ಅಪ್ರಾಪ್ತಯ ಬಾಲಕಿ ಮೇಲೆ ದೌರ್ಜನ್ಯ: ಪೋಸ್ಕೊ ಪ್ರಕರಣದ ಜತೆಗೆ ಪ್ರತಿದೂರು ದಾಖಲು…
1 min read
ಪೊಲೀಸ್ ಠಾಣೆ.ಮೂಡಿಗೆರೆ.
ಅಪ್ರಾಪ್ತಯ ಬಾಲಕಿ ಮೇಲೆ ದೌರ್ಜನ್ಯ: ಪೋಸ್ಕೊ ಪ್ರಕರಣದ ಜತೆಗೆ ಪ್ರತಿದೂರು ದಾಖಲು
ಮೂಡಿಗೆರೆ: ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅಪ್ರಾಪ್ತ ಬಾಲಕನ ವಿರುದ್ಧ ಪೋಸ್ಕೊ ಕಾಯಿದೆಯಡಿ ಸೋಮವಾರ ಪ್ರಕರಣ ದಾಖಲಾಗಿದೆ.
ಪೋಷಕರ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಬಾಲಕಿ ಹಿಂದೂ ಹಾಗೂ ಬಾಲಕ ಮುಸ್ಲಿಂ ಆಗಿದ್ದರಿಂದ ಇದೊಂದು ಲವ್ ಜಿಹಾದ್ ಪ್ರಕರಣವೆಂಬ ಆರೋಪ ಕೇಳಿ ಬಂದಿದೆ.
ಬಾಲಕಿಯ ಪೋಷಕರು ನೀಡಿದ ದೂರಿಗೆ ಬಾಲಕನ ಪೋಷಕರು ಕೂಡ ಪ್ರತಿದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಒಂದೆಡೆ ಪೋಸ್ಕೊ, ಮತ್ತೊಂದೆಡೆ ಹಲ್ಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಪಟ್ಟಣದಲ್ಲಿ ಯಾವುದೇ ಗಲಭೆ ಸೃಷ್ಟಿಯಾಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಘಟನೆ ವಿವರ: ಕಳೆದ ವರ್ಷ ಒಂದೇ ಶಾಲೆಯಲ್ಲಿ 10ನೇ
ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಾಲಕಿ ಮತ್ತು ಬಾಲಕ ಇವರಿಬ್ಬರ ನಡುವೆ ಆಕರ್ಷಣೆ ಪ್ರೀತಿ ಹುಟ್ಟಿದೆನ್ನಲಾಗಿದೆ. ಪಿಯುಸಿ ವ್ಯಾಸಾಂಗಕ್ಕೆ ಕಾಲೇಜು ಮೆಟ್ಟಿಲೇರಿದ ಬಳಿಕ ಇಬ್ಬರೂ ಬೇರೆ ಬೇರೆಯಾಗಿದ್ದು, ಮೊಬೈಲ್ ಮೂಲಕ ಪುನಃ ಸಂಪರ್ಕವಾಗಿದೆ. ಕಳೆದ 6 ತಿಂಗಳ ಹಿಂದೆ ಇವರಿಬ್ಬರ ಪ್ರೀತಿ ವಿಚಾರ ಪೋಷಕ-ರಿಗೆ ತಿಳಿದಿದೆ. ಇಬ್ಬರೂ ಅನ್ಯ ಧರ್ಮಕ್ಕೆ ಸೇರಿದ್ದರಿಂದ ಇಬ್ಬರ ಪೋಷಕರು ಶಾಂತಿಯುತವಾಗಿ ಮಾತುಕತೆ ನಡೆಸಿ, ಈ ಆಕರ್ಷಣೆ ಪ್ರೀತಿ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಿದ್ದಾರೆ.
ಆದರೂ ಇವರಿಬ್ಬರು ಮತ್ತೆ ಮೊಬೈಲ್ ಮೂಲಕ ಸಂಪರ್ಕವಾಗಿ ಪ್ರೀತಿ ಮುಂದುವರೆದಿದೆ. ಇದರಿಂದ ಬೇಸತ್ತ ಬಾಲಕಿ ಪೋಷಕ-ರಿಗೆ ದಿಕ್ಕು ತೋಚದೇ ಈ ವಿಚಾರವನ್ನು ಹಿಂದೂ ಸಂಘಟನೆ ಮುಖಂಡರಿಗೆ ತಿಳಿಸಿದ್ದಾರೆ. ಘಟನೆ ವಿಚಾರವಾಗಿ ಸೋಮವಾರ ಸಂಜೆ ಇಬ್ಬರ ಪೋಷಕರ ನಡುವೆ ಮಾತಿನ ಚಕಮಕಿ ಹಾಗೂ ಘರ್ಷಣೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಹಿಂದೂ ಸಂಘಟನೆ ಮುಖಂಡರು ಬಾಲಕನ ಬಳಿಯಿದ್ದ ಮೊಬೈಲ್ನ್ನು ಕಿತ್ತು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಬಾಲಕಿ ಪೋಷಕರು ಬಾಲಕ ಹಾಗೂ ಅವರ ಪೋಷಕರ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ಬಾಲಕನ ಪೋಷಕರು ಕೂಡ ಬಾಲಕಿಯ ಪೋಷಕರು, ಸಂಬಂಧಿಕರು ಮತ್ತು ಹಿಂದೂ ಸಂಘಟನೆ ಮುಖಂಡರ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸಂತ್ರಸ್ತೆಯ ತಂದೆ ನೀಡಿರುವ ದೂರಿನ ಆರೋಪಿ ಯುವಕನು ಆರು ತಿಂಗಳ ಹಿಂದೆ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿದ್ದು, ಈ ಬಗ್ಗೆ ಎರಡೂ ಕುಟುಂಬದವರು ಬುದ್ದಿವಾದ ಹೇಳಿದ್ದರು. ಆದರೆ ಕೆಲವು ದಿನಗಳ ಹಿಂದೆ ಪೋಷಕರು ಇಲ್ಲದ ಸಮಯದಲ್ಲಿ ಬಾಲಕಿಯ ಮನೆಗೆ ನುಗ್ಗಿದ ಆರೋಪಿಯು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ತನ್ನನ್ನು ವಿವಾಹವಾಗುವಂತೆ ಬಾಲಕಿಗೆ ಬೆದರಿಕೆ ಹಾಕಿದ್ದಾನೆ ಎಂದು ದೂ-ರಿನಲ್ಲಿ ತಿಳಿಸಲಾಗಿದೆ.ಬಾಲಕಿ ಮತಾಂತರಕ್ಕೆ ಒಪ್ಪದಿದ್ದಾಗ ಆಕೆಯ ಅಶ್ಲೀಲ ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿರುವುದಾಗಿ ಮತ್ತು ಬಾಲಕಿಯ ಮೇಲೆ ದೈಹಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಪೋಷಕರನ್ನು ಕೊಲ್ಲುವುದಾಗಿ ಆರೋಪಿ ಬೆದರಿಕೆ ಹಾಕಿದ್ದರಿಂದ ಬಾಲಕಿ ಭಯಭೀತಳಾಗಿದ್ದಳು. ಈ ಕೃತ್ಯಕ್ಕೆ ಆರೋಪಿಯ ತಂದೆ ಮತ್ತು ತಾಯಿ ಕೂಡ ಪ್ರಚೋದನೆ ನೀಡುತ್ತಿದ್ದರು ಎಂದು ದೂ-ರಿನಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮೂಡಿಗೆರೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ, ಪೋಸ್ಕೊ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

