लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಧರ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು, ಮಾನವ ಜನಾಂಗದ ವಿಕಾಸಕ್ಕೆ ವಿಜ್ಞಾನದ ಆವಿಷ್ಕಾರ, ಧರ್ಮದ ಲೇಪ ಎರಡೂ ಇದೆ :~ ರಂಭಾಪುರಿ ಜಗದ್ಗುರುಗಳ ಅಭಿಮತ*

1 min read

*ಧರ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು, ಮಾನವ ಜನಾಂಗದ ವಿಕಾಸಕ್ಕೆ ವಿಜ್ಞಾನದ ಆವಿಷ್ಕಾರ, ಧರ್ಮದ ಲೇಪ ಎರಡೂ ಇದೆ :~ ರಂಭಾಪುರಿ ಜಗದ್ಗುರುಗಳ ಅಭಿಮತ*
••••••••••
ಧರ್ಮ ಮತ್ತು ವಿಜ್ಞಾನಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮನುಷ್ಯ ಜನಾಂಗದ ವಿಕಾಸಕ್ಕೆ ವಿಜ್ಞಾನದ ಕೊಡುಗೆ ಅನನ್ಯವಾದರೆ,ಈ ಮನುಷ್ಯ ಸಂಕುಲದ ಶ್ರೇಯಸಿಗೆ ಧರ್ಮದ ಕೊಡುಗೆಯೂ ಸಹ ಅನುಪಮವಾದದ್ದು, ಹಾಗಾಗಿ ಧರ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು, ಈ ಎರಡು ಸಂಗತಿಗಳು ಮಾನವನ ಶ್ರೇಷ್ಠ ಬದುಕಿಗೆ ಬುನಾದಿಯಾಗಿದ್ದಾವೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ ಪಟ್ಟರು.

ಆಲ್ದೂರು ಪಟ್ಟಣದಲ್ಲಿ ಶುಕ್ರವಾರ ಶ್ರೀ ಮಹಾಗಣಪತಿ ಪುನರ್ ಪ್ರತಿಷ್ಠಾಪನಾ ಪ್ರಯುಕ್ತ, ಮಂಡಲ ಪೂಜಾ ಸಮಾರೋಪ ಸಮಾರಂಭದಲ್ಲಿ, ದೇವಾಲಯದ ಜೀವನೋದ್ಧಾರ ಸಮಿತಿ ಹಮ್ಮಿಕೊಂಡಿದ್ದ ಧರ್ಮ ಚಿಂತನಾ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭೌತಿಕ ಜೀವನ ಸಮೃದ್ಧಗೊಂಡಂತೆ ಅಂತರಿಕ ಜೀವನ ಪರಿಶುದ್ಧಗೊಳ್ಳಬೇಕು, ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಒಂದು ಹೊಸತನದೊಂದಿಗೆ ತೆರೆದುಕೊಳ್ಳಬೇಕು, ಆಧುನಿಕ ಜಗತ್ತಿನ ಈ ದಿನಮಾನಗಳಲ್ಲೂ ಕೂಡ ಹಲವಷ್ಟು ಜನರು ವಿಜ್ಞಾನದ ಸಂಗತಿಗಳಿಗೆ ತೆರೆದುಕೊಳ್ಳದೆ ಇರುವ ಕಾರಣ ಬಹಳಷ್ಟು ಸಮಸ್ಯೆಗಳಿಗೆ ತುತ್ತಾಗಿದ್ದಾರೆ, ಹಾಗೆಯೇ ವಿಜ್ಞಾನದ ಆವಿಷ್ಕಾರಗಳು ಹೆಚ್ಚಾದಂತೆ ಅದರ ದುಷ್ಪರಿಣಾಮಗಳು ಕೂಡ ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದಾವೆ. ಇಂತಹ ದುಷ್ಪರಿಣಾಮ ಬೀರುತ್ತಿರುವ ವಿಜ್ಞಾನಕ್ಕೆ ಸಾಂತ್ವಾನ ಮತ್ತು ಶಾಂತಿ ನೀಡುವ ಶಕ್ತಿ ಧರ್ಮಕ್ಕಿದೆ, ಈ ಎಲ್ಲ ಸೂಕ್ಷ್ಮತೆಗಳ ಗೆರೆಗಳನ್ನು ಅರಿತು ವೈಚಾರಿಕವಾದ ಬದುಕನ್ನು ನಮದಾಗಿಸಿಕೊಳ್ಳಬೇಕು, ವೈಚಾರಿಕವಾದ ಬದುಕು ಎಂದರೆ ದೇವರು ಮತ್ತು ಧರ್ಮದಿಂದ ವಿಮುಖರಾಗಿ ಬದುಕುವುದಲ್ಲ, ವಿಜ್ಞಾನದಿಂದ ವೈಜ್ಞಾನಿಕ ಮನೋಭಾವ ನಮ್ಮಲ್ಲಿ ಬೆಳೆಯಬೇಕು, ಆದರೆ ವೈಚಾರಿಕತೆಯ ಹೆಸರಿನಲ್ಲಿ ನಾಸ್ತಿಕ ಭಾವನೆ ತಾಳುವುದು ಮಾತ್ರ ಸಲ್ಲದು ಎಂದು ಎಚ್ಚರಿಸಿದರು.

ಸೂರ್ಯ ಹಗಲು ಬೆಳಕು ಕೊಡುತ್ತಾನೆ, ಚಂದ್ರ ರಾತ್ರಿ ಬೆಳದಿಂಗಳನ್ನು ಚೆಲ್ಲುತ್ತಾನೆ, ಆದರೆ ಧರ್ಮ ಎಂಬುದು ಈ ಹಗಲು ಮತ್ತು ರಾತ್ರಿ ಎನ್ನದೆ ಎಲ್ಲಾ ಕಾಲಕ್ಕೂ ದಿನದ 24 ಘಂಟೆಗಳ ಕಾಲವೂ ಸದಾ ಬೆಳಕುನ್ನು ಸೂಸುತ್ತಲೇ ಇರುತ್ತದೆ. ದಿನದ 24 ಘಂಟೆಗಳಲ್ಲಿ ಕೇವಲ ಒಂದೆರಡು ನಿಮಿಷವಾದರೂ ಕೂಡ ಆಸ್ತಿಕ ಭಾವನೆಯಿಂದ ದೇವರು ಮತ್ತು ಧರ್ಮದ ಕಡೆ ಮುಖ ಮಾಡಿ ಧ್ಯಾನಸ್ಥರಾಗಿ ಅಂತರಂಗದೊಳಗೆ ಒಂದು ಶಾಂತಿಯನ್ನು ನೆಲಗೊಳ್ಳಿಸಿಕೊಳ್ಳಬೇಕು, ಅಂತರಂಗದೊಳಗೆ ಇಂತಹ ಒಂದು ಶಾಂತಿ ನಮ್ಮೊಳಗೆ ನೆಲೆಗೊಂಡಾಗ ಮಾತ್ರ ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಸಮೃದ್ಧತೆ , ಸೌಹಾರ್ದತೆ ನಿರ್ಮಾಣವಾಗುತ್ತದೆ, ಮನುಷ್ಯರು ಮಾನಸಿಕವಾಗಿ ಸದೃಢವಾಗುತ್ತಾರೆ ಎಂದರು.

ದೇವರು ಮತ್ತು ಸಾವು ಈ ಎರಡು ಶಾಶ್ವತವಾದ ಸತ್ಯಗಳಾಗಿರುವುದರಿಂದ ಈ ಎರಡು ಸಂಗತಿಗಳನ್ನು ಎಂದು ಮರೆಯಬಾರದು.
ಪರೋಪಕಾರ ಮತ್ತು ದ್ವೇಷ ಈ ಎರಡು ವ್ಯಸನಕ್ಕೆ ಕಾರಣವಾಗಬಹುದಾದದ್ದರಿಂದ ಈ ಎರಡು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬಾರದು ಎಂದರು.

*ರಾಜಕಾರಣಿಗಳಾದ ಮಾಜಿ ಸಚಿವ ಸಿ ಟಿ ರವಿ ಮತ್ತು ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರಿಗೆ ಜಗದ್ಗುರುಗಳಿಂದ ಕಿವಿಮಾತು:-* ತಾಳ್ಮೆ ಮತ್ತು ಸಹನೆ ನಮ್ಮ ಬದುಕಿನ ಭಾಗಗಳಾಗಬೇಕು. ತಾಳ್ಮೆ ಮತ್ತು ಸಹನೆಯನ್ನು ಕಳೆದುಕೊಂಡು, ವಿವಿಧ ಸಂದರ್ಭದಲ್ಲಿ ವಿಪರೀತ ಎನ್ನುವಂತಹ ಹೇಳಿಕೆ ಕೊಟ್ಟ ಕಾರಣ ಮಾಜಿ ಸಚಿವ ಸಿ ಟಿ ರವಿ ಅವರು ರಾಜಕೀಯ ಜೀವನದಲ್ಲಿ ಪಶ್ಚಾತಾಪ ಪಡುವಂತಾಯಿತು, ಈ ಮಾತನ್ನು ಸಿಟಿ ರವಿ ಅವರೆ ಒಪ್ಪಿಕೊಂಡಿದ್ದಾರೆ. ಇನ್ನೂ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಕೊಡ ಇದೇ ತಾಳ್ಮೆ ಮತ್ತು ಸಹನೆಯನ್ನು ಕಳೆದುಕೊಂಡು ವರ್ತಿಸಿದ ಕಾರಣ ಪಕ್ಷದಿಂದ ಹೊರಗೆ ಬರಬೇಕಾಯಿತು, ಜನತಂತ್ರ ವ್ಯವಸ್ಥೆಯಿಂದ ರಾಜಕೀಯವಾಗಿ ಸೋಲನ್ನು ಅನುಭವಿಸಬೇಕಾಯಿತು. ಈ ತಪ್ಪುಗಳು ನಿಮ್ಮಿಬ್ಬರಿಗೂ ಅನುಭವದ ಪಾಠವಾಗಿ,ತಾಳ್ಮೆ ಮತ್ತು ಸಹನೆಯನ್ನು ತಾವಿಬ್ಬರು ರೂಡಿಸಿಕೊಂಡರೆ ಮುಂದಿನ ದಿನಗಳಲ್ಲಿ ನಿಮ್ಮಿಬ್ಬರ ರಾಜಕೀಯ ಭವಿಷ್ಯ ಉಜ್ವಲವಾಗುತ್ತದೆ ಎಂದು ಶ್ರೀ ರಂಭಾಪುರಿ ಸನ್ನಿಧಿಯವರು ಈ ಇಬ್ಬರು ರಾಜಕಾರಣಿಗಳಿಗೆ ವೇದಿಕೆಯ ಮೂಲಕವೇ ಕಿವಿ ಮಾತು ಹೇಳುವ ಮೂಲಕ ಇವರಿಬ್ಬರ ರಾಜಕೀಯ ನಡೆಯನ್ನು ಶ್ರೀಗಳು ಎಚ್ಚರಿಸಿದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಅವರು, ಜಗತ್ತಲ್ಲಿ ಅನೇಕ ಧರ್ಮಗಳಿದ್ದಾವೆ, ಅವೆಲ್ಲವುಗಳಿಗೆ ಆದಿ ಎಂಬುದು ಇದೆ, ಆದರೆ ನಮ್ಮ ಸನಾತನ ಧರ್ಮಕ್ಕೆ ಆದಿ ಎಂಬುದು ಇಲ್ಲ, ಯಾವ ಧರ್ಮಕ್ಕೆ ಆದಿ ಎಂಬುದು ಇರುವುದಿಲ್ಲವೋ ಅದು ಸದಾ ಕಾಲವು ಸರ್ವಕಾಲಕ್ಕೂ ಶಾಶ್ವತವಾಗಿರುತ್ತದೆ, ಉಪನಿಷತ್ತಿನಲ್ಲಿ ಜಾತಿಯ ಉಲ್ಲೇಖಗಳೇ ಇಲ್ಲ, ಹಾಗಾಗಿ ನಾವು ಜಾತಿ ಮತ್ತು ಅಸ್ಪೃಶ್ಯ ಮುಕ್ತ ಸಮಾಜವನ್ನು ಕಟ್ಟಬೇಕಾಗಿದೆ, ಈ ಮೂಲಕ ಮನುಷ್ಯನ ಮಾನಸಿಕವಾದ ಒಳರೋಗಗಳನ್ನು ನಿವಾರಣೆ ಮಾಡಿಕೊಳ್ಳುವುದಲ್ಲದೆ ಸಾಮಾಜಿಕವಾದ ಸುಸ್ಥಿರ ಬದುಕಿನ ಕಡೆ ಹೊಸ ಮುನ್ನುಡಿಯನ್ನು ಬರೆಯಬೇಕಿದೆ, ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಪೀಠ ವೀರಶೈವ ಧರ್ಮಕ್ಕೆ ಜಯವಾಗಲಿ ಎನ್ನಲಿಲ್ಲ, ಮಾನವ ಧರ್ಮಕ್ಕೆ ಜಯವಾಗಲಿ ಎಂಬ ವೀರ ಸಂದೇಶವನ್ನು ಜಗತ್ತಿಗೆ ಸಾರಿತು, ಇದರರ್ಥ ಮನುಜ ಕುಲ
ತಾ ವೊಂದೆ ವಲಂ ಎಂಬುದಾಗಿದೆ ಎಂಬುದನ್ನು ಅರ್ಥೈಸುತ್ತಾ, ನಾನು ಕೂಡ ಹಲವಷ್ಟು ತಪ್ಪು ಮಾಡುತ್ತಾ ಮಾಡುತ್ತಲೇ ಈ ಮಟ್ಟಕ್ಕೆ ಬೆಳೆದಿದ್ದೇನೆ, ನನ್ನನ್ನು ನೀವು ಬೆಳೆಸಿದ್ದೀರಿ, ಶ್ರೀಗಳ ಆಶೀರ್ವಾದ ಮತ್ತು ತಮ್ಮೆಲ್ಲರ ಹಾರೈಕೆ ನನ್ನ ಮೇಲಿರಲಿ ಎಂದು ತಮ್ಮ ಉದ್ಘಾಟನಾ ಮಾತುಗಳನ್ನಾಡಿದರು.

ಶಂಕರದೇವರ ಮಠದ ಶ್ರೀಗಳು ಆರೋಗ್ಯಪೂರ್ಣ ಸಮಾಜಕ್ಕೆ ಆದರ್ಶಗಳೇ ದಾರಿದೀಪ, ಶಿಕ್ಷಣವಿಲ್ಲದಿದ್ದರೆ ಒಂದು ವೇಳೆ ಬದುಕಬಹುದು ಆದರೆ ಸಂಸ್ಕಾರವಿಲ್ಲದಿದ್ದರೆ ಬಾಳು ಹಸನಾಗುವುದಿಲ್ಲ, ಬುದ್ಧಿ ಮತ್ತು ಜ್ಞಾನವನ್ನು ಒಂದು ಹದದೊಂದಿಗೆ ನಮದಾಗಿಸಿಕೊಂಡು ಈ ಬದುಕನ್ನು ಶ್ರೇಷ್ಠಗೊಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಬೇರುಗಂಡಿ ಬೃಹನ್ ಮಠದ ಶ್ರೀಗಳು ಉಪಸ್ಥಿತರಿದ್ದು ಆಶೀರ್ವದಿಸಿದರು.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ, ಅಲ್ದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ ಧರ್ಮ ಚಿಂತನಾ ಸಭೆಯನ್ನು ಕುರಿತು ಮಾತನಾಡಿದರು.

ಶ್ರೀ ಪ್ರಸನ್ನ ಗಣಪತಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಸಿ ಸುರೇಶ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಇಂದು ನಮ್ಮೆಲ್ಲರ ಬಾಳಿಗೆ ಭಾಗ್ಯೋದಯದ ದಿನವಾಗಿದೆ, ಶ್ರೀಮದ್ ರಂಭಾಪುರಿ ಶ್ರೀಗಳ ಇಷ್ಟುಲಿಂಗ ಮಹಾಪೂಜೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಆಲ್ದೂರಿನ ನಾಗರೀಕರಿಗೆ ದೊರೆತದ್ದು ನಮ್ಮೆಲ್ಲರ ಪುಣ್ಯ, ದೇವಸ್ಥಾನದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಿದ ಸರ್ವರ ಸಹಕಾರವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡು ಕೃತಜ್ಞತೆಗಳನ್ನು ಸಲ್ಲಿಸಿದರು.

ಆಲ್ದೂರು ಹೋಬಳಿ ವೀರಶೈವ ಮಹಾಸಭಾ ಈ ಸಂದರ್ಭದಲ್ಲಿ ದೇವಾಲಯದ ಜೀರ್ಣೋದ್ಧಾರ ಸಮಿತಿಗೆ ಶ್ರಮಿಸಿದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿತು.

ದೇವಾಲಯ ಸಮಿತಿ ಕಾರ್ಯದರ್ಶಿ ಎಚ್ ಎಲ್ ರವಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಡಿ.ಸಿ ಗಿರೀಶ್ ಮತ್ತು ಪತ್ರಕರ್ತೆ ತನುಜಾ ರಾಜೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

ದೇವಾಲಯದ ಜೇಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಬಿ ಎಸ್ ರಾಜೀವ್, ಹೆಚ್. ಎಸ್. ಕೃಷ್ಣೇಗೌಡ. ನಾರಾಯಣ ಆಚಾರ್ಯ
ಅಶೋಕ್ .ವಿ. ಜೆ.ರಾಜೇಶ್ ಮುಂತಾದವರು ಉಪಸ್ಥಿತಿ ಇದ್ದರು.
•••••••••••••✒️
ಡಿ.ಎಂ. ಮಂಜುನಾಥಸ್ವಾಮಿ

About Author

Leave a Reply

Your email address will not be published. Required fields are marked *

You may have missed