ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿ ಕೇರಳದ ವಿದ್ಯಾರ್ಥಿನಿ ಕಣ್ಮರೆ ~ ಬಿರುಸಿನ ಕಾರ್ಯಾಚರಣೆಯ ನಡುವೆಯೂ ಇನ್ನೂ ಪತ್ತೆಯಾಗದ ಶ್ರೀನಂದ.!
1 min read
ಅವಿನ್ ಟಿವಿ ಸುದ್ದಿಜಾಲ ✍️: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿ ಕೇರಳದ ವಿದ್ಯಾರ್ಥಿನಿ ಕಣ್ಮರೆ ~ ಬಿರುಸಿನ ಕಾರ್ಯಾಚರಣೆಯ ನಡುವೆಯೂ ಇನ್ನೂ ಪತ್ತೆಯಾಗದ ಶ್ರೀನಂದ.!
ಚಿಕ್ಕಮಗಳೂರು ಏ ೦೭: ಮಡಿಕೇರಿಯ ತಡಿಯಂಡಮೋಳ್ ಪರ್ವತದಲ್ಲಿ ನಾಪತ್ತೆಯಾದ ಕೇರಳದ ಯುವತಿ ಶರಣ್ಯ ಪ್ರಕರಣ ಸುಖಾಂತ್ಯ ಕಂಡಿದ್ದಕ್ಕೆ ತುಸು ಸಮಾಧಾನವಾಗುತ್ತಿದ್ದಂತೆಯೇ ಚಿಕ್ಕಮಗಳೂರಿನಲ್ಲಿ ಮತ್ತೊಂದು ಪ್ರವಾಸಿ ಯುವತಿ ನಾಪತ್ತೆ ಪ್ರಕರಣ ವರದಿಯಾಗಿದೆ.
ಪಶ್ಚಿಮ ಘಟ್ಟದ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದ ಸಮೀಪ ಇರುವ ಮಾಣಿಕ್ಯಧಾರ ಜಲಪಾತ ನೋಡಲು ಕುಟುಂಬದ ಜೊತೆ ಪ್ರವಾಸಕ್ಕೆ ಬಂದಿದ್ದ ಕೇರಳದ ಪಾಲಕ್ಕಾಡ್ ಮೂಲದ ಹತ್ತನೇ ತರಗತಿ ಓದುತ್ತಿರುವ ಶ್ರೀನಂದ ಎಂಬ ಯುವತಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.
ಕೇರಳದ 40 ಜನ ಪ್ರವಾಸಿಗರಿದ್ದ ತಂಡದಲ್ಲಿ ಭಾಗವಹಿಸಿದ್ದ ಶ್ರೀನಂದ, ಪರ್ವತದ ಸುಂದರ ತಾಣಗಳನ್ನು ವೀಕ್ಷಿಸುತ್ತಾ ತೆರಳುವಾಗ ನೆನ್ನೆ ಸಂಜೆ ಘಂಟೆ 5:20ರ ಸಮಯದಲ್ಲಿ ತಂಡದಿಂದ ಇದ್ದಕ್ಕಿದ್ದ ಹಾಗೆ ಕಾಣೆಯಾಗಿದ್ದಾಳೆ.
ಘಟನೆಯ ವಿವರ : ಕುಟುಂಬ ಸದಸ್ಯರು 270 ರಿಂದ 280 ಮೆಟ್ಟಲುಗಳಿರುವ ಮಾಣಿಕ್ಯಧಾರ ಜಲಪಾತದಿಂದ ಮೇಲಕ್ಕೆ ತಲುಪಿದ ನಂತರವೇ ಶ್ರೀನಂದ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಅಗ್ನಿಶಾಮಕ ದಳ ಮತ್ತು ಎಸ್ ಡಿ ಆರ್ ಎಫ್ ತಂಡ ಜಂಟಿಯಾಗಿ,ಸ್ಥಳೀಯರು ಸೇರಿಕೊಂಡು ಥರ್ಮಲ್ ಡ್ರೋನ್ ಕ್ಯಾಮೆರಾ ವನ್ನು ಸಹ ಬಳಸಿಕೊಂಡು, 60ಕ್ಕೂ ಹೆಚ್ಚು ಸಿಬ್ಬಂದಿಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.
ಚಂದ್ರದ್ರೋಣ ಪರ್ವತದಲ್ಲಿ ಈ ಕೇರಳದ ವಿದ್ಯಾರ್ಥಿನಿ ನಾಪತ್ತೆಯಾದ ಸ್ಥಳದಲ್ಲಿ ಹೇಳಿಕೊಳ್ಳುವಂತಹ ದಟ್ಟ ಅರಣ್ಯವಿಲ್ಲ ಆದರೆ ಕಡಿದಾದ ಇಳಿಜಾರು ಕಣಿವೆಗಳಿಂದ ಈ ಪ್ರದೇಶ ಕೂಡಿದೆ, ಆದರೆ ಇದು ಬೇಸಿಗೆಕಾಲ ಆಗಿರುವುದರಿಂದ ಮಾಣಿಕ್ಯಧಾರ ಜಲಪಾತದಲ್ಲಿ ದಟ್ಟವಾಗಿ ನೀರು ಕೂಡ ಧುಮ್ಮಕ್ಕಿ ಬೀಳುತ್ತಿಲ್ಲ, ನೀರು ಬೀಳುವ ಸ್ಥಳದಲ್ಲಿ ಪಾಚಿ ಕಟ್ಟಿರುವ ಸಾಧ್ಯತೆಯೂ ಬಹಳ ಕಡಿಮೆ ಇದೆ, ಹಾಗಾಗಿ ಆಯಾ ತಪ್ಪಿ ಬಿದ್ದಿರುವ ಸಾಧ್ಯತೆಯೂ ಕಡಿಮೆ ಎನ್ನಬಹುದು, ಈ ಮಧ್ಯೆ ಶೋಧ ಕಾರ್ಯಕ್ಕೆ ಮಂಜು ಮುಸುಕಿನ ವಾತಾವರಣ ಮತ್ತು ಕತ್ತಲೆ ಅಡ್ಡಿಯಾಗುತ್ತಿದೆ. ಕಣಿವೆ ಇಳಿಜಾರು ಪ್ರದೇಶವಾಗಿರುವುದರಿಂದ ದಾರಿ ತಪ್ಪಿದರೆ ಅಪಾಯದ ಸಾಧ್ಯತೆ ಹೆಚ್ಚಿದೆ, ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಶೋಧ ಕಾರ್ಯ ತೀವ್ರಗೊಳಿಸಲಾಗಿದೆ, ಹಾಗೂ ಈ ನಾಪತ್ತೆ ಪ್ರಕರಣವನ್ನು ಕುರಿತು ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಈ ಪ್ರದೇಶದಲ್ಲಿ ಹುಲಿ ಮತ್ತು ಚಿರತೆ ಇದ್ದರು ಕೊಡ ಅತ್ತಿಗುಂಡಿ , ಮಹಲ್, ಪಂಡರವಳ್ಳಿ ಸೀತಾಳಯ್ಯನಮಠ ಈ ಭಾಗದಲ್ಲಿ ಕಂಡು ಬರುವ ಅಲ್ಲೊಂದು ಇಲ್ಲೊಂದು ಹುಲಿ ಚಿರತೆಗಳು ದನ ಕರುಗಳನ್ನು ಹಿಡಿದು ತಿಂದ ಉದಾಹರಣೆ ಇದೆಯೇ ಹೊರತು ಮನುಷ್ಯರಿಗೆ ತೊಂದರೆ ಕೊಟ್ಟ ಉದಾಹರಣೆಗಳು ಇದುವರೆಗೆ ಈ ಪ್ರದೇಶದಲ್ಲಿ ಘಟಿಸಿಲ್ಲ ಎನ್ನುವುದು ಸ್ಥಳೀಯರ ಹೇಳಿಕೆಯಾಗಿದೆ.
ಮಡಿಕೇರಿ ಪ್ರಕರಣದ ನಂತರ ಆತಂಕ ಕೆಲವು ದಿನಗಳ ಹಿಂದೆ ಮಡಿಕೇರಿಯ ತಡಿಯಂಡಮೋಳ್ ಪರ್ವತದಲ್ಲಿ ನಾಪತ್ತೆಯಾದ ಕೇರಳದ ಯುವತಿ ಶರಣ್ಯ ನಾಲ್ಕು ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಳು,ಶರಣ್ಯ ಳ ನಾಪತ್ತೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಯಾಗಿ ಈಗ ಮತ್ತೊಂದು ರೀತಿಯ ಸುದ್ದಿಯಲ್ಲಿದೆ, ಆದರೆ ಈಗ ಚಿಕ್ಕಮಗಳೂರಿನಲ್ಲಿ ಇದೇ ರೀತಿಯ ಮತ್ತೊಂದು ನಾಪತ್ತೆ ಪ್ರಕರಣ ವರದಿಯಾಗುತ್ತಿರುವುದು ಪ್ರವಾಸಿ ವಲಯದಲ್ಲಿ ಆತಂಕ ಮತ್ತು ಅನುಮಾನವನ್ನು ಹೆಚ್ಚಿಸಿದೆ.
ಪ್ರಸ್ತುತ ಶೋಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಯುವತಿ ಸುರಕ್ಷಿತವಾಗಿ ಪತ್ತೆಯಾಗುವ ನಿರೀಕ್ಷೆಯಲ್ಲಿ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಕಾಯುತ್ತಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ಇದೇ ಪಶ್ಚಿಮ ಘಟ್ಟದ ಈ ನೆತ್ತಿಯ ಮೇಲೆ ಗಾಳಿಕೆರೆಯಿಂದ ಕೆಮ್ಮಣ್ಣುಗುಂಡಿ ಸಮೀಪ ಇರುವ ಕಲ್ಲತ್ತಿಪುರದವರೆಗೆ ಹಮ್ಮಿಕೊಂಡಿದ್ದ ಚಾರಣದಲ್ಲಿ ಇಬ್ಬರು ಯುವಕರು ದಾರಿತಪ್ಪಿ ಹೋಗಿ ಮೂರು ದಿನಗಳ ನಂತರ ಪತ್ತೆಯಾಗಿದ್ದರು, ಹಾಗೂ ಇದೇ ಪ್ರದೇಶದ ಸಮೀಪ ಇರುವ ಮುಳ್ಳಯ್ಯನಗಿರಿಯ ಸರ್ಪನ ಹಾದಿಯಲ್ಲಿ ಕಳೆದ ಏಳೆಂಟು ವರ್ಷಗಳ ಹಿಂದೆ ಚಾರಣವನ್ನು ಕೈಗೊಂಡಿದ್ದಾಗ ಆಂಧ್ರಪ್ರದೇಶದ ನಾಲ್ವರು ದಾರಿ ತಪ್ಪಿ ನಾಪತ್ತೆಯಾಗಿ ಒಂದು ವಾರದ ನಂತರ ಸಿಕ್ಕಿದ್ದನ್ನು ಈ ಸಮಯದಲ್ಲಿ ನೆನಪು ಮಾಡಿಕೊಳ್ಳಬೇಕಾಗಿದೆ.
•••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

