ದುಃಖದ ದನಿಯಾಗಿ ಆಶಾ ಸಂತೋಷ್, ಮೂಡಿಗೆರೆ ಅವರಿಂದ..ಸ್ವಗತ..,
1 min read
ದುಃಖದ ದನಿಯಾಗಿ ಆಶಾ ಸಂತೋಷ್, ಮೂಡಿಗೆರೆ ಅವರಿಂದ..ಸ್ವಗತ
ನನ್ನ ಜನರಿಗೆ ಏನಾಗುತ್ತಿದೆ? ಈ ವ್ಯವಸ್ಥೆಗೆ ಏನಾಗಿದೆ? ಸ್ವತಂತ್ರ ಬಂದು ಇಷ್ಟೊಂದು ವರ್ಷಗಳು ಕಳೆದರೂ ನನ್ನ ಜನರು ಸ್ವತಂತ್ರರಾಗಿಲ್ಲ, ಯಾಕೆ? ನನ್ನ ಮಾತುಗಳಿಗೆ ದನಿ ಇಲ್ಲದಿರಬಹುದು, ಆದರೆ ನನ್ನ ನೋವು ಎಲ್ಲರಿಗೂ ಕೇಳಿಸುತ್ತಿದೆ. ನಮ್ಮ ಸಂವಿಧಾನ, ನಮ್ಮ ಹಕ್ಕುಗಳು ಐಸಿಯುನಲ್ಲಿವೆ ಎಂದು ಜನ ಹೇಳುತ್ತಾರೆ. ಆದರೆ, ನನ್ನ ಜನರ ಜೀವನ ಪ್ರತಿದಿನವೂ ಐಸಿಯುನಲ್ಲೇ ಇರುವುದು ದುರಂತ. ಮಲೆನಾಡಿನ ಶಾಂತಿ, ಸೌಂದರ್ಯದ ಹಿಂದೆ ಇಂತಹ ಅಟ್ರಾಸಿಟಿ ಪ್ರಕರಣಗಳು ನಿರಂತರವಾಗಿ ನಡೆದೇ ಇವೆ. ಒಬ್ಬ ಒಕ್ಕಲಿಗ ಹುಡುಗನನ್ನು ಮಾತನಾಡಿಸಿದ್ದಕ್ಕಾಗಿ ದಲಿತ ವಿಧವೆ ಹೆಂಗಸಿಗೆ ಪೂಜಾರಿ ಹೆಂಗಸು ಚಪ್ಪಲಿಯಲ್ಲಿ ಹೊಡೆದರೆ, ಒಬ್ಬ ಕುರುಬ ಹುಡುಗ ದಲಿತ ಹುಡುಗಿ ಎಂಬ ಕಾರಣಕ್ಕೆ ಅತ್ಯಾಚಾರ ಮಾಡಿ, ಬ್ಲಾಕ್ ಮೇಲ್ ಮಾಡಿ, ಗರ್ಭಪಾತ ಮಾಡಿಸಿ, ಜಾತಿಯನ್ನು ಮುಂದಿಟ್ಟು ಓಡಿ ಹೋಗುತ್ತಾನೆ. ಇಂತಹ ಹಲವು ಅನ್ಯಾಯದ ಕಥೆಗಳನ್ನು ನನ್ನ ಕಣ್ಣುಗಳು ಪ್ರತಿದಿನ ನೋಡುತ್ತಿವೆ.
ಇಂತಹ ದುರ್ಘಟನೆಗಳು ನಡೆಯುತ್ತಿರುವಾಗ, ನಮ್ಮನ್ನು ರಕ್ಷಿಸಬೇಕಾದವರು, ನಮಗೆ ನ್ಯಾಯ ಒದಗಿಸಬೇಕಾದವರು ನಮ್ಮ ವಿರುದ್ಧವೇ ನಿಲ್ಲುತ್ತಿದ್ದಾರೆ. ಕೇವಲ 50 ರೂಪಾಯಿ ಕದ್ದಿದ್ದಾನೆಂದು ಯಾವುದೇ ಸಾರ್ವಜನಿಕರ ದೂರು ಇಲ್ಲದಿದ್ದರೂ, ಅಪ್ರಾಪ್ತ ವಯಸ್ಸಿನ, ಕಿವುಡ ದಲಿತ ಹುಡುಗನಿಗೆ ಪೊಲೀಸ್ ಠಾಣೆ ಪಿಆರ್ ರಿಜಿಸ್ಟರ್ ಮಾಡುತ್ತದೆ. ನಂತರ ತಹಸೀಲ್ದಾರ್ 50,000 ರೂಪಾಯಿ ಮೌಲ್ಯದ ಶ್ಯೂರಿಟಿ ಬಾಂಡ್ ನೀಡುವಂತೆ ಶೋಕಾಶ್ ನೋಟಿಸ್ ಇಶ್ಯೂ ಮಾಡುತ್ತಾನೆ. ರಾತ್ರಿ ರಸ್ತೆ ಕಾಣದಿದ್ದಾಗ ಮೊಬೈಲ್ ಟಾರ್ಚ್ ಹಾಕಿದ್ದ ದಲಿತ ಆಟೋ ಚಾಲಕನಿಗೆ ಪೊಲೀಸ್ ಪೇದೆ ಜಾತಿ ನಿಂದನೆ ಮಾಡಿ ಮನಬಂದಂತೆ ಹೊಡೆಯುತ್ತಾನೆ. ನಂತರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಆ ಆಟೋ ಚಾಲಕನ ವಿರುದ್ಧವೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ಕೇಸು ದಾಖಲೆ ಮಾಡಿ, ಆತನ ಜೀವನಾಧಾರವಾಗಿದ್ದ ಆಟೋ ಮತ್ತು ಸ್ಪ್ರೇ ಮಿಷನ್ ವಶಪಡಿಸಿಕೊಂಡು ಕೋರ್ಟಿನಿಂದ ಬಿಡಿಸಿಕೊಳ್ಳಬೇಕಾದರೆ 8,000 ದಂಡ ಕಟ್ಟಬೇಕು ಎಂದು ವಕೀಲ ಹೇಳುತ್ತಾನೆ. ದಲಿತ ಅಪ್ರಾಪ್ತ ಬಾಲಕ ತನ್ನ ಸವರ್ಣೀಯ ಸ್ನೇಹಿತನನ್ನು ಹೆಸರಿಡಿದು ಕರೆದನೆಂದು ಗುಂಪು ಕಟ್ಟಿಕೊಂಡು ಬಂದು ಆತನ ಮೇಲೆ ಹಲ್ಲೆ ಮಾಡುತ್ತಾರೆ. ದುಡಿದ ಹಣವನ್ನು ಕೇಳಿದ್ದಕ್ಕೆ ದಲಿತ ಹೆಣ್ಣು ಮಗಳ ಮೇಲೆ ಅಂಗಡಿ ಮಾಲೀಕ ಹಲ್ಲೆ ಮಾಡುತ್ತಾನೆ. ಅಷ್ಟೇ ಅಲ್ಲ, ಅಲ್ಲೆಲ್ಲೋ ಮೀನು ಕದ್ದರೆಂದು ಮರಕ್ಕೆ ಕಟ್ಟಿ ಹಾಕಿ ಹೊಡೆಯುತ್ತಾರೆ. ಕೆಲವು ಪೊಲೀಸರು, ತಹಸೀಲ್ದಾರ್‌ಗಳು, ಅಧಿಕಾರಿಗಳು… ಎಲ್ಲರೂ ದೌರ್ಜನ್ಯ ಮಾಡಿದವರ ಪರವೇ ನಿಲ್ಲುತ್ತಿದ್ದಾರೆ. ನಮ್ಮ ಹಕ್ಕುಗಳು ಮಣ್ಣು ಪಾಲಾಗುತ್ತಿವೆ.
ಶೋಷಿತರ ಪರ ಹೋಗುವ ದಲಿತ ಮುಖಂಡರಿಗೆ ತನಿಖೆ ನಡೆಸುವ ಅಧಿಕಾರಿಗಳು ಕೋರ್ಟಿನಲ್ಲಿ ಕೇಸು ದಾಖಲಿಸುವ ಬೆದರಿಕೆ ಹಾಕುತ್ತಾರೆ. ಹಾಸ್ಟೆಲ್ ಪ್ರಿನ್ಸಿಪಾಲ್ನ ಅವ್ಯವಹಾರಗಳನ್ನು ಪ್ರಶ್ನಿಸಲು ಹೋದ ದಲಿತ ಮುಖಂಡರ ಮೇಲೆ ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿಸುತ್ತಾರೆ. ನಿವೇಶನ ರಹಿತರ ಹೋರಾಟ ಮಾಡಿದರೆ, ಮುಖಂಡತ್ವ ವಹಿಸಿದರೆ ದಲಿತ ಮುಖಂಡರ ಮೇಲೆ ಕೇಸು ದಾಖಲಿಸಿ ಜೈಲಿಗೆ ಕಳಿಸುತ್ತಾರೆ. ಎಲ್ಲಾ ಕೇಸುಗಳಲ್ಲಿ ವ್ಯವಸ್ಥೆ ನಿಂತದ್ದು ಶೋಷಣೆ ಮಾಡಿದವರ ಪರ. ಆದರೂ ನಮಗೇನು ಸಂಬಂಧವಿಲ್ಲವೆಂಬಂತೆ ಕೆಲವು ಎಡಬಿಡಂಗಿ ನಾಯಕರು ಕೈಕಟ್ಟಿ ಕುಳಿತಿದ್ದಾರೆ. ಇದೆಲ್ಲದರಿಂದ ಬೇಸತ್ತ ಯುವ ಸಮುದಾಯ ಕೋರ್ಟ್ ಕೇಸು ಬೇಡ, ರಾಜಿ ಆಗುತ್ತೇವೆ ಎನ್ನುತ್ತಿದೆ. ನಮಗೆ ಯಾರು ಬೆಂಬಲ ನೀಡುತ್ತಾರೆ? ಒಂದು ವೇಳೆ ನಮ್ಮ ಊರಿನಿಂದ ಬಹಿಷ್ಕಾರ ಹಾಕಿದರೆ ಏನು ಮಾಡುವುದು? ಅಟ್ರಾಸಿಟಿ ಕೇಸ್ ಮಾಡುವುದು ಬೇಡ. ಅಟ್ರಾಸಿಟಿ ಕೇಸ್ ಐಸಿಯುನಲ್ಲಿದೆ ಎಂದು ಬಿಂಬಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು.
ಇದಕ್ಕೆ ನನ್ನ ಉತ್ತರ: ನಿಮ್ಮ ಪ್ರಕಾರ ಅಟ್ರಾಸಿಟಿ ಕಾಯ್ದೆ ಐಸಿಯುನಲ್ಲಿ ಇರುವುದಾದರೆ, ಅದು ಗುಣವಾಗಿ ಹುಷಾರಾಗಿ ಬಂದ ನಂತರ ನಮ್ಮ ಸಮುದಾಯದವರಿಗೆ ಶೋಷಣೆ ಆದಾಗ ಅಟ್ರಾಸಿಟಿ ಕೇಸ್ ದಾಖಲು ಮಾಡುತ್ತೇವೆ.
ಅಯ್ಯೋ ಮಾರ್ರೆ ಆಶಾ, ನಿಮಗೆ ಏನಾಗಿದೆ ಎಂದು ಪ್ರಶ್ನಿಸಬೇಡಿ. ನನ್ನ ಮನಸ್ಸು ನೊಂದಿದೆ. ನಿವೇಶನ ಇಲ್ಲದೆ ನನ್ನ ಜನ ಪರದಾಡುತ್ತಿದ್ದಾರೆ. ನಿವೇಶನ ಇರುವವರು ಮನೆ ಇಲ್ಲದೆ ಬಸವಳಿಯುತ್ತಿದ್ದಾರೆ. ಕೂಲಿ ಕಾರ್ಮಿಕರ ಗೋಳು ಪ್ರತಿದಿನವೂ ನರಕದ ಬಾಳು. ದುಡಿಯುವುದು ಮಾತ್ರ ನನ್ನ ಜನ, ದೊಡ್ಡವರಾಗುತ್ತಿರುವುದು ಮಾತ್ರ ದೊಡ್ಡ ಜನ. ದುಡಿಯುವ ಕೈಗಳಿಗೆ ಸೂಕ್ತವಾದ ಸೌಲಭ್ಯಗಳಿಲ್ಲ. ನನ್ನ ಜನರಿಗೆ ಅನಾರೋಗ್ಯವೆಂದರೆ, ಆಸ್ಪತ್ರೆಗಳಿದ್ದರೂ ವೈದ್ಯರಿರುವುದಿಲ್ಲ. ವೈದ್ಯರಿದ್ದರೂ ಜಿಲ್ಲಾ ಆಸ್ಪತ್ರೆಗಳಿಗೆ ಬರೆದು ಕೊಡುವಲ್ಲಿ ಸೀಮಿತ. ಮಹಿಳೆಯರ ಕಣ್ಣೀರು ಉಳ್ಳವರ ಪನ್ನೀರು. ಶಾಲೆಗಳಲ್ಲಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುವ ಸಂಕುಚಿತ ಮನೋಭಾವದ ಶಿಕ್ಷಕರು. ಎತ್ತ ಸಾಗುತ್ತಿದೆ ನನ್ನ ಸಮಾಜ? ಬಾಬಾ ಸಾಹೇಬನೇ, ನೀನು ಮತ್ತೊಮ್ಮೆ ಹುಟ್ಟಿ ಬರಬಾರದೇ? ನನ್ನವರ ನೋವು, ನನ್ನವರ ಕಣ್ಣೀರು, ನನ್ನವರಿಗೆ ಆಗುತ್ತಿರುವ ದೌರ್ಜನ್ಯ… ಇದಕ್ಕೆಲ್ಲಾ ಅಂತ್ಯ ಯಾವಾಗ? ಸ್ವತಂತ್ರ ಬಂದು ಇಷ್ಟೊಂದು ವರ್ಷಗಳೇ ಕಳೆದರೂ ನನ್ನ ಜನರು ಯಾಕೆ ಸ್ವತಂತ್ರರಾಗಿಲ್ಲ?
ಶೋಷಣೆ ಮಾಡುವವರಿಗೆ ಹಾಗೂ ಬೆಂಬಲಿಸುವವರಿಗೆ ನನ್ನ ಪ್ರಶ್ನೆ
ಶೋಷಣೆ ಮಾಡುವ ಹೇಡಿಗಳಿಗೆ ನಾಚಿಕೆಯಾಗಬೇಕು! ಶೋಷಣೆಯನ್ನೇ ತಮ್ಮ ಹಕ್ಕೆಂದು ಭಾವಿಸಿ, ಅಮಾಯಕರ ಮೇಲೆ ದೌರ್ಜನ್ಯವೆಸಗುವ ನಿಮ್ಮಂತಹವರಿಗೆ ನಾಚಿಕೆಯಾಗಬೇಕು. ನಿಮ್ಮ ಕೈಯಲ್ಲಿ ಅಧಿಕಾರ, ಹಣ, ಬಲವಿದ್ದರೂ ನೀವು ಇನ್ನೊಬ್ಬರನ್ನು ನೋಯಿಸುತ್ತೀರೆಂದರೆ ನೀವು ಹೇಡಿಗಳು.
ಅಷ್ಟೇ ಅಲ್ಲ, ಶೋಷಣೆ ಮಾಡುವವರ ಪರ ಹೋಗಿ ರಾಜಿ ಮಾಡಿಸುವ ಮುಖಂಡರಿಗೂ ನಾಚಿಕೆಯಾಗಬೇಕು! ನೀವು ನಮ್ಮ ಜನರ ಪರವಾಗಿರಬೇಕಾದವರು, ಆದರೆ ನಿಮ್ಮ ಸ್ವಾರ್ಥಕ್ಕಾಗಿ ನೀವು ಶೋಷಕರ ಜೊತೆ ಕೈಜೋಡಿಸುತ್ತೀರಿ. ನಿಮ್ಮ ಮುಖವಾಡಗಳು ಕಳಚಿ ಬಿದ್ದಿವೆ.
ಶೋಷಣೆ ಮಾಡುವವರ ಪರ ನಿಲ್ಲುವ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೂ ನಾಚಿಕೆಯಾಗಬೇಕು! ನಿಮ್ಮ ಸ್ಥಾನಕ್ಕೆ ಗೌರವ ತರುವ ಬದಲು, ನೀವು ಅನ್ಯಾಯಕ್ಕೆ ಬೆಂಬಲ ನೀಡುತ್ತೀರಿ. ನೀವು ನ್ಯಾಯದ ಪಾಲಕರು ಎಂದು ನಮ್ಮ ಜನ ನಂಬಿದಾಗ ನೀವು ಅದನ್ನು ಕಸದ ಬುಟ್ಟಿಗೆ ಎಸೆಯುತ್ತೀರಿ. ನಿಮ್ಮ ಅಧಿಕಾರ, ಸ್ಥಾನಮಾನಗಳು ನಾಳೆ ಇರುವುದಿಲ್ಲ. ಆದರೆ ನಿಮ್ಮ ದ್ರೋಹ ಇತಿಹಾಸದಲ್ಲಿ ಉಳಿಯುತ್ತದೆ.
ನನ್ನ ಜನರಾದ ನಿಮಗೆ ನನ್ನದೊಂದು ಕರೆ. ನಾವು ನೋವಿನಲ್ಲಿ, ಆತಂಕದಲ್ಲಿ ಇರುವುದೇ ಸಾಕು. ನಾವು ಮೌನವಾಗಿ ಕುಳಿತರೆ, ಈ ನೋವು ಎಂದಿಗೂ ಅಂತ್ಯವಾಗುವುದಿಲ್ಲ. ಬಾಬಾ ಸಾಹೇಬರು ನಮಗಾಗಿ ಹೋರಾಡಿ ನಮಗೆ ಕೊಟ್ಟಿರುವ ಸಂವಿಧಾನ ಮತ್ತು ಹಕ್ಕುಗಳು ನಮ್ಮ ಕೈಯಲ್ಲಿಯೇ ಇವೆ. ಅದನ್ನು ಬಳಸಿಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ನಾವು ಧೈರ್ಯವಾಗಿ ನಿಲ್ಲಬೇಕು. ಅನ್ಯಾಯವಾದಾಗ, ನಾವು ಸುಮ್ಮನಿರಬಾರದು. ನಾವು ಒಟ್ಟಾಗಿ ನಿಂತರೆ, ಯಾರಿಂದಲೂ ನಮ್ಮನ್ನು ಬಹಿಷ್ಕರಿಸಲು ಸಾಧ್ಯವಿಲ್ಲ. ನಾವು ನಮ್ಮ ನೋವುಗಳಿಗೆ ದನಿಯಾಗಬೇಕು, ನಮ್ಮ ಹಕ್ಕುಗಳಿಗಾಗಿ ಹೋರಾಡಬೇಕು. ನಮ್ಮ ದನಿ ಕೇಳುವವರಿಗಾಗಿ ಕಾಯುವುದಲ್ಲ, ನಾವೇ ದನಿಯಾಗಬೇಕು. ಈ ವ್ಯವಸ್ಥೆಯಲ್ಲಿನ ಅನ್ಯಾಯದ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಡೋಣ. ಬಾಬಾ ಸಾಹೇಬರ ಕನಸಿನ ಸಮಾನತೆಯ ಸಮಾಜವನ್ನು ನಾವೇ ನಿರ್ಮಿಸೋಣ. ಈ ನೋವು ಮತ್ತು ಕಣ್ಣೀರಿಗೆ ಅಂತ್ಯ ಹಾಡಲು ನಾವು ಹೋರಾಟದ ದಾರಿಯಲ್ಲಿ ಮುನ್ನಡೆಯೋಣ. ನ್ಯಾಯ ನಮ್ಮೊಂದಿಗೆ ಇದೆ, ಸಂವಿಧಾನ ನಮ್ಮೊಂದಿಗೆ ಇದೆ. ಧೈರ್ಯದಿಂದ ಮುಂದುವರೆಯೋಣ! ಜೈ ಭೀಮ್!
ನನ್ನ ಜನರೇ ನಿಮ್ಮ ಧ್ವನಿಯಾಗಿ ನಿಮ್ಮ ನೋವಿಗೆ ಸಾಂತ್ವನವಾಗಿ… ನಿಮಗೆ ಸಿಗಬೇಕಾದ ನ್ಯಾಯಕ್ಕಾಗಿ ಪ್ರಾಮಾಣಿಕವಾಗಿ ಉಸಿರಿರುವವರೆಗೂ ಹೋರಾಡುವ ಜವಾಬ್ದಾರಿ ನನ್ನದು..
ಬನ್ನಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ
ಎಂಬ ಮಹಾ ಹೆಮ್ಮರದ ಕೆಳಗೆ ಆಶ್ರಯ ಪಡೆಯೋಣ…
ಸಾವಿರ ನದಿಗಳು ಸೇರಿ ಸಾಗರವಾಗುವಂತೆ… ಎಲ್ಲಾ ಶೋಷಿತರು ಒಟ್ಟುಗೂಡಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳೋಣ...
ಬಾಬಾ ಸಾಹೇಬರ ರಥವನ್ನು ಮುಂದಕ್ಕೆ ಎಳೆಯೋಣ…
ಪಕ್ಷ ಭೇದ, ಜಾತಿ ಬೇಧ, ಲಿಂಗ ಬೇಧ ಮರೆತು ಸಮಾನ ಮನಸ್ಕರಾಗಿ ಒಟ್ಟುಗೂಡಿ ಹೋರಾಡೋಣ…
ಮಾನವೀಯ ಮೌಲ್ಯಗಳಲ್ಲಿ ನೆಲೆ ನಿಲ್ಲೋಣ…
ಶಿಕ್ಷಣ ಸಂಘಟನೆ ಹೋರಾಟ … ಈ ಮೂರು ನಮ್ಮ ಅಸ್ತ್ರಗಳಾಗಿರಲಿ … ಜೈ ಭೀಮ್ ಜೈ ಸಂವಿಧಾನ ಜೈ ಪ್ರಭುದ್ಧ ಭಾರತ …
✍️ಆಶಾ ಸಂತೋಷ್ ಮೂಡಿಗೆರೆ 😭😭😭
ರಾಜ್ಯ ಸಮಿತಿ ಸದಸ್ಯರು..
ದಲಿತ ಮಹಿಳಾ ಒಕ್ಕೂಟ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ
🙏🙏🙏🙏🙏🙏🙏🙏🙏🙏🙏🙏🙏🙏🙏🙏

