ಖದೀಮರಿಗೆ ನಮ್ಮ ಧಿಕ್ಕಾರ.
ನಿಮ್ಮ ಹೊಟ್ಟೆ ತುಂಬಿದರೆ ಸಾಲದು ಎಂದುಕೊಂಡು ಮುಂದಿನ ನಿಮ್ಮ ಪೀಳಿಗೆಗೂ ಕೂಡಿಡಬೇಕೆಂಬ ದುರಾಸೆಯಿಂದ ನಮ್ಮ ಅರಣ್ಯ ಸಂಪತ್ತನ್ನೆಲ್ಲಾ ಲೂಟಿ ಮಾಡಿರುವ ಹಗಲು ದರೋಡೆಕೋರರು ನೀವು.
ನಿಮ್ಮ ಪೂರ್ವಜರು ನಮಗೆಂದೇ ಈ ಹಿಂದೆ ಕಾಡಿನಲ್ಲಿ ಬಿಟ್ಟು ಹೋಗಿದ್ದ ಅಮೂಲ್ಯ ವೃಕ್ಷಗಳನ್ನೆಲ್ಲಾ ಕಡಿದು ಅದರಿಂದಲೂ ಹಣ ಮಾಡಿಟ್ಟ ಪಾಪಿಗಳು ನೀವು.

ಸೂಕ್ತ ಜೀವ ರಕ್ಷಕ ಅರಣ್ಯ ನಾಶದಿಂದ ಕಾಡಿನಲ್ಲಿ ನಮಗೆ ಮೇವಿಲ್ಲ. ಕುಡಿಯಲು ನೀರಿಲ್ಲ.
ಕನಿಷ್ಠ ನೆರಳೂ ಇಲ್ಲದ ಹಾಗೆ ಬಟಾ ಬಯಲು ಮಾಡಿದ ಕೀರ್ತಿ ನಿಮ್ಮದು.
ನೀವು ಮಾತ್ರ ತೆಂಗು, ಬಾಳೆ, ಏಲಕ್ಕಿ, ಕಾಫಿ ಬೆಳೆದರೆ ನಾವು ನೋಡಿಕೊಂಡು ಸುಮ್ಮನಿಬೇಕೆ…?

ಜೊತೆಗೆ ನೀವು ಬೆಳೆದ ಹಲಸಿನ ಹಣ್ಣಿನ ಕಂಪನ ನಮ್ಮನ್ನು ಸುಮ್ಮನೆ ಬಿಡುವುದುಂಟೆ…!
ಏನೋ ಹಸಿವು ನೀಗಿಸಲು ಬರುವ ನಮ್ಮನ್ನು ನೀವು ದೂರುತ್ತೀರಿ.
ನಮ್ಮ ಪಾಲಕರಾದ ಅರಣ್ಯಾಧಿಕಾರಿಗಳ ನಿದ್ರೆಗೆಡಿಸುತ್ತೀರಿ.

ಅಂದು ನಮ್ಮದಾಗಿದ್ದ ಸಂಪತ್ತನ್ನು ನೀವು ದೋಚುವಾಗ ಮುಂದಾಲೋಚನೆ ನಿಮಗೇಕಿರಲಿಲ್ಲ.
ನಮಗೆ ನಮ್ಮ ಎತ್ತರ ಹಾಗೂ ಹೊಟ್ಟೆಯಾಧರಿಸಿ ದಿನಕ್ಕೆ 150 ರಿಂದ 250 ಕೆಜಿಗಳಷ್ಟು ಹುಲ್ಲು, ಸೊಪ್ಪು ಸೆದೆ ಬೇಕು.
ಹಾಗೆಯೇ ದಾಹ ನೀಗಿಸಲು 80 ರಿಂದ 100 ಲೀಟರ್ ನೀರು ಬೇಕು.
ನಮ್ಮ ಹಸಿವು ಹಾಗೂ ದಾಹ ಅಂತಹದ್ದು.
ನೀವು ನಮ್ಮ ಬಗ್ಗೆ ಅರಣ್ಯ ಲೂಟಿ ಮಾಡುವಾಗ ಕಿಂಚಿತ್ತಾದರೂ ನಮ್ಮ ಬಗ್ಗೆ ಯೋಚಿಸಿದ್ದಿರಾ…?
ನೀವು ಸ್ವಾರ್ಥಿಗಳು. ಧೈರ್ಯ ಮೊದಲೇ ನಿಮಗಿಲ್ಲ.
ನಮ್ಮ ಕಂಡೊಡನೆ ಕೋವಿ ತೋರಿಸುವಿರಿ.
ಸಿಡಿ ಮದ್ದು ಸಿಡಿಸುವಿರಿ.
ನಮ್ಮ ಪಾಲಕರಾದ ಫಾರೆಸ್ಟರ್ ಗಳು, ವಾಚ್ ಮನ್ ಗಳಿಗೆ ಪೋನ್ ಹಚ್ಚುವಿರಿ.
ಏಕೆ ನಮ್ಮನ್ನು ನಿಮಗಿಷ್ಟು ಭಯ ?
ನೀವು ಅಂದು ನಮ್ಮ ಕಾಡಿಗೆ ನುಗ್ಗುವಾಗ, ನಮ್ಮ ಆಹಾರ ಸರಪಳಿ ನಾಶ ಮಾಡುವಾಗ ಭಯವಿರಲಿಲ್ಲವೇ ?

ಹಿಂದಿನಿಂದಲೂ ನಡೆಸಿಕೊಂಡು ಬಂದ ಅರಣ್ಯ ನಾಶದ ನಿಮ್ಮ ನೀಚ ಪ್ರವೃತ್ತಿಯಿಂದಾಗಿ
ಇಂದು ಅರಣ್ಯ ಕೇವಲ ನಮ್ಮ ನಿದ್ರೆಗೆ ಆಸರೆ ಯಾಗುವಷ್ಟಿದೆ.
ಮುಂದಿನ ದಿನಗಳಲ್ಲಿ ಅದಕ್ಕೂ ಎಲ್ಲಿ ಸಂಚಕಾರ ತರುತ್ತೀರೋ ಎಂಬ ಭಯ – ಆತಂಕವಿದೆ.
ಅದಕ್ಕಾಗಿಯೇ ನಾವೆಲ್ಲರೂ ಒಗ್ಗೂಡಿದ್ದೇವೆ.
ಒಂದಾಗಿದ್ದೇವೆ.
ಬೇರೆ ಬೇರೆ ತಂಡಗಳನ್ನು ಕಟ್ಟಿದ್ದೇವೆ.
ಹಾಗಾಗಿ ನಿರರ್ಗಳವಾಗಿ ನೀವು ಬೆಳೆದ ಬೆಳೆಗಳನ್ನು ತಿನ್ನಲು ರಾತ್ರಿ ಭೇಟೆಗೆ ಇಳಿದಿದ್ದೇವೆ.
ಕೆಲವು ಸಲ ನಾವು ನಮ್ಮೆದುರು ಸಿಕ್ಕ ಅಮಾಯಕರನ್ನು ಬೆರೆಸಿದ್ದೇವೆ. ಕೆಲವರನ್ನು ಗಾಯಗೊಳಿಸಿದ್ಧೇವೆ. ಮತ್ತೆ ಕೆಲವರನ್ನು ತುಳಿದು ಸಾಯಿಸಿ ನಮ್ಮ ನೋವು ಹಾಗು ಆಕ್ರೋಷವನ್ನು ನಿಮ್ಮಲ್ಲಿ ಈ ರೀತಿಯಲ್ಲಿ ಪ್ರತಿಭಟಿಸಿದ್ದೇವೆ.
ಹಾಗಾಗಿ ಇನ್ನು ಮುಂದೆ ನಾವಿರುವ ಕಾಡಿಗೆ ನೀವೂ ನುಗ್ಗಿ.
ನೀವಿರುವ ಕಡೆ ನಾವೂ ನುಗ್ಗುತ್ತೇವೆ.
ನೀವು ನಮ್ಮನ್ನು ಸಾಯಿಸಿ.
ಕೊನೆಗೆ ಅರಣ್ಯ ಪರಿಸರ ನಾಶವಾಗಿ ಮಳೆ – ಬೆಳೆ ಇಲ್ಲದೇ ನೀವೂ ಸಾಯುತ್ತೀರಿ….
ಹೀಗೆ ಕಾಡಾನೆಗಳು ಅರಣ್ಯಾಧಿಕಾರಿಗಳ ಮುಂದೆ ಮನುಜರ ವರ್ತನೆಗಳನ್ನು ಖಂಡಿಸಿ ಪ್ರತಿಭಟಿಸಬಹುದೇ…..

*ಬರಹ : ಕೆಎನ್ ವಿಠ್ಠಲ್

About Author

Leave a Reply

Your email address will not be published. Required fields are marked *

You may have missed