ಭಾರತೀಯ ಕಾಫಿ ಮಂಡಳಿಗೆ ಹೊಸ ರೂಪ ನೀಡಿದ್ದಲ್ಲದೆ ಕಾಫಿ ಬೆಳೆಗಾರರ ಬೆನ್ನಿಗೆ ನಿಂತ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರ ಅಧಿಕಾರವಧಿ ನವೆಂಬರ್ ಗೆ ಮುಗಿಯಲಿದ್ದು, ಮುಂದಿನ ಅವಧಿಗೂ ದಿನೇಶ್ ಅವರನ್ನೇ ಮುಂದುವರಿಸಬೇಕು ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಮುಖಂಡ ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ…….
1 min read
ಎಂ.ಜೆ.ದಿನೇಶ್ ಅವರನ್ನೇ ಮುಂದುವರಿಸಿ
ಚಿಕ್ಕಮಗಳೂರು: ಭಾರತೀಯ ಕಾಫಿ ಮಂಡಳಿಗೆ ಹೊಸ ರೂಪ ನೀಡಿದ್ದಲ್ಲದೆ ಕಾಫಿ ಬೆಳೆಗಾರರ ಬೆನ್ನಿಗೆ ನಿಂತ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರ ಅಧಿಕಾರವಧಿ ನವೆಂಬರ್ ಗೆ ಮುಗಿಯಲಿದ್ದು, ಮುಂದಿನ ಅವಧಿಗೂ ದಿನೇಶ್ ಅವರನ್ನೇ ಮುಂದುವರಿಸಬೇಕು ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಮುಖಂಡ ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ.
ದಿನೇಶ್ ಅವರು ಕಾಫಿ ಮಂಡಳಿ ಅಧ್ಯಕ್ಷರಾದ ಬಳಿಕ ಕಾಫಿ ಉದ್ಯಮಕ್ಕೆ ಬಲ ತುಂಬುವ ಕೆಲಸ ಮಾಡಿದ್ದಾರೆ. ಇದಲ್ಲದೆ ಭಾರತೀಯ ಕಾಫಿಯನ್ನು ಬ್ರಾಂಡ್ ಮಾಡುವ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತರಾಗಿದ್ದಾರೆ. ಜೊತೆಗೆ ಕಾಫಿ ಮಂಡಳಿಯಲ್ಲಿ 32ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಈ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದರೆ ದಿನೇಶ್ ಮತ್ತೊಂದು ಅವಧಿಗೆ ಅಧ್ಯಕ್ಷರಾಗಬೇಕು ಎಂದು ಹೇಳಿದ್ದಾರೆ.
ಕಾಫಿ ಬೆಳೆಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆ ಬಗ್ಗೆಯೂ ದಿನೇಶ್ ದೇವವೃಂದ ಅವರ ಅವಧಿಯಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಕಾಫಿ ಮಂಡಳಿಯ ವಿಜ್ಞಾನಿಗಳು ಸಹ ದಿನೇಶ್ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿನೇಶ್ ಅವರಿಗೆ ಇನ್ನೊಂದು ಅವಧಿಗೆ ಅಧ್ಯಕ್ಷ ಸ್ಥಾನ ಸಿಕ್ಕಲ್ಲಿ ಕಾಫಿ ಬೆಳೆಗಾರರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಕಾಫಿ ಇಳುವರಿ ಹೆಚ್ಚಳಕ್ಕೂ ದಿನೇಶ್ ದೇವವೃಂದ ಅವಧಿಯಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಇದಲ್ಲದೆ ನಾಗಾಲ್ಯಾಂಡ್, ಅಸ್ಸಾಂ, ಆಂಧ್ರ ಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಸ ಮಾಡಿ ಕಾಫಿ ಬೆಳೆಯ ಬಗ್ಗೆ ಅಲ್ಲಿನ ಸರ್ಕಾರಗಳ ಗಮನ ಸೆಳೆದಿದ್ದರಿಂದಾಗಿ ಅಲ್ಲಿನ ಸರ್ಕಾರಗಳು ಬೆಳೆಗಾರರಿಗೆ ಭೂಮಿ ನೀಡಿ ಕಾಫಿ ಬೆಳೆಯಲು ಉತ್ತೇಜನ ನೀಡುತ್ತಿವೆ. ಹೀಗೆ ಕಾಫಿ ಉದ್ಯಮದಿಂದ ಹಿಡಿದು ಬೆಳೆಗಾರರಿಗೂ ಅನುಕೂಲ ಒದಗಿಸುತ್ತಿದ್ದಾರೆ. ಇದಲ್ಲದೆ ರಾಜ್ಯ ಸೇರಿದಂತೆ ಕೇಂದ್ರ ಸಚಿವರನ್ನು ನೇರವಾಗಿ ಭೇಟಿ ಮಾಡಿ ಕಾಫಿ ಉದ್ಯಮದ ಉನ್ನತಿಗೆ ಶ್ರಮಿಸುತ್ತಿರುವ ದಿನೇಶ್ ದೇವವೃಂದ ಅವರನ್ನು ಇನ್ನೊಂದು ಅವಧಿಗೆ ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.

