ಸಾಹಿತ್ಯದಲ್ಲಿ ಹೊಸ ಬೆಳಕನ್ನು ಕಾಲಕಾಲಕ್ಕೆ ಮುಟ್ಟದಿದ್ದರೆ ಈ ನೆಲದ ಜ್ಞಾನವೃಕ್ಷ ಕುಂದಿ ಮನುಷ್ಯನ ಬೌದ್ಧಿಕತೆ ದಿವಾಳಿಯಾಗಬಹುದು…*
1 min read
ಅವಿನ್ ಟಿವಿ ಸುದ್ದಿಜಾಲ ಆಲ್ದೂರು✒️:
*ಸಾಹಿತ್ಯದಲ್ಲಿ ಹೊಸ ಬೆಳಕನ್ನು ಕಾಲಕಾಲಕ್ಕೆ ಮುಟ್ಟದಿದ್ದರೆ ಈ ನೆಲದ ಜ್ಞಾನವೃಕ್ಷ ಕುಂದಿ ಮನುಷ್ಯನ ಬೌದ್ಧಿಕತೆ ದಿವಾಳಿಯಾಗಬಹುದು…*
ಆಲ್ದೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರಾವಣ ಸಂಜೆ ಕಾರ್ಯಕ್ರಮ.
*ಮಾನವನ ಬೌದ್ಧಿಕ ಬೆಳವಣಿಗೆ ಸಾಹಿತ್ಯದ ಕೊಡುಗೆ* ಕುರಿತು ಚಿಂತನ ಮಂಥನ.
ಬದಲಾದ ಈ ದಿನಮಾನದಲ್ಲಿ ಬಹುತ್ವದ ಆಲೋಚನೆಗಳಿಗೆ ತೆರೆದುಕೊಳ್ಳದೆ, ಬಹುರೂಪಿತನಕ್ಕೆ ಒಗ್ಗಿಕೊಳ್ಳದೆ, ಸಂಕುಚಿತ ಮನೋಭಾವನೆ ನಮ್ಮನ್ನು ಹೆಚ್ಚು ಹೆಚ್ಚು ಆಳುತ್ತಿರುವ ಕಾರಣ ನೆಲಮೂಲದಿಂದ ಚಿಮ್ಮಿ ಬಂದಂತಹ ನಮ್ಮ ಜ್ಞಾನಶಿಸ್ತುಗಳು ಕೊಳೆಯಲಾರಂಬಿಸಿವೆ.
ಇಂತಹ ಜ್ಞಾನದ ಶಿಸ್ತುಗಳೊಂದಿಗೆ ಈ ನೆಲದಲ್ಲಿ ಅನೇಕ ಪರಂಪರೆಗಳು ಜನ್ಮತಾಳಿವೆ, ಹೀಗೆ ಜನ್ಮ ಕಳೆದ ಪ್ರತಿ ಪರಂಪರೆಗೂ ಒಂದೊಂದು ಪ್ರಜ್ಞೆ ಇರುತ್ತದೆ, ಪ್ರಾಚೀನ ಇತಿಹಾಸ ಇರುವ ಕನ್ನಡದ ಪರಂಪರೆಗೆ ಜಾತ್ಯಾತೀತ ಪ್ರಜ್ಞೆ ಇದೆ, ಅದು ಮನುಷ್ಯತ್ವವನ್ನು ಪ್ರತಿಪಾದಿಸುತ್ತದೆ. ಮನುಷ್ಯರು ಮನುಷ್ಯರನ್ನಾಗಿ ನೋಡುಲು ಬಯಸುತ್ತದೆ. ಜೊತೆಗೆ ಪರಧರ್ಮವನ್ನು ಪರ ವಿಚಾರವನ್ನು ಯಾಕಾಗಿ ಗೌರವಿಸಬೇಕು ಎಂದು ನಿರ್ದೇಶನ ಮಾಡುತ್ತದೆ.
ಕನ್ನಡದ ಇಂತಹ ಇತಿಹಾಸವನ್ನು ಒಮ್ಮೆ ಹಿಂತಿರುಗಿ ನೋಡಿದರೆ ಪ್ರಭುತ್ವ ಮತ್ತು ಸಾಹಿತ್ಯ ಒಟ್ಟೊಟ್ಟಿಗೆ ಬೆಳೆದು ಬಂದಿದ್ದನ್ನು ಕಾಣಬಹುದು, ಕನ್ನಡದ ಮೊದಲ ಉಪಲಬ್ದ ಗ್ರಂಥವಾದ ಕವಿರಾಜ ಮಾರ್ಗದಲ್ಲಿ ಕವಿ ಮತ್ತು ರಾಜ ಒಟ್ಟೊಟ್ಟಿಗೆ ಯಾವ ದಾಟಿಯಲ್ಲಿ ಹೆಜ್ಜೆ ಹಾಕಿದ್ದರು ಎಂಬುದನ್ನು ಇಂದಿನ ಪ್ರಜಾಪ್ರಭುತ್ವ ಅರ್ಥೈಸಿಕೊಳ್ಳಬೇಕಾಗಿದೆ.
ಈ ಹಿನ್ನೆಲೆಯಲ್ಲಿ, ಚಿಕ್ಕಮಗಳೂರು ತಾಲೂಕು ಆಲ್ದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ಏರ್ಪಡಿಸಿತ್ತು.
ಮಾನವನ ಭೌದ್ಧಿಕ ಬೆಳವಣಿಗೆಗೆ ಸಾಹಿತ್ಯದ ಕೊಡುಗೆ ಕುರಿತು ಉಪನ್ಯಾಸ ಏರ್ಪಡಿಸಿ,ಸಾಹಿತ್ಯ ಮತ್ತು ಪ್ರಭುತ್ವದ ಹೊಣೆಗಾರಿಕೆ ಏನು ಎಂಬುದನ್ನು ವಿವೇಚಿಸಿ, ನಮ್ಮ ನಮ್ಮ ವಿವೇಕದ ಹೆಜ್ಜೆಗಳು ಮುಂದಿನ ದಿನಗಳಲ್ಲಿ ಹೇಗಿರಬೇಕು ಎಂಬ ಚಿಂತನ ಮಂಥನ ನಡೆಸಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ನಡೆಸಿದ ರಸಪ್ರಶ್ನೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿತು ಹಾಗೂ ಗ್ರಾಮೀಣ ಪತ್ರಿಕೋದ್ಯಮದ ಬಗ್ಗೆ ಬೆಳಕು ಚೆಲ್ಲಿದ ಬರಹಕ್ಕಾಗಿ ಮಾಧ್ಯಮ ಸಂಸ್ಕೃತಿ ಅಕಾಡೆಮಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಆಲ್ದೂರಿನ ವಿಜಯವಾಣಿ ಪತ್ರಿಕೆ ವರದಿಗಾರ್ತಿ ತನುಜಾ ರಾಜೇಶ್ ಗೆ ಗೌರವಿಸಿತು.
ಆಲ್ದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತುಮತ್ತು ಹೋಬಳಿ ಮಟ್ಟದ ಮಹಿಳಾ ಘಟಕ ಜಂಟಿಯಾಗಿ ಆಯೋಜಿಸಿದ್ದ ಈ ಸಮಾರಂಭದಲ್ಲಿ ಚಿಕ್ಕಮಗಳೂರು ತಾಲೂಕು ಕಸಾಪ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಆಲ್ದೂರು ಹೋಬಳಿ ಕಸಾಪ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಮಾಜಿ ಸಚಿವರು, ಲೇಖಕರು,ಕವಿಗಳು, ಮಾಧ್ಯಮದ ಮಿತ್ರರು, ಕಾಫಿ ಬೆಳಗಾರರು. ರೈತ ಪರ ಮತ್ತು ದಲಿತಪರ ಹೋರಾಟಗಾರರು ಸೇರಿದಂತೆ ಅನೇಕರು ಈ ಶ್ರಾವಣ ಸಂಜೆಯ ವಿಚಾರಧಾರೆಗೆ ಕಿವಿಯಾದರು.
••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ✒️
ಚಿಕ್ಕಮಗಳೂರು

