ಬದುಕಿನ ದಾಟನ್ನು ತನ್ನದೇ ಆದ ದಾಟಿಯಲ್ಲಿ ದಾಟಿ ಹೋದ ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪನವರು ಇನ್ನು ನೆನಪು ಮಾತ್ರ…..*
1 min read
*ಬದುಕಿನ ದಾಟನ್ನು ತನ್ನದೇ ಆದ ದಾಟಿಯಲ್ಲಿ ದಾಟಿ ಹೋದ ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪನವರು ಇನ್ನು ನೆನಪು ಮಾತ್ರ…..*
ಒಬ್ಬ ಬರಹಗಾರ ಹೇಗಿರಬೇಕು ?ಮತ್ತು ಹೇಗಿರಬಾರದು ? ಈ ಎರಡು ಪ್ರಶ್ನೆಗಳಿಗೂ ಭೈರಪ್ಪನವರು ಸಾಕ್ಷಿಪ್ರಜ್ಞೆಯಾಗಿದ್ದಾರೆ. ಈ ಸಾಕ್ಷಿ ಪ್ರಜ್ಞೆ ಸಾಹಿತ್ಯ ಲೋಕದಲ್ಲಿ ಒಂದು ಜೀವಂತಿಕೆಯೊಂದಿಗೆ ಸದಾ ಮಿಡಿಯುತ್ತಲೇ ಇರುತ್ತದೆ.
ತಕರಾರು ಮತ್ತು ತರ್ಕ ಬೈರಪ್ಪನವರ ಬರಹದ ಒಂದು ನಿರಂತರತೆಯಾಗಿತ್ತು, ಇಂತಹ ತರ್ಕ ಮತ್ತು ತಕರಾರುಗಳೆಂಬ ತಕ್ಕಡಿಯಲ್ಲಿ ಅವರು ತೂಗಿ ಅಳೆದು ಬರದಿದ್ದೆಲ್ಲ ಸಮರತೆಯಾಗದೆ ಹಲವು ಬಾರಿ ಅ ಬರಹ ವಿಪರೀತವಾಗಿದ್ದು ಉಂಟು.ಈ ವಿಪರೀತವನ್ನು ಅವರು ಸಮರ್ಥನೆ ಮಾಡಿಕೊಂಡ ದಾಟಿಗೆ ವ್ಯಾಪಕವಾದ ವಿಮರ್ಶೆಗಳು, ಕಡು ಟೀಕೆಗಳು ಜನ್ಮ ಪಡೆದವು,
ಅಚ್ಚರಿ ಎಂದರೆ ,ಈ ಕಾರಣಕ್ಕಾಗಿಯೇ ಕನ್ನಡ ಸಾಹಿತ್ಯದಲ್ಲಿ ಅತಿ ದೊಡ್ಡ ಓದುಗರನ್ನು ಸಂಪಾದಿಸಿಕೊಂಡ ಅಗ್ರ ಪಂಕ್ತಿಯ ಬರಹಗಾರರಲ್ಲಿ ಎಸ್ ಎಲ್ ಬೈರಪ್ಪನವರು ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ.
ಹೀಗೆ ತಕರಾರು,ತರ್ಕ,ಪ್ರಶ್ನೆ, ಉತ್ತರಗಳ ಮೂಲಕ ಸತ್ಯ ಮತ್ತು ಸೌಂದರ್ಯದ ಸಂಶೋಧನೆ ಮಾಡುತ್ತಾ ಸಾಗಿದ ಭೈರಪ್ಪನವರು,ಕಾದಂಬರಿಗಳ ಮೇಲೆ ಕಾದಂಬರಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ, ಹೀಗೆ ಇವರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಇಂತಹ ಕಾದಂಬರಿಗಳಲ್ಲಿ ಹಲವಷ್ಟು ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅವು ಭಾಷಾಂತರವಾಗಿ, ಒಂದೊಂದು ಕಾದಂಬರಿಯೂ ಹತ್ತಕ್ಕೂ ಹೆಚ್ಚು ಬಾರಿ ಮರು ಪ್ರಕಟಣೆಗೊಂಡಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಇಂತಹ ಭೈರಪ್ಪನವರನ್ನು ನಿರಾಕರಣೆ ಮಾಡುತ್ತಲೇ ಅವರ ಸಾಹಿತ್ಯವನ್ನು ಓದಿಕೊಂಡವರು ಹಲವರು.
ಕಾರಣ,
ಅವರ ಬರಹದ ಶೈಲಿ, ಕಥೆ ಕಟ್ಟಿ ಆ ಕಥೆಗೆ ಕುತೂಹಲವನ್ನಿಟ್ಟು ಬೆಳೆಸುವ ರೀತಿಗೆ ಬೆರಗಾಗದೆ ಉಳಿಯದ ಓದುಗರೆ ಇಲ್ಲ.
ಅದೇನೇ ಇರಲಿ,
ಕನ್ನಡ ಸಾಹಿತ್ಯವನ್ನು ಆಂಗ್ಲ ಭಾಷೆಯೂ ಸೇರಿದಂತೆ,ದೇಶದ ಹಲವು ಭಾಷೆಗಳಿಗೆ ವ್ಯಾಪಕವಾಗಿ ಪರಿಚಯ ಮಾಡಿ ಕೊಟ್ಟು, ಕನ್ನಡದ ಮೊದಲ ಪಂಕ್ತಿಯ ಬರಹಗಾರರಲ್ಲಿ ತಾನು ಕೂಡ ಒಬ್ಬ ಎಂಬುದನ್ನು ಸಾಬೀತು ಮಾಡುತ್ತಾ, ಎರಡು ಶತಮಾನಗಳ ಅನುಭವಗಳನ್ನು ಧಕ್ಕಿಸಿಕೊಂಡು, ಶತಮಾನದಂಚಿಗೆ ಬಂದು, ತೊಂಬತ್ನಾಲ್ಕು ವಸಂತಗಳನ್ನು ಕಂಡುಂಡು,ಇಂದು ಹೊರಟುಹೋದ ಬೈರಪ್ಪನವರು ಸಾಹಿತ್ಯ ಲೋಕದೊಳಗೆ ಸದಾ ಜೀವಂತವಾಗಿ ಮತ್ತೆ ಮತ್ತೆ ನೆನಪಾಗುತ್ತಲೇ ಹೋಗುತ್ತಾರೆ…
ಹೋಗಿ ಬನ್ನಿ ಪ್ರೊಫೆಸರ್ ಸಾರ್….
ನಿಮಗಿದೂ ನಮ್ಮ ಅಂತಿಮ ನಮನ.
ಗೌರವ ಪೂರ್ವಕ ವಿದಾಯಗಳು.
ಸಂತಾಪಗಳೊಂದಿಗೆ..🙏🌹🙏
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

