ಈದ್ ಮತ್ತು ಯುಗಾದಿ ಎರಡೂ ಜೊತೆಜೊತೆಗೇ ಬಂದಿದೆ. ವಿಶೇಷ ಏನೆಂದರೆ, ಈ ಎರಡೂ ಹಬ್ಬಗಳು ಆಶ್ರಯಿಸಿರುವುದು ಚಂದ್ರನನ್ನು..
1 min read
ಈದ್ ಮತ್ತು ಯುಗಾದಿ ಎರಡೂ ಜೊತೆಜೊತೆಗೇ ಬಂದಿದೆ. ವಿಶೇಷ ಏನೆಂದರೆ, ಈ ಎರಡೂ ಹಬ್ಬಗಳು ಆಶ್ರಯಿಸಿರುವುದು ಚಂದ್ರನನ್ನು.
ಈದ್ ದಿನದಂದು ಹೊಸ ಬಟ್ಟೆ ಧರಿಸದಿದ್ರೂ ಪರ್ಫ್ಯೂಮ್ ಪೂಸದಿದ್ರೂ ಮಸೀದಿಗೆ ಹೋಗದಿದ್ರೂ ಮತ್ತು ಹಬ್ಬದ ನಮಾಝ್ ಮಾಡದಿದ್ರೂ ವ್ಯಕ್ತಿ ತಪ್ಪಿತಸ್ಥನಾಗುವುದಿಲ್ಲ. ಆದರೆ ತೀರಾ ತೀರಾ ಬಡವರಿಗೆ ಈದ್ ದಿನದ ಆಹಾರವನ್ನು ತಯಾರಿಸುವುದಕ್ಕೆ ಬೇಕಾದವುಗಳನ್ನು ಸ್ಥಿತಿವಂತರು ಒದಗಿಸದಿದ್ದರೆ ಅವರು ತಪ್ಪಿತಸ್ಥರಾಗುತ್ತಾರೆ. ಅವರ ಉಪವಾಸ, ನಮಾಝ್ ಯಾವುದೂ ಸ್ವೀಕೃತವಾಗುವುದಿಲ್ಲ ಎಂದು ಇಸ್ಲಾಂ ಹೇಳುತ್ತದೆ. ಆದ್ದರಿಂದಲೇ ಈ ಹಬ್ಬಕ್ಕೆ ಈದುಲ್ ಫಿತ್ರ್ ಅಥವಾ ದಾನದ ಹಬ್ಬ ಎಂಬ ಹೆಸರಿದೆ. ಬಹುಶಃ, ಜಗತ್ತಿನ ಯಾವ ಹಬ್ಬಕ್ಕೂ ಇಂಥದ್ದೊಂದು ಶರತ್ತು ಇರುವ ಸಾಧ್ಯತೆಯೇ ಇಲ್ಲ ಎಂದೇ ನನ್ನ ನಂಬಿಕೆ. ಇನ್ನೊಂದು,
ಹಬ್ಬದ ಉದ್ದೇಶ. ಉಪವಾಸದ ಒಂದು ತಿಂಗಳಲ್ಲಿ ಪಾಲಿಸಿದ ಮೌಲ್ಯಗಳನ್ನು ಮುಂದಿನ ಉಪವಾಸದ ವರೆಗೆ ಕಾಪಿಡುತ್ತೇನೆ ಎಂದು ಘೋಷಿಸುವ ಪ್ರತಿಜ್ಞೆಯೇ ಈದ್. ಉಪವಾಸದ ದಿನಗಳಲ್ಲಿ ಸುಳ್ಳು ಹೇಳದೆ, ಮೋಸ ಮಾಡದೆ, ನೆರೆಕರೆಯವರಿಗೆ ಭಾರವಾಗದೇ ಮತ್ತು ಸರ್ವ ಕೆಡುಕುಗಳಿಂದಲೂ ದೂರ ಇದ್ದು ಬದುಕಲು ಸಾಧ್ಯ ಆಗಿದೆ ಎಂದಾದರೆ ಮುಂದಿನ ಉಪವಾಸದವರೆಗೂ ಹಾಗೆಯೇ ಬದುಕಲು ಸಾಧ್ಯವಾಗಬೇಕು ಎಂದು ಈದ್ ಎಚ್ಚರಿಸುತ್ತದೆ. ಹಾಗೆಯೇ ಬದುಕುವೆ ಎಂದು ಘಂಟಾಘೋಷವಾಗಿ ಘೋಷಿಸುವ ದಿನವೇ ಹಬ್ಬದ ದಿನ. ಮುಸ್ಲಿಂ ಎಂಬುದು ಸರ್ವರಲ್ಲೂ ಸುರಕ್ಷಿತತೆ, ವಿಶ್ವಾಸಾರ್ಹತೆ ಮತ್ತು ಹಿತಕಾರಿ ಭಾವವನ್ನು ಮೂಡಿಸುವ ನಾಮಪದ ಆಗಬೇಕು. ಈ ದೇಶದ ನಾಗರಿಕರಲ್ಲಿ ಅಂಥ ಭಾವವನ್ನು ಮೂಡಿಸುವ ವ್ಯಕ್ತಿತ್ವವಾಗಿ ಉಪವಾಸಿಗರು ಬದಲಾಗಬೇಕು. ನಿಜವಾಗಿ ಅನ್ನ ಮತ್ತು ನೀರನ್ನು ತ್ಯಜಿಸುವುದು ಉಪವಾಸದ ಬಾಹ್ಯ ವ್ಯಾಖ್ಯಾನ ಮಾತ್ರ. ಅದರ ಆಂತರಿಕ ವ್ಯಾಖ್ಯಾನ ಏನೆಂದರೆ ವ್ಯಕ್ತಿ ಅಡಿಯಿಂದ ಮುಡಿಯ ವರೆಗೆ ಮೌಲ್ಯವಂತನಾ/ಳಾಗುವುದು. ಸರ್ವರನ್ನೂ ಆಕರ್ಷಿಸುವ ಗುಣವಂತ ವ್ಯಕ್ತಿಯಾಗುವುದು. ಈದ್ ಅಂದರೆ ಇದುವೇ.
ಎಲ್ಲರಿಗೂ ಈದ್ ಶುಭಾಶಯಗಳು.
ಏ ಕೆ ಕುಕ್ಕಿಲ

