ನೀರಿನ ಮೇಲೆ ತೇಲುತ್ತಾ ಯೋಗ ಭಂಗಿ ಪ್ರದರ್ಶನ…
1 min read
ನೀರಿನ ಮೇಲೆ ತೇಲುತ್ತಾ ಯೋಗ ಭಂಗಿ ಪ್ರದರ್ಶನ
ಚಿಕ್ಕಮಗಳೂರು: ಯೋಗ ಸಾಧಕ ನಗರದ ವಕೀಲ ಹಾಗೂ ನೋಟರಿ ವಿ.ಕೆ.ರಘು ಅವರು ಭಾನುವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನೀರಿನ ಮೇಲೆ ತೇಲುತ್ತಾ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿದರು.
ಬೈಪಾಸ್ ರಸ್ತೆಯ ನರ್ಚರ್ ಶಾಲೆ ಹಿಂಭಾಗದ ಅನ್ನಪೂರ್ಣ ಫಿಟೈಸ್ ಅಕಾಡೆಮಿಯ ಈಜು ಕೊಳದಲ್ಲಿ ಸತತ ಅರ್ಧಗಂಟೆಗು ಹೆಚ್ಚು ಕಾಲ ತಲಾ 108 ಬಾರಿ ಶ್ರೀ ಆಂಜನೇಯ ಹಾಗೂ ಶ್ರೀ ರಾಮನಾಮವನ್ನು ಜಪಿಸುತ್ತ ಪದ್ಮಾಸನ, ಶಲಬಾಸನ, ವಜ್ರಾಸನ ಸೇರಿದಂತೆ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ನೋಡುಗರ ಹುಬ್ಬೇರಿಸುವಂತೆ ಮಾಡಿದರು.ಸತತ 35 ವರ್ಷಗಳಿಂದ ಯೋಗಾಭ್ಯಾಸದಲ್ಲಿ ತೊಡಗಿರುವ ಅವರು, ನೀರಿನ ಮೇಲೆ ತೇಲುತ್ತಾ ಅತಿಹೆಚ್ಚು ಸಮಯ ಯೋಗ ಪ್ರದರ್ಶಿಸಿ ವಿಶ್ವದಾಖಲೆ ನಿರ್ಮಿಸಬೇಕು ಎನ್ನುವ ಸಂಕಲ್ಪ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಧನೆಯನ್ನು ಗುರುತಿಸಿ 2023 ರಲ್ಲಿ ಅಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರಸಂಶಿಸಿದ್ದಾರೆ. 2024 ರಲ್ಲಿ ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪುರಸ್ಕರಿಸಿವೆ.
ನೀರಿನ ಮೇಲೆ ತೇಲುತ್ತ ಯೋಗಾಸನ ಮಾಡುವುದು ಕಠಿಣ ಎಂದು ಕಾಣಿಸುತ್ತದೆ. ಆದರೆ ಅಭ್ಯಾಸ ಮಾಡಿಕೊಂಡರೆ ತುಂಬಾ ಸರಳ ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೂ ಬಹಳ ಉಪಕಾರಿ ಎಂದರು.
ನೀರಿನಲ್ಲಿ ತೇಲುತ್ತಾ ಯೋಗಾಸನ ಮಾಡುವವರ ಸಂಖ್ಯೆ ತುಂಬಾ ಕಡಿಮೆ. ಇದನ್ನು ಕಲಿಯಲು ಆಸಕ್ತಿ ಇದ್ದವರು ಮುಂದೆ ಬಂದರೆ ತರಬೇತಿ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

