लाइव कैलेंडर

September 2026
M T W T F S S
 123456
78910111213
14151617181920
21222324252627
282930  
06/09/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಲಯತಪ್ಪಿದ ವ್ಯವಸ್ಥೆಯಲ್ಲಿ ಜನಾಭಿಪ್ರಾಯವನ್ನು ಮೂಡಿಸಿ ಬದುಕಿನ ಉದ್ದೇಶವನ್ನು ತೋರಿಸುವುದು ಸಾಹಿತ್ಯದ ಕೆಲಸ: ಪ್ರಾಧ್ಯಾಪಕ ಲೇಖಕ ಪತ್ರಕರ್ತ ಬಿ ತಿಪ್ಪೇರುದ್ರಪ್ಪನವರಿಗೆ 06 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ….

1 min read

ಅವಿನ್ ಟಿವಿ ಸುದ್ದಿಜಾಲ ✍️: ಲಯತಪ್ಪಿದ ವ್ಯವಸ್ಥೆಯಲ್ಲಿ ಜನಾಭಿಪ್ರಾಯವನ್ನು ಮೂಡಿಸಿ ಬದುಕಿನ ಉದ್ದೇಶವನ್ನು ತೋರಿಸುವುದು ಸಾಹಿತ್ಯದ ಕೆಲಸ: ಪ್ರಾಧ್ಯಾಪಕ ಲೇಖಕ ಪತ್ರಕರ್ತ ಬಿ ತಿಪ್ಪೇರುದ್ರಪ್ಪನವರಿಗೆ 06 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ.

ಚಿಕ್ಕಮಗಳೂರು ಸೆ05:
ಚಿಕ್ಕಮಗಳೂರಿನಲ್ಲಿ ಸೆಪ್ಟೆಂಬರ್ 06ನೇ ತಾರೀಕು 06ನೇ ಕನ್ನಡ ಸಾಹಿತ್ಯ ಸಮ್ಮೇಳನ.

ಬೇರೆಯವರು ಒಳ್ಳೆಯ ಕೆಲಸ ಮಾಡಿದಾಗ ಆ ಕೆಲಸದ ಬಗ್ಗೆ ಪ್ರಶಂಸೆಯ ಎರಡು ಮಾತನಾಡುವುದು ಮತ್ತು ಆ ಕೆಲಸಗಳ ಬಗ್ಗೆ ಬರೆದು ಸಾರ್ವಜನಿಕರ ಮಧ್ಯೆ ಸದಭಿರುಚಿಯ ಅಭಿಪ್ರಾಯವನ್ನು ಮೂಡಿಸುವುದು ಮತ್ತು ಇಂತಹ ಒಳ್ಳೆಯ ಕೆಲಸಗಳನ್ನು ನಾವೇ ಮಾಡಿದಾಗ ಆ ಬಗ್ಗೆ ಮಹಾ ಮೌನಿ ಯಾಗುವುದು ಬುದ್ಧ ಮಹಾ ಗುರುವಿನ ಚಿಂತನೆಗಳಲ್ಲಿ ಒಂದು.

ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದೇ 06 ಸೆಪ್ಟಂಬರ್ 2026ರ ಭಾನುವಾರದಂದು ನಗರದ ದೊಡ್ಡ ಕುರುಬರಹಳ್ಳಿ ಶ್ರೀ ಬಸ್ವತತ್ವ ಪೀಠದ ಆವರಣದಲ್ಲಿ ನಡೆಸುತ್ತಿರುವ 06ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿರುವ ನಿವೃತ್ತ ಉಪನ್ಯಾಸಕರು, ಸಾಹಿತಿಗಳು, ಅಂಕಣಕಾರರು ಪತ್ರಕರ್ತರಾಗಿ ತಮ್ಮ ಎಪ್ಪತೊಂಬತ್ತರ ಈ ವಯಸ್ಸಿನಲ್ಲೂ ಇಂದಿಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ದುಡಿಯುತ್ತಿರುವ ಚಿಕ್ಕಮಗಳೂರಿನ ಬಿ ತಿಪ್ಪೇರುದ್ರಪ್ಪನವರು ಮೂಲತಃ ಕಲ್ಲಿನಕೋಟೆ ಓಬವ್ವನ ನಾಡು ಚಿತ್ರದುರ್ಗ ಜಿಲ್ಲೆಯವರು, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಅಂಟಿಕೊಂಡಿರುವ ಹೊಳಲ್ಕೆರೆ ಮತ್ತು ಅಜ್ಜಂಪುರ ತಾಲೂಕಿನ ಗಡಿ ಗ್ರಾಮವಾದ ಮಾಳೇನಹಳ್ಳಿ ಯವರು, ಮಾಳೇನಹಳ್ಳಿಯ ಸಾಮಾನ್ಯ ಕೃಷಿ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದು, ಚಿತ್ರದುರ್ಗ ಜಿಲ್ಲೆಗೆ ಸೇರಿದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿ ಪದವಿ ಪಡೆದು ಮುಂದೆ ಆಂಗ್ಲ ಭಾಷಾ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ನಂತರ ವೃತ್ತಿ ಬದುಕನ್ನು ಆರಿಸಿಕೊಂಡು ಶಾಲಾ ಶಿಕ್ಷಕರಾಗಿ ತಮ್ಮ ಸರ್ಕಾರಿ ಕರ್ತವ್ಯವನ್ನು ಮೊದಲು ಆರಂಭಿಸಿದ್ದು ಚಿಕ್ಕಮಗಳೂರು ತಾಲೂಕಿನ ಕುರುಬರ ಬೂದಿಹಾಳ್ ನಲ್ಲಿ, ತದನಂತರ ಶಾಲಾ ಇನ್ಸ್ಪೆಕ್ಟರ್ ಆಗಿ ಆ ನಂತರ ಆಲ್ದೂರು ಮತ್ತು ಚಿಕ್ಕಮಗಳೂರು ಜೂನಿಯರ್ ಕಾಲೇಜಿನಲ್ಲಿ ಸುಧೀರ್ಘಕಾಲ ಆಂಗ್ಲ ಭಾಷಾ ಬೋಧಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.

ಸಾಮಾಜಿಕ, ಶೈಕ್ಷಣಿಕವಾಗಿ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ವೃತ್ತಿ ಮತ್ತು ಪ್ರವೃತ್ತಿಯೊಂದಿಗೆ ತಮ್ಮ ಇಡೀ ಬದುಕನ್ನು ಬಿ ತಿಪ್ಪೇರುದ್ರಪ್ಪನವರು ಗುರುತಿಸಿಕೊಂಡು ಬೆಳೆದು ದುಡಿದಿದ್ದು ಚಿಕ್ಕಮಗಳೂರು ಜಿಲ್ಲೆಯ ಜನತೆಯ ಮದ್ಯೆ, ಈ ಎಲ್ಲ ಕಾರಣಕ್ಕಾಗಿ ಬಿಟಿಆರ್ ಎಂಬ ಪ್ರೀತಿಯ ನಾಮಾಂಕಿತದೊಂದಿಗೆ ಈಗ ಚಿಕ್ಕಮಗಳೂರು ಜಿಲ್ಲೆಯವರಾಗಿಯೇ ಈ ಜಿಲ್ಲೆಯ ಜನರಲ್ಲಿ ಒಬ್ಬರಾಗಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ನಮ್ಮ ನಡುವೆ ನೆಲೆಗೊಂಡಿದ್ದಾರೆ.

1973ರಲ್ಲಿ ವೃತ್ತಿ ಬದುಕನ್ನು ಆರಂಭಿಸಿದ ಬಿ ತಿಪ್ಪೇರುದ್ರಪ್ಪನವರು ಸುಮಾರು 40 ವರ್ಷಗಳ ಕಾಲ ಸರ್ಕಾರಿ ಕರ್ತವ್ಯವನ್ನು ನಿರ್ವಹಿಸಿದವರು, ವೃತ್ತಿ ಬದುಕಿನ ಜೊತೆ ಜೊತೆಗೆ ಪ್ರವೃತ್ತಿಯಾಗಿ ಸಾಹಿತ್ಯ ಮತ್ತು ಸಮಾಜಮುಖಿ ಅಧ್ಯಯನ, ಈ ಅಧ್ಯಯನದಲ್ಲಿ ಕಂಡುಕೊಂಡ ಫಲತಾಂಷಗಳ ಬಗ್ಗೆ ಬರವಣಿಗೆ ಮತ್ತು ಜನ ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಕಾಲಕಾಲಕ್ಕೆ ಎದುರಾದ ಭಿನ್ನಾಭಿಪ್ರಾಯಗಳನ್ನು ಎದುರಿಸಿಕೊಂಡು, ಎದುರಿಗೆ ಬಂದ ಟಿಕೆ ಟಿಪ್ಪಣಿಗಳಿಗೆ ಉತ್ತರಿಸುತ್ತಾ, ಸಮಾಜಮುಖಿಯಾಗಿ ದುಡಿದುದ್ದನ್ನು ಗಮನಿಸಬಹುದು.

ಆಂಗ್ಲ ಭಾಷಾ ವಿಷಯದಲ್ಲಿ ಕಾಲೇಜು ಬೋಧಕರಾಗಿದ್ದ ಕಾರಣ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಹಿಡಿತವಿಟ್ಟುಕೊಂಡು,ಆಂಗ್ಲ ಭಾಷೆಯ ಸಾರಸತ್ವವನ್ನು ಕನ್ನಡಕ್ಕೆ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಆಂಗ್ಲ ಸಾಹಿತ್ಯಕ್ಕೆ ವಿನಿಮಯ ಮಾಡುವ ಸೇತು ಬಂದ ಸೇತುವೆಯಂತೆ ತನ್ನ ಪಾಡಿಗೆ ತಾನು ಹಲವಷ್ಟು ವಿಚಾರಗಳನ್ನು ಸಮಾಜಕ್ಕೆ ದಾಟಿಸುತ್ತಾ ಬಂದವರು ಈ ಬಿಟಿಆರ್.

ಉಪನ್ಯಾಸಕರಾಗಿದ್ದ ಸಮಯದಲ್ಲಿಯೇ ಪತ್ರಿಕಾ ರಂಗದ ಬಗ್ಗೆ ಆಸಕ್ತಿ ಇದ್ದ ಕಾರಣ ಫ್ರೀ ಲಾನ್ಸ್ ಜರ್ನಲಿಸ್ಟ್ ಆಗಿ 1886ರಲ್ಲಿಯೇ ಪತ್ರಿಕೆಗಳ ಅಂಕಣಕಾರರಾಗಿ ತಮ್ಮ ವಿಚಾರಧಾರೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡು ಅನೇಕ ವಿಷಯವನ್ನು ಮುನ್ನೆಲೆಗೆ ತಂದರು, ಇದಕ್ಕೆ ಉದಾಹರಣೆ ಎಂದರೆ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯು ಉಡುಪಿ ಲೋಕಸಭಾ ಕ್ಷೇತ್ರ ಎಂದು ಮಾತ್ರ ಕರೆಸಿಕೊಳ್ಳುತ್ತಿತ್ತು, ಈ ಉಡುಪಿ ಲೋಕಸಭಾ ಕ್ಷೇತ್ರವನ್ನು ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರ ಎಂದು ಪರಿಗಣಿಸಬೇಕೆಂದು ಬಿ ತಿಪ್ಪೇರುದ್ರಪ್ಪನವರು ಬರೆದು ಕೊಟ್ಟ ಪತ್ರವೊಂದು ಆಳುವ ಅಂದಿನ ಕೇಂದ್ರ ಸರ್ಕಾರದ ಮೇಲೆ ಪರಿಣಾಮ ಬೀರಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಶರಣ ಸಾಹಿತ್ಯ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ತಿಪ್ಪೇರುದ್ರಪ್ಪನವರು *ವಿಚಾರ ಸಂಪದ* ಎಂಬ ಹೆಸರಿನ ಮೊದಲ ಕೃತಿ ಹೊರತಂದರು, ಆ ನಂತರ *ದಲಿತರ ವಚನಗಳು* ಎಂಬ ಕೃತಿಯನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ, ಈ ನಡುವೆ ಲೇಖಕರಾಗಿ, ಅಂಕಣಕಾರರಾಗಿ, ವಿಮರ್ಶಕರಾಗಿ, ಅನುವಾದಕರಾಗಿ, ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ನಿರ್ದೇಶನ ಕೂಡ ಮಾಡಿ ತಮ್ಮ ರಂಗಾಸಕ್ತಿಯನ್ನು ತೋರಿಸಿದ್ದಾರೆ, ಇದರ ಜೊತೆಗೆ ಇಂಡಿಯನ್ ಎಕ್ಸ್ಪ್ರೆಸ್ ದಿನ ಪತ್ರಿಕೆಯ ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದ ಕರ್ನಾಟಕ ನೋಟ್ ಕಾಲಂ ನಲ್ಲಿ ಜಿಲ್ಲೆಯ ಹಲವಷ್ಟು ವಿಚಾರಗಳ ಬಗ್ಗೆ ಗಮನಸೆಳೆಯುವ ಅಂಕಣಗಳನ್ನು ಕೊಡಮಾಡಿದ್ದಾರೆ.

ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ ಚಿಕ್ಕಮಗಳೂರು ಜಿಲ್ಲೆಯ ಸಾಕ್ಷರತಾ ಆಂದೋಲನದ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ವಿವಿಧ ಸಾಧಕರ ದರ್ಶನದ ಪುಸ್ತಕ ಮತ್ತು ಸ್ಮರಣ ಸಂಚಿಕೆಯ ಸಂಪಾದಕರಾಗಿ, ಕಾಲೇಜು ಎನ್ಎಸ್ಎಸ್ ಘಟಕದ ಸಂಯೋಜಕರಾಗಿ ಕೆಲಸ ಮಾಡಿ, ಸರ್ಕಾರಿ ಕರ್ತವ್ಯ ದಿಂದ ನಿವೃತ್ತಿಯಾದ ನಂತರ ಕಳೆದ 20 ವರ್ಷಗಳಿಂದ ಇಂಡಿಯನ್ ಎಕ್ಸ್ಪ್ರೆಸ್ ಜಿಲ್ಲಾ ವರದಿಗಾರರಾಗಿ, ಪತ್ರಿಕಾ ಸಂಘದ ಪದಾಧಿಕಾರಿಗಳಾಗಿ ಇಂದಿಗೂ ದುಡಿಯುತ್ತಿದ್ದಾರೆ.

ನಾಡಿನ ಕನ್ನಡ ಸಾಹಿತ್ಯ ಲೋಕವನ್ನು ಕತ್ತೆತ್ತಿ ನೋಡಿದರೆ ಕನ್ನಡ ಭಾಷಾ ಶ್ರೀಮಂತಿಕೆಯನ್ನು ಉನ್ನತವಾಗಿ ಮೇಲೆತ್ತಿ ಬೆಳೆಸಿದವರಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರ ಪಾತ್ರವೂ ಹಿರಿದಾಗಿದೆ, ಉದಾಹರಣೆಗೆ ಲಂಕೇಶ್, ಅಮೂರ, ಅನಂತಮೂರ್ತಿ , ಚಂಪಾ, ಗಿರಡ್ಡಿ ಗೋವಿಂದರಾಜ್ ಇನ್ನು ಮುಂತಾದ ಈ ಪ್ರಸಿದ್ಧ ಕನ್ನಡ ಸಾಹಿತಿಗಳೆಲ್ಲ ಆಂಗ್ಲ ಪ್ರಾಧ್ಯಾಪಕರಾಗಿಯೇ ದುಡಿದು ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದವರು, ಈ ನಿಟ್ಟಿನಲ್ಲಿ ಬಿ ತಿಪ್ಪೇರುದ್ರಪ್ಪನವರು ಆಂಗ್ಲ ಪ್ರಾಧ್ಯಾಪಕರಾಗಿ ಕನ್ನಡ ನಾಡು-ನುಡಿಗೆ ತಮ್ಮದೇ ಆದ ಇತಿಮಿತಿಯಲ್ಲಿ ಬಹು ಆಯಾಮದೊಂದಿಗೆ ಕನ್ನಡದ ನುಡಿ ಸೇವೆ ಮಾಡಿದವರಾಗಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಮೂಲಕ ಹಳ್ಳಿಗಳಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯಗಳನ್ನು ತಿಪ್ಪೆ ರುದ್ರಪ್ಪನವರು ಯೋಜನೆಯ ಶಿಬಿರಾಧಿಕಾರಿಯಾಗಿ ಸರಿದೂಗಿಸಿ ಒಡೆದ ಮನಸ್ಸುಗಳನ್ನು ಒಂದುಗೂಡಿಸಿದ ಬಗ್ಗೆ ಅಂದಿನ ದಿನಗಳಲ್ಲಿ ದಿನಪತ್ರಿಕೆಯಲ್ಲಿ ಪ್ರಚಾರವಾಗಿದ್ದನ್ನು ಈ ಸಂದರ್ಭದಲ್ಲಿ ಗಮನಿಸಬಹುದು.

ವಾಚಾಳಿತನಕ್ಕೂ ವಾಗ್ಮಿತನಕ್ಕೂ ವ್ಯತ್ಯಾಸವಿದೆ, ವಾದಕ್ಕೂ ಮತ್ತು ಚರ್ಚೆಗೂ ಬೇರೆ ಇದೆ ಅರ್ಥವಿದೆ, ಕುಟುಂಬದಲ್ಲಿ ಒಬ್ಬ ಯಜಮಾನ ಅಥವಾ ಯಜಮಾನಿ ಘನ ವ್ಯಕ್ತಿತ್ವವನ್ನು ರೂಡಿಸಿಕೊಂಡು ಕಪ್ಪು ಚುಕ್ಕೆ ಇಲ್ಲದೆ ಉದಾತ್ತವಾಗಿ ಬದುಕಿದರೆ ಆ ಮನೆತನದ ಕನಿಷ್ಠ ಮೂರು ತಲೆಮಾರಿಗೆ ಈ ಸಮಾಜ ಗೌರವ ಕೊಡುತ್ತದೆ ಎಂಬ ಮಾತಿದೆ, ಯಾವ ವ್ಯಕ್ತಿಯು ಸಮಾಜದಲ್ಲಿ ಪರಿಪೂರ್ಣರಲ್ಲ, ನಾವೆಲ್ಲ ಮನುಷ್ಯರು, ತಪ್ಪು ಒಪ್ಪು, ಪ್ರಸಂಶೆ~ ವಿಮರ್ಶೆ, ಟೀಕೆ ಟಿಪ್ಪಣಿಗಳ ಜೊತೆ ಜೊತೆಗೆ ಬದುಕು ಸಾಗುತ್ತದೆ, ಯಾವಾಗ ನಮ್ಮ ಆದ್ಯತೆಗಳು ಬದಲಾಗುತ್ತವೋ ಆಗ ನಮ್ಮ ಉತ್ತರಗಳು ನಿಧಾನವಾಗುತ್ತವೆ ಮತ್ತು ಮಾತುಗಳು ಚಿಕ್ಕದಾಗುತ್ತವೆ, ವ್ಯಕ್ತಿಯ ವ್ಯಕ್ತಿತ್ವ ಕುಬ್ಜವಾಗುತ್ತದೆ, ಇಂತಹ ಎಲ್ಲ ಸರಿ ತಪ್ಪುಗಳ ಮಧ್ಯೆಯೇ ಬದಲಾದ ಸಮಯದ ಮಧ್ಯೆಯೇ ವಾಚಾಳಿತನಕ್ಕೆ ಇಳಿಯದೆ, ವಾದಕ್ಕೆ ಬೀಳದೆ ಚರ್ಚೆ ಮತ್ತು ಸಂವಾದದ ಮೂಲಕ ಸಾಮಾಜಿಕ ಜೀವನವನ್ನು ಬಲಪಡಿಸಿಕೊಂಡ ತಿಪ್ಪೇರುದ್ರಪ್ಪನವರು ಚಿಕ್ಕಮಗಳೂರು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಗೌರವಕ್ಕೆ ಭಾಜನರಾಗುವ ಮೂಲಕ ಮತ್ತಷ್ಟು ಗುರುತರವಾದ ಸಾಮಾಜಿಕ ಮತ್ತು ಸಾಹಿತ್ಯಿಕ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.

ಪ್ರಾಧ್ಯಾಪಕರಾಗಿ, ಪತ್ರಕರ್ತರಾಗಿ, ಅಂಕಣಕಾರರಾಗಿ, ಸಾಹಿತಿಯಾಗಿ ಗುರುತಿಸಿಕೊಂಡಿರುವ ತಿಪ್ಪೇರುದ್ರಪ್ಪನವರು ಇಡೀ ಈ ಸಮಾಜದ ಹಲವು ಮಗ್ಗಲುಗಳನ್ನು , ಸಾಮಾಜಿಕ ವ್ಯವಸ್ಥೆಯ ಅಸಮಾಧಾನಗಳನ್ನು, ಶ್ರೇಷ್ಠತೆ ಮತ್ತು ಕನಿಷ್ಠತೆಯ ವ್ಯಸನದ ರೋಗಗಳನ್ನು, ಪ್ರಶಸ್ತಿ ಪುರಸ್ಕಾರ ಕೀರ್ತಿ ಶನಿಯ ಬೆನ್ನತ್ತಿ ಹೋಗುತ್ತಿರುವ ಮನಸ್ಸುಗಳನ್ನು , ಜಾತಿ ಮತ ಪಂಥವೆಂಬ ರೋಗಕ್ಕೆ ಬಿದ್ದು ಬಳಲುತ್ತಿರುವ ಸಮಾಜವನ್ನು ಕುರಿತು ತಮ್ಮ ಸರ್ವಾಧ್ಯಕ್ಷತೆಯ ಮಾತುಗಳನ್ನು ಆಡುವ ಮೂಲಕ 06ನೇ ಸಾಹಿತ್ಯ ಸಮ್ಮೇಳನಕ್ಕೆ ಹೊಸ ಬಾಷ್ಯ ಬರೆಯಬೇಕಾಗಿದೆ, ಈ ನಿಟ್ಟಿನಲ್ಲಿ ತಮ್ಮ ಸರ್ವಾಧ್ಯಕ್ಷತೆಯ ಮಾತುಗಳನ್ನು ಒಂದು ತೂಕದೊಂದಿಗೆ ಕಟ್ಟಿಕೊಡುತ್ತೀರೆಂಬ ನಿರೀಕ್ಷೆ ಸಾಹಿತ್ಯ ವಲಯದಲ್ಲಿ ಕನ್ನಡದ ಕಂಕಣವನ್ನು ಕಟ್ಟಿಕೊಂಡು ದುಡಿಯುತ್ತಿರುವ ನಿಜವಾದ ಪರಿಚಾರಕರ ಆಶಯವಾಗಿದೆ.
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed