*ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡ್ತೀರಾ? ಹುಷಾರು!
1 min read*ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡ್ತೀರಾ? ಹುಷಾರು!*
*ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಿದ್ದಿದೆ ರೂ. 50 ಸಾವಿರ ದಂಡ!!*
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ಕೊಡದಂತೆ ಪೊಲೀಸ್ ಇಲಾಖೆ ಸಾಕಷ್ಟು ತಿಳುವಳಿಕೆ ನೀಡುತ್ತಿದೆ. ಆದರೂ ಕೂಡ ಕೆಲ ಪೋಷಕರು ಪೊಲೀಸರ ಕಾಳಜಿಗೆ ಕಿಮ್ಮತ್ತ್ತು ಕೊಡದಿರುವುದರಿಂದ ಜೀವಕ್ಕೆ ಆಪತ್ತು ಉಂಟು ಮಾಡುವುದರೊಂದಿಗೆ ದಂಡ ತೆರೆಬೇಕಾದ ನಿದರ್ಶನಗಳಿವೆ.
ಅದೇ ರೀತಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಬೈಕ್ ಓಡಿಸಲು ಕೊಟ್ಟ ಪೋಷಕರಿಬ್ಬರಿಗೆ
ಕುಶಾಲನಗರ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯವು ತಲಾ ರೂ. 25 ಸಾವಿರದಂತೆ ಒಟ್ಟು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
*ಪ್ರಕರಣ -1:*
ಕ್ರೈಂ ನಂ. 64/2024 ರಲ್ಲಿ ಆರೋಪಿ ಜಯರಾಮ್ ಎಂಬುವವರು
KA12 W 1318 ರ ಹೋಂಡಾ SP125 ಬೈಕ್ ನ ಮಾಲೀಕರಾಗಿದ್ದು ತನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ನೀಡಿದ್ದರು. ಆತ ಇನ್ನೋರ್ವನನ್ನು ಬೈಕ್ ನ ಹಿಂಬದಿಯಲ್ಲಿ ಕೂರಿಸಿಕೊಂಡು ಚಾಲನೆ ಮಾಡಿ ಬ್ರೀಜಾ ಕಾರಿಗೆ ಡಿಕ್ಕಿ ಪಡಿಸಿದ್ದ. ಇದರಿಂದ ಹಿಂಬದಿ ಸವಾರ ಮೃತ ಪಟ್ಟಿದ್ದ. ಪ್ರಕರಣದ ವಿಚಾರಣೆ ನಡೆಸಿದ ಕುಶಾಲನಗರ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯವು ಸಂಚಾರಿ ನಿಯಮ ಉಲ್ಲಂಘನೆಗಾಗಿ ಆರೋಪಿ ಜಯರಾಮ್ ರವರಿಗೆ ರೂ. 25 ಸಾವಿರ ದಂಡ ವಿಧಿಸಿದೆ.
*ಪ್ರಕರಣ -2*
ಮತ್ತೊಂದು ಪ್ರಕರಣದ ಕ್ರೈಂ ನಂ. 45/ 2024 ರಲ್ಲಿ ಕುಶಾಲನಗರ ಕೂಡುಮಂಗಳೂರು ಸಮೀಪ ರಾಜ್ಯ ಹೆದ್ದಾರಿಯಲ್ಲಿ ದಿನಾಂಕ 28-05-2024 ರಂದು ಅಪ್ರಾಪ್ತ ಬಾಲಕ KA 12W 8014 ಯಾಮಹಾ ಬೈಕ್ ಅನ್ನು ಹೆಲ್ಮೆಟ್ ಧರಿಸದೆ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ. ಹೀಗಾಗಿ ಬೈಕ್ ಮಾಲೀಕರಾಗಿರುವ ಆತನ ತಾಯಿ ಹರಿಣಿರವರಿಗೆ
ಕುಶಾಲನಗರ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ 25 ಸಾವಿರ ದಂಡ ವಿಧಿಸಿದೆ.
ಸಂಚಾರಿ ನಿಯಮ ಉಲ್ಲಂಘಿಸಿ
ವಾಹನಗಳನ್ನು ಚಲಾಯಿಸುವ ಅಪ್ರಾಪ್ತ ವಯಸ್ಕರಿಗೆ ಮತ್ತು ಅವರಿಗೆ ವಾಹನ ಓಡಿಸಲು ನೀಡುವ ಮಾಲೀಕರಿಗೆ ನ್ಯಾಯಾಲಯದ ಆದೇಶ ಎಚ್ಚರಿಕೆ ಆಗಿದೆ.