ಅಕ್ರಮ ಮಣ್ಣಿನ ಗಣಿಗಾರಿಕೆಯನ್ನು ತಡೆಗಟ್ಟುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಅಕ್ರಮ ಮಣ್ಣಿನ ಗಣಿಗಾರಿಕೆಯನ್ನು ತಡೆಗಟ್ಟುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹ.
ಚಿಕ್ಕಮಗಳೂರು ಏ ೨೧ : ಜಿಲ್ಲೆಯ ಐತಿಹಾಸಿಕ ಮದಗದ ಕೆರೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮಣ್ಣಿನ ಗಣಿಗಾರಿಕೆಯನ್ನು ತಡೆಗಟ್ಟುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಎಂ.ಎನ್. ನಾಗರಾಜ್ ಅವರನ್ನು ಮಂಗಳವಾರ ಭೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಬೇಸಿಗೆ ಹಿನ್ನೆಲೆಯಲ್ಲಿ ಮದಗದ ಕೆರೆ ನೀರಿಲ್ಲದೆ ಬಹುತೇಕ ಬರಿದಾಗುತ್ತಿದೆ ಈ ಅವಧಿಯಲ್ಲಿ ಸುತ್ತಮುತ್ತಲ ಗ್ರಾಮಗಳ ಜನ ಹಾಗೂ ಇತರರು ಜೆಸಿಬಿ ಮುಖಾಂತರ ಕೆರೆ ಮತ್ತು ದಡದಲ್ಲಿ ದೊಡ್ಡ ದೊಡ್ಡ ಹೊಂಡಗಳನ್ನು ತೋಡಿ ಲಾರಿ ಟ್ರಾಕ್ಟರ್ ಸೇರಿದಂತೆ ನೂರಾರು ವಾಹನಗಳಲ್ಲಿ ಹಗಲು ರಾತ್ರಿ ಎನ್ನದೆ ಮಣ್ಣನ್ನು ಬಗೆದು ತುಂಬಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಈ ಅಕ್ರಮ ಮಣ್ಣಿನ ಗಣಿಗಾರಿಕೆಯಿಂದಾಗಿ ಕೆರೆ ಮತ್ತು ಸುತ್ತಮುತ್ತ ದೊಡ್ಡ ದೊಡ್ಡ ಹೊಂಡಗಳಾಗುತ್ತಿದ್ದು ಜಾನುವಾರುಗಳು, ಪ್ರಾಣಿಗಳು ನೀರು ಕುಡಿಯಲು ಬಂದು ಗುಂಡಿಗಳಲ್ಲಿ ಬಿದ್ದು ಸಾವನ್ನಪ್ಪುತ್ತಿವೆ ಎಂದು ದೂರಿದರು.
ಮಣ್ಣಿನ ಗಣಿಗಾರಿಕೆಯಿಂದಾಗಿ ಆಗಿದ್ದ ಹೊಂಡದಲ್ಲಿ ಈಜಲು ತೆರಳಿದ ಬಾಲಕ ನೋರ್ವ ಇತ್ತೀಚೆಗೆ ಸಾವನ್ನಪ್ಪಿದ್ದಾನೆ, ಬೇಸಿಗೆಯ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇರುವುದರಿಂದ ಮಕ್ಕಳು ಕೆರೆಯಲ್ಲಿ ಈಜಲು ಬಹಳಷ್ಟು ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ ಎಂದ ಅವರು ಮುಂದೆ ಅನಾಹುತ ಸಂಭವಿಸುವ ಮುನ್ನ ಈಗಲೇ ಎಚ್ಚೆತ್ತು ಅಕ್ರಮ ಮಣ್ಣಿನ ಗಣಿಗಾರಿಕೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು, ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯಾಧ್ಯಕ್ಷ ಸೋಮುನಾಯಕ್, ಪದಾಧಿಕಾರಿಗಳಾದ ದೌಲತ್ ಭಾಷಾ, ರಾಜಣ್ಣ, ಇಲಿಯಾಜ್, ರಾಜು, ಸಿ.ಡಿ. ರಾಜನ್ ಹಾಜರಿದ್ದರು.
••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

