ಹೊಯ್ಸಳರ ಕಾಲದ ಎರಡು ಅಪ್ರಕಟಿತ ಜೈನತೀರ್ಥಂಕರ ವಿಗ್ರಹ ಪತ್ತೆ…
1 min read
ಹೊಯ್ಸಳರ ಕಾಲದ ಎರಡು ಅಪ್ರಕಟಿತ ಜೈನತೀರ್ಥಂಕರ ವಿಗ್ರಹ ಪತ್ತೆ
ದೇವಾಲಯದ ದೊಡ್ಡಪಟ್ಟಣಗೆರೆ:ಕಡೂರು ತಾಲ್ಲೂಕು ದೊಡ್ಡ ಪಟ್ಟಣಗೆರೆ ಗ್ರಾಮದ,ಕುರುಬಗೆರೆ-ಶ್ರೀ ಕಟ್ಟೆ ಹೊಳೆಯಮ್ಮ ದೇವ ಎಡಭಾಗದಲ್ಲಿ ಹರಿಯುವ ವೇದಾ ನದಿ ಪಾತ್ರದಲ್ಲಿ, ಇತಿಹಾಸ ಸಂಶೋಧಕ ಹೆಚ್.ಆರ್.ಪಾಂಡುರಂಗ ಅವರು ಹೊಯ್ಸಳರ ಕಾಲದ ಎರಡು ಅಪ್ರಕಟಿತ ಜೈನತೀರ್ಥಂಕರ ವಿಗ್ರಹಗಳನ್ನು ಶೋಧನೆ ಮಾಡಿದ್ದು ಕಡೂರು ತಾಲ್ಲೂಕಿನ ಪ್ರಾಚೀನ ಜೈನ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ್ದಾರೆ.
ಜೈನ ತೀರ್ಥಂಕರ ವಿಗ್ರಹಗಳ ಶೋಧನೆ: ಕಟ್ಟೆಹೊಳೆಯಮ್ಮ ದೇವಾಲಯದ ಎಡಪಾರ್ಶದಲ್ಲಿ ಹರಿಯುತ್ತಿರುವ ವೇದಾ ನದಿ ಹರಿವಿನ ಪಾತ್ರದಲ್ಲಿ ಸುಂದರವಾದ ಎರಡು ಶಿಲಾ ವಿಗ್ರಹಗಳು ಕಂಡುಬಂದಿವೆ.
ಗಂಗಮ್ಮನೆಂಬ ಜೈನ ತೀರ್ಥಂಕರ ವಿಗ್ರಹ: ಇಲ್ಲಿರುವ ಎರಡು ವಿಗ್ರಹಗಳಲ್ಲಿ ಬಲಭಾಗದ ಮೊದಲನೆಯ ವಿಗ್ರಹವು ಸಿಂಹಪೀಠದ ಮೇಲೆ ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದು ಹಿಂಭಾಗದಲ್ಲಿ ಇಬ್ಬರು ಚಾಮರಧಾರಿಗಳ ಶಿಲ್ಪಗಳಿವೆ, ವಿಗ್ರಹದ ಮುಖದ ಮುಂಭಾಗ ಸವೆದಿದೆ. ಬಳಪದ ಕಲ್ಲಿನ ಈ ವಿಗ್ರಹವು 1.34 ಮೀ-ಎತ್ತರ ಹಾಗೂ 0.90 ಮೀ-ಅಗಲ ಅಳತೆಯದಾಗಿದೆ.
ಇದನ್ನು ಸ್ಥಳೀಯ ಗ್ರಾಮಸ್ಥರು ಮೊದಲಿನಿಂದಲೂ ಸಂತಾನ ಫಲ ನೀಡುವ “ಗಂಗಮ್ಮ” ಎಂದು ಕರೆಯುತ್ತಿದ್ದು ಸಂತಾನ ಭಾಗ್ಯವಿಲ್ಲದ ವಿವಾಹಿತ ಸ್ತ್ರೀಯರು ಈ ವಿಗ್ರಹವನ್ನು ಶ್ರದ್ಧಾ ಭಕ್ತಿಯಿಂದ ಬೆಳಗಿನ ಜಾವ ಪೂಜೆ ಮಾಡುವುದರಿಂದ ಸಂತಾನ ಭಾಗ್ಯ ತಪ್ಪದೇ ದೊರೆಯುತ್ತದೆ ಎಂಬ ಅನೂಚಾನವಾದ ನಂಬಿಕೆಯಿಂದ ಈಗಲೂ ಪೂಜಿಸುತ್ತಿರುವ ಈ ವಿಗ್ರಹದ ಶಿಲ್ಪಲಕ್ಷಣದ ಆಧಾರದ ಮೇಲೆ ಇದು ಹೊಯ್ಸಳರ ಕಾಲದ ತೀರ್ಥಂಕರ ವಿಗ್ರಹವೆಂದು ಸಂಶೋಧಕ ಪಾಂಡುರಂಗ
ಅಭಿಪ್ರಾಯ ಪಟ್ಟಿದ್ದಾರೆ.
ಮುಕ್ಕೊಡೆ ಸಹಿತ ತೀರ್ಥಂಕರ ವಿಗ್ರಹ: ಇಲ್ಲಿರುವ ಎಡಭಾಗದ ವಿಗ್ರಹವು ಸಹಾ ಪದ್ಮಾಸನ ಭಂಗಿಯಲ್ಲಿದ್ದು ಹಿಂಭಾಗದ ಪ್ರಭಾವಳಿಯ ಎರಡೂ ಕಡೆ ನಿಂತಿರುವ ಸಿಂಹ ಹಾಗೂ ಗಜಮುಖಗಳ ಶಿಲ್ಪಗಳಿದ್ದು, ಹಿಂಭಾಗದಲ್ಲಿ ಸರ್ವಾಲಂಕೃತವಾದ ಚಾಮರಧಾರೀ ಪುರುಷರ ಶಿಲ್ಪಗಳಿವೆ, ವಿಗ್ರಹದ ತಲೆಮೇಲೆ ಮೂರು ಹಂತದ ಮುಕ್ಕೊಡೆ ಶಿಲ್ಪವಿದೆ.ಈ ವಿಗ್ರಹ ಬಹು ಸುಂದರವಾಗಿದ್ದು 1.25 ಮೀ ಉದ್ದ ಹಾಗೂ 0.79 ಮೀ ಅಗಲ ಅಳತೆಯದಾಗಿದೆ.
ಶಿಲ್ಪ ಲಕ್ಷಣದ ಆಧಾರದ ಮೇಲೆ ಈ ವಿಗ್ರಹವೂ ಸಹಾ ಹೊಯ್ಸಳರ ಕಾಲದ್ದಾಗಿದ್ದು ಬಳಪದ ಕಲ್ಲಿನಿಂದ ನಿರ್ಮಿಸಲ್ಪಟ್ಟಿರುವ ಹೊಯ್ಸಳರ ಕಾಲದ ತೀರ್ಥಂಕರ ವಿಗ್ರಹವೆಂದು ಸಂಶೋಧಕ ಪಾಂಡುರಂಗ ಈ ಎರಡು ಜೈನ ತೀರ್ಥಂಕರ ವಿಗ್ರಹಗಳ ಲಭ್ಯತೆಯ ಹಿ ಹಿನ್ನೆಲೆಯಲ್ಲಿ 12-13 ನೇ ಶತಮಾನದಲ್ಲಿ ಹೊಯ್ಸಳರ ಆಡಳಿತಕ್ಕೊಳ ಪಟ್ಟಿದ್ದ ದೊಡ್ಡ ಪಟ್ಟಣಗೆರೆ ಪ್ರದೇಶದಲ್ಲಿ ದ್ವಿಕೂಟ ಜೈನಬಸದಿಯೊಂದು ಇದ್ದಿರಬಹುದಾಗಿದ್ದು ಆ ಬಸದಿಯ ಮೂಲನಾಯಕ ತೀರ್ಥಂಕರರೇ ಈ ವಿಗ್ರಹಗಳಾಗಿರುವ ಸಾಧ್ಯತೆಗಳಿದ್ದು ಕಾಲದ ಪ್ರಭಾವ ಹಾಗೂ ಮತಸಂಘರ್ಷಗಳ ಕಾರಣ ಬಸದಿ ನಾಶವಾಗಿದ್ದು ಈ ವಿಗ್ರಹಗಳನ್ನು ವೇದಾ ನದಿಗೆ ಎಸೆದಿರುವ ಸಾಧ್ಯತೆಗಳಿವೆ.
ಈ ವಿಗ್ರಹಗಳ ಪಾದಪೀಠದಲ್ಲಿ ಲಾಂಛನಗಳು ಲಭ್ಯವಿಲ್ಲದ ಕಾರಣ ಇವು ಯಾವ ತೀರ್ಥಂಕರ ವಿಗ್ರಹಗಳೆಂದು ಹೇಳಲು ಸಾಧ್ಯವಾಗುತ್ತಿಲ್ಲ ಮತ್ತು ಈ ವಿಗ್ರಹಗಳಿದ್ದ ಜೈನ ಬಸದಿ ಅಸ್ತಿತ್ವದ ಕುರಿತು ಹೆಚ್ಚಿನ ಸಂಶೋಧನೆ ನಡೆಸಿದ್ದೇನೆ ಎಂದು ಸಂಶೋಧಕ ಹೆಚ್.ಆರ್.ಪಾಂಡುರಂಗ ಅವರು ತಿಳಿಸಿದ್ದು, ಈ ತೀರ್ಥಂಕರ ವಿಗ್ರಹಗಳ ಶೋಧನಾ ಕ್ಷೇತ್ರ ಕಾರ್ಯದಲ್ಲಿ ಸಹಕಾರ ನೀಡಿದ ಕಟ್ಟೆಹೊಳೆಯಮ್ಮ ದೇವಾಲಯದ ಆಡಳಿತ ಮಂಡಳಿ ಪ್ರಮುಖರಾದ ಎಸ್.ಬಿ.ಹನುಮಂತಪ್ಪ-ಸಣ್ಣೆಗೌಡನ ಕೊಪ್ಪಲು ಮತ್ತು ಕೆ.ಎಂ.ಮಲ್ಲೇಶಪ್ಪ-ಕುರುಬಗೆರೆ ಹಾಗೂ ದೇವಾಲಯದ ಅರ್ಚಕರಾದ ಟಿ.ಆನಂದ್ ಅವರಿಗೂ ಪಾಂಡುರಂಗ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

