ಶ್ರಮದಾನ – 10°° ಈ ಬಾರಿಯ ಶ್ರಮದಾನದಲ್ಲಿ ಶ್ರಮ ಸ್ವಲ್ಪ ಹೆಚ್ಚಾಗಿಯೇ ಇತ್ತು……
1 min read
ಶ್ರಮದಾನ – 10
°°°°°°°°°°°°°°°°°°°°°
ಈ ಬಾರಿಯ ಶ್ರಮದಾನದಲ್ಲಿ ಶ್ರಮ ಸ್ವಲ್ಪ ಹೆಚ್ಚಾಗಿಯೇ ಇತ್ತು. ದಿನಾಂ
ಕ 22/11/2026ರ ಭಾನುವಾರ ಬೆಳಗ್ಗೆ ಆರು ಗಂಟೆಗೆಲ್ಲಾ ಮನೆಯಿಂದ ಹೊರಟು ಬಿಎಂಟಿಸಿ ಬಸ್ಸಿನಲ್ಲಿ ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ತಲುಪಿದೆನು. ಅಲ್ಲಿ ಬಹಳ ಸಮಯ ಕಾಯುವಿಕೆಯ ನಂತರ ಸರ್ಕಾರಿ ಬಸ್ ಬಾರದ ಕಾರಣ ಖಾಸಗಿ ಬಸ್ಸಿನಲ್ಲಿ ಯಡಿಯೂರಿಗೆ ಪ್ರಯಾಣ ಮಾಡಿದೆನು. ಭಾನುವಾರವಾದ್ದರಿಂದ ಪ್ರಯಾಣಿಕರ ಸಂಖ್ಯೆ, ವಾಹನಗಳ ಟ್ರಾಫಿಕ್ ಹೆಚ್ಚೇ ಇತ್ತು. ಖಾಸಗಿ ಬಸ್ಸು ಎಲ್ಲಾ ನಿಲ್ದಾಣಗಳಲ್ಲೂ ಜನರನ್ನು ಹತ್ತಿಸಿಕೊಂಡು ಮುನ್ನಡೆಯುತ್ತಿತ್ತು. ನಿರೀಕ್ಷೆಗಿಂತ ಹೆಚ್ಚು ಸಮಯದ ನಂತರ ಯಡಿಯೂರು ತಲುಪಿತು. ಅಲ್ಲಿಂದ ಇನ್ನೊಂದು ಸರ್ಕಾರಿ ಬಸ್ ಹತ್ತಿ ತುರುವೇಕೆರೆ ತಲುಪಿದೆನು. ಅದರಲ್ಲಿ ನಿಂತೇ ಪ್ರಯಾಣ ಮಾಡಿದೆನು. ಮುಂದೆ ಅಲ್ಲಿಂದ ಆಲ್ಬೂರು ಬಸ್ ನಿಲ್ದಾಣದಲ್ಲಿ ಇಳಿದೆ.
ಬಹುಶಃ ಈಗಾಗಲೇ ನಿಮಗೆ ಅರ್ಥವಾಗಿರಬಹುದು. ಶ್ರಮಧಾನದ 10ನೆಯ ಉದ್ಯೋಗವಾಗಿ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಆಲ್ಬೂರು ಗ್ರಾಮಕ್ಕೆ ಬಂದು ಸೇರಿದೆನು.
ಅಲ್ಲಿ ಪತ್ರಕರ್ತರು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ನನ್ನ ಆತ್ಮೀಯರು ಆದ ಶ್ರೀ ಶಿವರಾಜ್ ಅಲ್ಬೂರು ರವರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ನೇರವಾಗಿ ಅವರ ಹಳ್ಳಿಯ ಮನೆಗೆ ಕರೆದುಕೊಂಡು ಹೋಗಿ ರಾಗಿ ಮತ್ತು ಜೋಳ ಮಿಶ್ರಣದ ರೊಟ್ಟಿ, ಕಾಯಿತುರಿ ಚಟ್ನಿ, ಬಾಳೆಹಣ್ಣು ಸಹಿತ ಉಪಹಾರ ನೀಡಿ ಪ್ರೀತಿಯಿಂದ ಸತ್ಕರಿಸಿದರು.
ಆಲ್ಬೂರಿನ ಸುತ್ತಮುತ್ತ ಐತಿಹಾಸಿಕವಾದ, ಮುಖ್ಯವಾಗಿ ಹೊಯ್ಸಳರ ಕಾಲದ ಸಾಕಷ್ಟು ಕಲ್ಲಿನ ಕಲಾಕೃತಿಗಳು, ಸ್ಮಾರಕಗಳು, ಮಾಸ್ತಿಗಲ್ಲು ಮತ್ತು ವೀರಗಲ್ಲುಗಳು ಈಗಲೂ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಅವುಗಳಲ್ಲಿ ಒಂದು ಮಾಸ್ತಿಗಲ್ಲು ಅಲ್ಲಿನ ಜನರ ಭಕ್ತಿಯ ಪ್ರವಾಹದಲ್ಲಿ ಎಣ್ಣೆ, ಅರಿಶಿನ, ಕುಂಕುಮ ಇತ್ಯಾದಿಗಳನ್ನು ಹಚ್ಚಿ ಸಂಪೂರ್ಣ ಒಂದು ಕಪ್ಪು ಶಿಲೆಯಾಗಿ ಮಾರ್ಪಟ್ಟಿತ್ತು. ಅದನ್ನು ಸ್ವಚ್ಛಗೊಳಿಸಲು ಮೊದಲೇ ನಿರ್ಧರಿಸಿದ್ದೆವು.
ಶ್ರೀ ಶಿವರಾಜ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಅದನ್ನು ಸ್ವಚ್ಛಗೊಳಿಸಲು ಬೇಕಾದ ಬ್ರಷ್, ಸರ್ಫ್, ಸೋಡಾ, ಬಕೇಟು, ಜಗ್ಗು ಜೊತೆಗೆ ಆಯಾಸವಾದರೆ ಇರಲಿ ಎಂದು ಒಂದಷ್ಟು ಹಣ್ಣು ಎಲ್ಲವನ್ನೂ ಸಿದ್ದ ಮಾಡಿದ್ದರು. ಅದನ್ನು ತೆಗೆದುಕೊಂಡು ಆ ಜಾಗ ತಲುಪಿದೆವು
ಚಳಿಗಾಲವಾದರೂ ಆ ಸಮಯದಲ್ಲಿ ಬಿಸಿಲು ತುಸು ಹೆಚ್ಚೇ ಇತ್ತು. ಅಂದು ಆ ಗ್ರಾಮದಲ್ಲಿ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭ ಇದ್ದುದರಿಂದ ಬಹುತೇಕ ಜನರೆಲ್ಲಾ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಮ್ಮೊಂದಿಗೆ ಸಹಕರಿಸಲು ಯಾರೂ ಬರಲಿಲ್ಲ. ಕೆಲವು ಊರಿನ ಜನರು ಮತ್ತು ಅಯ್ಯಪ್ಪ ಮಾಲಾಧಾರಿ ಯುವಕರು ಇದನ್ನು ಗಮನಿಸುತ್ತಿದ್ದರೇ ಹೊರತು ಕೈಜೋಡಿಸಲಿಲ್ಲ. ಇರಲಿ ನಮಗೆ ಅದರ ನಿರೀಕ್ಷೆಯು ಇರಲಿಲ್ಲ. ನಾವು ಸ್ವಇಚ್ಛೆಯಿಂದ ಈ ಕೆಲಸದ ಸಂಕಲ್ಪ ಮಾಡಿದ್ದೆವು.
ಪ್ರಾರಂಭದಲ್ಲಿ ಬ್ರಷ್ ತೆಗೆದುಕೊಂಡು ಅದನ್ನು ಉಜ್ಜತೊಡಗಿದೆವು. ಅದು ತುಂಬಾ ತ್ರಾಸದಾಯಕ ಮತ್ತು ಅಸಾಧ್ಯವೆನಿಸಿತು. ಸುಮಾರು ಒಂದು ಇಂಚಿಗೂ ಹೆಚ್ಚು ದಪ್ಪದ ಎಣ್ಣೆ ಮಿಶ್ರಿತ ಅಂಟು ಅದಕ್ಕೆ ಮೆತ್ತಿಕೊಂಡಿತ್ತು. ಕೊನೆಗೆ ಗೆಳಯ ಶಿವರಾಜ್ ಅವರು ಒಂದು ಮಚ್ಚು ಮತ್ತು ಇನ್ನೊಂದು ಕುಡುಗೋಲು ತಂದರು. ಅದರ ಸಹಾಯದಿಂದ ನಿಧಾನವಾಗಿ ಕೆಲಸ ಶುರು ಮಾಡಿದೆವು. ನಿಜಕ್ಕೂ ಇಬ್ಬರೇ ಅದನ್ನು ಸ್ವಚ್ಛಗೊಳಿಸುವುದು ನಮ್ಮ ದೇಹ ರಚನೆಗೆ ಸ್ವಲ್ಪ ಕಠಿಣ ಸವಾಲೇ ಆಗಿತ್ತು. ಆದರೂ ಅದನ್ನು ನಿಧಾನವಾಗಿ ಮಾಡತೊಡಗಿ ಸ್ವಲ್ಪ ಸ್ವಲ್ಪವೇ ಯಶಸ್ವಿಯಾಗುತ್ತಿದ್ದೆವು. ಸ್ವಲ್ಪ ಸಮಯದ ನಂತರ ಸಣ್ಣ ವಿರಾಮ ತೆಗೆದುಕೊಂಡು ಕಲ್ಲಂಗಡಿ ಹಣ್ಣು ತಿಂದೆವು. ಮತ್ತೆ ಕೆಲಸ ಪ್ರಾರಂಭ ಮಾಡಿ ಇರುವ ಸಮಯ ಮತ್ತು ಆಯುಧಗಳಿಂದಲೇ ಅದಕ್ಕೆ ಒಂದು ಸಮಾಧಾನಕರ ರೂಪ ನೀಡಿದೆವು.
ಇತಿಹಾಸದ ಸಾಕ್ಷಿಪ್ರಜ್ಞೆಯಂತಿರುವ, ಇತಿಹಾಸ ದಾಖಲಿಸಲು ಅಧಿಕೃತ ಮಾಹಿತಿಯ ಕಣಜಗಳಾಗಿರುವ ಈ ಕಲ್ಲಿನ ಸ್ಮಾರಕಗಳನ್ನು ರಕ್ಷಿಸಬೇಕಾಗಿರುವುದು ಸರ್ಕಾರದ ಪ್ರಾಚ್ಯ ವಸ್ತು ಇಲಾಖೆಯ ಜವಾಬ್ದಾರಿಯಾದರೂ, ಸ್ಥಳೀಯ ಆಡಳಿತ ಮತ್ತು ಜನರ ಕರ್ತವ್ಯವೂ ಇದೆ. ಏಕೆಂದರೆ ಇಂದಿನ ಕಾಲಘಟ್ಟದಲ್ಲಿ ಇತಿಹಾಸವನ್ನೇ ತಿರುಚುವ, ಬದಲಾಯಿಸುವ, ಸುಳ್ಳಾಗಿಸುವ, ಇತರೆ ಅನಾವಶ್ಯಕ ವಿವರಣೆ ಕೊಡುವ ಸನ್ನಿವೇಶದಲ್ಲಿ, ಮುಂದಿನ ಪೀಳಿಗೆಗೆ ಒಂದಷ್ಟು ಜೀವಂತ ಸಾಕ್ಷಗಳನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
ಮಧ್ಯಾಹ್ನ ಸುಮಾರು 3:30 ಗಂಟೆಗೆ ಆ ಕೆಲಸವನ್ನು ಒಂದು ಹಂತಕ್ಕೆ ತಂದು ಅಲ್ಲಿಯೇ ಗೆಳೆಯರ ಗೃಹಪ್ರವೇಶದಲ್ಲಿ ಊಟ ಮಾಡಿ ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಇನ್ನೊಂದಷ್ಟು ಕಲ್ಲಿನ ಸ್ಮಾರಕಗಳನ್ನು ನೋಡಿಕೊಂಡು ಬರಲು ಹೊರಟೆವು. ಆ ಸಂದರ್ಭದಲ್ಲಿ ನಮ್ಮ ಜೊತೆಯಾದ ಆಯುರ್ವೇದ ಹಾಗೂ ಪಾರಂಪರಿಕ ಪ್ರಾಕೃತಿಕ ಜೀವನ ಶೈಲಿಯಲ್ಲಿ ತುಂಬಾ ಆಸಕ್ತಿ ಹೊಂದಿ ಆ ನಿಟ್ಟಿನಲ್ಲಿ ಅದನ್ನು ಸಂರಕ್ಷಿಸುವ ಕೆಲಸದಲ್ಲಿ ನಿರತರಾಗಿರುವ ನನ್ನ ಆತ್ಮೀಯರು ಮತ್ತು ಸರ್ಕಾರಿ ಶಾಲೆಯ ಶಿಕ್ಷಕರು ಆದ ಶ್ರೀಯುತ ಬಸವರಾಜ್ ಮತ್ತು ಕೃಷಿಕರಾದ ಶ್ರೀ ಉಮೇಶ್ ಅವರುಗಳು ಜೊತೆಯಾದರು. ಕೆಲವು ಶಿಲಾ ಶಾಸನಗಳನ್ನು ನೋಡಿಕೊಂಡು ಮುಂದೆ ಊರಿನ ಯುವಕರೊಂದಿಗೆ ಸೇರಿ ಅವುಗಳನ್ನು ಸ್ವಚ್ಛಗೊಳಿಸಿ ಎಂದು ಸಲಹೆ ನೀಡಿದೆವು.
ಶ್ರೀ ಬಸವರಾಜ್ ಅವರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ನಾಗಮಂಗಲದ ಪುಸ್ತಕ ಮನೆ ಶ್ರೀ ಅಂಕೇಗೌಡರ ಆತ್ಮೀಯರು ಹೌದು. ಅವರ ಮುಂದಿನ ಆಸಕ್ತಿ ಅಂಕೆಗೌಡರೊಂದಿಗೆ ಸೇರಿ ಆ ಪುಸ್ತಕ ಮನೆಯನ್ನು ಹೊಸ ಪ್ರದೇಶದಲ್ಲಿ ಸರ್ಕಾರದ ಸಹಕಾರದೊಂದಿಗೆ ಹೆಚ್ಚು ಕ್ರಮಬದ್ಧವಾಗಿ ಸಂರಕ್ಷಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳುವ ಆಸಕ್ತಿ ಹೊಂದಿದ್ದಾರೆ. ಅದಕ್ಕೆ ನಮ್ಮ ನೈತಿಕ ಬೆಂಬಲವಿದೆ ಎಂದು ಭರವಸೆ ನೀಡಿದೆನು.
ಮುಂದೆ ಆ ಶಿಕ್ಷಕರ ತೋಟದ ಮನೆಗೆ ಹೋಗಿ ಅಲ್ಲಿ ವಿಧವಿಧದ ಹಣ್ಣು, ತರಕಾರಿಗಳ ಗಿಡಗಳನ್ನು ನೋಡಿ ಕೆರೆಯ ಪಕ್ಕದ ಸೌಂದರ್ಯವನ್ನು ಆಸ್ವಾದಿಸಿ, ಅದೇ ಜಾಗದಲ್ಲಿ ವಾಸವಿರುವ ಮೌನಿ ಬಾಬಾ ಎಂಬ ಮೌನವನ್ನೇ ಬಹಳಷ್ಟು ವರ್ಷಗಳಿಂದ ಆಚರಿಸುತ್ತಿರುವ, ಏನಾದರೂ ಮಾತುಕತೆ ಇದ್ದರೆ ಸ್ಲೇಟಿನಲ್ಲಿ ಬರೆದು ತೋರಿಸುವ ಒಬ್ಬ ಸನ್ಯಾಸಿಯನ್ನು ಭೇಟಿ ಮಾಡಿ, ಮಾತುಕತೆ ನಡೆಸಿ, ಅಲ್ಲಿಂದ ನಾವು ತುರುವೇಕೆರೆಗೆ ಬಂದು ರಾತ್ರಿ ಅಲ್ಲಿ ಬೆಂಗಳೂರು ಬಸ್ಸನ್ನು ಹತ್ತಿದೆ. ಶಿವರಾಜ್ ಮತ್ತು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿ ದಣಿದ ದೇಹದೊಂದಿಗೆ ತುಂಬಿದ ಬಸ್ಸಿನ ಪ್ರಯಾಣ ಪ್ರಾರಂಭಿಸಿದೆನು.
ಆ ಬಸ್ಸಿನ ಪ್ರಯಾಣವೇ ಒಂದು ರೋಚಕ ಅನುಭವ. ಈ ರೀತಿ ಸಾಕಷ್ಟು ಬಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತೇನೆ. ನನ್ನ ಬಳಿ ಯಾವುದೇ ವಾಹನ ಇಲ್ಲದಿರುವುದರಿಂದ ಬಸ್ಸಿನ ಪ್ರಯಾಣ ನನಗೆ ಸಹಜವಾಗಿದೆ.
ಈ ಬಾರಿಯ ಒಂದು ಸಣ್ಣ ಅನುಭವ ಹೇಳಬೇಕೆಂದರೆ ಭಾನುವಾರವಾದ್ದರಿಂದ ಆ ದಾರಿಯಲ್ಲಿ ಸಂಚಾರ ತುಂಬಾ ಹೆಚ್ಚಾಗಿ ಇರುತ್ತದೆ. ಯಡಿಯೂರು, ಕುಣಿಗಲ್, ತುರುವೇಕೆರೆ, ಮಾಯಸಂದ್ರ ದಾರಿಯಲ್ಲಿ ದೇವಸ್ಥಾನಗಳು ಇರುವುದರಿಂದ, ಜೊತೆಗೆ ಸರ್ಕಾರದ ಶಕ್ತಿ ಯೋಜನೆಯ ಅನುಕೂಲ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚೇ ಇರುತ್ತದೆ. ಭಾನುವಾರ ಅದಕ್ಕೆ ವಿರುದ್ಧವಾಗಿ ಬಸ್ಸುಗಳ ಸಂಖ್ಯೆ ಕಡಿಮೆಯೂ ಇರುತ್ತದೆ.
ಒಂದು ಬಸ್ಸಿನಲ್ಲಿ ಸುಮಾರು 40/50 ಆಸನಗಳಿದ್ದರೆ 70/80 ಜನರನ್ನು ತುರುಕಲಾಗುತ್ತದೆ. ಆ ನಿಂತುಕೊಂಡು ಮಾಡುವ ಪ್ರಯಾಣದ ಕಷ್ಟ ಅನುಭವಿಸಿದವರಿಗೇ ಗೊತ್ತು. ಒಮ್ಮೊಮ್ಮೆ ನರಕದ ನೆನಪೂ ಆಗಬಹುದು. ಜೊತೆಗೆ ಬಸ್ ಹತ್ತುವ ವಿಷಯದಲ್ಲಿ ಗಂಡ, ಹೆಂಡತಿ, ಅಪ್ಪ, ಮಗಳು, ಅಣ್ಣ, ತಂಗಿ ಇತ್ಯಾದಿಗಳ ದ್ವಂದ್ವದ ನಿಲುವಿನಿಂದ ಸಣ್ಣ ಮಟ್ಟದ ಜಗಳಗಳು ಆಗುತ್ತವೆ. ಒಬ್ಬರು ನಿಂತು ಹೋಗುವುದು ಬೇಡ ಇನ್ನೊಂದು ಬಸ್ಸಿಗೆ ಕಾಯೋಣ ಎಂದರೆ, ಮತ್ತೊಬ್ಬರು ಬೇಡ ಬೇಡ ಲೇಟಾಗುತ್ತದೆ, ಅಡ್ಜೆಸ್ಟ್ ಮಾಡಿಕೊಂಡು ಹೋಗೋಣ ಎನ್ನುವ ಅಭಿಪ್ರಾಯದಿಂದ ಹಿಡಿದು ಹಲವಾರು ಅನಿಸಿಕೆಗಳು ಮೂಡಿ ಜಗಳವಾಡುತ್ತಲೇ ಬಸ್ ಹತ್ತುತ್ತಾರೆ.
ಆ ಸೆಕೆ, ಉಸಿರಾಟದ ತೊಂದರೆ, ಕಾಲು ನೋವಿನಿಂದ ಅಸಹನೆ ಮತ್ತಷ್ಟು ಹೆಚ್ಚಾಗುತ್ತದೆ. ರಾತ್ರಿ ಇಲ್ಲಿಯೇ ಮಲಗಿ ಬೆಳಿಗ್ಗೆ ಬೇಗ ಎದ್ದು ಹೋಗಬಹುದಿತ್ತು ಎಂದು ಇನ್ನೊಬ್ಬರ ಅಭಿಪ್ರಾಯವೂ ಜೊತೆಯಾಗುತ್ತದೆ. ನಿಂತೇ ಆಗಾಗ ತೂಕಡಿಸುತ್ತಾ, ಬ್ರೇಕ್ ಹಾಕಿದಾಗ, ಹಂಪ್ ಬಂದಾಗ ಮುಗ್ಗರಿಸುತ್ತಾ, ಪಕ್ಕದವರ ಅಸಹನೆಯ ನೋಟ ಎದುರಿಸುತ್ತಾ, ಮಕ್ಕಳನ್ನು ಕೆಳಗೆ ಕೂರಿಸುತ್ತಾ, ನಾನಾ ರೀತಿಯ ಕಷ್ಟಗಳೊಂದಿಗೆ ಪ್ರಯಾಣ ಸಾಗುತ್ತದೆ. ಜೊತೆಗೆ ಟ್ರಾಫಿಕ್ ಸಮಸ್ಯೆಯಿಂದ ಬಸ್ಸು ಸರಾಗವಾಗಿ ಸಾಗುವುದೇ ಇಲ್ಲ. ತುಂಬಾ ನಿಧಾನವಾಗಿ ನಿಂತು ನಿಂತು ಚಲಿಸುತ್ತಿರುತ್ತದೆ.
ರಾತ್ರಿ 7 ರಿಂದ 11 ಗಂಟೆಯ ಸಮಯ ಮನೆಯಲ್ಲಿ ಒಳ್ಳೆಯ ಊಟ ಮಾಡಿ ಟಿವಿ ನೋಡುತ್ತಾ ಕಳೆದರೆ ಅದೇ ಒಂದು ಸುಖ. ಆದರೆ ಇಲ್ಲಿ ಸುಸ್ತಾಗಿ, ಧೂಳು ಸೇವಿಸಿ, ಕಾಲು ನೋಯಿಸಿಕೊಂಡು, ಅರ್ಧಂಬರ್ಧ ನಿದ್ದೆಯಲ್ಲಿ ಬಸ್ ಪ್ರಯಾಣ ಮಾಡುವುದು ಹಿಂಸಾತ್ಮಕವಾಗಿರುತ್ತದೆ. ಅನೇಕ ಬಾರಿ ನಾನು ನಿಂತೇ ಪ್ರಯಾಣಿಸಿ ಸಾಕಷ್ಟು ನೋವು, ಕಷ್ಟ ಅನುಭವಿಸಿದ್ದೇನೆ.
ಆದರೂ ಆ ಸಂದರ್ಭವನ್ನು ಗೆಲ್ಲಲು ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೋ, ಸಮಾಧಾನಕರ ಸ್ಥಿತಿಗೋ, ನೆನಪಿನ ಅರಮನೆಗೋ, ಸಹಜತೆಗೋ ಕೊಂಡೊಯ್ಯಲು ಪ್ರಯತ್ನಿಸಿ ಸಫಲನಾಗುತ್ತೇನೆ. ಎಲ್ಲವನ್ನೂ ಸಹಿಸಿಕೊಳ್ಳದೆ ಬೇರೆ ದಾರಿ ಇಲ್ಲ ಎಂದು ಮನಸ್ಸಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇನೆ. ಆಗ ಪ್ರಯಾಣವು ಒಂದಷ್ಟು ಸಹನೀಯವಾಗುತ್ತದೆ.
ಏನೇ ಆಗಲಿ ಶ್ರಮದಾನದ ಒಟ್ಟಾರೆ ಅನುಭವಗಳು ನಿಜಕ್ಕೂ ಬದುಕಿನ ವಿವಿಧ ಮುಖಗಳನ್ನು ಈ ಹಂತದಲ್ಲಿ ಮತ್ತಷ್ಟು ವಿಭಿನ್ನ ದೃಷ್ಟಿಕೋನದಲ್ಲಿ ಅರಿಯುವಲ್ಲಿ ಸಹಕಾರಿಯಾಗಿದೆ. ಅನುಭವ ಬದುಕಿನ ಕೊನೆಯ ಕ್ಷಣದವರೆಗೂ ನಿರಂತರ. ಅದು ಮುಗಿಯದ ಅಕ್ಷಯ ಪಾತ್ರೆ. ಮತ್ತೊಂದು ಶ್ರಮದಾನದ ಸಿದ್ಧತೆಯಲ್ಲಿ…….
( ಚಿತ್ರಗಳು ಮುಖಪುಟದಲ್ಲಿವೆ )
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

