लाइव कैलेंडर

February 2025
M T W T F S S
 12
3456789
10111213141516
17181920212223
2425262728  
05/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಡಾಕ್ಟರೇಟ್ ಬೇಕಾ… ಡಾಕ್ಟರೇಟು’
ಯುಜಿಸಿಯ ಹೊಸ ನಿಯಮಗಳಿಂದಾಗಿ ಉಪನ್ಯಾಸಕರಾಗ ಬಯಸುವವರಲ್ಲಿ ಪಿ ಎಚ್ ಡಿ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದು ಕಡೆ ತಮ್ಮ ‘ಅಸಾಮಾನ್ಯ ಸಾಧನೆ’ಗಾಗಿ ಗೌರವ ಡಾಕ್ಟರೇಟ್ ಪಡೆಯುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಕೆಲವು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ನೀಡುತ್ತಿರುವ ನಕಲಿ ಗೌರವ ಡಾಕ್ಟರೇಟ್’ಗಳಿಂದಾಗಿ ಪಿ ಎಚ್ ಡಿ ಗಿರುವ ಘನತೆಯೇ ಮಣ್ಣುಪಾಲಾಗುತ್ತಿದೆ.

10ನೇ ತರಗತಿ ಪಾಸಾಗದವರು, ಸಾಹಿತ್ಯದ ಗಂಧ ಗಾಳಿಯಿಲ್ಲದವರು, ‘ಸಾಧನೆ’ ಎಂದರೇನೆಂದೇ ತಿಳಿಯದಂಥವರಿಗೂ ಈ ಅಂತಾರಾಷ್ಟ್ರೀಯ ವಿಶ್ವ ವಿದ್ಯಾಲಯಗಳು ‘ಗೌರವ ಡಾಕ್ಟರೇಟ್’ ನೀಡಿ ಸನ್ಮಾನಿಸುತ್ತಿವೆ. ಈ ಮೂಲಕ ಗೌರವ ಡಾಕ್ಟರೇಟ್ ‘ಗಿರುವ ಗೌರವವನ್ನೇ ಹಾಳು ಮಾಡುತ್ತಿವೆ. ವರ್ಷಗಟ್ಟಲೆ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆಯುತ್ತಿರುವವರು ಇಂತಹ ಅಪಾಯಕಾರಿ ಪ್ರವೃತ್ತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

10ನೇ ತರಗತಿಯೂ ಪೂರ್ಣಗೊಳಿಸದ ಜಿಲ್ಲೆಯ ಮಹಿಳೆಯೊಬ್ಬರಿಗೆ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಯಾವ ಸಾಧನೆಗೆ ಇವರಿಗೆ ಈ ಪದವಿ ನೀಡಲಾಗಿದೆ ಎಂಬ ಯೋಚನೆಯಲ್ಲಿ ಜನತೆ ಇರುವಾಗಲೇ ಸೈಕಲ್ ಮೆಕಾನಿಕ್ ಒಬ್ಬರಿಗೆ ಇದೇ ಗೌರವ ಡಾಕ್ಟರೇಟ್ ನೀಡಲಾಗಿದೆ. ಸೈಕಲ್ ಅಂಗಡಿಯಲ್ಲಿ ಪಂಕ್ಚರ್ ಹಾಕಿಕೊಂಡಿರುವ ವ್ಯಕ್ತಿಗೆ ಗೌರವ ಡಾಕ್ಟರೇಟ್ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಸೈಕಲ್ ರಿಪೇರಿ ಕೆಲಸ ಒಂದು ಕೌಶಲ್ಯ. ಒಂದಿಷ್ಟು ಶ್ರಮ ವಹಿಸಿದರೆ ಯಾರು ಬೇಕಾದರೂ ದಕ್ಕಿಸಿಕೊಳ್ಳಬಹುದಾದ ಒಂದು ಕಲೆ. ಆದರೆ ಅದು ಗೌರವ ಡಾಕ್ಟರೇಟ್ ನೀಡುವಷ್ಟು ದೊಡ್ಡ ಜ್ಞಾನವೇ ಎನ್ನುವುದನ್ನು ಗೌರವಿಸಿದವರೇ ಹೇಳಬೇಕು. ಇನ್ನು ಚಿಕ್ಕಬಳ್ಳಾಪುರದಲ್ಲಿ ಕಳೆದ ಏಳೆಂಟು ತಿಂಗಳಲ್ಲಿ

FAKE

10ಕ್ಕೂ ಹೆಚ್ಚು ಜನರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಹೀಗೆ ಗೌರವ ಡಾಕ್ಟರೇಟ್ ಪಡೆದ ವ್ಯಕ್ತಿಗಳು ಯಾವುದೇ ಕ್ಷೇತ್ರದಲ್ಲಿ ಕಣ್ಣಿಗೆ ಕಾಣುವಂತೆ ದೊಡ್ಡ ಮಟ್ಟದ ಸಾಧನೆ ಮಾಡಿದವರಲ್ಲ. ಆದರೂ ಇಂತಹ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.

ಇಟಲಿ, ಜರ್ಮನಿ, ಐರ್ಲೆಂಡ್ ಸೇರಿದಂತೆ ಹಲವು ದೇಶಗಳ ವಿಶ್ವ ವಿದ್ಯಾಲಯಗಳು ಇಂತಹ ಗೌರವ ಡಾಕ್ಟರೇಟ್’ಗಳನ್ನು ವಿತರಿಸುತ್ತಿವೆ. ಈ ರೀತಿ ಸಿಕ್ಕ ಸಿಕ್ಕವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವ ಈ ವಿಶ್ವ ವಿದ್ಯಾಲಯಗಳು ಆಯಾ ಸರಕಾರದ ಮಾನ್ಯತೆ ಪಡೆದಿವೆಯೇ ಇಲ್ಲವೇ ಎನ್ನುವುದನ್ನು ತಿಳಿದವರು ಹೇಳಬೇಕು. ಅವುಗಳ ಮಾನ್ಯತೆ ವಿಷಯ ಹಾಗಿರಲಿ, ಗೌರವ ಡಾಕ್ಟರೇಟ್ ಪಡೆದ ವ್ಯಕ್ತಿಯ ಘನತೆ ನೋಡಿದರೆ ಆ ಗೌರವ ಕೊಟ್ಟ ವಿವಿಯ ಘನತೆ ಏನೆಂಬುದು ತಿಳಿಯುತ್ತದೆ.

ಗೂಗಲ್ ‘ನಲ್ಲಿ ಹುಡುಕಿದರೂ ಇಂತಹ ವಿವಿಗಳ ವಿವರ ಎಲ್ಲಿಯೂ ದೊರೆಯುವುದಿಲ್ಲ. ಸಾಧಕರನ್ನು ಆಯ್ಕೆ ಮಾಡುವ ವಿಧಾನ, ಆಯ್ಕೆಗೆ ಅನುಸರಿಸುವ ಮಾನದಂಡ ಯಾವುದೂ ಲಭ್ಯವಿಲ್ಲ. ಇಂತಿಷ್ಟು ಹಣ ಪಡೆದು ಕೇಳಿದವರಿಗೆ ಡಾಕ್ಟರೇಟ್ ನೀಡುವ ವಿವಿಗಳು ಬೇಕೆಂದೇ ಎಲ್ಲವನ್ನೂ ಗೌಪ್ಯವಾಗಿಟ್ಟಿವೆ. ಮೂಲಗಳ ಪ್ರಕಾರ ಕೇವಲ 10 ಸಾವಿರ, 25 ಸಾವಿರಕ್ಕೆಲ್ಲ ಗೌರವ ಡಾಕ್ಟರೇಟ್ ಪದವಿಯನ್ನು ಮನೆ ಬಾಗಿಲಿಗೆ ತಲುಪಿಸುತ್ತಿದೆ. ಪ್ರಚಾರ ಪ್ರಿಯರಿಗಾಗಿಯೇ ಉದ್ಭವವಾಗಿರುವ ನಕಲಿ ವಿವಿಗಳು ಹಣ ಮಾಡಿಕೊಳ್ಳುವ ಉದ್ದೇಶದಿಂದ ಇಂತಹ ಪದವಿ ಪ್ರದಾನ ಮಾಡುತ್ತಿವೆ ಎಂಬುದು ತಜ್ಞರ ಅಭಿಪ್ರಾಯ.

ಪ್ರಚಾರಪ್ರಿಯರು ಹೀಗೆ ಹಣ ಕೊಟ್ಟು ಗೌರವ ಡಾಕ್ಟರೇಟ್ ಖರೀದಿಸಿ ಪದವಿ ಪ್ರದಾನ ಮಾಡುವ ಫೋಟೋ ಮತ್ತು ಸುದ್ದಿಯನ್ನು ಪ್ರಕಟಿಸುವಂತೆ ಪತ್ರಕರ್ತರಿಗೆ ಹಣದ ಆಮಿಷ ಒಡ್ಡುತ್ತಿರುವ ಪ್ರಸಂಗಗಳೂ ಜರುಗಿವೆ. ಇಂತಹ ನಕಲಿ ಗೌರವ ಡಾಕ್ಟರೇಟ್ ಪಡೆದವರು ಮತ್ತು ಅವುಗಳನ್ನು ವಿತರಿಸುವ ನಕಲಿ ವಿವಿಗಳ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ನಿಜ ಸಾಧನೆ ಮಾಡಿ ಡಾಕ್ಟರೇಟ್ ಪಡೆದವರಿಗೂ ನಕಲಿ ಡಾಕ್ಟರೇಟ್ ಪಡೆದಿರುವವರಿಗೂ ವ್ಯತ್ಯಾಸವೇ ತಿಳಿಯದಂತಾಗುತ್ತದೆ.

ಒಬ್ಬ ವ್ಯಕ್ತಿಯ ಮಹತ್ತರ ಸಾಧನೆ ಗುರುತಿಸಿ ಅಧಿಕೃತ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ಕೊಟ್ಟು ಸಮಾಜಕ್ಕೆ ಆ ಗಣ್ಯರು ಕೊಟ್ಟ ಕಾಣಿಕೆಯನ್ನು ಗೌರವಿಸುತ್ತವೆ. ಬಹುತೇಕ ಎಲ್ಲ ವಿವಿಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠಿತ ವಿವಿಗಳಿಂದ ಒತ್ತಡದ ಮೂಲಕ ಗೌರವ ಡಾಕ್ಟರೇಟ್ ಪಡೆಯುತ್ತಿರುವವರೂ ಹೆಚ್ಚಿದ್ದಾರೆ. ಡಾಕ್ಟರೇಟ್ ಪದವಿಗೆ ಸಿಗುವ ಗೌರವ, ಪ್ರತಿಷ್ಠೆ ನೋಡಿದ ಕೆಲವರು ಸುಲಭವಾಗಿ ಹಣಕ್ಕೆ ದೊರೆಯುವ ನಕಲಿ ವಿವಿಗಳಿಂದ ನಕಲಿ ಗೌರವ ಡಾಕ್ಟರೇಟ್ಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಯಾರಿಗೆ ಬೇಕಾದರೂ ಡಾಕ್ಟರೇಟ್ ದೊರೆಯುವಂತಾಗಿರುವುದು ಜನ ಸಾಮಾನ್ಯರ ಹುಬ್ಬೇರಿಸಿದೆ.

ಯಾವುದೇ ಡಾಕ್ಟರೇಟ್ ಪಡೆಯಲು ಸ್ನಾತಕೋತ್ತರ ಪದವಿ ಪಡೆದ ನಂತರ ಮಾರ್ಗದರ್ಶಕರ ಬಳಿ ಕನಿಷ್ಠ 3 ರಿಂದ 5 ವರ್ಷಗಳು ಸಂಶೋಧನೆ ನಡೆಸಿ, ಮಹಾ ಪ್ರಬಂಧ ಸಲ್ಲಿಸಬೇಕು. ಮತ್ತೊಂದು ಕಡೆ, ಅಂಗೀಕೃತ ವಿಶ್ವವಿದ್ಯಾಲಯಗಳು ಗಣ್ಯರ ಜೀವಮಾನದ ಸಾಧನೆ, ವಿಶೇಷ ಸಾಧನೆ ಪರಿಗಣಿಸಿ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡುತ್ತಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಣ ಪಡೆದು ಸಿಕ್ಕಸಿಕ್ಕವರಿಗೆಲ್ಲ ವಿದೇಶಿ ವಿವಿಗಳು ಗೌರವ ಡಾಕ್ಟರೇಟ್ ನೀಡುತ್ತಿರುವುದು ವಿಪರ್ಯಾಸ.

– ಡಾ. ಅಮೀರ್ ಪಾಷಾ ಎಸ್.
ರಾಜ್ಯಶಾಸ್ತ್ರ ಉಪನ್ಯಾಸಕರು

About Author

Leave a Reply

Your email address will not be published. Required fields are marked *