ಪರಂಪರೆಯೊಳಗಿರುವ ಪ್ರಜ್ಞೆ ಮುಸುಕಾಗಬಾರದು, ಆಚರಣೆಗಳು ಸಾಮಾಜಿಕ ಸಂಬಂಧವನ್ನು ಗಟ್ಟಿಗೊಳಿಸಬೇಕು. ಫಲಾಹಾರಸ್ವಾಮಿ ಮಠದ ಶ್ರೀಗಳ ಅಭಿಮತ*..
1 min read

ಅವಿನ್ ಟಿವಿ ಸುದ್ದಿಜಾಲ ಚಿಕ್ಕಮಗಳೂರು ಆ 25: *ಪರಂಪರೆಯೊಳಗಿರುವ ಪ್ರಜ್ಞೆ ಮುಸುಕಾಗಬಾರದು, ಆಚರಣೆಗಳು ಸಾಮಾಜಿಕ ಸಂಬಂಧವನ್ನು ಗಟ್ಟಿಗೊಳಿಸಬೇಕು. ಫಲಾಹಾರಸ್ವಾಮಿ ಮಠದ ಶ್ರೀಗಳ ಅಭಿಮತ*
ತಾಲೂಕಿನ ಫಲಾಹಾರಸ್ವಾಮಿ ಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ ಅವರು ಶ್ರೀ ಮಠದ ಅವಿಚ್ಚಿನ್ನ ಪರಂಪರೆ ಮತ್ತು ಸಂಪ್ರದಾಯದಂತೆ ಶ್ರೀ ಸ್ವರ್ಣ ಗೌರಿ ಹಬ್ಬದ ಮುನ್ನಾದಿನವಾದ ಸೋಮವಾರ ಬಿಂಡಿಗದ ಶ್ರೀ ದೇವಿರಮ್ಮ ದೇವಾಲಯದ ಆವರಣದಲ್ಲಿ *ಹಿತಾರ್* ಆಚರಣೆಗಾಗಿ ವಾಡಿಕೆಯಂತೆ ಭಕ್ತರಿಗೆ ಜೋಡಿ ತೆಂಗಿನಕಾಯಿ, ಮಂತ್ರಾಕ್ಷತೆ ಮತ್ತು ವಿಭೂತಿಯನ್ನು ಪ್ರಸಾದ ರೂಪದಲ್ಲಿ ವಿತರಿಸಿ ಆಶೀರ್ವದಿಸಿದರು.
ಸಂಜೆ ವೇಳೆಗೆ ಶ್ರೀ ದೇವಿರಮ್ಮ ದೇವಾಲಯಕ್ಕೆ ಆಗಮಿಸಿದ ಫಲಾಹಾರದೊಡೆಯರು ದೇವಾಲಯದ ಅಧಿದೇವತೆಗಳಾದ ಶ್ರೀದೇವಿರಮ್ಮ.ಹಾಲಮ್ಮ ಮತ್ತು ಚಿಕ್ಕಮ್ಮದೇವಿಯರಿಗೆ ಶ್ರೀಮಠದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ ಅರಿಶಿಣ, ಕುಂಕುಮ, ಫಲ ಪುಷ್ಪ ದೊಂದಿಗೆ ಬಾಗಿಣ ಸಮರ್ಪಿಸಿದರು.
ಮಹಾಮಂಗಳಾರತಿ ನಂತರ ದೇವಾಲಯದ ಆವರಣದಲ್ಲಿ ಕಾದುನಿಂತಿದ್ದ ಬಿಂಡಿಗ, ಮಲ್ಲೇನಹಳ್ಳಿ, ಹೆಬ್ಬಳ್ಳಿ, ಚಿನ್ನಮಕ್ಕಿ, ಅರಿಶಿಣಗುಪ್ಪೆ ಮತ್ತು ಹಲಸುಬಾಳು ಹಾಗೂ ಇತರೆ ಗ್ರಾಮಸ್ಥರಿಗೆ ಫಲಾಹಾರಸ್ವಾಮಿ ಮಠದ ಇತಿಹಾಸದಲ್ಲಿ ಅನೂಚಾನವಾಗಿ ನಡೆದು ಬಂದ ಪದ್ಧತಿಯಂತೆ ಜೋಡಿ ತೆಂಗಿನಕಾಯಿ,ಮಂತ್ರಾಕ್ಷತೆ ಮತ್ತು ವಿಭೂತಿಯನ್ನು ಪ್ರಸಾದ ರೂಪದಲ್ಲಿ ವಿತರಿಸಿ ಹರಸಿದರು.
ಈ ವೇಳೆ ಆಶೀರ್ವಚನ ನೀಡಿದ ಶ್ರೀ ಮುರುಘೇಂದ್ರಸ್ವಾಮೀಜಿ ಅವರು ಜಾತ್ರೆ, ರಥೋತ್ಸವ, ಉತ್ಸವ, ಹಬ್ಬ,ಹರಿದಿನಗಳನ್ನು ನಮ್ಮ ಹಿರಿಯರು ಆಚರಣೆಗೆ ತಂದಿರುವುದು ಎಲ್ಲರನ್ನೂ ಒಗ್ಗೂಡಿಸುವುದಕ್ಕಾಗಿ ಹಾಗೂ ಸಮಾಜದಲ್ಲಿ ಭಾವೈಕ್ಯತೆಯನ್ನು ಬೆಳೆಸುವುದಕ್ಕಾಗಿ ಎಂದರು.
ಎಲ್ಲರೂ ಈ ಸತ್ಯವನ್ನು ಅರಿಯಬೇಕು ಹಬ್ಬ ಹರಿ ದಿನಗಳನ್ನು, ಜಾತ್ರೆ, ಉತ್ಸವ ರಥೋತ್ಸವಗಳನ್ನು ಒಗ್ಗೂಡಿ ಆಚರಿಸಬೇಕು, ಹಾಗಾದಾಗ ಮಾತ್ರ ಭಾವೈಕ್ಯತೆ ಬೆಳೆಯುತ್ತದೆ, ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗುತ್ತದೆ, ಸುಖ, ಸಂತಸ, ಶಾಂತಿ, ನೆಮ್ಮದಿ ನಮ್ಮದಾಗುತ್ತವೆ ಎಂದು ಕಿವಿಮಾತು ಹೇಳಿದರು.
ಭಗವಂತನೊಬ್ಬನೇ ಇರುವುದು, ಆತನ ಹೆಸರುಗಳು ಮಾತ್ರ ಹಲವು ಇವೆ, ಹಾಗಾಗಿ ಈ ದೇವರು ದೊಡ್ಡದು, ಆ ದೇವರು ಚಿಕ್ಕದು, ಇದೇ ಶ್ರೇಷ್ಠ ಎಂಬ ಭಾವನೆ, ವಾದ, ಸಲ್ಲದು, ಅವರವರ ದೇವರು, ಅವರವರ ಧರ್ಮ ಅವರವರಿಗೆ ದೊಡ್ಡದು ಎಂದ ಶ್ರೀಗಳು ಈ ಹಿನ್ನೆಲೆಯಲ್ಲಿ ಎಲ್ಲರೂ ಇನ್ನೊಬ್ಬರ ಆಚರಣೆಗಳನ್ನು ಗೌರವಿಸಬೇಕು ಎಂದು ತಿಳಿ ಹೇಳಿದರು.
ಭಾರತದ ಜೀವಸ್ವರ ನೂರಾರುತರವಿದೆ, ಈ ನೆಲದ ನೀತಿಯಲ್ಲಿ ವಿಭಿನ್ನತೆ ಇದೆ, ವಿಭಿನ್ನತೆಯಲ್ಲಿ ವಿಚಾರಧಾರೆಗಳು ಅಡಗಿವೆ, ಧರ್ಮದ ಬಿಳಲುಗಳು ಆಚರಣೆ, ಸಂಪ್ರದಾಯ ಸಂಸ್ಕೃತಿ, ಪರಂಪರೆಯ ಹೆಸರಿನಲ್ಲಿ ಮೈ ಚಾಚಿಕೊಂಡಿವೆ, ಒಂದು ಹಸನಾದ ಬದುಕಿಗೆ ಈ ಎಲ್ಲಾ ಆಚರಣೆ ಪರಂಪರೆಗಳು ತನ್ನದೇ ಆದ ಕೊಡುಗೆ ನೀಡಿವೆ. ಈ ಎಲ್ಲಕ್ಕೂ ಒಂದು ಶ್ರೇಷ್ಠವಾದ ಪ್ರಾಚೀನತೆ ಇದೆ ಎಂದು ಹೇಳಿದರು.
ಬದಲಾದ ಕಾಲಘಟ್ಟದಲ್ಲಿ ಈ ಜಗತ್ತು ವಿಕಾಸದ ಹಾದಿಯಲ್ಲಿ ಸಾಗುತ್ತಿದೆ, ಆಧುನಿಕತೆಯ ಹೆಸರಿನಲ್ಲಿ ಈ ನೆಲದ ಶ್ರೇಷ್ಠ ಆಚರಣೆಗಳು,ರೂಡಿಗಳು,ಸಂಪ್ರದಾಯಗಳು, ಈ ಎಲ್ಲವುಗಳಲ್ಲಿರುವ ಶ್ರೇಷ್ಠ ಮೌಲ್ಯಗಳು, ಜ್ಞಾನದ ಶಾಖೆಗಳಂತೆ ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ತಿಳಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಕುಲಶೇಖರ್ ಗ್ರಾಮದ ಮುಖಂಡರಾದ ನಿಂಗಶೆಟ್ಟಿ.ಚಂದ್ರೇಗೌಡ.ದೇವಿರ ಶೆಟ್ಟಿ.ಹೆಬ್ಬಳ್ಳಿ ನಾಗೇಶ್ ಗೌಡ. ಅರಿಶಿಣಗುಪ್ಪೆ ಮಹೇಶ್ ಗೌಡ. ಸಿದ್ದಪ್ಪ ಶೆಟ್ಟಿ.ಹಲಸು ಬಾಳು ಮೂರ್ತಿ. ಕೆ.ಬಿ ಮಹೇಶ್. ಅರ್ಚಕರಾದ ಚಂದ್ರು. ಅಶೋಕ್ ಗೌಡ.ಗಣೇಶ್.ಗಿರೀಶ್.ಉಮೇಶ್ ಮತ್ತಿತರ ಮುಖಂಡರು ಹಾಜರಿದ್ದರು.
ಸುತ್ತಮುತ್ತಲ ಹಳ್ಳಿಗಳ ಭಕ್ತರಿಗೆ ಹಿತಾರ್ ಆಚರಣೆಗಾಗಿ ಗೌರಿ ಹಬ್ಬದ ಮುನ್ನಾದಿನ ಜೋಡಿ ತೆಂಗಿನಕಾಯಿ, ಮಂತ್ರಾಕ್ಷತೆ ಮತ್ತು ವಿಭೂತಿಯನ್ನು ಪ್ರಸಾದದ ರೂಪದಲ್ಲಿ ಶ್ರೀಗಳು ವಿತರಿಸುವ ಸಂಪ್ರದಾಯ ಫಲಾಹಾರಸ್ವಾಮಿ ಮಠದಲ್ಲಿ ನೂರಾರು ವರ್ಷಗಳಿಂದ ಅನುಚಾನವಾಗಿ ನಡೆದು ಬಂದಿದ್ದು, ಶ್ರೀಗಳಿಂದ ಪಡೆದ ಜೋಡಿ ತೆಂಗಿನಕಾಯಿಯಲ್ಲಿ ಭಕ್ತರು ಒಂದು ಕಾಯಿಯನ್ನು ಹಿರಿಯರಿಗೆ ಒಡೆಯುತ್ತಾರೆ, ಇನ್ನೊಂದನ್ನು ಸ್ವರ್ಣ ಗೌರಿಯನ್ನು ಪ್ರತಿಷ್ಠಾಪಿಸುವ ಕಳಶಕ್ಕೆ ಬಳಸಿ ಪೂಜೆ ಸಲ್ಲಿಸುತ್ತಾರೆ.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

