ಸಮಾನತೆ, ಗೌರವ ಹಾಗೂ ಸ್ವಾಭಿಮಾನದಿಂದ ಬಾಳಲು ಮಹಿಳೆಗೆ ಕಾನೂನು ಪ್ರಜ್ಞೆ ಅಗತ್ಯ …
1 min read


*ಸಮಾನತೆ, ಗೌರವ ಹಾಗೂ ಸ್ವಾಭಿಮಾನದಿಂದ ಬಾಳಲು ಮಹಿಳೆಗೆ ಕಾನೂನು ಪ್ರಜ್ಞೆ ಅಗತ್ಯ – ಹೆ
ಚ್ಚುವರಿ ಸಿವಿಲ್ ನ್ಯಾಯಾದೀಶರು ಗೌರವಾನ್ವಿತ ಶ್ರೀಮತಿ ಸುರಕ್ಷಾ ಕೆ.ಕೆ.*
ವಿಮುಕ್ತಿ ಚಾರಿಟೇಬಲ್ ಟ್ರಸ್ಟ್, ಬಣಕಲ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ, ಮತ್ತು ವಕೀಲಯ ಸಂಘ ಹಾಗೂ ಅಭಿಯೋಜನ ಇಲಾಖೆ, ಮೂಡಿಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಮುಕ್ತ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಮೂಡಿಗೆರೆಯ ಚರ್ಚ್ ಸಭಾಭವನದಲ್ಲಿ ಅಕ್ಟೋಬರ್ 24, 2025ರಂದು ಆಯೋಜಿಸಲಾಯಿತು. ಈ ಕಾರ್ಯಕ್ರಮವು ಗ್ರಾಮೀಣ ಭಾಗದ ಮಹಿಳೆಯರಿಗೆ ಕಾನೂನು ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಜಾಗೃತಿ ಮೂಡಿಸಲು ಆಯೋಜಿಸಲಾಯಿತು. ಅಕ್ಟೋಬರ್ ತಿಂಗಳಲ್ಲಿ ಆಚರಿಸಲ್ಪಡುವ ಹಿರಿಯ ನಾಗರಿಕರ ದಿನ, ಬಾಲಕಿಯರ ಅಂತಾರಾಷ್ಟ್ರೀಯ ದಿನ ಹಾಗೂ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿಯೂ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗೌರವಾನ್ವಿತ ಶ್ರೀ ವಿಶ್ವನಾಥ ಎ., ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು, ಮಹಿಳೆಯರು ದೈರ್ಯ ಮತ್ತು ಆತ್ಮಸ್ಥೈರ್ಯದಿಂದ ಜೀವನ ನಡೆಸಲು ಕರೆ ನೀಡಿದರು. ಅವರು ನ್ಯಾಯಯುತ ಜೀವನಕ್ಕಾಗಿ ಕಾನೂನು ಲಭ್ಯತೆಯನ್ನು ಬಳಸಿಕೊಳ್ಳಬೇಕೆಂದು ಸಲಹೆ ನೀಡಿ, ಕಾನೂನು ಜಾಗೃತಿಯು ಮಹಿಳೆಯ ಶಕ್ತಿ ಹಾಗೂ ಗೌರವವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಗೌರವಾನ್ವಿತ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಸುರಕ್ಷಾ ಕೆ.ಕೆ ಅವರು “ಮಹಿಳೆಯರು ತಮ್ಮ ಅಜ್ಞಾನದಿಂದ ಹೊರಬಂದು, ಕಾನೂನು ಸೇರಿದಂತೆ ಎಲ್ಲ ವಿಭಾಗಗಳ ಜ್ಞಾನವನ್ನು ಅಳವಡಿಸಿಕೊಂಡು ಅರಿತುಕೊಳ್ಳಬೇಕಾಗಿದೆ” ಎಂದು ಹೇಳಿದರು. ಸ್ವಯಂ ಜಾಗೃತಿಯಿಂದ ಮಹಿಳೆಯರು ಕಾನೂನು ಪ್ರಜ್ಞೆಯನ್ನು ಬೆಳಸಿಕೊಂಡು, ಸಮಾನತೆ, ಗೌರವ ಹಾಗೂ ಸ್ವಾಭಿಮಾನದೊಂದಿಗೆ ಬಾಳಲು ಮುನ್ನಡೆಯಬೇಕು ಎಂದು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಹೆಚ್.ಕೆ ದೇವರಾಜ್ ಅವರು ಕಾರ್ಯಕ್ರಮವನ್ನು ಮೆಚ್ಚಿ, ಮಹಿಳೆಯರು ಕಾನೂನು ನೆರವಿಗಾಗಿ ಧೈರ್ಯದಿಂದ ಮುಂದೆ ಬರಬೇಕು ಎಂದು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಉಪನ್ಯಾಸಕರಾದ ಶ್ರೀಮತಿ ಭಾಗ್ಯ ಜೆ.ಎನ್, ವಕೀಲರು ಮೂಡಿಗೆರೆ, ಇವರು ಮಹಿಳೆಯರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯತೆಯ ಕುರಿತು ಮಾತನಾಡಿದರು. ಅವರು ಕಾನೂನು ಸಹಾಯವನ್ನು ಕೇಳಲು ಹೆದರಬಾರದು ಎಂದು ಸಲಹೆ ನೀಡಿದರು ಹಾಗೂ ಕಾನೂನು ಸೇವಾ ಸಮಿತಿಗಳು ಮಹಿಳೆಯರ ರಕ್ಷಣೆಗೆ ಎಂದಿಗೂ ಸಿದ್ಧವಾಗಿವೆ ‘ಮುಕ್ತ ಕಾನೂನು ಸಹಾಯ’ವು ಭಾರತದ ಸಂವಿಧಾನಾತ್ಮಕ ಹಕ್ಕುಗಳಲ್ಲಿ ಒಂದು ಪ್ರಮುಖ ವ್ಯವಸ್ಥೆಯಾಗಿದ್ದು, ಬಡವರು, ಮಹಿಳೆಯರು ಹಾಗೂ ಹಿಂದುಳಿದ ವರ್ಗದ ಜನರಿಗೆ ನ್ಯಾಯವನ್ನು ಸುಲಭವಾಗಿ ದೊರಕಿಸಲು ನೆರವಾಗುತ್ತದೆ. ಇದು ಕೇವಲ ಕಾನೂನು ಸಹಾಯ ನೀಡುವುದಲ್ಲದೆ, ಕಾನೂನು ಹಕ್ಕುಗಳ ಬಗ್ಗೆ ಶಿಕ್ಷಣ ಹಾಗೂ ಜಾಗೃತಿಯನ್ನೂ ತರಲು ಸಹಕಾರಿಯಾಗುತ್ತದೆ. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಮುಕ್ತಿ ಸಂಸ್ಥೆಯ ನಿರ್ದೇಶಕರಾದ ಫಾ. ಅರುಣ್ ಲೋಬೊ ಅವರು “ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ, ತಮ್ಮ ಅಸ್ತಿತ್ವದ ಬಗ್ಗೆ ಹೆಮ್ಮೆಪಡಬೇಕು” ಎಂದು ಕರೆ ನೀಡಿದರು. ಗ್ರಾಮೀಣ ಮಹಿಳೆಯರು ತಮ್ಮ ಕುಟುಂಬ ಮತ್ತು ಸಮಾಜದ ಅಭಿವೃದ್ಧಿಗೆ ಜ್ಞಾನ, ಧೈರ್ಯ ಮತ್ತು ಎಲ್ಲಾವನ್ನೂ ಎದುರಿಸುವ ಸಾಮರ್ಥದ ಅಗತ್ಯವಿದೆ ಅದಕ್ಕಾಗಿ, ಕಾನೂನು ಅರಿತುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಮುಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಅತಿಕಾಬಾನು, ಮೂಡಿಗೆರೆ್ ಕ್ರೈಸ್ತ ಧರ್ಮಕೇಂದ್ರದ ಗುರುಗಳಾದ ವಂ ಫಾ. ಸುನಿಲ್ ರೊಡ್ರಿಗಸ್, ಶೀಮತಿ ರೂಪಾ ಟಿ. ಸಹಾಯಕ ಸರ್ಕಾರಿ ಅಭಿಯೋಜಕರು, ವಕೀಲರ ಸಂಘದ ಕಾರ್ಯದರ್ಶಿಗಳಾದ ಶ್ರೀ ಎಂ. ಎಂ. ರಾಘವೇಂದ್ರ ಇವರು ಉಪಸ್ಥಿತರಿದ್ದು ಮಹಿಳೆಯರನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿರುವ ಗಣ್ಯರನ್ನು ಸಂಸ್ಥೆಯ ಸಿಬ್ಬಂದ್ದಿಗಳಾದ ವಿಂಧ್ಯಾ ಸ್ವಾಗತಿಸಿ, ಗೀತಾ ಧನ್ಯವಾದ ಹೇಳಿದರು. ಕಾರ್ಯಕ್ರಮದ ನಿರೂಪಣೆ ನವೀನ್ ಆನೆದಿಬ್ಬ ಅವರು ನಿರ್ವಹಿಸಿದರು.

