ಶಾಂತವೇರಿ ಗೋಪಾಲ ಗೌಡರು ತಮ್ಮ ಕೊರಳಿಗೆ ಸದಾ ಹಾಕುತ್ತಿದ್ದ ಅವರ ಮಫ್ಲರ್ ನ್ನು ಜನರಿಗೆ ತೋರಿಸಿ ಚುನಾವಣೆಯಲ್ಲಿ ಗೆದ್ದು ಬಂದವರು…
1 min read
ಅವಿನ್ ಟಿವಿ ಸುದ್ದಿಜಾಲ ✒️:
ಆತ್ಮೀಯರೇ ನಮಸ್ಕಾರ, ಶಾಂತವೇರಿ ಗೋಪಾಲ ಗೌಡರು ತಮ್ಮ ಕೊರಳಿಗೆ ಸದಾ ಹಾಕುತ್ತಿದ್ದ ಅವರ ಮಫ್ಲರ್ ನ್ನು ಜನರಿಗೆ ತೋರಿಸಿ ಚುನಾವಣೆಯಲ್ಲಿ ಗೆದ್ದು ಬಂದವರು ಕೋಣಂದೂರು ಲಿಂಗಪ್ಪನವರು.
ಈಗ ಚಲನೆಯಲ್ಲಿರುವುದು ಅಧಿಕಾರ ಕೇಂದ್ರೀಕೃತ ರಾಜಕಾರಣ, ಸಿದ್ದಾಂತ, ಶುದ್ಧತೆ, ನಿಸ್ವಾರ್ಥ, ಪ್ರಾಮಾಣಿಕತೆ, ಪಕ್ಷನಿಷ್ಠೆ, ಬದ್ಧತೆ ರಾಜಕಾರಣಕ್ಕೆ ಬೇಕಾಗಿರುವ ಸೇವಾ ಮನೋಭಾವನೆ ಈ ಎಲ್ಲವುಗಳಿಗೆ ಇಲ್ಲಿ ಜಾಗವಿಲ್ಲ. ಅಭ್ಯರ್ಥಿಗಳ ಬ್ಯಾಂಕ್ ಪಾಸ್ ಬುಕ್ ನೋಡಿ ಸೀಟು ಕೊಡುವ ಕಾಲವಿದು, ತಳಹಂತದ ಗ್ರಾಮ ಪಂಚಾಯಿತಿಯಂಥಹ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬೇಕಾದರೂ ಲಕ್ಷಾಂತರ ರೂಗಳು ವೆಚ್ಚ ಮಾಡಬೇಕು, ಒಂದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲಾ ಸ್ಪರ್ಧಿಗಳು ಚುನಾವಣೆಗಾಗಿ ಖರ್ಚು ಮಾಡುವ ಒಟ್ಟು ಹಣ ಆ ಪಂಚಾಯಿತಿಯ ಐದು ವರ್ಷದ ಬಜೆಟ್ ಗಿಂತ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಶತಮಾನದತ್ತ ಕಾಲಿಡುತ್ತಿರುವ ಪರಿಶುದ್ಧ ರಾಜಕಾರಣದ ಪ್ರತೀಕವಾಗಿರುವ ಕೋಣಂದೂರು ಲಿಂಗಪ್ಪನವರ ಬಗ್ಗೆ ದಿ ಹಿಂದೂ ಪತ್ರಿಕೆ ಪ್ರಕಟಿಸಿದ ಪ್ರಕಟಣೆಯನ್ನು ನೋಡಿ,ನನ್ನ ವಕೀಲ ಗೆಳೆಯ ಜಿ ಟಿ ನರೇಂದ್ರ ಬರೆದಿರುವ ಒಂದು ಲೇಖನ ಅವಿನ್ ಟಿವಿ ಓದುಗರಿಗಾಗಿ ಕೊಡ ಮಾಡುತ್ತಿದೆ.
ಪ್ಲೀಸ್,,,,👇
ಈ ಚಿತ್ರದಲ್ಲಿ ಕಾಣುತ್ತಿರುವವರು ಸಮಾಜವಾದಿ ಪಕ್ಷದ ಮಾಜಿ ಶಾಸಕ ಶ್ರೀ ಕೋಣಂದೂರು ಲಿಂಗಪ್ಪನವರು.
1972 ರಲ್ಲಿ ತಮ್ಮ ಗುರು ಶಾಂತವೇರಿ ಗೋಪಾಲಗೌಡರ ಅನಾರೋಗ್ಯದ ನಿಮಿತ್ತ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಪೂರ್ಣಚಂದ್ರ ತೇಜಸ್ವಿ,ಕಡಿದಾಳ್ ಶಾಮಣ್ಣ,ಎನ್.ಡಿ.ಸುಂದರೇಶ್, ಪ್ರೊ.ನಂಜುಂಡಸ್ವಾಮಿ,ಅನಂತಮೂರ್ತಿ ಯವರೇ ಸ್ಟಾರ್ ಪ್ರಚಾರಕರು.
ಬೋವಿ ಜನಾಂಗಕ್ಕೆ ಸೇರಿದ ಲಿಂಗಪ್ಪನವರು ಸಾಮಾನ್ಯ ಮತ ಕ್ಷೇತ್ರದಲ್ಲಿ ಸ್ಪರ್ಧಿಸಿ,ಸಾರ್ವಜನಿಕರೇ ನೀಡಿದ ಸುಮಾರು ಎಂಟು ಸಾವಿರ ದೇಣಿಗೆ ಹಣದಲ್ಲಿ ಕೇವಲ ಐದು ಸಾವಿರ ಖರ್ಚು ಮಾಡಿ ಚುನಾವಣೆ ಗೆಲ್ಲುತ್ತಾರೆ. ಉಳಿದ ಹಣವನ್ನು ಶಾಂತವೇರಿ ಗೋಪಾಲಗೌಡರ ಅನಾರೋಗ್ಯಕ್ಕೆ ವೆಚ್ಚ ಮಾಡುತ್ತಾರೆ.
ತಮ್ಮ ಉತ್ತರಾಧಿಕಾರಿಯನ್ನಾಗಿ ಗೌಡರು,ಸಮಾಜವಾದಿ ಯುವ ಜನ ಸಭಾ ಮುಖಂಡರಾಗಿದ್ದ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರನ್ನು ಆಯ್ಕೆ ಮಾಡಿರುತ್ತಾರೆ. ತೇಜಸ್ವಿ ತಮ್ಮ ಗುರುವಿನ ಬಯಕೆಯನ್ನು ನಯವಾಗಿ ತಿರಸ್ಕರಿಸಿ ಕೋಣಂದೂರು ಲಿಂಗಪ್ಪನವರನ್ನು ಗೆಲ್ಲಿಸಿಕೊಳ್ಳತ್ತಾರೆ..
ಈಗ ಸಕ್ರಿಯ ರಾಜಕೀಯದಿಂದ ದೂರ ಉಳಿದಿರುವ ಕೋಣಂದೂರು ಲಿಂಗಪ್ಪನವರು ಸಮಾಜವಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸ/ ಮಾರ್ಗದರ್ಶನ ಮಾಡುತ್ತಾರೆ. ಸ್ವತಃ ಕವಿ /ಲೇಖಕರಾಗಿರುವ ಲಿಂಗಪ್ಪನವರು ಕುವೆಂಪು,ಅಡಿಗರ ಹಾಡುಗಳನ್ನು ಹಾಡುತ್ತಾರೆ..
ಸರಳ ಸಜ್ಜನಿಕೆಯ ನೈಜ ಸಮಾಜವಾದಿ ಕೋಣಂದೂರು ಲಿಂಗಪ್ಪನವರ ಬಗ್ಗೆ ಲೇಖನ ಪ್ರಕಟಿಸಿದ್ದ The Hindu ಪತ್ರಿಕೆಗೆ ಧನ್ಯವಾದಗಳು.
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

