लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದೊಡ್ಡ ಮರಳವಾಡಿಯ ದೊಡ್ಡ ಆಲದ ಮರಕ್ಕೆ ಈಗ 77ರ ಹರಯ…………!

1983 ಕರ್ನಾಟಕ ರಾಜಕಾರಣದ ಪರ್ವಕಾಲ. ಸ್ವತಂತ್ರ ಭಾರತದ ನಂತರ ಕರ್ನಾಟಕದಲ್ಲಿ ಸತತವಾಗಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಪಕ್ಷದ ವಿರುದ್ಧದ ಗಾಳಿ ಬೀಸತೊಡಗಿತ್ತು; ಅದರ ಫಲವಾಗಿ ಜನತಾ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರ ಗ್ರಹಣ ಮಾಡಿತ್ತು. ಕರ್ನಾಟಕ ರಾಜ್ಯದಲ್ಲಿ ಜೆಪಿ ಚಳುವಳಿಯಿಂದ ಪ್ರಭಾವಿತರಾಗಿದ್ದ ಪ್ರಮುಖ ನಾಯಕರು ಗೆದ್ದು ಬೀಗಿದ್ದರು. ಆಗ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿತ್ತು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಚುನಾವಣೆಯಲ್ಲಿ ಆಯ್ಕೆಯಾಗದ ಕಾರಣ ಆರು ತಿಂಗಳಲ್ಲಿ ಯಾವುದಾದರೂ ಕ್ಷೇತ್ರದಿಂದ ಆಯ್ಕೆ ಆಗಬೇಕಿತ್ತು. ಆಗ ಅವರಿಗೆ ಸ್ಥಾನ ತೆರವು ಮಾಡಿಕೊಟ್ಟಿದ್ದು ಬೇರೆ ಯಾರು ಅಲ್ಲ. ಅವತ್ತಿನ 34ರ ಅರೆಯದ ಕನಕಪುರದ ಯುವಕ ಅವರೇ ಪಾಂಡುರಂಗ ಗಣೇಶ್ ರಾವ್ ಸಿಂಧಿಯಾ (ಪಿ ಜಿ ಆರ್ ಸಿಂಧ್ಯಾ).

ಶ್ರೀಯುತರು ಅಂದಿನಿಂದ ಇಂದಿನವರೆಗೂ ಮೌಲ್ಯ ಆಧಾರಿತ ಸಮಾಜವಾದಿ ಧುರೀಣರಾಗಿ ಕರ್ನಾಟಕದ ರಾಜಕೀಯ ಭೂಪಟದಲ್ಲಿ ಚಿರಸ್ಥಾಯಿ.

*ನಡೆದು ಬಂದ ಹಾದಿ ರೋಚಕ :

ದೊಡ್ಡ ಮರಳವಾಡಿಯಲ್ಲಿ ಜನನ. ಅಲ್ಲಿಯ ಸರ್ಕಾರಿ ಶಾಲೆಯಲ್ಲಿ ಓದು, ಉತ್ತಮ ಕುಟುಂಬದ ಹಿನ್ನೆಲೆ, ಆರ್ ವಿ ಇಂಜಿನಿಯರಿಂಗ್ ಕಾಲೇಜಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದವರು. ಅಲ್ಲಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿಯಾಗಿ, 1977ರ ತುರ್ತು ಪರಿಸ್ಥಿತಿಯಲ್ಲಿ ಭಾಗಿಯಾಗುವ ಮುಖೇನ 2 ವರ್ಷಗಳ ಸೆರೆವಾಸ ಅನುಭವಿಸುವಾಗ ವಾಜಪೇಯಿ, ಅಡ್ವಾಣಿ, ದೇವೇಗೌಡ್ರು, ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಹಲವರ ಸಂಪರ್ಕ ಸಾಧನೆ ಆಯಿತು.

ನಂತರ 1983 ರಲ್ಲಿ ಜನತಾ ಪಕ್ಷದಿಂದ ಕನಕಪುರ ವಿಧಾನಸಭಾ ಕ್ಷೇತ್ರದ ಸ್ಪರ್ಧಿಸಿ ತನ್ನ ರಾಜಕೀಯದ ವಿಜಯಯಾತ್ರೆಯನ್ನು ಆರು ಬಾರಿ ಗೆಲ್ಲುವ ಮೂಲಕ 2004ರ ವರೆಗೂ ಮುಂದುವರೆಸಿದರು
ಹಾಗೂ
ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ ಎಚ್ ಪಟೇಲ್, ಎಸ್ ಆರ್ ಬೊಮ್ಮಾಯಿ, ಧರ್ಮಸಿಂಗ್ ಸಂಪುಟದಲ್ಲಿ ಆರೋಗ್ಯ, ಸಾರಿಗೆ, ಕೈಗಾರಿಕೆ, ಹಣಕಾಸು ಸೇರಿದಂತೆ ಸುಮಾರು 16 ಖಾತೆಗಳ ಸಮರ್ಪಕ ನಿರ್ವಹಣೆ ಮಾಡುವ ಮೂಲಕ ಒಬ್ಬ ದಕ್ಷ ಮಂತ್ರಿಯೆಂಬ ಹೆಸರು ಗಳಿಸಿದವರು.

ಕಳೆದ ಹತ್ತು ವರ್ಷಗಳಿಂದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಕರ್ನಾಟಕದ ಮುಖ್ಯ ಆಯುಕ್ತರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಅವರು ಮೈಸೂರು, ಮೂಡಿಬಿದರೆಯಲ್ಲಿ ಇವರ ನೇತೃತ್ವದಲ್ಲಿ ನಡೆದ ಅಂತರರಾಷ್ಟ್ರೀಯ ಸ್ಕೌಟ್ ಜಾಂಬೂರಿ ಅವಿಸ್ಮರಣೀಯ.

ಪ್ರಸ್ತುತ ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ಸಿಂದ್ಯಾರವರು ಬೀದರ್ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಅವಕಾಶ ಕೊಡಲು ಕಾಂಗ್ರೆಸ್ ಪಕ್ಷದೊಳಗೆ‌ ಒಂದು ಮಹತ್ವದ ಚಿಂತನೆ ನಡೆದಿದೆ.

*ನಾನು ನೋಡಿದಂತೆ ಪಿ ಜಿ ಆರ್* *ಸಿಂಧ್ಯಾ :

ಜನತಾ ಪಕ್ಷದ ರಾಜಕೀಯ ವಿದ್ಯಮಾನಗಳನ್ನು ಗಮನಿಸುವಾಗ ರಾಮಕೃಷ್ಣ ಹೆಗಡೆ ಅವರ ಮಂತ್ರಿ ಮಂಡಲದಲ್ಲಿ ಮಾದರಿ ಮಂತ್ರಿಗಳಾಗಿದ್ದ ದೇವೇಗೌಡ್ರು, ಎಸ್.ಆರ್. ಬೋಮ್ಮಾಯಿ, ಎಂಪಿ ಪ್ರಕಾಶ್, ಪಿ ಜಿ ಆರ್ ಸಿಂಧ್ಯಾ, ಡಿ. ಮಂಜುನಾಥ್, ಜೆ ಹೆಚ್ ಪಟೇಲ್, ಬಿ ಎಲ್ ಶಂಕರ್ ಸೇರಿದಂತೆ ಎಲ್ಲರೂ ಸಿಎಂ ಮೆಟೀರಿಯಲ್ಸ್ ಎಂದರೆ ತಪ್ಪಾಗುವುದಿಲ್ಲ. ಇವರುಗಳ ಪೈಕಿ ಸಿದ್ದರಾಮಯ್ಯ,‌ ಎಸ್ ಆರ್ ಬೊಮ್ಮಾಯಿ, ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾದರು, ಎಂ.ಪಿ.ಪ್ರಕಾಶ್ ಉಪ ಮುಖ್ಯಮಂತ್ರಿ ಆದರು. ಅದರಲ್ಲಿ ಪ್ರಮುಖವಾಗಿ ಅರ್ಹತೆ ಇದ್ದರು ವಂಚಿತರಾದವರು ಪಿಜಿಆರ್ ಸಿಂದ್ಯಾ ಹಾಗೂ ಬಿ.ಎಲ್.ಶಂಕರ್ ಇಬ್ಬರೇ. ಬೇರೆ ಬೇರೆ ಕಾರಣಕ್ಕೆ ಶಂಕರ್ ವಂಚಿತರಾದರೆ ಎಲ್ಲಾ ಅರ್ಹತೆಗಳಿದ್ದರೂ ಅತಿ ಸಣ್ಣ ಜಾತಿಯಲ್ಲಿ ಜನಿಸಿದ ಕಾರಣಕ್ಕೆ ಸಿಂಧಿಯಾ ಅವರು ಅವಕಾಶ ವಂಚಿತರಾದರೆಂದರೆ ಅತಿಶಯೋಕ್ತಿಯಲ್ಲ.

ನಾನು ಕಾಲೇಜಿನಲ್ಲಿ ಓದುತ್ತಿದ್ದ ದಿನಗಳ ದಿನಗಳದು. ಸಾಹಿತ್ಯ, ರಾಜಕೀಯ, ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇದ್ದ ನನಗೆ ರಾಜಕಾರಣದಲ್ಲಿ ಧ್ರುವ ತಾರೆಯಂತೆ ಕಂಡಿದ್ದು ಪಿ ಜಿ ಆರ್ ಸಿಂಧ್ಯಾರವರು. ಅವರು ಆರೋಗ್ಯ, ಕೈಗಾರಿಕೆ, ಸಾರಿಗೆ ಕ್ಷೇತ್ರದಲ್ಲಿ ಮಾಡಿದ ಕಾರ್ಯ ಅನುಕರಣೆಯ. ನಾನು ಕಂಡಂತೆ ರಾಜ್ಯದ ಬಹು ಮಹಡಿ ಕಟ್ಟಡದಲ್ಲಿರುವ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳು, ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಎದ್ದು ನಿಂತು ಸಿಂದಿಯಾ ಅವರನ್ನು ಗೌರವಿಸಿದ್ದನ್ನು ಕಣ್ಣಾರೆ ನೋಡಿರುವ ನಾನು ಪ್ರಸ್ತುತವಾಗಿ ಈಗ ಯಾವುದೇ ಪ್ರಮುಖ ಅಧಿಕಾರ ಇಲ್ಲದೇ ಇದ್ದರೂ ಕೂಡ ಈ ಎತ್ತರದ ಗೌರವವನ್ನು ಉಳಿಸಿಕೊಂಡಿರುವ ಮೌಲ್ಯಧಾರಿತ ವ್ಯಕ್ತಿ ಸಿಂಧಿಯಾ ಎಂದರೆ ತಪ್ಪಾಗಲಾರದು.

ನಾನು ಶ್ರೀಯುತರೊಂದಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸಿ ಅವರ ಪಕ್ಕದಲ್ಲಿ ಇರುತ್ತೇನೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಅವರ ಅಪೇಕ್ಷೆಯಂತೆ ಇಂದು ನಾನು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ.. ಇದು ನನ್ನ ಭಾಗ್ಯವೇ ಸರಿ. ಮೌಲ್ಯಾಧಾರಿತ ರಾಜಕಾರಣ ನೇಪಥ್ಯಕ್ಕೆ ಸರಿಯುತ್ತಿರುವ ಇಂದಿನ ದಿನಗಳಲ್ಲಿ ಸಿಂದ್ಯಾರವರಂತವರು ರಾಜಕೀಯ ಮುಖ್ಯ ಭೂಮಿಯಲ್ಲಿ ಇರಬೇಕೆಂಬುದು ಬಹುಜನರ ಅಪೇಕ್ಷೆಯೊಂದಿಗೆ ಸಿಂಧ್ಯಾ ರವರಿಗೆ 77ನೇ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ಭಗವಂತ ಆಯುರಾರೋಗ್ಯ ಐಶ್ವರ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.

– ಎ.ಎನ್.ಮಹೇಶ್,
ಅಧ್ಯಕ್ಷರು(ಎಸ್ ಇ ಎ ಸಿ ),ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರ, ಬೆಂಗಳೂರು,
ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯತಿ, ಚಿಕ್ಕಮಗಳೂರು,
ಉಪಾಧ್ಯಕ್ಷರು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಕರ್ನಾಟಕ.

About Author

Leave a Reply

Your email address will not be published. Required fields are marked *

You may have missed