ಭೂತಕಾಲಕ್ಕೆ ಸರಿದ ವಸ್ತಾರೆ ಪ್ರಶಾಂತ್ ಇನ್ನು ನೆನಪು ಮಾತ್ರ*..
1 min read
ಅವಿನ್ ಟಿವಿ ಸುದ್ದಿಜಾಲ ✒️: *ಭೂತಕಾಲಕ್ಕೆ ಸರಿದ ವಸ್ತಾರೆ ಪ್ರಶಾಂತ್ ಇನ್ನು ನೆನಪು ಮಾತ್ರ*
ತನ್ನ ಬದುಕೆಂಬ ಝರಿಯಲ್ಲಿ ಅದೆಷ್ಟೋ ನೀರು ಇನ್ನೂ ಹರಿಯುವುದಿತ್ತು. ಇದೇ ಆಗಸ್ಟ್ 11ಕ್ಕೆ 49 ಮುಗಿದು 50ಕ್ಕೆ ಕಾಲಿಡಬೇಕಿತ್ತು, 50ರ ಸನಿಹಕ್ಕೆ ಜಾರುತ್ತಿದ್ದರೂ ಕೂಡ ಮೈಕಟ್ಟು ಕುಗ್ಗಿರಲಿಲ್ಲ, ದೇಹದ ಬಣ್ಣ ಮಾಸಿರಲಿಲ್ಲ, ಸುಖನಿದ್ರೆಯಲ್ಲಿ ವಿರಾಜಮಾನನಂತೆ ಮಲಗಿದಂತೆ ಎದ್ದು ಕಾಣುತ್ತಿತ್ತು ಪ್ರಶಾಂತನ ಕಳೆಬರಹ.
ಇಂದು, ಚಿಕ್ಕಮಗಳೂರು ತಾಲೂಕು ವಸ್ತಾರೆ ಸಮೀಪದ ಲಕ್ಷ್ಮಿಕಾಂತನಹಳ್ಳಿ ನಿವಾಸಿ, ಕಾಫಿ ಬೆಳಗಾರರಾದ ದೇವೇಗೌಡ ಪಾರ್ವತಿ ದಂಪತಿಗಳ ಹಿರಿಯ ಪುತ್ರ ಪ್ರಶಾಂತ್ ವಸ್ತಾರೆ ಅವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.
ಇನ್ನು 49ರ ಹರೆಯ. ಮಧ್ಯಮ ವಯಸ್ಸು, ಮಾಡುವ ಕೆಲಸ ಆಡುವ ಮಾತು ಬಾಕಿ ಇತ್ತು. ರಕ್ತದೊತ್ತಡ ಹೆಚ್ಚಾಗಿ ಬ್ರೈನ್ ಹೆಮರೇಜ್ ಗೆ ಒಳಗಾಗಿ ಇಹ ಬದುಕಿಗೆ ಬೆನ್ನು ಮಾಡಿ ಇಷ್ಟು ಬೇಗ ಹೊರಟು ಹೋಗಿದ್ದು ದುಃಖದ ವಿಷಯವಾಗಿದೆ.
ಯಶಸ್ವಿ ಕೃಷಿ ಬದುಕಿನೊಟ್ಟಿಗೆ, ಜೆಡಿಎಸ್ ಜಾತ್ಯತೀತ ರಾಜಕೀಯ ಪಕ್ಷದೊಂದಿಗೆ ಸುಮಾರು ವರ್ಷಗಳಿಂದ ಈ ಒಂದೇ ಪಕ್ಷದಲ್ಲಿ ನಿರಂತರವಾಗಿ ಗುರುತಿಸಿಕೊಂಡಿದ್ದು, ಅಜಾತಶತ್ರುವಾಗಿ,ಮುಗುಳ್ನಗೆಯ ಗೆಳೆಯನಾಗಿ ಎಷ್ಟೊಂದು ಅಪಾರ ಸ್ನೇಹ ಬಳಗವನ್ನು ಸಂಪಾದಿಸಿಕೊಂಡಿದ್ದ ಈ ಗೆಳೆಯ ಎಂಬುದಕ್ಕೆ ಇವತ್ತಿನ ಸಾವಿನ ಸಂದರ್ಭದಲ್ಲಿ ಭಾಗಿಯಾದ ಅತೀ ದೊಡ್ಡ ಸಂಖ್ಯೆಯ ಜನರು ಸಾಕ್ಷಿಯಾಗಿದ್ದು ಕಂಡು ಬಂತು.
ಅಪ್ಪ ಅಮ್ಮ ಎಂಬ ಜನ್ಮದಾತರ ಸಂಕಟ, ಮಡದಿ ಗಾನವಿಯ ಕಣ್ಣೀರು, ಮಕ್ಕಳಿಬ್ಬರ ಗೋಳಾಟ, ಸಹೋದರ ಸೇರಿದಂತೆ ಕುಟುಂಬ ವರ್ಗದವರ ಆರ್ತನಾದ ಈ ನ್ಯಾಯವಲ್ಲದ ಸಾವಿನ ಪಾರ್ಥಿವ ಶರೀರದ ಮುಂದೆ ಮುಗಿಲು ಮುಟ್ಟುತ್ತಿತ್ತು.
ಬಂಧುಗಳು, ಹಿತೈಷಿಗಳು , ವಿವಿಧ ರಾಜಕೀಯ ಪಕ್ಷದ ಸ್ನೇಹಿತರು, ನೆರೆಹೊರೆಯವರು ಸರದಿ ಸಾಲಿನಲ್ಲಿ ನಿಂತು ಸುರಿಯುವ ಮಳೆಯ ನಡುವೆಯೂ ಅಂತಿಮ ದರ್ಶನ ಪಡೆಯುವುದು ಕಂಡುಬಂತು.
ನಮ್ಮೆಲ್ಲರ ಮುದ್ದಿನ ಗೆಳೆಯ ಪ್ರಶಾಂತನ ಈ ಅಕಾಲಿಕ ಮರಣದ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಕುಟುಂಬ ವರ್ಗ ಮತ್ತು ಹಿತೈಷಿಗಳಿಗೆ ಬರಲಿ ಎಂದು ಅವಿನ್ ಟಿವಿ ಸುದ್ದಿ ವಾಹಿನಿಯು ಈ ಮೂಲಕ ಅಂತಿಮ ನಮನ ಸಲ್ಲಿಸಿ, ಭಾವಪೂರ್ಣ ಸಂತಾಪಗಳನ್ನು ಸಲ್ಲಿಸುತ್ತಿದೆ.
ಇಂದು ಸಂಜೆ ಘಂಟೆ 4:00ಕ್ಕೆ ಮೃತರ ಸ್ವಗ್ರಾಮ ವಸ್ತಾರೆ ಸಮೀಪದ ಲಕ್ಷ್ಮಿಕಾಂತನಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನಡೆಯಿತು.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ✒️
ಚಿಕ್ಕಮಗಳೂರು

