ಸಾಮಾಜಿಕ ಹೊಣೆಗಾರಿಕೆ ಇರುವ ಸಾಹಿತ್ಯಕ್ಕೆ ಶಾಸ್ತ್ರದ ನೆರಳಿರಬಾರದು,….
1 min read
ಅವಿನ್ ಟಿವಿ ಸುದ್ದಿಜಾಲ ✒️: ಸಾಹಿತ್ಯಕ್ಕೆ ಸಮಾಜಿಕ ಹೊಣೆಗಾರಿಕೆ ಇದೆ, ಸಾಮಾಜಿಕ ಹೊಣೆಗಾರಿಕೆ ಇರುವ ಸಾಹಿತ್ಯಕ್ಕೆ ಶಾಸ್ತ್ರದ ನೆರಳಿರಬಾರದು, 
ಒಂದು ವೇಳೆ ಶಾಸ್ತ್ರದ ನೆರಳಿದ್ದರೆ ಅದನ್ನು ಪರೀಕ್ಷೆಗೆ ಒಡ್ಡಿ ಸ್ವೀಕರಿಸಬೇಕು.
“ಮನೆ ಗೆದ್ದು ಮಾರು ಗೆಲ್ಲು” ಎಂಬ ಈ ನಾಣ್ನುಡಿಗೆ ನಿಮ್ಮ ವಿವರಣೆ ಏನು? ಎಂಬ ಮಾತೊಂದನ್ನು ಭಾರತದ ಖ್ಯಾತ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್ ಎಲ್ ಬೈರಪ್ಪನವರಿಗೆ ನಾಡಿನ ಜನತೆಯ ಪರವಾಗಿ ಗೌರವದಿಂದ ಹಿರಿದಾದ ನಮನಗಳನ್ನು ಸಲ್ಲಿಸಿ ಕೇಳಬೇಕಾದ ಪ್ರಶ್ನೆಯೊಂದು ಎದುರಾಗಿದೆ.
ನಾಡಿನ ಗುರು ನಾಡೋಜ ಡಾ.ಎಸ್.ಎಲ್. ಭೈರಪ್ಪನವರು ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ, ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಸಹ ಬೈರಪ್ಪನವರು ನಮಗೆ
ಯಾಕೆ ಇಷ್ಟ ಆಗ್ತಾರೆ ?
ಎಷ್ಟು ಇಷ್ಟ ಆಗ್ತಾರೆ ?
ಎಂಬ ಪ್ರಶ್ನೆಯೊಂದಿಗೆ ಅವರ ಬದುಕು ಬರಹ ಕುರಿತು
ಒಂದು ಅವಲೋಕನ…
ಒಂದೇ ಒಂದು ಜೀವಿತಾವಧಿಯಲ್ಲಿ ಒಬ್ಬ ವ್ಯಕ್ತಿ ಎಷ್ಟೊಂದು ಸಂಶೋಧನೆ, ಎಷ್ಟೊಂದು ಕ್ಷೇತ್ರಕಾರ್ಯ, ಎಷ್ಟೊಂದು ವಿಶ್ಲೇಷಣೆ ಮಾಡಿದ್ದಾರೆ,
ಅಬ್ಬಾ,,, ಎನಿಸುತ್ತದೆ.
ಆಧುನಿಕ ಸಾಹಿತ್ಯದ ಬಹುದೊಡ್ಡ ವಿದ್ವತ್ ಪ್ರತಿಭೆಯಾಗಿ, ಕನ್ನಡ ಕಾದಂಬರಿ ಪ್ರಕಾರದ ಘನತೆಯನ್ನು ವಿಸ್ತರಿಸಿ, ಅಪಾರ ಸಂಖ್ಯೆಯ ಓದುಗರನ್ನು ತನ್ನಡೆಗೆ ಸೆಳೆದುಕೊಂಡು,ಸಾಹಿತ್ಯದ ಮೂಲಕ ಓದುಗರ ಮನಸ್ಸನ್ನು ವಿಸ್ತಾರಗೊಳಿಸಿ, ಈ ನಾಡಿನ ಹಲವು ಜನರ ಸಂವೇದನೆಗಳನ್ನು ತಿದ್ದಿ, ತರ್ಕ ಮತ್ತು ತಕರಾರುಗಳಿಗೆ ಹೆಸರುವಾಸಿಯಾದವರು ಎಸ್ ಎಲ್ ಬೈರಪ್ಪನವರು, ಈ ಕಾರಣಕ್ಕಾಗಿ ಭೈರಪ್ಪನವರು ನಾಡಿನ ಜನರಿಗೆ ಆಪ್ತರಾಗಿದ್ದಾರೆ. ಗೌರವಕ್ಕೆ ಭಾಜನರಾಗಿದ್ದಾರೆ ಜೊತೆಗೆ ಚರ್ಚೆಗೆ ಗ್ರಾಸವಾಗಿದ್ದಾರೆ.
ಅವರ 90 ವರ್ಷಗಳ ಜೀವಿತಾವಧಿಯಲ್ಲಿ ಸುಮಾರು ಎಪ್ಪತ್ತು ವರ್ಷಗಳ ಕಾಲ, ಪ್ರೌಢಶಾಲಾ ವಿದ್ಯಾರ್ಥಿಯಾದ ದಿನಗಳಿಂದಲೇ ಸಾಹಿತ್ಯದ ಕೃಷಿಯನ್ನು ನಿರಂತರವಾಗಿ ಮಾಡಿಕೊಂಡು ಬಂದವರು,
ಅಂದರೆ, ಅವರ ಜೀವಿತಾವಧಿಯ ಈ ಕೊನೆಯ ನಾಲ್ಕು ವರ್ಷಗಳ ಹಿಂದಿನ ತನಕವೂ ಬರೆಯುತ್ತಾ , ಸಭೆ ಸಮಾರಂಭಗಳಲ್ಲಿ ಮಾತನಾಡುತ್ತಾ ಇದ್ದವರು ಭೈರಪ್ಪನವರು.
ಇಪ್ಪತ್ತೈದು ಕಾದಂಬರಿ,
ಮೂರು ವಿಮರ್ಶಾ ಕೃತಿ,
ಒಂದು ಆತ್ಮಕಥನ,
ಒಂದು ಲೇಖನ ಗುಚ್ಚ ,
ಒಟ್ಟು ಮೂವತ್ತು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕಟ್ಟಿಕೊಟ್ಟವರು,
ಈ ಎಲ್ಲಾ ಕೃತಿಗಳ ವಿಸ್ತಾರ 26432 ಪುಟಗಳನ್ನೊಳಗೊಂಡಿವೆ.
ಪುಟಗಳ ದೃಷ್ಟಿಯಿಂದ ಮಾತ್ರವಲ್ಲ, ಓದುಗರ ದೃಷ್ಟಿಯಿಂದಲೂ ಭೈರಪ್ಪನವರು ಇತರೆ ಸಾಹಿತಿಗಳಿಗಿಂತ ಅತೀ ಹೆಚ್ಚು ಓದುಗರನ್ನು ಪಡೆದುಕೊಂಡವರು, ಇವರ ಸಮಕಾಲಿನ ಮತ್ತು ಹಿರಿಕಿರಿಯ ಸಾಹಿತಿಗಳಾದ, ರಾಷ್ಟ್ರಕವಿ ಕುವೆಂಪು, ಶಿವರಾಮ ಕಾರಂತರು, ಪೂರ್ಣಚಂದ್ರ ತೇಜಸ್ವಿ, ಪಿ ಲಂಕೇಶ್, ದೇವನೂರು ಮಹಾದೇವ ಹೀಗೆ ಇಂತಹ ಜನಪರ ಸಾಹಿತಿಗಳು ಎಷ್ಟು ಓದುಗರನ್ನು ಒಟ್ಟು ಸಂಪಾದಿಸಿಕೊಂಡಿದ್ದಾರೊ ಅಷ್ಟೆಲ್ಲ ಓದುಗರನ್ನು ಬೈರಪ್ಪನವರು ಒಬ್ಬರೇ ಸಂಪಾದಿಸಿಕೊಂಡಿದ್ದರು ಎಂಬುದು ಗಮನಿಸಬೇಕಾದ ಅಂಶ.
ತನ್ನ ಬರಹಕ್ಕಾಗಿ ಅತೀ ಹೆಚ್ಚು ಗೌರವ ಧನವನ್ನು ಪಡೆಯುತ್ತಿದ್ದ ಭೈರಪ್ಪನವರು ಭಾರತದಲ್ಲೇ ಮೊದಲಿಗರು, ಬರಹಕ್ಕಾಗಿ ಅವರಷ್ಟು ಗೌರವ ಸಂಪಾದನೆಯನ್ನು ಪಡೆದುಕೊಂಡವರು ಮತ್ತೊಬ್ಬರಿಲ್ಲ,
ಹೀಗಿದ್ದೂ ಕೊಡ ಅವರು ಮಾರನ್ನು ಗೆದ್ದರು ಆದರೆ ಮನೆಯನ್ನು ಗೆಲ್ಲಲಾಗಲಿಲ್ಲ, ಮನೆಯನ್ನು ಗೆಲ್ಲಲಾಗಲಿಲ್ಲ ಎಂಬುದಕ್ಕೆ ಅವರು ಬರದಿಟ್ಟು, ಮರಣ ನಂತರ ಬಹಿರಂಗಗೊಂಡ ವಿಲ್ ಪತ್ರವೇ ಸಾಕ್ಷಿ ಎನ್ನಬಹುದು.
ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಸಾರ್ವಜನಿಕ ಜೀವನದಲ್ಲಿ ಇರುವವರಿಗೆಲ್ಲ ಭೈರಪ್ಪನರ ಸಾವು ಮತ್ತು ಅವರ ಬದುಕು ಒಂದು ಪಾಠದಂತಿದೆ ಅನ್ನಬಹುದು.
ಬೈರಪ್ಪನವರು ಯಾಕೆ ಮನೆಯನ್ನು ಗೆಲ್ಲಲಾಗಲಿಲ್ಲ?ಎಂಬುದಕ್ಕೆ ಪ್ರಮುಖ ಕಾರಣ ಅವರು ಜನಪ್ರಿಯ ಸಾಹಿತಿಯಾಗಿದ್ದರು, ಯಾವ ಸಾಹಿತ್ಯ ಜನಪ್ರಿಯವಾಗಿರುತ್ತದೂ ಅವು ಓದುಗರನ್ನು ಬೆಳೆಸುವುದಿಲ್ಲ, ಸಿನಿಮಾ ಹಾಡಿನಂತೆ ಕೇವಲ ಸೆಳೆಯುತ್ತವೆ ಅಷ್ಟೆ, ಓದುಗರನ್ನು ಬೆಳೆಸುವ ಸಾಹಿತ್ಯ ಅದು ಜನಪರ ಸಾಹಿತ್ಯವಾಗಿರುತ್ತದೆ, ಜನಪರ ಸಾಹಿತ್ಯದಲ್ಲಿ ಕಹಿಯಾದ ಸ್ವಾದ ಗಂಟಲಿನಲ್ಲಿ ನಿಲ್ಲುತ್ತದೆ,
ನಮ್ಮ ಪರಿಸರದ ಬಗ್ಗೆ,
ನಮ್ಮ ನಂಬಿಕೆಗಳ ಬಗ್ಗೆ ಈ ಜನಪರ ಸಾಹಿತ್ಯಗಳು ಪ್ರಶ್ನೆ ಮಾಡುವುದನ್ನು ಕಲಿಸುತ್ತವೆ, ತಾನು ನೆಲೆಗೊಂಡ ಜಾಗದಲ್ಲಿಯೇ ಏನಾದರೋಂದನ್ನು ಸ್ಥಾಪಿಸಿ ಪರಿವರ್ತಿಸುವ ಕೆಲಸಕ್ಕೆ ಉತ್ತೇಜನ ನೀಡುತ್ತದೆ ಈ ಜನಪದ ಸಾಹಿತ್ಯ.
ಈ ಕಾರಣಕ್ಕಾಗಿ ಜನಪ್ರಿಯ ಸಾಹಿತ್ಯ ಮತ್ತು ಜನಪರ ಸಾಹಿತ್ಯದ ಮಧ್ಯೆ ಇರುವ ವ್ಯತ್ಯಾಸದ ಗೆರೆಯನ್ನು ಯಾವುದೇ ಬರಹಗಾರರು ಅರ್ಥೈಸಿಕೊಳ್ಳಬೇಕಾಗಿದೆ.
ಈ ಎಲ್ಲ ಕಾರಣಕ್ಕಾಗಿ ಭೈರಪ್ಪನವರ ಸಾಹಿತ್ಯದ ಬಗ್ಗೆ ನಮಗೆ ಸಿಟ್ಟಿಲ್ಲ ಆದರೆ ಸಂಕಟವಿದೆ.
ಕಾರಣ ಅವರೊಳಗಿದ್ದ ಅಗಾಧವಾದ ಆ ದೈತ್ಯ ಪ್ರತಿಭೆಗೆ ಅಸಾಧಾರಣವಾದ ಜನಪರ ಸಾಹಿತ್ಯವನ್ನು ನಾಡಿಗೆ ನೀಡಿ, ಮಾನವ ಜನಾಂಗದ ಬೌದ್ಧಿಕತೆಯ ವಿಸ್ತಾರಕ್ಕೆ ಹೆಚ್ಚಿನ ರೀತಿಯಲ್ಲಿ ಕಾರಣರಾಗಬಹುದಿತ್ತೇನೋ ಎಂಬ ಹಲವು ಅಭಿಪ್ರಾಯಗಳೊಂದಿಗೆ ನಾಡೋಜ ಡಾ. ಎಸ್ ಎಲ್ ಭೈರಪ್ಪನವರಿಗೆ ನುಡಿ ನಮನವನ್ನು ಇತ್ತೀಚಿಗೆ ಚಿಕ್ಕಮಗಳೂರಿನ ಡಿಎಸ್ಎಂಎಸ್ ಪ್ರಾಂಗಣದಲ್ಲಿ ಸಲ್ಲಿಸಲಾಯಿತು.
*ಅಜ್ಜಂಪುರ ಜಿ.ಸೂರಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು* ಆಯೋಜನೆ ಮಾಡಿದ್ದ ಈ ನುಡಿ ನಮನ ಕಾರ್ಯಕ್ರಮಕ್ಕೆ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬರಹಗಾರರು, ಕವಿಗಳು,ಲೇಖಕರು, ಚಳುವಳಿಗಾರರು, ಬೋಧಕರು, ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯ ಪ್ರಮುಖರು, ರಾಜಕೀಯ ಮುಖಂಡರು ಭಾಗವಹಿಸಿದ್ದರು.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

