लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬದುಕಿನ ಸೋಲುಗಳಿಗೆ ಭೂತಕಾಲವನ್ನು ಜವಾಬ್ದಾರಿಯನ್ನಾಗಿ ಮಾಡದೆ ವರ್ತಮಾನವನ್ನು ಎಚ್ಚರಿಸಿದವರು ನಮ್ಮ ಜನಪದರು : ಶಾಸಕ ಎಚ್ ಡಿ ತಮ್ಮಯ್ಯ ಅಭಿಪ್ರಾಯ….

1 min read

ಅವಿನ್ ಟಿವಿ ಸುದ್ದಿಜಾಲ ✍️: ಬದುಕಿನ ಸೋಲುಗಳಿಗೆ ಭೂತಕಾಲವನ್ನು ಜವಾಬ್ದಾರಿಯನ್ನಾಗಿ ಮಾಡದೆ ವರ್ತಮಾನವನ್ನು ಎಚ್ಚರಿಸಿದವರು ನಮ್ಮ ಜನಪದರು : ಶಾಸಕ ಎಚ್ ಡಿ ತಮ್ಮಯ್ಯ ಅಭಿಪ್ರಾಯ.

ಏಪ್ರಿಲ್ ೨೬ರಂದು ಚಿಕ್ಕಮಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಆರನೇ ಜಿಲ್ಲಾ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮತ್ತು ಆಹ್ವಾನ ಪತ್ರಿಕೆ ಜನಾರ್ಪಣೆ.

ಚಿಕ್ಕಮಗಳೂರು ಏ ೧೫, ಆಧುನಿಕತೆಯ ಅಬ್ಬರದಲ್ಲಿ ನಮ್ಮೆಲ್ಲ ಸೋಲುಗಳಿಗೂ ಭೂತಕಾಲವನ್ನು ದೋಷಿಸದೆ ವರ್ತಮಾನವನ್ನು ಎಚ್ಚರಿಸಿ ಜಾಗೃತಿಗೊಳಿಸಿದ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಜಾನಪದ ಸಮ್ಮೇಳನ ಸಹಕಾರಿ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದಿಂದ ನಗರದಲ್ಲಿ ಏ ೨೬ರಂದು ನಡೆಯಲಿರುವ ೬ನೇ ಜಿಲ್ಲಾ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಪ್ರವಾಸಿ ಮಂದಿರದಲ್ಲಿ ಬುಧವಾರ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.

ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಈ ನೆಲದ ಮೂಲ ಬೇರು, ಜಾನಪದ ಅನಕ್ಷರಸ್ಥರಿಂದ ಹುಟ್ಟಿ, ಬಾಯಿಂದ ಬಾಯಿಗೆ ಹರಿದು ಬರುವ ಮೂಲಕ ಇದುವರೆಗೆ ಉಳಿದು ಬೆಳೆದು ಬಂದಿದೆ, ನಮ್ಮ ಹಿರಿಯರು ತಮ್ಮ ಶ್ರಮದ ಬದುಕಿನ ನಡುವೆ ಜಾನಪದವನ್ನು ಕಟ್ಟಿ ಬೆಳೆಸಿದ್ದಾರೆ ಎಂದ ಅವರು ಅದನ್ನು ಮುಂದಿನ ಪೀಳಿಗೆಗೆ ಉಳಿಸಲೇಬೇಕಾದ ಅನಿವಾರ್ಯತೆ ಮತ್ತು ಹೊಣೆಗಾರಿಕೆ ನಮ್ಮೆಲ್ಲರ ಮೇಲಿದ್ದು ಅದನ್ನು ಎಲ್ಲರೂ ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಜಾನಪದ ಸಮ್ಮೇಳನಗಳನ್ನು, ಜಾನಪದ ಕಾರ್ಯಕ್ರಮಗಳನ್ನು ನಡೆಸುವುದರಿಂದ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ, ಆ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯ ಸ್ತುತ್ಯಾರ್ಹ ಎಂದರು.

ಸಮ್ಮೇಳನದ ಯಶಸ್ಸಿಗೆ ಎಲ್ಲರೂ ದುಡಿಯಬೇಕು, ಗ್ರಾಮೀಣರು ಮತ್ತು ಯುವ ಜನತೆ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಸಲಹೆ ಮಾಡಿದರು.

ಸಾಹಿತಿ ಮತ್ತು ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಮಾತನಾಡಿ ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಅತಿಯಾದ ಗೀಳಿನಿಂದಾಗಿ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಾವು ಮರೆತಿದ್ದೇವೆ, ಅದರ ಪರಿಣಾಮ ಸಂಬಂಧಗಳು, ಸಂವೇದನೆ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು ಮೊಬೈಲ್, ಕಂಪ್ಯೂಟರ್ ಗಳ ದಾಸರಾಗಿ ಯಾಂತ್ರಿಕ ಜೀವನ ನಡೆಸುತ್ತಿದ್ದೇವೆ ಎಂದು ವಿಷಾದಿಸಿದರು.
ಮಾನವೀಯ ಮೌಲ್ಯಗಳು, ಸಂಬಂಧಗಳು, ಸಂವೇದನೆಗಳನ್ನು ಪುನರುಜ್ಜೀವನಗೊಳಿಸಬೇಕಾದರೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯತ್ತ ನಾವು ಮತ್ತೆ ಹೊರಳ ಬೇಕು, ಅವುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಆಧುನಿಕತೆಯ ಅಬ್ಬರದಲ್ಲಿ ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾನಪದ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಏ ೨೬ ರಂದು ಕುವೆಂಪು ಕಲಾಮಂದಿರದಲ್ಲಿ ನಡೆಯಲಿರುವ ೬ನೇ ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ, ಬೋರಲಿಂಗಯ್ಯ ಸೇರಿದಂತೆ ನಾಡಿನ ಹಿರಿಯ ಜಾನಪದ ಕಲಾವಿದರು, ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನಕ್ಕೆ ಮುನ್ನ ತಾಲೂಕು ಕಚೇರಿಯಿಂದ ವಿವಿಧ ಜಾನಪದ ಕಲಾತಂಡಗಳು ಮತ್ತು ಪೂರ್ಣ ಕುಂಭದೊಂದಿಗೆ ಸಮ್ಮೇಳನಾಧ್ಯಕ್ಷರಾದ ಮಾಜಿ ಮಂತ್ರಿ ಹಾಗೂ ಮಲೆನಾಡಿನ ಜನಪದ ಕಲಾವಿದೆ ಮೋಟಮ್ಮನವರನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮುಖಾಂತರ ಕುವೆಂಪು ಕಲಾಮಂದಿರಕ್ಕೆ ಕರೆ ತರಲಾಗುವುದು ಎಂದು ಹೇಳಿದರು.

ಜಿಲ್ಲೆಯ ಜಾನಪದ ಕಲಾವಿದರಿಗೆ ಕಲೆಗಳ ಪ್ರದರ್ಶನಕ್ಕೆ ಸಮ್ಮೇಳನದಲ್ಲಿ ವೇದಿಕೆ ಕಲ್ಪಿಸಲಾಗುವುದು, ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಿ, ಗೌರವಿಸಲಾಗುವುದು, ಜಾನಪದ ಸಿರಿ ಪ್ರಶಸ್ತಿ ನೀಡಲಾಗುವುದು, ರೈತ ಜಾನಪದ, ಮಹಿಳಾ ಜಾನಪದ, ಜಾನಪದರ ಜಗುಲಿ, ವಿಷಯ ಕುರಿತ ಗೋಷ್ಠಿಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸಮ್ಮೇಳನ ಅಚ್ಚುಕಟ್ಟಾಗಿ, ಯಾವುದೇ ಲೋಪವಿಲ್ಲದಂತೆ ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

೪ನೇ ಜಿಲ್ಲಾ ಜಾನಪದ ಸಮ್ಮೇಳನದ ಅಧ್ಯಕ್ಷ ಬೆಳವಾಡಿ ಪರಮೇಶ್ವರಪ್ಪ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಂಚಾಲಕಿ ಗಾಯತ್ರಿ, ಜಿಲ್ಲಾ ಸಂಚಾಲಕ ಬಕ್ಕಿ ರವಿ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ, ಉಪಾಧ್ಯಕ್ಷ ತಿಪ್ಪೇಶ್, ಶೈಲಾ ಬಸವರಾಜ್, ತಾಲೂಕು ಅಧ್ಯಕ್ಷ ಸಚಿನ್ ಸಿಂಗ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ನೇತ್ರ, ಉಪಾಧ್ಯಕ್ಷೆ ಅನ್ನಪೂರ್ಣ, ಪದಾಧಿಕಾರಿಗಳಾದ ಪ್ರಶಾಂತಿ ಡಿ ಕುವೆಲೋ, ಸುಜಾತ, ಎಂ.ಎಸ್.ನಾಗರಾಜ್, ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಕುನ್ನಳ್ಳಿ ರವಿ, ವಿನೀತ್ ಕುಮಾರ್, ಸಖರಾಯಪಟ್ಟಣ ಹೋಬಳಿ ಅಧ್ಯಕ್ಷ ಮಲ್ಲಿಕಾರ್ಜುನ್ ಮುಂತಾದವರು ಉಪಸ್ಥಿತರಿದ್ದರು.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

More Stories

Leave a Reply

Your email address will not be published. Required fields are marked *

You may have missed