ಜೀವನ ತುಂಬಾ ಕ್ಷಣಿಕ ಎನ್ನುವ ಈ ರೆಡಿಮೇಡ್ ಮಾತನ್ನು ಕೇವಲ ಹೇಳಿಕೆಗೆ ಸೀಮಿತಗೊಳಿಸಿಕೊಳ್ಳದೆ ಕ್ಷಣ ಕ್ಷಣವನ್ನು ಅನುಭವಿಸುವ ಕಲೆಯನ್ನು, ಜಾಣತನವನ್ನು ನಮ್ಮದಾಗಿಸಿಕೊಳ್ಳಬೇಕು,….
1 min read
ಅವಿನ್ ಟಿವಿ ಸುದ್ದಿಜಾಲ ✍️: ಜೀವನ ತುಂಬಾ ಕ್ಷಣಿಕ ಎನ್ನುವ ಈ ರೆಡಿಮೇಡ್ ಮಾತನ್ನು ಕೇವಲ ಹೇಳಿಕೆಗೆ ಸೀಮಿತಗೊಳಿಸಿಕೊಳ್ಳದೆ ಕ್ಷಣ ಕ್ಷಣವನ್ನು ಅನುಭವಿಸುವ ಕಲೆಯನ್ನು, ಜಾಣತನವನ್ನು ನಮ್ಮದಾಗಿಸಿಕೊಳ್ಳಬೇಕು,
ಸಣ್ಣಪುಟ್ಟ ಕ್ಷುಲ್ಲಕ ವಿಚಾರಗಳಿಗೆ ಮನಸ್ತಾಪ ಮಾಡಿಕೊಂಡರೆ ಮಾನಸಿಕ ನೆಮ್ಮದಿ ಜೀವನದ ಉತ್ಸಾಹವನ್ನು ಸುಖ ಸುಮ್ಮನೆ ವ್ಯರ್ಥವಾಗಿ ಕಳೆದುಕೊಳ್ಳಬೇಕಾಗುತ್ತದೆ, ಯಾರ ಬದುಕು ಯಾವಾಗ? ಎಲ್ಲಿ? ಹೇಗೆ?ಅಂತ್ಯಗೊಳ್ಳುತ್ತದೆ ಎಂಬುದು ಗೊತ್ತಿರುವುದಿಲ್ಲ, ಇರುವಷ್ಟು ಘಳಿಗೆ ಜೀವನವನ್ನು ಆನಂದಿಸೋಣ ಅನುಭವಿಸೋಣ ಹೆಚ್ಚೆಚ್ಚು ಸಂತೋಷದ ಸಂಗತಿಗಳನ್ನು ಹಂಚಿಕೊಳ್ಳೋಣ.
ಕಾರಣ,
ಬದುಕಿನ ಜೀವನ ಶೈಲಿ ಬದಲಾದ ಈ ದಿನಮಾನದಲ್ಲಿ ಬರುವ ರೋಗ ರುಜಿನವು ಯಾವ ಸಣ್ಣ ಸುಳಿವನ್ನು ನಮಗೆ ಕೊಡದೆ ದುರ್ಮಾಣಕ್ಕಿಡುಮಾಡುತ್ತಿದೆ.
ಹಾಸನದ ಶ್ವೇತಾಳಿಗೆ ಜಸ್ಟ್ 25 ವರ್ಷ ಅಷ್ಟೇ, ವೃತ್ತಿಯಲ್ಲಿ ಇಂಜಿನಿಯರ್,ನಗುನಗುತ್ತಾ ಮಾತನಾಡುತ್ತಿರುವಾಗಲೇ ಸಾವಿನತ್ತ ಜಾರಿ ಬದುಕಿಗೆ ವಿದಾಯ ಹೇಳಿ ಹೊರಟು ಹೋದ ದುರ್ಘಟನೆಯೊಂದರ ಬಗ್ಗೆ,ಬರಹಗಾರ್ತಿ ಮತ್ತು ಸುದ್ದಿ ವಾಚಕಿ ಸೌಖ್ಯ ಗಾoವ್ಕರ್ ಅವರು ಮಾಡಿದ ಈ ಕೆಳಕಂಡ ವರದಿಯನ್ನು ಅವಿನ್ ಟಿವಿ ಸುದ್ದಿಜಾಲ ತನ್ನ ಓದುಗರಿಗಾಗಿ ಕೊಡ ಮಾಡುತ್ತಿದೆ….
👇……………👇
ವಿಧಿಯಾಟಕ್ಕೆ ಬಲಿಯಾದ ಹಾಸನದ ‘ಶ್ವೇತಾ’: ಹೆತ್ತವರ ಆಶಾಗೋಪುರ ಮಣ್ಣಾದ ಕರುಣಾಜನಕ ಕಥೆ!
ಒಮ್ಮೊಮ್ಮೆ ಈ ಜೀವನ ಅನ್ನೋದು ಎಷ್ಟೊಂದು ಕ್ಷಣಿಕ ಅನಿಸಿಬಿಡುತ್ತೆ ಅಲ್ವಾ? ಕಣ್ಮುಂದೆಯೇ ನಗುನಗುತ್ತಾ ಆಟವಾಡಿಕೊಂಡಿದ್ದವರು, ಮಾತಾಡಿಕೊಂಡಿದ್ದವರು ಇನ್ನೊಂದು ಕ್ಷಣದಲ್ಲಿ ಇರಲ್ಲ ಅಂದ್ರೆ ಅದನ್ನು ನಂಬೋದಕ್ಕೇ ಸಾಧ್ಯವಾಗಲ್ಲ. ಸಾವಿಗೆ ವಯಸ್ಸಿನ ಹಂಗಿಲ್ಲ, ರೋಗ-ರುಜಿನಗಳ ಸುಳಿವೇ ಇರಲ್ಲ.. ಆದ್ರೂ ಸುಳಿವನ್ನೇ ಕೊಡದಂತೆ ಬರೋ ಜವರಾಯ, ಕ್ಷಣಮಾತ್ರದಲ್ಲಿ ಸುಂದರ ಸಂಸಾರವನ್ನೇ ಸರ್ವನಾಶ ಮಾಡಿ ಬಿಡ್ತಾನೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಶ್ವೇತಾ ಎಂಬ 25 ವರ್ಷದ ಈ ಮುದ್ದು ಮಗಳ ಕಥೆ ಕೇಳಿದ್ರೆ ಕಲ್ಲು ಹೃದಯವೂ ಕರಗುತ್ತೆ.. ಹೆತ್ತವರ ಪಾಲಿಗೆ ಭಗವಂತನೇ ಕೊಲೆಗಾರನಾಗಿ ಹೋದನಾ ಅನ್ನೋ ಸಂಶಯ ಕಾಡುತ್ತೆ.
ನಗುನಗುತ್ತಾ ಇದ್ದವಳು ಒಮ್ಮೆಲೇ ಕುಸಿದು ಬಿದ್ದಳು!
ಗಂಗಾಧರ್ ಹಾಗೂ ಸರೋಜಾ ದಂಪತಿಯ ಏಕೈಕ ಆಶಾಗೋಪುರ ಈ ಶ್ವೇತಾ. ಇಂಜಿನಿಯರಿಂಗ್ ಮುಗಿಸಿ, ಕಳೆದ ಮೂರು ವರ್ಷಗಳಿಂದ ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಳು. ಹೆತ್ತವರ ಕಣ್ಮುಂದೆಯೇ ಇರಲಿ ಅಂತ ಹಾಸನದಲ್ಲೇ ಕೆಲಸ ಗಿಟ್ಟಿಸಿಕೊಂಡಿದ್ದ ಮಗಳು, ಮನೆಗೆ ಮಹಾಲಕ್ಷ್ಮಿಯಾಗಿದ್ದಳು.
ಆದರೆ ಕಳೆದ ಶುಕ್ರವಾರ ವಿಧಿ ಆಕೆಯ ಪಾಲಿಗೆ ಮೃತ್ಯುವಾಗಿ ಬಂದಿತ್ತು. ಮನೆಯಲ್ಲಿ ಅಪ್ಪ-ಅಮ್ಮನ ಜೊತೆ ನಗುತ್ತಾ ಮಾತಾಡ್ತಿದ್ದವಳು, ಒಮ್ಮೆಲೇ ಕುಸಿದು ಬಿದ್ದಿದ್ದಾಳೆ. ಗಾಬರಿಗೊಂಡ ಹೆತ್ತವರು ಮುಖಕ್ಕೆ ನೀರು ಚಿಮುಕಿಸಿದ್ರು, ಮಗಳೇ ಎದ್ದೇಳಮ್ಮ ಅಂತ ಗೋಳಾಡಿದ್ರು.. ಶ್ವೇತಾ ಮಾತ್ರ ಕಣ್ಣು ಬಿಡಲೇ ಇಲ್ಲ. ಕೂಡಲೇ ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಆಗಲೇ ‘ಕೋಮಾ’ ಸ್ಥಿತಿಗೆ ಜಾರಿದ್ದಳು!
ಎರಡು ದಿನದ ಹೋರಾಟ ಸಾವಲ್ಲಿ ಅಂತ್ಯ..
ಸ್ಥಳೀಯ ವೈದ್ಯರ ಸೂಚನೆಯಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ಹೆತ್ತವರು ಕಂಡ ಕಂಡ ದೇವರಲ್ಲಿ ಹರಕೆ ಹೊತ್ತಿದ್ರು, “ನಮ್ಮ ಮಗಳನ್ನ ನಮಗೆ ಮರಳಿಸಿಕೊಡು” ಅಂತ ಕಣ್ಣೀರಿಟ್ಟಿದ್ರು. ಆದ್ರೆ ವೈದ್ಯಕೀಯ ಪರೀಕ್ಷೆಯಲ್ಲಿ ‘ಬ್ರೈನ್ ಸ್ಟ್ರೋಕ್’ ಆಗಿರೋದು ದೃಢಪಟ್ಟಿತ್ತು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಶ್ವೇತಾ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಅಂತಿಮವಾಗಿ ವೈದ್ಯರು ಆಕೆ ‘ಬ್ರೈನ್ ಡೆಡ್’ ಆಗಿದ್ದಾಳೆ ಅಂತ ಹೇಳಿದಾಗ ಆ ತಂದೆ-ತಾಯಿಗೆ ನಿಂತ ನೆಲವೇ ಕುಸಿದಂತಾಯ್ತು.
ನೋವಿನಲ್ಲೂ ಗಟ್ಟಿ ನಿರ್ಧಾರ: ತಮ್ಮ ಮಗಳು ಮರಳಿ ಬರಲ್ಲ ಅಂತ ಗೊತ್ತಾದಾಗಲೂ ಆ ನೊಂದ ಜೀವಗಳು ಮಗಳ ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಆದರೆ ವೈದ್ಯಕೀಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇಂದು ಇಡೀ ಗ್ರಾಮವೇ ಕಣ್ಣೀರಿಡ್ತಿದೆ, ಊರ ಮಗಳ ಅಗಲಿಕೆಗೆ ಮರುಗುತ್ತಿದೆ.
ಹೆಗಲೆತ್ತರಕ್ಕೆ ಬೆಳೆದ ಮಗಳು ಇನ್ನೇನು ಮದುವೆ ಮಾಡಿ ಕಳಿಸಬೇಕಾದ ವಯಸ್ಸಿನಲ್ಲಿ ಹೆಣವಾಗಿ ಮಲಗಿದ್ದಾಳೆ. ಇಂತದ್ದೊಂದು ದಿನ ಯಾವ ಶತ್ರುವಿಗೂ ಬರೋದು ಬೇಡ. ಜೀವನ ತುಂಬಾನೇ ಅನಿಶ್ಚಿತ, ಪ್ರೀತಿಸುವವರ ಜೊತೆಗಿರುವಾಗ ಪ್ರೀತಿಯಿಂದಿರಿ.. ಯಾಕಂದ್ರೆ ಮುಂದಿನ ಕ್ಷಣ ಏನಾಗುತ್ತೋ ಯಾರಿಗೂ ಗೊತ್ತಿಲ್ಲ.
ಶ್ವೇತಾಳ ಆತ್ಮಕ್ಕೆ ಶಾಂತಿ ಸಿಗಲಿ, ಆಕೆಯ ಹೆತ್ತವರಿಗೆ ಈ ನೋವು ಭರಿಸುವ ಶಕ್ತಿ ಅವರೊಳಗೆ ಒದಗಿ ಬರಲಿ .
•••••••••••••ಸಂಗ್ರಹ.
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

