ಸಾಮರಸ್ಯಕ್ಕಾಗಿ ನಾವು ನೀವು……
1 min read
ಅವಿನ್ ಟಿವಿ ಸುದ್ದಿಜಾಲ ✒️: ಸಮಾನ ಮನಸ್ಕರ ವೇದಿಕೆ ವತಿಯಿಂದ ಚಿಕ್ಕಮಗಳೂರಿನ ಪ್ರವಾಸಿ
ಮಂದಿರದಲ್ಲಿ ಸಾಮರಸ್ಯಕ್ಕಾಗಿ ನಾವು ನೀವು ಕುರಿತು ಎರಡನೇ ಪೂರ್ವಭಾವಿ ಸಭೆ.
•••••••••••••
“ಸದ್ಭಾವಗಳು ಇಲ್ಲದ ಜಾಗದಲ್ಲಿ ಬೌದ್ಧಿಕತೆ ಜಾರಿಗೊಳ್ಳಬೇಕು…. ”
ಭಾರತೀಯ ಸಮಾಜ ಇಂದು ಆಯ್ಕೆ ಇಲ್ಲದ ಎರಡು ಪಾತ್ರಗಳನ್ನು ಅನಿವಾರ್ಯವಾಗಿ ನಿರ್ವಹಿಸುತ್ತಿದೆ.
*ಒಂದು,*
ಅಪಮಾನವನ್ನು ವಿನಾಕಾರಣ ತಾನು ಅನುಭವಿಸುವುದು.
*ಇನ್ನೊಂದು,*
ಸಕಾರಣವಿಲ್ಲದೆ ಮತ್ತೊಬ್ಬರಿಗೆ ಅಪಮಾನ ಮಾಡುವುದು.
ಈ ಪರಿಣಾಮವಾಗಿ ಅಪಮಾನ. ಶೋಷಣೆ.ಅನ್ಯಾಯದ ಬಿಗುವಿನ ವಾತಾವರಣದಲ್ಲಿ ಭಾರತೀಯ ಸಮಾಜ ಉಸಿರುಗಟ್ಟಿದಂತಾಗಿದೆ.
ಯಾವ ಸಮಾಜದಲ್ಲಿ ಈ ಉಸಿರುಗಟ್ಟುವಿಕೆಯ ವಾತಾವರಣ ನಿರ್ಮಾಣವಾಗಿದೆಯೋ,ಅಲ್ಲಿ ಬೌದ್ಧಿಕತೆ ಜಾರಿಗೊಳಿಸುವುದು ನಾಗರೀಕ ಬದುಕಿನ ಕರ್ತವ್ಯ,
ಮೊದಲನೇ ದರ್ಜೆಯ ಬದುಕನ್ನು ಆಯ್ಕೆ ಮಾಡಿಕೊಂಡು ಬದುಕಬೇಕಾದ ಇಲ್ಲಿನ ಪ್ರಜೆಗಳನ್ನು, ಅಧಿಕಾರ ಕೇಂದ್ರಿತ ರಾಜಕೀಯ ಕಾರಣಕ್ಕಾಗಿ ಈ ಮುಗ್ಧ ಮತದಾರರನ್ನು ಬಲಿಪಶು ಮಾಡಿ, ಅವರೊಳಗೆ ಜಾತೀಯತೆ ಮತೀಯತೆಯನ್ನು ತುಂಬಿ, ಮೊದಲನೇ ದರ್ಜೆಯ ಬದುಕಿನಿಂದ ಮೂರನೇ ದರ್ಜೆಯ ಬದುಕಿಗೆ ತಳ್ಳಲ್ಪಟ್ಟಿದ್ದಾರೆ.
ಇಂದು,ಬಹುತೇಕ ಮಠ~ ಮಂದಿರ, ಮಸೀದಿ,ಚರ್ಚುಗಳು ಕೊಡ ಪ್ರಾರ್ಥನಾ ಮಂದಿರಗಳಾಗಿ ಉಳಿಯದೆ ವಿವಿಧ ರಾಜಕೀಯ ಪಕ್ಷದ ಕಛೇರಿಗಳಾಗಿ ಮಾರ್ಪಾಡಾಗಿವೆ.
ಇನ್ನೂ,
ಈ ಭಾರತೀಯ ಸಾಮಾಜದಲ್ಲಿರುವ ಜಾತಿಯ ವ್ಯವಸ್ಥೆಗೆ 4500 ವರ್ಷಗಳ ದೀರ್ಘ ಇತಿಹಾಸವಿದೆ, ಆದರೆ ಇಷ್ಟೇ ದೀರ್ಘವಾದ ಇತಿಹಾಸ ಭಾರತೀಯ ಸಾಮರಸ್ಯದ ಬದುಕಿಗೆ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ.
ಸಾಮರಸ್ಯದ ಬದುಕಿಗೆ ಜನ ಚಳುವಳಿಗಳನ್ನು ಕಟ್ಟಿ, ಮಾನವ ಕಲ್ಯಾಣದ ಏಳಿಗೆಗಾಗಿ ಸತ್ಕ್ರಾಂತಿ ಮಾಡಿದ ಅನೇಕ ಸಮಾಜ ಸುಧಾರಕರನ್ನು, ದಾರ್ಶನಿಕರನ್ನು ಧರ್ಮದ ಹೆಸರಿನಲ್ಲಿ ಜಾತಿಯ ಹೆಸರಿನಲ್ಲಿ ಬಂಧಿಸುವ ಕೆಲಸ ಮಾಡಿ ಅವರ ಆಶಯಕ್ಕೆ ಅಪಚಾರವೆಸಗುತ್ತಿದ್ದಾರೆ.
ಚಳುವಳಿಗಾರರು ಹೋರಾಟಗಾರರು, ಪ್ರಗತಿಪರ ಚಿಂತಕರು,ಈ ದುರಿತಕಾಲದ ಆಗಾಗ ಘಟಿಸುತ್ತಿರುವ ಕೆಲವು ಅವಘಡದ ಘಟನೆಗಳನ್ನು ನೋಡಿ ಮೈ ಚಿಮ್ಮಿ ಮಾತನಾಡುತ್ತಿದ್ದಾರೆಯೇ ಹೊರತು, ಭಾರತೀಯ ಸಮಾಜದ ಜನಸಾಮಾನ್ಯರ ದೈನಂದಿನ ಬದುಕನ್ನು ಕೇಂದ್ರೀಕರಿಸಿ ಮಾತನಾಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ಅಸಮಾನತೆಯ ಜಾಗದಲ್ಲಿ ಬೌದ್ಧಿಕತೆ ಸಮರ್ಪಕವಾಗಿ ಜಾರಿಗೊಳ್ಳದ ಕಾರಣ, ಭಾರತದ ಬಹು ಸಂಖ್ಯೆಯಲ್ಲಿರುವ ಯುವಜನತೆ ಅಪಾಯದ ಕಡೆ ವಾಲುತ್ತಿದ್ದಾರೆ,
ಈ ಹಿನ್ನಲೆಯಲ್ಲಿ, ಕಳೆದ 50 ~60 ವರ್ಷಗಳ ಅವಧಿಯಲ್ಲಿ ಭಾರತೀಯ ಸಮಾಜದಲ್ಲಿ ಘಟಿಸಿ ಹೋದ, ಚಳುವಳಿಯ ಸ್ವರೂಪವನ್ನು ಮತ್ತೊಮ್ಮೆ ಹುಡುಕಬೇಕಾಗಿದೆ.
ಈ ಹುಡುಕಾಟದ ಹಿನ್ನೆಲೆಯಲ್ಲಿ, ಭ್ರಾತೃತ್ವ, ಸದ್ಭಾವನೆ, ಸಾಮರಸ್ಯದ ಬದುಕನ್ನು ಇದ್ದಂತೆ ಇರುವಂತೆ ಇಡಿಯಾಗಿ ನಿಜ ಬದುಕೊಂದನ್ನು ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ, *ಚಿಕ್ಕಮಗಳೂರಿನ ಸಮಾನ ಮನಸ್ಕರ ವೇದಿಕೆ ಸಾಮರಸ್ಯಕ್ಕಾಗಿ ನಾವು ನೀವು ಎಂಬ ಹೆಸರಿನಲ್ಲಿ* ನಮ್ಮ ನಡಿಗೆ ಸದ್ಭಾವನೆ ಕಡೆಗೆ ಕರೆದುಕೊಂಡು ಹೋಗುವ ದೃಷ್ಟಿಯಿಂದ ಜನಜಾಗೃತಿ ಜಾಥ ಹಮ್ಮಿಕೊಳ್ಳಲು, ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಎರಡನೇ ಪೂರ್ವಭಾವಿ ಸಭೆಯನ್ನು ಕರೆದು ಚರ್ಚೆ ಸಲಹೆ ಪಡೆದು ಸಹಕಾರವನ್ನು ಕೋರಿತು.
ಚಿಕ್ಕಮಗಳೂರು ಜಿಲ್ಲೆಯ ಸಮಾನ ಮನಸ್ಕರ ವೇದಿಕೆ ಏರ್ಪಡಿಸಿದ್ದ ಈ ಪೂರ್ವಭಾವಿ ಸಭೆಗೆ, ಜಿಲ್ಲೆಯ ವಿವಿಧ ರಾಜಕೀಯ ಪಕ್ಷದ ಪ್ರಮುಖರು, ದಲಿತಪರ, ರೈತಪರ ,ಪ್ರಗತಿಪರ ಸಂಘಟನೆಯ ಮುಖಂಡರು ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳ, ಚಳುವಳಿಗಾರರು, ಜನಪರ ಹೋರಾಟಗಾರರು, ಸಾಹಿತಿಗಳು, ಕವಿ,ಲೇಖಕರು, ಮಾಧ್ಯಮದ ಸ್ನೇಹಿತರು ಮುಂತಾದವರು ಪಾಲ್ಗೊಂಡು ಈ ಮೇಲ್ಕಂಡ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇದೇ 2025ನೇ ಅಕ್ಟೋಬರ್ ಕೊನೆಯ ವಾರ ಅಥವಾ ನವಂಬರ್ ಮೊದಲ ವಾರದಲ್ಲಿ ನಡೆಯುವ ಈ ಸಾಮರಸ್ಯದ ನಡೆಗೆಗೆ ರಾಜ್ಯದ ವಿವಿಧ ಭಾಗಗಳಿಂದ ಜನಮುಖಿ ವಿಚಾರಧಾರೆಯುಳ್ಳ ಚಿಂತಕರನ್ನು ಈ ನಡಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಜಿಲ್ಲೆಯ ಒಂಬತ್ತು ತಾಲೂಕುಗಳಿಂದಲೂ ಕಾಲ್ನಡಿಗೆಗೆ ಪ್ರತಿನಿಧಿಗಳು ಭಾಗವಹಿಸುವಂತೆ ಮಾಡಲು ಸಲಹೆ ನೀಡಿದರು.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

