लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
27/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರಮದಾನ 3……

ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಒಂದು ದಿನ……

ಮೊದಲೇ ನಿರ್ಧಾರವಾದಂತೆ ಶ್ರಮದಾನದ ಮೂರನೇ ಉದ್ಯೋಗವಾಗಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದ ನನ್ನ ಆತ್ಮೀಯ ಮಿತ್ರರಾದ ಶ್ರೀ ಯುವರಾಜ್ ಅವರ ಕಡೆಯಿಂದ ಬೆಂಗಳೂರಿನ ಲಾಲ್ಬಾಗ್ ಬಳಿ ಇರುವ ಲಿಯಾಂಡ್ರೋ ಫ್ಯಾಷನ್ಸ್ ( Leandro Fashions ) ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಹೋದೆ.
ಶ್ರೀ ಶ್ರೀನಿವಾಸ್ ಮತ್ತು ಶ್ರೀ ನವೀನ್ ಅವರು.ಅದರ ಮಾಲೀಕರು. ಶ್ರೀನಿವಾಸ್ ಅವರು ಎಲ್ಲಾ ವ್ಯವಸ್ಥೆ ಮಾಡಿ ಅವರ ಮ್ಯಾನೇಜರ್ ಗೆ ಹೇಳಿದ್ದರು ಮತ್ತು ಪಾರ್ಟ್ನರ್ ನವೀನ್ ಅವರಿಗೂ ಮಾಹಿತಿ ನೀಡಿದ್ದರು.

ಕಳೆದ ಶ್ರಮದಾನ ಒಂದು ಮತ್ತು ಎರಡು ಮಾಡುವಾಗ ದೈಹಿಕ ಶ್ರಮವಾಹಿತೇ ಹೊರತು ಮಾನಸಿಕವಾಗಿ ನಾನು ಕಾರ್ಮಿಕ ಎಂಬ ಭಾವನೆ ಉಂಟಾಗಲಿಲ್ಲ. ಕಾರಣ ಆ ಎರಡೂ ಸಂದರ್ಭದಲ್ಲಿ ನನ್ನ ಆತ್ಮೀಯ ಮಿತ್ರರೇ ನನ್ನ ಜೊತೆ ಇದ್ದಿದ್ದರಿಂದ ಆ ಅವಕಾಶ ದೊರೆಯಲಿಲ್ಲ. ಆದರೆ ಈ ಬಾರಿ ಅಲ್ಲಿನ ಕೆಲಸಗಾರರಿಗೆ ನಾನು ಯಾರು, ಯಾವ ಉದ್ದೇಶದಿಂದ ಬಂದಿದ್ದೇನೆ ಎಂಬುದರ ಅರಿವಿರಲಿಲ್ಲ. ನಮ್ಮಲ್ಲಿ ಹೊಸ ಉದ್ಯೋಗಿಯಾಗಿ ಒಬ್ಬ ಬಂದಿದ್ದಾನೆ ಎಂಬುದಷ್ಟೇ ಅವರಿಗೆ ಗೊತ್ತಿತ್ತು.

ನನಗೆ ಶರ್ಟ್ ಗಳನ್ನು ಪ್ಯಾಕಿಂಗ್ ಮಾಡುವ ವಿಭಾಗದಲ್ಲಿ ಉದ್ಯೋಗಕ್ಕೆ ನಿಯೋಜಿಸಲಾಯಿತು. ಬಹುತೇಕ ಅಲ್ಲಿದ್ದವರು ತಮಿಳು ಭಾಷಿಕ ಮತ್ತು ಮುಸ್ಲಿಂ ಮಹಿಳಾ ಸಹೋದರಿಯರೇ ಆಗಿದ್ದರು. ಕೆಲವು ಪುರುಷ ಕೆಲಸಗಾರರು ಇದ್ದರು.

ಮೊದಮೊದಲು ಪ್ಯಾಕಿಂಗ್ ಮಾಡುವ ರೀತಿಯನ್ನು ನೋಡಿಕೊಂಡೆ. ಪ್ರಾರಂಭದಲ್ಲಿ ಸ್ವಲ್ಪ ಕಷ್ಟವಾದರೂ ಹತ್ತು ಪ್ಯಾಕಿಂಗ್ ಮುಗಿಯುವಷ್ಟರಲ್ಲಿ ಒಂದು ಹಂತಕ್ಕೆ ಕೆಲಸ ತಿಳಿಯಿತು. ಕೆಲಸವನ್ನು ನಿಂತುಕೊಂಡೇ ಮಾಡಬೇಕಾಗಿತ್ತು. ಬೆಳಗ್ಗೆ ಸುಮಾರು 11:30ಕ್ಕೆ ಕೆಲಸ ಪ್ರಾರಂಭಿಸಿದೆ.

ಎಂದಿನಂತೆ ನನ್ನ ಸಹಪಾಠಿ ಕೆಲಸಗಾರರಾದ ತಮಿಳು ಭಾಷೆಯ ಹಿರಿಯ ಸಹೋದರಿ ನೀನು ಯಾರು, ಎಲ್ಲಿಂದ ಬಂದೆ, ಯಾವ ಊರು, ಮಕ್ಕಳೆಷ್ಟು, ಹೆಂಡತಿ ಮಗ ಏನು ಮಾಡುತ್ತಿದ್ದಾರೆ, ಇದಕ್ಕೆ ಮೊದಲು ಏನು ಮಾಡುತ್ತಿದ್ದೆ, ಅದನ್ನು ಯಾಕೆ ಬಿಟ್ಟೆ, ಇಲ್ಲಿ ಎಷ್ಟು ಸಂಬಳಕ್ಕೆ ಮಾತನಾಡಿದ್ದೀಯ, ನಿನ್ನ ಮನೆಯಿಂದ ಇಷ್ಟು ದೂರ ಹೇಗೆ ಬರುತ್ತೀಯ, ಊಟದ ವ್ಯವಸ್ಥೆ ಏನು ಮಾಡಿಕೊಂಡಿದ್ದೀಯ ಇತ್ಯಾದಿ ಇತ್ಯಾದಿ ಸಹಜ ಪ್ರಶ್ನೆಗಳನ್ನು ಕೇಳುತ್ತಾ ಇದ್ದರು. ನನ್ನೊಂದಿಗೆ ಅವರೂ ಕೆಲಸ ಮಾಡುತ್ತಿದ್ದರು. ಇನ್ನೂ ಇತರ ವಾಷಿಂಗ್, ಡ್ರೈಯಿಂಗ್, ಐರನಿಂಗ್, ಖಾಜಾ ಗುಂಡಿ, ಸ್ಟಿಚಿಂಗ್, ಟ್ಯಾಗಿಂಗ್ ಮುಂತಾದ ಕೆಲಸದ ಹೆಣ್ಣುಮಕ್ಕಳು, ಪುರುಷ ಕಾರ್ಮಿಕರು ಅವರದೇ ಕೆಲಸದಲ್ಲಿ ನಿರತರಾಗಿದ್ದರು.

ಒಂದು ಬಾಕ್ಸ್ ತುಂಬುತ್ತಿದ್ದಂತೆ ಮತ್ತೊಂದು ಬಾಕ್ಸ್ ತಂದಿಡುತ್ತಿದ್ದರು. ಈ ಕೆಲಸದ ಜೊತೆ ಮತ್ತೆ ಬೇರೆ ಕೆಲಸವನ್ನು ಹೇಳುತ್ತಿದ್ದರು. ನಾನು ಸದ್ಯ ಈ ಕೆಲಸ ಮಾಡುತ್ತೇನೆ, ನಾಳೆಯಿಂದ ಅದನ್ನು ಮಾಡುತ್ತೇನೆ ಎಂದಾಗ ಹಾಗೆಲ್ಲ ನೀನು ಮಾತನಾಡಬಾರದು, ನಾವು ಹೇಳಿದ ಕೆಲಸ ಮಾಡಬೇಕು ಎನ್ನುತ್ತಿದ್ದರು. ನನಗೆ ಕೆಲಸ ತಪ್ಪಾದರೆ ನನ್ನಿಂದ ಮಾಲೀಕರಿಗೆ ನಷ್ಟವಾಗಬಹುದು ಎನ್ನುವ ಆತಂಕ. ನಾನು ಆಗಾಗ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆ ಇಲ್ಲಿ ಸಿಸಿಟಿವಿ ಇದೆ. ಹಾಗೆಲ್ಲ ಮಾತನಾಡಿದರೆ ಓನರ್ ನಿಮ್ಮನ್ನು ಆಚೆ ಕಳಿಸುತ್ತಾರೆ. ನಾವ್ಯಾರು ಇಲ್ಲಿ ಮೊಬೈಲ್ ಉಪಯೋಗಿಸುವುದಿಲ್ಲ ಎಂದರು. ಅದಕ್ಕೆ ನಾನು ಇದು ಮೊದಲನೆಯ ದಿನ, ನಾಳೆಯಿಂದ ಹಾಗೆ ಮಾಡುವುದಿಲ್ಲ ಎಂದು ಮನವಿ ಮಾಡಿಕೊಂಡೆ.

ನಾನು ಅಲ್ಲಿನ ಮಾಲೀಕರ ಅನುಮತಿ ಪಡೆದೇ ಫೇಸ್ಬುಕ್ ಲೈವ್ ಮಾಡಿದೆ. ಆದರೆ ಕೆಲಸಗಾರನೊಬ್ಬ ಈ ರೀತಿ ಮೊಬೈಲಲ್ಲಿ ರೆಕಾರ್ಡ್ ಮಾಡುತ್ತಿರುವುದು ಅಲ್ಲಿನ ಅವಿವಾಹಿತ ಮುಸ್ಲಿಂ ಮಹಿಳೆಯರಿಗೆ ಕೋಪ ತರಿಸಿತು. ಅವರು ನೀನು ಕೆಲಸ ಮಾಡಲಿಕ್ಕೆ ಬಂದಿರುವುದು. ಹಾಗೆಲ್ಲ ಈ ರೀತಿ ವಿಡಿಯೋ ವೈರಲ್ ಮಾಡಬೇಡ. ನಮ್ಮ ಜೀವನಕ್ಕೆ ತೊಂದರೆಯಾಗುತ್ತದೆ. ನಾವು ಕೆಲಸ ಮಾಡುವುದು ನಮ್ಮ ಹತ್ತಿರದ ಬಂಧುಗಳಿಗೆ ಗೊತ್ತಿರುವುದಿಲ್ಲ. ವಿಡಿಯೋ ವೈರಲ್ ಆದರೆ ನಮ್ಮ ಮದುವೆಗೆ ಕಷ್ಟ ಆಗಬಹುದು ಎಂದು ಕೋಪದಿಂದಲೇ ಹೇಳಿದರು.

ಆದರೆ ನನಗೆ ಕೋಪ ಬರಲಿಲ್ಲ. ವಾಸ್ತವ ಅರ್ಥವಾಯಿತು. ನನ್ನ ಪ್ರಚಾರಕ್ಕೆ, ನನ್ನ ಅನುಕೂಲಕ್ಕಾಗಿ ಈ ರೀತಿ ವಿಡಿಯೋ ಮಾಡುವುದು ತಪ್ಪು ಎಂದು ನನಗೆ ತಿಳಿಯಿತು. ಅವರು ಹೇಳುವ ಮೊದಲೇ ನಾನು ಎಷ್ಟು ಲೈವ್ ಮಾಡಿದ್ದನೋ ಅಷ್ಟಕ್ಕೆ ಮುಗಿಸಿದೆ. ಮುಂದೆ ಸಂಜೆಯವರೆಗೂ ಯಾವುದೇ ಲೈವ್ ಅಥವಾ ಫೋಟೋ ತೆಗೆದುಕೊಳ್ಳಲು ಹೋಗಲಿಲ್ಲ. ಸಮಯ ಸಿಕ್ಕಾಗ ಅವರಿಗೆ, ಇಲ್ಲ ನಾನು ನನ್ನ ದಾಖಲೆಗಾಗಿ ಮಾತ್ರ ಮಾಡಿಕೊಂಡೆ. ಇದರಿಂದ ಹೆಚ್ಚು ತೊಂದರೆ ಏನಿಲ್ಲ. ನೀವು ಕಾಣುವುದಿಲ್ಲ. ನಾನು ವೈರಲ್ ಮಾಡುವವನಲ್ಲ ಎಂದು ಸಮಾಧಾನಪಡಿಸಿದೆ. ಜೊತೆಗೆ ವಿಡಿಯೋದಲ್ಲಿ ಯಾರನ್ನೂ ಹೆಚ್ಚಿಗೆ ಹೈಲೈಟ್ ಮಾಡದಿರುವುದು ನನ್ನ ಗಮನಕ್ಕೆ ಬಂತು.

ಯಾರ್ಯಾರ ಕಷ್ಟ ಏನೇನಿರುತ್ತದೋ. ನಾವು ನಮ್ಮ ಲಾಭವನ್ನಷ್ಟೇ ನೋಡಿದರೆ ತಪ್ಪಾಗುತ್ತದೆ. ನಂತರ ಅವರೊಂದಿಗೆ ಚಿಕ್ಕದಾಗಿ ಮಾತನಾಡಿಕೊಂಡು, ಕೆಲಸ ಮಾಡಿ ಎರಡು ಗಂಟೆ ಕಳೆದ ನಂತರ 1/30 ರಿಂದ 2 ಗಂಟೆಯವರೆಗೆ ಊಟದ ವಿರಾಮ ಕೊಟ್ಟರು. ಸರಿಯಾಗಿ ಎರಡು ಗಂಟೆಗೆ ಮತ್ತೆ ಕೆಲಸಕ್ಕೆ ಹಾಜರಾಗಲು ಎಚ್ಚರಿಸಿದರು. ಆ ಸಮಯದಲ್ಲಿ ನಾನು ಅಲ್ಲಿಯೇ ಇದ್ದ ಹೋಟೆಲ್ ನಲ್ಲಿ ಅನ್ನ ಸಾಂಬರ್ ತಿಂದು, ಸರಿಯಾಗಿ ಎರಡು ಗಂಟೆಗೆ ವಾಪಸ್ ಬಂದು ಕೆಲಸ ಪ್ರಾರಂಭಿಸಿದೆ.

ಸಂಜೆ 6/30 ವರೆಗೂ ನಿರಂತರವಾಗಿ ಕೆಲಸ ಮಾಡಿದೆ. ಈ ಮಧ್ಯೆ ಕಾರ್ಖಾನೆಯ ಸಹ ಮಾಲೀಕರಾದ ನವೀನ್ ಅವರು ಬಂದು ನನ್ನ ಜೊತೆ ಕೆಲಸ ಮಾಡುತ್ತಾ ಒಂದರ್ಧ ಗಂಟೆ ಮಾತನಾಡಿದರು. ಆಗ ನನ್ನ ಸಹ ಕೆಲಸಗಾರರಿಗೆ ಸ್ವಲ್ಪ ಅನುಮಾನ ಬಂತು. ಅವರು ಹೋದಮೇಲೆ ಇವರು ನಿಮಗೆ ಹೇಗೆ ಪರಿಚಯ, ಅದು ಹೇಗೆ ಅಷ್ಟೊಂದು ಸಲುಗೆಯಿಂದ ಮಾತನಾಡುತ್ತಿಯ ಎಂದು ಕೇಳಿದರು. ನಾನು ಇಲ್ಲ ಸುಮ್ಮನೆ ಹೀಗೆ ಎಂದು ಉತ್ತರಿಸಿದೆ. ಸಂಜೆ ಸುಮಾರು 5:00ರ ಸಮಯಕ್ಕೆ ಇನ್ನೊಬ್ಬ ನನ್ನ ಮಿತ್ರ ಮತ್ತು ಕಂಪನಿಯ ಮಾಲೀಕರಾದ ಶ್ರೀನಿವಾಸ್ ಅವರು ಬಂದು ನನ್ನನ್ನು ಅವರ ಚೇಂಬರ್ ಗೆ ಕರೆದುಕೊಂಡು ಹೋಗಿ ಕಾಫಿ ಕೊಟ್ಟು ಮಾತನಾಡಿಸಿದರು. 15 ನಿಮಿಷದ ನಂತರ ಮತ್ತೆ ಕೆಲಸಕ್ಕೆ ಹಾಜರಾದಾಗ ಅಲ್ಲಿನ ನೌಕರರಿಗೆ ಮತ್ತಷ್ಟು ಅನುಮಾನ ಬಂತು. ಇದೇನಿದು ಈ ಪ್ಯಾಕಿಂಗ್ ಕೆಲಸಗಾರನಿಗೆ ಓನರ್ಗಳು ಇಷ್ಟೊಂದು ಮರ್ಯಾದೆ ಕೊಡುತ್ತಿದ್ದಾರೆ ಎಂದು ಮತ್ತೆ ಕೇಳಿದರು, ನೀವು ಯಾರು ಎಂದು. ನಾನು ಹೆಚ್ಚಿಗೆ ಏನು ಹೇಳಲಿಲ್ಲ. ಹಿಂದೆ ಬೇರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಇಲ್ಲೇ ಮಾಡುತ್ತೇನೆ ಎಂದು ಹೇಳಿದೆ.

ಸುಮಾರು ಸಂಜೆ 6:00 ಗಂಟೆಯ ಹೊತ್ತಿಗೆ ಪ್ಯಾಕಿಂಗ್ ಕೆಲಸ ಮುಗಿಯಿತು. ನಾನು ಶ್ರೀನಿವಾಸ್ ಅವರ ಚೇಂಬರ್ ಗೆ ಹೋಗಿ ಕುಳಿತೆ. ಕೆಲಸದ ಅವಧಿ 7 ಗಂಟೆಯವರೆಗೂ ಇತ್ತು. ಆರು ಮೂವತ್ತಕ್ಕೆ ಅಲ್ಲಿ ಉಳಿದಿದ್ದ 15ರಷ್ಟು ನೌಕರರನ್ನು ಸೇರಿಸಿ ನಾನು ಅವರ ಬಳಿ 10 ನಿಮಿಷ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದೆ. ಶ್ರೀನಿವಾಸ್ ಮತ್ತು ನವೀನ್ ಅವರು ಆ ವ್ಯವಸ್ಥೆ ಮಾಡಿದರು.

ಆಗ ನಾನು ಅಲ್ಲಿನ ಕೆಲಸಗಾರರ ಬಳಿ ನನ್ನ ಪರಿಚಯ ಮಾಡಿಕೊಂಡು, ನನ್ನ ಉದ್ದೇಶವನ್ನು ತಿಳಿಸಿದೆ. ಎಲ್ಲರಿಗೂ ತುಂಬಾ ಆಶ್ಚರ್ಯವಾಯಿತು. ಜೊತೆಗೆ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಉಳಿವಿಗಾಗಿ ನಾವೆಲ್ಲ ಏನು ಮಾಡಬೇಕು ಎಂಬುದನ್ನು ಹೇಳಿದಾಗ ತುಂಬಾ ಸಂತೋಷಪಟ್ಟು ನನ್ನನ್ನು ಬೀಳ್ಕೊಟ್ಟರು. ಮಾಲೀಕರಾದ ಶ್ರೀನಿವಾಸ್ ಅವರು ನನ್ನನ್ನು ಅವರದೇ ವಾಹನದಲ್ಲಿ ಯುವರಾಜ್ ಅವರ ಒಂದು ನಿಶ್ಚಿತ ಪ್ರದೇಶಕ್ಕೆ ತಲುಪಿಸಿ ಹೊರಟು ಹೋದರು.

ಯಾವುದೇ ಒಂದು ದಿನದ ಕೆಲಸದ ಅನುಭವ ಇದ್ದಕ್ಕಿದ್ದಂತೆ ಏನೋ ಕೊಡುವುದಿಲ್ಲ. ಅದೆಲ್ಲ ಸಹಜವಾಗಿ ಆಗುತ್ತದೆ. ನಾನು ನಿಜವಾಗಲೂ ಹೊಟ್ಟೆಪಾಡಿಗಾಗಿ ಆ ಕೆಲಸ ಮಾಡುತ್ತಿದ್ದರೆ ಆಗಿನ ನನ್ನ ಭಾವನೆಯೇ ಬೇರೆ ಇರುತ್ತಿತ್ತು. ಒಂದು ಅನುಭವಕ್ಕಾಗಿ ಹೋಗಿರುವುದರಿಂದ ಈ ಅನುಭವವೇ ಬೇರೆ ಇರುತ್ತದೆ. ಬರೆಯಲೇಬೇಕು, ಹೇಳಲೇಬೇಕೆಂದು ಏನೇನೋ ಹೇಳುವುದು ಅಷ್ಟು ಸರಿ ಎನಿಸುವುದಿಲ್ಲ. ಅಲ್ಲಿನ ಕಾರ್ಮಿಕರ ನೋವು ನಲಿವುಗಳು, ಮಾಲೀಕರ ಒತ್ತಡಗಳು ಸಹಜವಾಗಿಯೇ ಒಂದಷ್ಟು ಅನುಭವಕ್ಕೆ ಬಂದಿದೆ. ಬದುಕಿನ ಈ ಪಯಣದಲ್ಲಿ ಇವೆಲ್ಲವೂ ಪ್ರಜ್ಞಾಪೂರ್ವಕವಾಗಿ, ಸಹಜವಾಗಿ ನಡೆಯುತ್ತಿದ್ದರೆ ಅದೊಂದು ಉತ್ತಮ ಅನುಭವವಾಗಬಲ್ಲದು. ಯಾವುದೋ ಒಂದು ಸಾಮಾಜಿಕ ಜಾಲತಾಣದ ಪ್ರಚಾರಕ್ಕಾಗಿ, ಬರಹಕ್ಕಾಗಿ ವಿಷಯವನ್ನು ಗ್ರಹಿಸಿದರೆ ಅದು ಮತ್ತೆ ಟೊಳ್ಳಾಗಬಹುದು. ಏನೇ ಆಗಲಿ ಶ್ರಮದಾನದ ಅನುಭವ ಒಂದಷ್ಟು ಆಂತರ್ಯದ ಪರಿವರ್ತನೆಗೆ ಕಾರಣವಾದರೆ ನನ್ನ ಶ್ರಮ ಸಾರ್ಥಕವಾಗದಂತೆ….

ಮುಂದಿನ ಶ್ರಮದಾನ ನನ್ನ ಮತ್ತೊಬ್ಬ ಆತ್ಮೀಯ ಸ್ನೇಹಿತರ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಹೋಟೆಲ್ ನಲ್ಲಿ. ಮುಂದಿನ ಭಾನುವಾರ ಅಂದರೆ 30/08/2026. ನೋಡೋಣ ಮತ್ತೊಂದು ಅನುಭವದೊಂದಿಗೆ ನಿಮ್ಮ ಮುಂದೆ ಬರುತ್ತೇನೆ….

ಒಳಗಿನ ಅನುಭವಗಳು ದಾಖಲಾಗುತ್ತಾ ಹೋಗುತ್ತದೆ. ಅದು ಮತ್ತೊಂದು ರೂಪದಲ್ಲಿ ಪ್ರಕಟವಾಗುವ ಸಮಯಕ್ಕಾಗಿ ಕಾಯಬೇಕು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

About Author

More Stories

Leave a Reply

Your email address will not be published. Required fields are marked *

You may have missed