ಪ.ಪಂ. ಸದಸ್ಯ ಅನುಕುಮಾರ್ ಅವರನ್ನು ಬಿಜೆಪಿಯ ಎಲ್ಲಾ ಹುದ್ದೆಗಳಿಂದ ವಿಮುಕ್ತಿ
1 min read
ಪ.ಪಂ. ಸದಸ್ಯ ಅನುಕುಮಾರ್ ಅವರನ್ನು ಬಿಜೆಪಿಯ ಎಲ್ಲಾ ಹುದ್ದೆಗಳಿಂದ ವಿಮುಕ್ತಿ
ಮೂಡಿಗೆರೆ: ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದ ಹಿನ್ನಲೆಯಲ್ಲಿ ಪ.ಪಂ. ಸದಸ್ಯ ಅನು ಕುಮಾರ್ ಅವರನ್ನು ಬಿಜೆಪಿ ಪಕ್ಷದ ಎಲ್ಲಾ ಜವಾಬ್ದಾರಿ ಹಾಗೂ ಹುದ್ದೆಗಳಿಂದ ವಿಮುಕ್ತಿ ಗೊಳಿಸಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ತಿಳಿಸಿದ್ದಾರೆ.
ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ಈ ಹಿಂದೆ ಪ.ಪಂ. ಅಧ್ಯಕ್ಷರು ರಾಜೀನಾಮೆ ನೀಡಿದ ನಂತರ ನಮ್ಮ ಪಕ್ಷದ ಅನುಕುಮಾರ್ ಸೇರಿದಂತೆ 5 ಸದಸ್ಯರೊಂದಿಗೆ ಪಕ್ಷದ ಹಿರಿಯ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಪ.ಪಂ. ಬಿಜೆಪಿ ತೆಕ್ಕೆಗೆ ಪಡೆಯುವಂತೆ ರಣತಂತ್ರದ ಬಗ್ಗೆ ಮಾಹಿತಿ ನೀಡಲಾಗಿತ್ತು.
ತದನಂತರ ಚುನಾವಣೆಗೆ 8 ದಿನಕ್ಕೂ ಮುನ್ನ ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್, ಪಕ್ಷದ ಮುಖಂಡರು ಹಾಗೂ ಅನು ಕುಮಾರ್ ಸೇರಿದಂತೆ ಪ.ಪಂ.ಯ ಬಿಜೆಪಿ ಸದಸ್ಯರ ಮತ್ತೊಂದು ಸಭೆ ನಡೆಸಲಾಯಿತು. ಪಕ್ಷದ ತೀರ್ಮಾನಕ್ಕೆ 4 ಸದಸ್ಯರು ಬದ್ಧರಾಗಿದ್ದು, ಅನುಕುಮಾರ್ ಅವರು ದಿನ ಕಾಲಾವಕಾಶ ಪಡೆದು ಚುನಾವಣಾ ನೋಟಿಸ್ ಕೂಡ ಪಡೆದುಕೊಂಡಿದ್ದರು.
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಪಕ್ಷದ ಸದಸ್ಯೆ ಆಶಾ ಮೋಹನ್ ಅವರು ಗೆಲುವು ಪಡೆಯುವ ಅವಕಾಶ ಇದಿದ್ದರಿಂದ ಅಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮತ ಚಲಾಯಿಸಲು ಆಗಮಿಸಿದ್ದರು. ಆದರೆ ಅನುಕುಮಾರ್ ಗೈರಾಗಿದ್ದರಿಂದ ಪ.ಪಂ. ಆಡಳಿತ ಕೈ ತಪ್ಪಿ ಹೋಗುವಂತಾಯಿತು. ಈ ಹಿಂದೆ ಅನುಕುಮಾರ್ ಪ.ಪಂ. ಅಧ್ಯಕ್ಷರಾದಾಗ ಮೋಹನ್ ಅವರು ಅನುಕುಮಾರ್ ಪರವಾಗಿ ಮತ ಚಲಾಯಿಸಿದ್ದರು.
ಅದರೆ ಸೌಜನ್ಯಕ್ಕೂ ಋಣ ತೀರಿಸಲು ಮುಂದಾಗಲಿಲ್ಲ. ಅಲ್ಲದೇ ದೂರದಿಂದ ಬಂದಿದ್ದ ಸಂಸದ ಕೋಟಾ ಶ್ರೀನಿವಾಸ್ ಹಾಗೂ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರಿಗೆ ಅಗೌರವ ಸೂಚಿಸಿದ್ದಾರೆ. ಇದಾದ ಬಳಿಕ ಅನುಕುಮಾರ್ ಅವರು ಪಕ್ಷದ ಹಿರಿಯ ಮುಖಂಡರಿಗೆ ಸುಳ್ಳು ಮತ್ತು ಅಸಮರ್ಪಕ ಉತ್ತರ ನೀಡಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಕಾರಣ ಕೇಳಿ ರಿಜಿಸ್ಟರ್ ಮೂಲಕ ನೋಟೀಸು ನೀಡಿದರೂ ಯಾವುದೇ ಉತ್ತರ ನೀಡಿಲ್ಲ.
ಈ ಬಗ್ಗೆ ಅನುಕುಮಾರ್ ಅವರು ಯಾವುದೇ ಮಾಹಿತಿ ತಿಳಿಸಿಲ್ಲ. ಯಾವುದೆ ಮಾತುಕತೆ ಕೂಡ ನಡೆಸಿಲ್ಲ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಅನುಕುಮಾರ್ ಇವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ವಿಮುಕ್ತಿ ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.