ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು
1 min read




ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು
ತರೀಕೆರೆ ಪಟ್ಟಣದ ಬಯಲು ರಂಗಮಂದಿರದಲ್ಲಿ ನಡೆದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.
ತರೀಕೆರೆ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಮರುಳಸಿದ್ದಯ್ಯಪಟೇಲ್ ಹೇಳಿದರು.
ಅವರು ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಮತ್ತು ತರೀಕೆರೆ ತಾಲ್ಲೂಕು ಘಟಕದ ಸಹಯೋಗದಲ್ಲಿ ಪಟ್ಟಣದ ಬಯಲು ರಂಗಮಂದಿರದಲ್ಲಿ ನಡೆದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಆಂಗ್ಲ ಭಾಷೆ ಸಾರ್ವತ್ರಿಕ ಭಾಷೆ ಎಂಬ ಅನಿವಾರ್ಯತೆಯಿಂದ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುವುದೇ ಪ್ರತಿಷ್ಠೆ ಎಂದು ಭ್ರಮೆಯಲ್ಲಿದ್ದಾರೆ. ಮಾತೃ ಭಾಷೆ ಮನೆ ಮಾತಾಗಬೇಕು. ಅನ್ನ ಕೊಡುವ ಭಾಷೆಯಾಗಬೇಕು. ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು. ಶೈಕ್ಷಣಿಕ ಪ್ರಗತಿ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದರೂ ಕೂಡ ಸರ್ಕಾರಿ ಶಾಲೆಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳು, ಪ್ರಕೃತಿ ಸ್ಥಳಗಳು, ಜೀವ ನದಿಗಳು, ಪಶ್ಚಿಮ
ಘಟ್ಟದ ಗಿರಿಶಿಖರಗಳು, ಭಕ್ತಿ, ಶ್ರದ್ದೆ, ಭಾವೈಕ್ಯತೆಯ ತಾಣಗಳನ್ನು ಕಾಣಬಹುದಾಗಿದೆ. ತರೀಕೆರೆಯಲ್ಲಿ ಶಿವಶರಣೆ ಅಕ್ಕನಾಗಲಾಂಬಿಕೆ ಗದ್ದುಗೆ, ನುಲಿಯ ಚಂದಯ್ಯ ಪೀಠ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳನ್ನು ಕಾಣಬಹುದಾಗಿದೆ ಎಂದು ತಿಳಿಸಿದರು. * ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ತರೀಕೆರೆಯಲ್ಲಿ ಇದುವರೆಗಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಕನ್ನಡ ಸಾಹಿತ್ಯಾಸಕ್ತರ ಬೆಂಬಲದಿಂದಾಗಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಅದ್ದೂರಿಯಾಗಿ, ಯಶಸ್ವಿಯಾಗಿ ನಡೆದಿದೆ ಎಂದುತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಜೆ.ಪಿ.ಕೃಷ್ಣಗೌಡ, ಕನ್ನಡಪರ ಕೆಲಸಗಳನ್ನು ನಾವೆಲ್ಲರೂ ಆತ್ಮಾಭಿಮಾನದಿಂದ ನಿರ್ವಹಿಸಬೇಕು, ಭಾಷೆಯ ಮೇಲಿನ ಭಾಷಾಭಿಮಾನ ಹೆಚ್ಚಾಗಬೇಕು ಎಂದು ತಿಳಿಸಿದರು.
ಡಾ.ಸಿ.ಕೆ.ಸುಬ್ಬರಾಯ ಮಾತನಾಡಿ, ಏನೇ ಆಧುನಿಕತೆ, ತಂತ್ರಜ್ಞಾನ ಪ್ರಗತಿಯಲ್ಲಿದ್ದರೂ ನಾಡು ನುಡಿಯ ಬಗ್ಗೆ ಅಭಿಮಾನ ಇರಲೇಬೇಕು ಎಂದು ತಿಳಿಸಿದರು.
ಸಂಸ್ಕೃತಿ ಡಾ.ಭರತ್ ಅಂಚೆ ಮಾತನಾಡಿ, ಮಾತೃಭಾಷೆ, ದೇಶ, ನಾಡು ನುಡಿಯ ಕಾರ್ಯಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಯುತ್ತಿರಬೇಕು. ಸ್ಥಳೀಯ ಜನರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಮನಸ್ಸಿದೆ ಎಂದು ತಿಳಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಬಯಲು ರಂಗ ಮಂದಿರ ಸೇರಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಗಿರಿಜಾಪ್ರಕಾಶ್ವರ್ಮ, ಎ.ಸಿ.ಚಂದ್ರಪ್ಪ, ಹಳೆಕೋಟೆ ರಮೇಶ್ ಹಾಗೂ ಇತರರು ಮಾತನಾಡಿದರು. ಚಿಕ್ಕಮಗಳೂರಿನ ಕೆ.ಮೋಹನ್, ಶೃಂಗೇರಿಯ ಕಿರುತೆರೆ ನಟಿ ಕು.ನಾಗಶ್ರೀಬೇಗಾರ್ ರವರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಎಂ.ನರೇಂದ್ರ, ತಹಸೀಲ್ದಾರ್ ವಿಶ್ವಜಿತಮೆಹತ, ಪುರಸಭೆ ಸದಸ್ಯರಾದ ಪಾರ್ವತಮ್ಮ, ದಿವ್ಯಾ, ಜಿ.ಪಂ. ಮಾಜೆ ಅಧ್ಯಕ್ಷ ಹೆಚ್.ವಿಶ್ವನಾಥ್, ತಾಲ್ಲೂಕು ಕಸಾಪ ಅಧ್ಯಕ್ಷ ರವಿದಳವಾಯಿ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಜಿ.ಬಿ.ಪವನ್, ಸಂಘಟನಾ ಕಾರ್ಯದರ್ಶಿ ನವೀನ್ ಪೆನ್ನಯ್ಯ, ಮಿಲ್ಲೀಶ್ರೀನಿವಾಸ್. ಬಿ.ಎಸ್.ಭಗವಾನ್ ಹಾಜರಿದ್ದರು. ತ.ಮ.ದೇವಾನಂದ್, ಹಾಗೂ ಇತರರು ಇದ್ದರು.
ಜಿಲ್ಲೆಯ ಹಾಗೂ ಹೊರ ಜಿಲ್ಲೆಯಿಂದ ಸಾವಿರಾರು ಕನ್ನಡಾಭಿಮಾನಿಗಳು ನೆರೆದಿದ್ದರು.

