ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ದ ಶಾಸಕಿ ನಯನಾ ಮೋಟಮ್ಮ ಗರಂ…..
1 min read
ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ದ ಶಾಸಕಿ ನಯನಾ ಮೋಟಮ್ಮ ಗರಂ






* ಜೆಜೆಎಂ, * ವಿದ್ಯುತ್, * ರಸ್ತೆ ದುರಸ್ತಿ, * ಆರೋಗ್ಯ ಸೇವೆಗಳ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಲು ಸೂಚನೆ
ಮೂಡಿಗೆರೆ: ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ಶಾಸಕಿ ನಯನಾ ಮೋಟಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರು, ಜೆಜೆಎಂ ಕಾಮಗಾರಿ, ವಿದ್ಯುತ್ ಸಂಪರ್ಕ, ರಸ್ತೆ ದುರಸ್ತಿ ಹಾಗೂ ಆರೋಗ್ಯ ಸೇವೆಗಳಲ್ಲಿನ ಲೋಪದೋಷಗಳ ಕುರಿತು ಗಂಭೀರ ಚರ್ಚೆ ನಡೆಯಿತು. ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸುವಂತೆ ತಾಕೀತು ಮಾಡಿದರು.
ಸದಸ್ಯ ಸಂಪತ್ ಕುಮಾರ್ ಮಾತನಾಡಿ, ಬೆಳಗುಳದಲ್ಲಿ ಜೆಜೆಎಂ ಕಾಮಗಾರಿಗಾಗಿ ಚರಂಡಿ ಅಗೆದು ಪೈಪ್ ಲೈನ್ ಅಳವಡಿಸದೆ ಹಾಗೆಯೇ ಬಿಡಲಾಗಿದೆ. 5 ಕಡೆ ಕೈಗೊಂಡಿರುವ ಕಾಮಗಾರಿಗಳು ಅರ್ಧಬರ್ಧವಾಗಿವೆ. ಸುಭಾಷನಗರದಲ್ಲಿ ಪೂರ್ಣಗೊಂಡು 5 ಕಾಮಗಾರಿ ವರ್ಷ ಕಳೆದಿದ್ದರೂ ಇದುವರೆಗೆ ನೀರು ಪೂರೈಕೆಯಾಗುತ್ತಿಲ್ಲ. ತಾಲೂಕಿನಾದ್ಯಂತ ಇಂತಹ ಸಮಸ್ಯೆಗಳು ವ್ಯಾಪಕವಾಗಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಗೀತಾಂಜಲಿ, ವಾಟರ್ ಮನ್ ಗಳು ಹಳೆಯ ಪೈಪ್‌ಲೈನ್ ಮೂಲಕವೇ ನೀರು ಪೂರೈಸುತ್ತಿದ್ದಾರೆ ಎಂದು ಹಾರಿಕೆ ಉತ್ತರ ನೀಡಿದರು.
ಕೆಡಿಪಿ ಸದಸ್ಯ ಗೋಪಾಲ ಮಾತನಾಡಿ, ಕಳೆದ 3 ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಕಳಸ ತಾಲೂಕಿನ ಅಡಕೂಡು ಸರಕಾರಿ ಶಾಲೆಯ ಸಮೀಪ ಅಪಾಯದ ಸ್ಥಿತಿಯಲ್ಲಿದ್ದ ವಿದ್ಯುತ್ ತಂತಿಯನ್ನು ಬದಲಾಯಿಸುವಂತೆ ಸೂಚಿಸಲಾಗಿತ್ತು. ಆದರೆ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. 2 ದಿನದ ಹಿಂದೆ ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದಿದ್ದು, ಆದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ ಎಂದು ತಿಳಿಸಿದರು. ಇದರಿಂದ ಆಕ್ರೋಶಗೊಂಡ ಶಾಸಕಿ ನಯನಾ ಮೋಟಮ್ಮ, ಹಿಂದಿನ ಸಭೆಯಲ್ಲೇ ತಂತಿ ಬದಲಾಯಿಸುವಂತೆ ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ವಿದ್ಯುತ್ ತಂತಿ ತುಂಡಾಗಿ ಪ್ರಾಣಹಾನಿ ಸಂಭವಿಸಿದ್ದರೆ ಯಾರು ಹೊಣೆ ಹೊರುತ್ತಿದ್ದರು? ನಿಮಗೆ ನಾಚಿಕೆಯಾಗಬೇಕು. ಕೂಡಲೇ ತಂತಿಯನ್ನು ದುರಸ್ತಿಪಡಿಸಿ ಎಂದು ಮೆಸ್ಕಾಂ ಎಇಇ ರಾಘವೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ತಾಲೂಕಿನ ಆಲ್ಲೂರು ಸೇರಿದಂತೆ ವಿವಿಧ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿಯನ್ನು ಗುತ್ತಿಗೆದಾರರು ಕಳಪೆಯಾಗಿ ನಿರ್ವಹಿಸುತ್ತಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಗುಂಡಿಗಳಿಂದಾಗಿ ತಾಲೂಕಿಗೆ ಆಗಮಿಸುವ ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದಾರೆ. ಬೇಜವಾಬ್ದಾರಿಯಿಂದ ಜನಪ್ರತಿನಿಧಿಗಳು ಉತ್ತರ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳಪೆ ಕಾಮಗಾರಿ ನೆಡೆಸುವಂತೆ ತಾನು ಸೂಚಿಸಿದ್ದೇನೆಯೇ? ರಸ್ತೆ ದುರಸ್ತಿ ಕಾಮಗಾರಿಗಳು ಗುಣಮಟ್ಟದಿಂದ ಗುಣಮಟ್ಟದಿಂದ
ಕೂಡಿರುವಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಕೆಡಿಪಿ ಸದಸ್ಯ ಸುರೇಂದ್ರ ಉಗ್ಗೇಹಳ್ಳಿ ಮಾತನಾಡಿ, ದೇವರಾಜ ಅರಸು ನಿಗಮ, ಅಂಬೇಡ್ಕರ್ ನಿಗಮ ಸೇರಿದಂತೆ ವಿವಿಧ ನಿಗಮಗಳ ಕೊರೆಸಿ ಒಂದು ತಿಂಗಳು ಕಳೆದಿದ್ದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಸಾರ್ವಜನಿಕರಿಗೆ ಪ್ರಯೋಜನವಾಗುತ್ತಿಲ್ಲ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ವಿವಿಧ ನಿಗಮಗಳ ಅನುದಾನದಲ್ಲಿ ಕೊಳವೆಬಾವಿ ನಿರ್ಮಿಸಿ ವಿದ್ಯುತ್ ಸಂಪರ್ಕ ನೀಡದಿರುವ ಪ್ರಕರಣಗಳನ್ನು ತಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಪಟ್ಟಣದ ಹೊಯ್ಸಳ ಕ್ರೀಡಾಂಗಣ ಸೇರಿದಂತೆ ಹಲವು ಕಡೆ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುತ್ತಿದ್ದರೂ ಕ್ರೀಡಾಂಗಣದಲ್ಲಿ ಮಾತ್ರ ಇದುವರೆಗೆ ಅಳವಡಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪಿಡಬ್ಲ್ಯೂಡಿ ಅಧಿಕಾರಿಗಳು ಇನ್ನು ಒಂದು ವಾರದೊಳಗೆ ಹೊಯ್ಸಳ ಕ್ರೀಡಾಂಗಣದಲ್ಲಿ ಹೈಮಾಸ್ಟ್ ದೀಪ ಅಳವಡಿಸಬೇಕು. ಜನಪ್ರತಿನಿಧಿಗಳು ಪ್ರತಿಯೊಂದು ಕೆಲಸಕ್ಕೂ ಖುದ್ದಾಗಿ ಬಂದು ನಿಲ್ಲುವ ಪರಿಸ್ಥಿತಿ ಬರಬಾರದು ಎಂದು ತಾಕೀತು ಮಾಡಿದರು.
ಎಂಜಿಎಂ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರ ಕೊರತೆ
ಬೆಟ್ಟಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಹಾಗೂ ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಿಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶ್ವತ್ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಪ್ರಿಯಾಂಕ ಸಭೆಗೆ ತಿಳಿಸಿದರು. ಎಂಜಿಎಂ ಆಸ್ಪತ್ರೆಯಲ್ಲಿ ಇತರ ವೈದ್ಯರು ಲಭ್ಯವಿದ್ದರೂ ಅರವಳಿಕೆ ತಜ್ಞರಿಲ್ಲದ ಕಾರಣ ಸಿಜೆರಿಯನ್ ಸೇರಿದಂತೆ ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಗರ್ಭಿಣಿಯರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಡೂರಿನಿಂದ ವಾರದಲ್ಲಿ 2 ದಿನ ವೈದ್ಯರನ್ನು ನಿಯೋಜಿಸಿದ್ದರೂ ಅವರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಕೇಂದ್ರವಿದ್ದರೂ ವೈದ್ಯರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಕಾರಣ ಬಡ ರೋಗಿಗಳು ಹೊರಗಡೆ ಹಣ ನೀಡಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತಾಗಿದೆ ಎಂದು ಸಮಸ್ಯೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ನಯನಾ ಮೋಟಮ್ಮ, ಜಿಲ್ಲಾ ಆರೋಗ್ಯಾಧಿಕಾರಿಯೊಂದಿಗೆ ಮಾತನಾಡಿ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಹಾಗೂ ಅರವಳಿಕೆ ತಜ್ಞರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮೂಡಿಗೆರೆ ತಾ.ಪಂ. ಇಒ ಗಿರೀಶ್, ಆಡಳಿತಾಧಿಕಾರಿ, ರವಿಪ್ರಸಾದ್, ತಾ.ಪಂ. ಇಒ ಸುದೀಪ್, ಆಡಳಿತಾಧಿಕಾರಿ ಆನಂದ, ಮೂಡಿಗೆರೆ ತಹಸೀಲ್ದಾರ್ ಎಸ್. ಅಶ್ವಿನಿ, ಕಳಸ ತಹಸೀಲ್ದಾರ್ ಮಂಜುನಾಥ್, ಕೆಡಿಪಿ ಸದಸ್ಯ ಗೋಪಾಲ, ಅಬ್ದುಲ್ ಸುಕೂರ್. ಕುನ್ನಳ್ಳಿ ರವಿ, ಸಂಪತ್ ಕುಮಾರ್, ಸುರೇಂದ್ರ ಉಗ್ಗೇಹಳ್ಳಿ ಇದ್ದರು.

