लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪ್ರತಿಭೆ ಪರಿಶ್ರಮ ಬದ್ಧತೆಗೆ ದೊರೆತ ಮಾನ್ಯತೆ: ಅಂತರಾಷ್ಟ್ರೀಯ ವೇದಿಕೆಯಲ್ಲಿ ಆಲ್ದೂರಿನ ಅವಿನಾಶ್ ಬಿ ಮೃತ್ಯುಂಜಯ…..

1 min read

ಅವಿನ್ ಟಿವಿ ಸುದ್ದಿಜಾಲ ✍️: ಪ್ರತಿಭೆ ಪರಿಶ್ರಮ ಬದ್ಧತೆಗೆ ದೊರೆತ ಮಾನ್ಯತೆ: ಅಂತರಾಷ್ಟ್ರೀಯ ವೇದಿಕೆಯಲ್ಲಿ ಆಲ್ದೂರಿನ ಅವಿನಾಶ್ ಬಿ ಮೃತ್ಯುಂಜಯ.

ಚಿಕ್ಕಮಗಳೂರು ಜೂನ್ ೦೨ : ಕಂಚಿನ ಕಂಠದೊಂದಿಗೆ ಜನಮುಖಿ ಚಿಂತನೆಯ ಸಂವಾದಿಯಾಗಿದ್ದ ಬಹುಮುಖ ವ್ಯಕ್ತಿತ್ವದ ಆಲ್ದೂರು ಸಮೀಪದ ತೋಟದ ಮನೆಯ ದಿ.ಮೃತ್ಯುಂಜಯ ಮತ್ತು ಅವರ ಮಡದಿ ವನಮಾಲ ಮೃತ್ಯುಂಜಯ ಅವರು ಎಂದಿಗೂ ಮಕ್ಕಳಿಗಾಗಿ ಆಸ್ತಿ ಮಾಡಲು ಹೊರಟವರಲ್ಲ, ಆದರೆ ಈ ದಂಪತಿಗಳು ತಮ್ಮ ಮಕ್ಕಳನ್ನೇ ಆಸ್ತಿ ಮಾಡಬೇಕೆಂಬ ಆಶಯ ಹೊಂದಿದವರು, ಇಂತಹ ಆದರ್ಶ ದಂಪತಿಗಳ ಪುತ್ರರೇ ಅವಿನಾಶ್ ಮತ್ತು ಆಕರ್ಷ.

ಅವಿನಾಶ್ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ, ಮುಂದೆ ಮೈಸೂರು ವಿಶ್ವವಿದ್ಯಾಲಯದ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಪದವೀಧರ, ಸಾಹಿತ್ಯ ಸಂಸ್ಕೃತಿ, ಸಾಮರಸ್ಯದ ಹಿನ್ನೆಲೆಯುಳ್ಳ ತನ್ನ ಅಪ್ಪ ಅಮ್ಮನ ಅಭಿಲಾಷೆಯಂತೆ ಸ್ವಸಾಮರ್ಥ್ಯದಿಂದ ತನ್ನ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳುತ್ತಾ ಪರಿಶ್ರಮ ಮತ್ತು ಬದ್ಧತೆಯಿಂದ ವೃತ್ತಿ ಬದುಕನ್ನು ಕಟ್ಟಿಕೊಂಡು ಒಂದು ಸೃಜನಶೀಲತೆಯೊಂದಿಗೆ ಸಮಾಜವನ್ನು ನೋಡುವ ಮನಸುಳ್ಳ ಯುವಕ. ಇಂತಹ ಆಲ್ದೂರಿನ ಮಲೆನಾಡಿನ ನಮ್ಮ ಅವಿನಾಶ್ ಬಿ ಮೃತ್ಯುಂಜಯ ಈಗ ಅಂತರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ತರಬೇತಿಗಾಗಿ ಪಾಲ್ಗೊಳ್ಳುವ ಅವಕಾಶ ಪಡೆದಿರುವುದು ಯುವ ಸಮುದಾಯಕ್ಕೆ ಹೆಗ್ಗಳಿಕೆಯ ವಿಚಾರವಾಗಿದೆ.

ಚೀನಾದ ಬೀಜಿಂಗ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ BRICS+ ವಿಜ್ಞಾನ ಮತ್ತು ತಂತ್ರಜ್ಞಾನ ತರಬೇತಿ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆಯ ವನಮಾಲ ಮೃತ್ಯುಂಜಯ ಮತ್ತು ದಿವಂಗತ. ಮೃತ್ಯುಂಜಯ ದಂಪತಿಯ ಹಿರಿಯ ಪುತ್ರ ಬಿ.ಎಂ. ಅವಿನಾಶ್ ಅವರು ಈ ಜಾಗತಿಕ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಪ್ರಸ್ತುತ ದುಬೈನಲ್ಲಿ ಉದ್ಯೋಗಿಯಾಗಿರುವ ಇವರು ಜೂನ್ 3ರಿಂದ ಜೂನ್ 17ರವರೆಗೆ ಚೀನಾದ ಬೀಜಿಂಗ್‌ನಲ್ಲಿ “STI ಪಾರ್ಕ್ ಆಡಳಿತ ಮತ್ತು ಕ್ರಾಸ್-ಬಾರ್ಡರ್ ಇನ್ನೋವೇಶನ್ ಸಹಕಾರ” ಎಂಬ ವಿಷಯದ ಅಡಿಯಲ್ಲಿ ಈ ವಿಶೇಷ ತರಬೇತಿ ನಡೆಯಲಿದ್ದು, BRICS ಮತ್ತು “BRICS+” ರಾಷ್ಟ್ರಗಳಲ್ಲಿ ವಿಜ್ಞಾನ, ತಂತ್ರಜ್ಞಾನ ನೀತಿಗಳು ಹಾಗೂ ನಾವೀನ್ಯತೆ ಪರಿಸರ ವ್ಯವಸ್ಥೆಗಳ ಅಭಿವೃದ್ಧಿಗೆ ಇದು ಪ್ರಮುಖ ವೇದಿಕೆಯಾಗಿದೆ.

ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಂತರಾಷ್ಟ್ರೀಯ ಸಹಕಾರ ಇಲಾಖೆಯ ಬೆಂಬಲದೊಂದಿಗೆ ಬೀಜಿಂಗ್ ಅಂತರಾಷ್ಟ್ರೀಯ ವಿನಿಮಯ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ನೀತಿ ವಿನ್ಯಾಸ, ಪಾರ್ಕ್ ಆಡಳಿತ ಮತ್ತು ಗಡಿಯಾಚೆಗಿನ ತಂತ್ರಜ್ಞಾನ ಸಹಯೋಗವನ್ನು ಬಲಪಡಿಸುವ ಉದ್ದೇಶ ಹೊಂದಿರುವ ಈ ಜಾಗತಿಕ ವೇದಿಕೆಯಲ್ಲಿ ಯಲಗುಡಿಗೆಯ ಈ ಯುವಕ ಭಾಗವಹಿಸುತ್ತಿರುವುದು ಹೆತ್ತವರಿಗೆ ಮಾತ್ರವಲ್ಲ ಚಿಕ್ಕಮಗಳೂರು ಜಿಲ್ಲೆಗೆ ಅಪಾರವಾಗಿ ಹೆಮ್ಮೆ ಪಡುವ ವಿಷಯವಾಗಿದೆ.

ಪಶ್ಚಿಮ ಘಟ್ಟದ ಮಲೆನಾಡಿನ ಸೆರಗನ್ನು ಹಾಸಿ ಹೊದ್ದು ಮಲಗಿರುವ ಚಿಕ್ಕಮಗಳೂರು ಎಂಬ ಮಲೆನಾಡಿನ ಚಿಕ್ಕಮಗಳೂರು ಹಲವು ಕಾರಣಗಳಿಂದ ತನ್ನ ಪರಿಸರದ ಸಿರಿವಂತಿಕೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತಿದೆ. ಮಲೆನಾಡಿನ ಆಹಾರ ವಿಹಾರ ಸಂಸ್ಕೃತಿ ಇಲ್ಲಿನ ಮೂಲ ಜನ ಜೀವನ ತನ್ನ ಸ್ವಂತಿಕೆಯನ್ನು ಮರೆಯುತ್ತಾ ಸಾಗುತ್ತಿದೆ,ಅಂತರಾಷ್ಟ್ರೀಯ ಮಟ್ಟದಲ್ಲಿ ಪಡೆಯುತ್ತಿರುವ ತರಬೇತಿಯ ಪ್ರಯೋಜನವು ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಚಿಕ್ಕಮಗಳೂರಿನ ಮಲೆನಾಡಿನ ಅಳಿವು ಉಳಿವಿನ ಬಗ್ಗೆಯೂ ಉನ್ನತವಾಗಿ ಚಿಂತಿಸುವಂತಾಗಲಿ ಎಂಬುದು ನ್ಯೂಸ್ ಕಿಂಗ್ ಆಶಯ.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed