ಅಜ್ಜಂಪುರದ ಮಸಣದೊಳಗೊಂದು……
1 min read
ಅವಿನ್ ಟಿವಿ ಸದ್ದಿಜಾಲ ✒️: *ಅಜ್ಜಂಪುರದ ಮಸಣದೊಳಗೊಂದು ಭಾ

ಷೆ ಮತ್ತು ಬದುಕನ್ನು ಕುರಿತ ಸಂವಾದ. ಪತ್ರಕರ್ತ ಎನ್ ವೆಂಕಟೇಶ್ ಅವರಿಗೆ ಸಂಪ್ರೀತಿಯ ಸನ್ಮಾನ*
ಇದು ಕರ್ನಾಟಕ ವಿಕಾಸ ರಂಗ ಚಿಕ್ಕಮಗಳೂರು ಜಿಲ್ಲಾ ಘಟಕ ಅಭಿಮಾನವಿಟ್ಟು, ಸಾಧನೆಗೊಂದು ಮನ್ನಣೆ ಕೊಟ್ಟು ಸತ್ಕರಿಸಿದ ಸನ್ಮಾನ.
ಸ್ಮಶಾಣ ನಮ್ಮ ಬದುಕಿನ ಕೊನೆಯ ನಿಲ್ದಾಣ, ಈ ನಿಲ್ದಾಣದಲ್ಲಿ ನಮ್ಮ ನಮ್ಮ ಅಹಂಕಾರವೆಲ್ಲ ಮೌನವಾಗುತ್ತದೆ, ಹಮ್ಮಬಿಮ್ಮುಗಳೆಲ್ಲ ಕೈಕಟ್ಟಿ ಕೈ ಮುಗಿದು ಮೈಬಾಗಿ ನಿಲ್ಲುತ್ತವೆ, ಜಾತಿ ಮತ ಪಂಥ ಧರ್ಮಗಳನ್ನೆಲ್ಲ ಮೀರಿ ಇಲ್ಲಿ ಕರುಣೆ ಮಾತನಾಡುತ್ತದೆ, ಮನುಷ್ಯತ್ವ ಮತ್ತು ಮಾನವೀಯತೆ ಮಿಡಿಯುತ್ತದೆ. ಇಂತಹ ಸ್ಥಳದಲ್ಲೂ ಮಾನವೀಯತೆ ಮಿಡಿಯಲಿಲ್ಲ ಎಂದರೆ ಆ ಬದುಕಿಗೆ ಅರ್ಥವಿರುವುದಿಲ್ಲ.
ಅಜ್ಜಂಪುರದ ಕೆಲವು ಭಿನ್ನ-ಭಿನ್ನ ಮನಸ್ಸುಗಳು ಸಮಾನ ಮನಸ್ಕರಾಗಿ ರೂಪ ತಳೆದು, ಒಂದು ರೂಪಕದಂತೆ ಸ್ವಚ್ಛಬಳಗ ರಚಿಸಿಕೊಂಡು, ಆ ಸ್ವಚ್ಛ ಬಳಗದ ಹೆಸರಿನಲ್ಲಿ ಅಜ್ಜಂಪುರದ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡಲು ಹೆಜ್ಜೆ ಇಟ್ಟಿದ್ದಾರೆ ಈ ಸಮಾನ ಮನಸ್ಸುಗಳು.
ಈ ಸಮಾನ ಮನಸ್ಸುಗಳು ಕೈಗೊಂಡ ಹತ್ತು ಹಲವು ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಅಜ್ಜಂಪುರದ ಹೃದಯ ಭಾಗದಲ್ಲಿ ಹಿಂದೂ ರುದ್ರ ಭೂಮಿ ಹೆಸರಿನಲ್ಲಿ ಇರುವ ಮೋಕ್ಷದಾಮವೂ ಕೂಡ ಒಂದು. ಈ ಊರಿನ ಹಿಂದೂ ಸಮುದಾಯದವರೆಲ್ಲರೂ ಕೂಡ ಈ ಮೋಕ್ಷದಾಮದಲ್ಲಿಯೇ ಶವ ಸಂಸ್ಕಾರ ಮಾಡುತ್ತಿರುವುದು. ಹೀಗಿದ್ದೂ ಕೂಡ ಅ ಮೋಕ್ಷಧಾಮದ ನಿರ್ವಹಣೆ ಸಮರ್ಪಕವಾಗಿ ಇಲ್ಲದೆ ಒಳಗೆ ಕಾಲಿಡಲು ಕೂಡ ಅಸಾಧ್ಯವಾದ ಪರಿಸ್ಥಿತಿ ಇತ್ತು.
ಸ್ಮಶಾನದೊಳಗಿದ್ದ ಈ ಪರಿಸರವನ್ನು ನೋಡಿ ಅದರ ಅಗತ್ಯತೆ ಮತ್ತು ಸ್ವಚ್ಛತೆಯ ಮಹತ್ವ ಅರಿತ ಇಲ್ಲಿನ ಸಮಾನ ಮನಸ್ಕರ ಬಳಗ ನಿರ್ವಹಣೆ ಇಲ್ಲದೆ ಹಾಳು ಸುರಿಯುತ್ತಿದ್ದ ಈ ಸ್ಮಶಾನದ ಅಭಿವೃದ್ಧಿಗೆ ಹಠಬಿದ್ದವರಂತೆ ಟೊಂಕ ಕಟ್ಟಿ ನಿಂತು, ಆ ಪಾಳು ಬಿದ್ದ ಮೋಕ್ಷದಾಮವನ್ನು ಇಂದು ನಂದನವನ್ನಾಗಿ ಮಾಡುವ ಸಂಕಲ್ಪ ಮಾಡಿದ್ದಾರೆ ಅಜ್ಜಂಪುರದ ಸ್ವಚ್ಛಬಳಗದ ಸದಸ್ಯರು.
ಈ ಸ್ವಚ್ಛ ಬಳಗದ ಸದಸ್ಯರಲ್ಲಿ ಪವಿತ್ರ ಪ್ರೆಸ್ ಮಾಲೀಕ ಮತ್ತು ಪತ್ರಕರ್ತ ಅಜ್ಜಂಪುರದ ಎನ್. ವೆಂಕಟೇಶ್ ಕೂಡ ಒಬ್ಬರು.
ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬುವಂತೆ, ಎನ್.ವೆಂಕಟೇಶ್ ಅವರು ಕಾಲೇಜು ಮೆಟ್ಟಿಲು ಹತ್ತದಿದ್ದರೂ ಕೂಡ, ಅವರ ಸಾಧನೆ ಮತ್ತು ಸಾಮಾಜಿಕ ಕಳಕಳಿ ಇತರರಿಗೆ ಮುನ್ನುಡಿಯಂತೆ ಮಾದರಿಯಾಗಿದೆ.
ಸಾಮಾನ್ಯ ಬಡ ಕುಟುಂಬ ಒಂದರಲ್ಲಿ ಹುಟ್ಟಿ, ಬದುಕಿಗಾಗಿ ಬಾಲ್ಯದಲ್ಲಿಯೇ ಹಲವು ಕಡೆ ಕೆಲಸ ಮಾಡಿ. ತದನಂತರ ಕಾಲಲ್ಲಿ ತುಳಿಯುವ ಲೆಟರ್ ಪ್ರೆಸ್ ಮುದ್ರಣವನ್ನು ಅಜ್ಜಂಪುರದಲ್ಲಿ ಪವಿತ್ರ ಪ್ರೆಸ್ ಹೆಸರಿನಲ್ಲಿ ಸ್ಥಾಪಿಸಿ, ಅದರಲ್ಲಿ ಒಂಟಿಯಾಗಿ ದುಡಿದು,ಆ ಲೆಟರ್ ಪ್ರೆಸ್ ಮೂಲಕ ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತ ಇಂದು ಹತ್ತಾರು ಜನರಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಒಬ್ಬ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ ಈ ಪವಿತ್ರ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ವೆಂಕಟೇಶ್ ಅವರು.
ತನ್ನ ವೃತ್ತಿ ಬದುಕಿನೊಟ್ಟಿಗೆ , ಪ್ರವೃತ್ತಿಯಾಗಿಯೂ ಕೂಡ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಯಾವುದೇ ಜಾತಿ ಮತ ಧರ್ಮಕ್ಕೆ ಅಂಟಿಕೊಳ್ಳದೆ, ಮಾನವೀಯತೆಯ ಜಾಡಿನಲ್ಲಿ ಸಾಗುತ್ತಾ,ಸಾಹಿತ್ಯ ಸಂಸ್ಕೃತಿ ಪರಿಸರ ಸ್ವಚ್ಛತೆ ಹೀಗೆ ವಿಭಿನ್ನ ಜನಮುಖಿ ಕಾರ್ಯಗಳಲ್ಲಿ ಒಬ್ಬ ಸಂತನ ಹಾಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಈ ವೆಂಕಟೇಶ್ ಅವರು.
ಅಜ್ಜಂಪುರ ವೆಂಕಟೇಶ್ ಅವರ ಈ ಎಲ್ಲಾ ಸಾರ್ವಜನಿಕ ಸೇವೆ ಮತ್ತು ಸ್ವತಂತ್ರ ಅಭ್ಯುದಯದ ಬದುಕನ್ನು ಪರಿಗಣಿಸಿ, ಕರ್ನಾಟಕ ವಿಕಾಸರಂಗ, ಚಿಕ್ಕಮಗಳೂರು ಜಿಲ್ಲಾ ಘಟಕವು *ಕನ್ನಡಕ್ಕಾಗಿ ದುಡಿದವರು* ಹೆಸರಿನಲ್ಲಿ ಮಾತುಕತೆ, ಸಂವಾದ ಮತ್ತು ಸನ್ಮಾನ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿರುವ ಮೋಕ್ಷದಾಮದಲ್ಲಿ ಹಮ್ಮಿಕೊಂಡು, ವೆಂಕಟೇಶ್ ಅವರ ಸಾಧನೆಯ ಹಾದಿಯನ್ನು ಮೆಲುಕು ಹಾಕಿ, ಸಂವಾದ ಮಾಡಿ, ಸನ್ಮಾನ ನೀಡಿ ಸತ್ಕರಿಸಲಾಯಿತು.
ಕರ್ನಾಟಕ ವಿಕಾಸ ರಂಗದ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸಂಸ್ಕೃತಿ ಚಿಂತಕ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ ಸಿ ಚಂದ್ರಪ್ಪ ಸಾಧಕರನ್ನು ಸನ್ಮಾನಿಸಿದರು. ಅಜ್ಜಂಪುರ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಆನಂದ್ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.ಲೇಖಕ ಡಿ ಎಂ. ಮಂಜುನಾಥಸ್ವಾಮಿ ಅಜ್ಜಂಪುರ ವೆಂಕಟೇಶ್ ಅವರನ್ನು ಕುರಿತು ಮಾತನಾಡಿ ಸಂವಾದ ಮಾಡಿದರು. ಚಿಕ್ಕಮಗಳೂರು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ ಸಿ ಶಿವಾನಂದ ಸ್ವಾಮಿ ಅವರು ಈ ಕಾರ್ಯಕ್ರಮದ ಮಹತ್ವ ಕುರಿತು ಮಾತನಾಡಿ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಜ್ಜಂಪುರ ವೆಂಕಟೇಶ್ ಅವರು, ಸಕ್ಸಸ್ ಅಥವಾ ಯಶಸ್ವಿ ಎಂದರೆ ನೆಮ್ಮದಿಯಾಗಿ ಬದುಕುವುದು ಎಂದರ್ಥ, ಗೆಲುವಿಗೆ ಜೈ ಅನ್ನುತ್ತ, ಸೋಲಿಗೆ ಸೈ ಎನ್ನುತ್ತಾ, ಆತ್ಮ ವಂಚನೆ ಇಲ್ಲದೆ ಪ್ರಾಮಾಣಿಕವಾಗಿ ಬದುಕುವುದೇ ಬದುಕಿನ ಸತ್ವ ತತ್ವ ಮತ್ತು ಅಮರತ್ವ ಎಂದು ಅಭಿಪ್ರಾಯಪಟ್ಟು, ಸನ್ಮಾನವಿತ್ತಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಸ್ವಚ್ಛ ಬಳಗ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಹೆಚ್. ಆರ್.ಅಧ್ಯಕ್ಷ ಚಂದ್ರಪ್ಪ. ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಡಿ.ಪಿ.ರಾಜಪ್ಪ. ರಾಷ್ಟ್ರಪತಿ ಪದಕ ವಿಜೇತ ನಿ. ಶಿಕ್ಷಕ ಪುಟ್ಟಸ್ವಾಮಿ ಅಂಚೆ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷ ತ್ಯಾಗದಕಟ್ಟೆ ಚಂದ್ರಪ್ರಕಾಶ್.ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ವಿಜಯಕುಮಾರಿ.
ತಾಲೂಕು ಅಧ್ಯಕ್ಷೆ ಮಾಲತಿ ಮುಂತಾದವರು ಉಪಸ್ಥಿತರಿದ್ದರು.
ಚಿಕ್ಕದಾಗಿ ಚೊಕ್ಕದಾಗಿ ಹಮ್ಮಿಕೊಂಡಿದ್ದ ಈ ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ, ವೈದ್ಯರು, ಪೊಲೀಸ್ ಇಲಾಖೆಯವರು. ಪತ್ರಕರ್ತರು. ಉಪನ್ಯಾಸಕರು. ಗುತ್ತಿಗೆದಾರರು. ಸಾಹಿತ್ಯ ಸಂಸ್ಕೃತಿ ಮತ್ತು ಸಮಾಜಮುಖಿಯಾಗಿ ದುಡಿಯುತ್ತಿರುವ ಹಲವು ಮನಸ್ಸುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ವೆಂಕಟೇಶ್ ಅವರನ್ನು ಅಭಿನಂದಿಸಿದರು.
ಅಜ್ಜಂಪುರ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಕು.ಲಿಖಿತ ಜಿ.ಎಂ ನಿರೂಪಿಸಿ.ಕು. ಅಮೂಲ್ಯ ಸ್ವಾಗತಿಸಿ, ಮಾ.ಚಂದನ್ ಕುಮಾರ್ ವಂದಿಸಿ, ಕು.ಧನುಶ್ರೀ ಪ್ರಾರ್ಥಿಸಿದರು.
************
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ✒️
ಚಿಕ್ಕಮಗಳೂರು

