“ಕೈ ತಪ್ಪಿದ ಮಂತ್ರಿ ಸ್ಥಾನ. ಅವಮಾನ ಜಿಲ್ಲೆಗೋ, ಜನಾಂಗಕ್ಕೋ, ಮಹಿಳೆಗೋ.”
1 min read
ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಮಹಿಳೆಯರು ಸ್ಥಾನ ವಂಚಿತರಾದ ಬಗ್ಗೆ ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಮಾಧ್ಯಮ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಲ್ಲಿದೆ. ರಾಜ್ಯ ಸರ್ಕಾರದ ಆದಾಯದ ಮೂಲ ಜಿಲ್ಲೆಗಳಲ್ಲಿ ನಮ್ಮ ಕಾಫಿ ನಾಡು ಚಿಕ್ಕಮಗಳೂರು ಮೊದಲ 5 ಸ್ಥಾನಗಳಲ್ಲಿ ಒಂದಾಗಿದೆ.

ತನ್ನ ಪ್ರಕೃತಿ ಸೌಂದರ್ಯದಿಂದ ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕರ್ನಾಟಕ ರಾಜ್ಯದ ಮೊದಲ ಜಿಲ್ಲೆಯು ಹೌದು. ಇಂದಿರಾ ಗಾಂಧಿಯಂತ ನಾಯಕರನ್ನು ಚಿಕ್ಕಮಗಳೂರು ಜಿಲ್ಲೆಯಿಂದ ಲೋಕಸಭೆ ಕಳಿಸಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಾಗೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣಕ್ಕೆ ಅನೇಕ ರಾಜಕಾರಣಿಗಳನ್ನು ಕೊಡುಗೆಯಾಗಿ ಕೊಟ್ಟಂತಹ ಹೆಗ್ಗಳಿಕೆಯೂ ಈ ಕಾಫಿ ನಾಡಿಗಿದೆ. ಹಾಗೆ ಇತ್ತೀಚೆಗೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ವಿಷಯವೆಂದರೆ ನಾಲ್ಕೂವರೆ ವರ್ಷಗಳಿಂದ ಸತತ ಕಾನೂನು ಹೋರಾಟ ನಡೆಸಿ ಸರ್ವೋಚ್ಚ ನ್ಯಾಯಾಲಯದಿಂದ 9 ವೋಟುಗಳಿಂದ ವಿಧಾನಪರಿಷತ್ ಚುನಾವಣೆಯಲ್ಲಿ ವಿಜಯಶಾಲಿ ಎಂದು ತೀರ್ಪು ಪಡೆದು ಬಂದ ಚಿಕ್ಕಮಗಳೂರು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರಾದ ಗಾಯತ್ರಿ ಶಾಂತೇಗೌಡರು ಕೊನೆಗಳಿಗೆಯಲ್ಲಿ ಮಂತ್ರಿ ಸ್ಥಾನದಿಂದ ವಂಚಿತರಾದ ಬಗ್ಗೆ.
ರಾಜಕೀಯ ಹಿನ್ನೆಲೆ:

ಮೂಲತಃ ಕುರುಬ ಜನಾಂಗದ ಗಾಯತ್ರಿ ಎನ್ನುವವರು ಹಾಸನ ಜಿಲ್ಲೆಯವರು. ಗುತ್ತಿಗೆದಾರರಾದ ಶಾಂತೇಗೌಡರನ್ನು ಮದುವೆಯಾದ ನಂತರ ಚಿಕ್ಕಮಗಳೂರು ಸೊಸೆಯಾದ ಗಾಯತ್ರಿ ಶಾಂತೇಗೌಡರಿಗೆ ಆರಂಭದ ದಿನಗಳಲ್ಲಿ ರಾಜಕೀಯ ಅನಿವಾರ್ಯತೆ ಕೂಡ ಇರಲಿಲ್ಲ ಆರ್ಥಿಕವಾಗಿ ಸದೃಢರಾಗಿದ್ದ ಕುಟುಂಬ ಆಕಸ್ಮಿಕವಾಗಿ ಪುತ್ರನನ್ನು ಕಳೆದುಕೊಂಡ ಇವರಿಗೆ ಪುತ್ರಿ ಕಾವ್ಯ, ಅಳಿಯ ಸಂತೋಷ್, (ಬೇಲೂರು ಕಾಂಗ್ರೆಸ್ ಯುವ ಮುಖಂಡ) ಮತ್ತು ಎರಡು ಮುದ್ದಾದ ಮೊಮ್ಮಕ್ಕಳು. ಪೂರ್ಣಾವಧಿ ರಾಜಕೀಯ ಆರಂಭಕ್ಕೂ ಮೊದಲು ಜಿಲ್ಲೆಯಲ್ಲಿ ಇವರಿಗೆ ಇದ್ದ ಕಾಂಗ್ರೆಸ್ ಪಕ್ಷದ ಅನಿವಾರ್ಯಕ್ಕಿಂತಲೂ ಜಿಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಗಾಯತ್ರಿ ಶಾಂತೇಗೌಡರ ಅನಿವಾರ್ಯವೇ ಹೆಚ್ಚಾಗಿತ್ತು . ಕಾರಣ ಆರ್ಥಿಕವಾಗಿಯೂ ಸದೃಢವಾಗಿದ್ದ ಗಾಯತ್ರಿ ಶಾಂತೇಗೌಡರಿಗೆ ತಮ್ಮ ಜನಾಂಗದ ಬೆಂಬಲವೂ ಕೂಡ ಇತ್ತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಇವರು ತಮ್ಮದೇ ಜನಾಂಗದ ಈಗಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜಕೀಯ ನಾಯಕರಾಗಿ ಸ್ವೀಕರಿಸಿ ಕಾಂಗ್ರೆಸ್ ಪಕ್ಷದಿಂದ 2010ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಪಡೆದು ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಂ.ಎಸ್ ಬೋಜೇಗೌಡರನ್ನು ಸೋಲಿಸಿ ವಿಧಾನ ಪರಿಷತ್ಗೆ ಆಯ್ಕೆಯಾದರು. ಅಲ್ಲಿಂದ ಇವರ ಪೂರ್ಣಾವಧಿ ರಾಜಕೀಯ ಜೀವನ ಪ್ರಾರಂಭವಾಯಿತು. 2013ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಇವರ ಕಾರ್ಯಕ್ಷಮತೆ, ಸಮುದಾಯದ ಬೆಂಬಲ, ಮತ್ತು ವೈಯಕ್ತಿಕ ವರ್ಚಸ್ಸಿನಿಂದ ಕಾಂಗ್ರೆಸ್ ಪಕ್ಷದ ಚಿಕ್ಕಮಗಳೂರು ಜಿಲ್ಲೆಯ ಪ್ರಶ್ನಾತೀತ ನಾಯಕಿಯಾಗಿ ರೂಪುಗೊಂಡರು. 2016ರ ಪರಿಷತ್ ಚುನಾವಣೆಯಲ್ಲಿ ಈಗಿನ ಮಾಜಿ ಪರಿಷತ್ ಸದಸ್ಯ ಎಂಕೆ ಪ್ರಾಣೇಶ್ ವಿರುದ್ಧ ಸೋಲು ಕಂಡರೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ಮತ್ತೆ ಮೂರನೇ ಬಾರಿಗೆ 2022ರ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಮತ್ತೊಮ್ಮೆ ಚಿಕ್ಕಮಗಳೂರು ಕ್ಷೇತ್ರದಿಂದ ಎಂ ಕೆ ಪ್ರಾಣೇಶ್ ವಿರುದ್ಧ ಸೋಲು ಕಂಡರು. ತಾಂತ್ರಿಕ ಕಾರಣದಿಂದ ಆದಂತಹ ಈ ಸೋಲನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿ ಕೊನೆಗೂ ನ್ಯಾಯಾಲಯದ ಆದೇಶದಂತೆ ಒಂಬತ್ತು ಮತಗಳಿಂದ ಜಯಶಾಲಿಯಾಗಿ ಎರಡನೇ ಬಾರಿಗೆ ಚಿಕ್ಕಮಗಳೂರಿನಿಂದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ರಾಜಕೀಯ ಪಡಸಾಲೆಯಲ್ಲಿ ಸ್ವಲ್ಪ ಒರಟು ಸ್ವಭಾವದವರು ಎಂದು ಕರೆಸಿಕೊಳ್ಳುವ ಗಾಯತ್ರಿಶಾಂತೇಗೌಡರು ಅವರ ಈ ಸ್ವಭಾವದಿಂದಲೇ ಪಕ್ಷದ, ಕಾರ್ಯಕರ್ತರು ಮತ್ತು ಸಾರ್ವಜನಿಕರಿಗಾಗಿ ಮಾಡಿದ ಕೆಲಸ ಮತ್ತು ವೈಯಕ್ತಿಕ ಸಹಾಯಗಳು ಅದೆಷ್ಟೋ ಇದ್ದವು. ಅವರ ಕಚೇರಿಗೆ ಬರೆದಿದ್ದರೂ ಒಂದು ದೂರವಾಣಿ ಕರೆ ಮಾಡಿದರು ಕರೆಯ ಮೂಲಕವೇ ಕಾರ್ಯಕರ್ತರ ಸಮಸ್ಯೆ ಬಗೆಹರಿಸುವ ನಾಯಕಿಯಾಗಿ ಜಿಲ್ಲೆಯಲ್ಲಿ ರೂಪುಗೊಂಡರು. ಅಧಿಕಾರ ಇದ್ದಾಗಲೂ ಇಲ್ಲದಾಗಲೂ ಇವರ ಮನೆಯ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ದಿನಂಪ್ರತೀ ಬರುತ್ತಿದ್ದದ್ದು ಇವರಲ್ಲಿ ಭವಿಷ್ಯದ ರಾಜ್ಯ ನಾಯಕಿಯನ್ನು ಗುರುತಿಸುವಂತಿತ್ತು. ಪಕ್ಷದ ಕಾರ್ಯಕರ್ತರು ಮತದಾರರು ಹಾಗೂ ಸಾರ್ವಜನಿಕರಿಗೋಸ್ಕರ ಜಿಲ್ಲೆಯ ಆಡಳಿತ ಮತ್ತು ಅಧಿಕಾರಿ ವರ್ಗವನ್ನು ಸದುಪಯೋಗಪಡಿಸಿಕೊಂಡ ಜಿಲ್ಲೆಯ ಯಾವುದೇ ರಾಜಕಾರಣಿ ಇದ್ದರೆ (ಎಲ್ಲಾ ರಾಜಕೀಯ ಪಕ್ಷಗಳನ್ನು ಒಳಗೊಂಡಂತೆ) ಅದು ಕೇವಲ ಗಾಯತ್ರಿ ಶಾಂತೇಗೌಡರು ಮಾತ್ರ.
ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ಬಾರಿ ಆಯ್ಕೆಯಾದ ಮತ್ತು ಕಳೆದ ಸೋಮವಾರ ವಿಧಾನಸಭೆಯಲ್ಲಿ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂಭ್ರಮದಲ್ಲಿದ್ದ ಗಾಯತ್ರಿ ಶಾಂತಿ ಗೌಡರಿಗೆ ಹೈಕಮಾಂಡ್ ಪಟ್ಟಿಯಲ್ಲಿ ಮಂತ್ರಿಯಾಗಿ ಆಯ್ಕೆಯಾಗಿರುವ ತಮ್ಮ ಹೆಸರು ನೋಡಿ ಸಹಜವಾಗಿಯೇ ಮಾಧ್ಯಮದವರೊಂದಿಗೆ ಈ ದಿನ ಸಂತಸವನ್ನು ಹಂಚಿಕೊಂಡಿದ್ದರು, ಹಾಗೆಯೇ ತುಂಬಾ ವರ್ಷಗಳ ನಂತರ ಚಿಕ್ಕಮಗಳೂರು ಜಿಲ್ಲೆಗೆ ಮಂತ್ರಿ ಪದವಿ ಹಾಗೂ ಒಬ್ಬ ಮಹಿಳೆಗೆ ಮಂತ್ರಿ ಪದವಿ ಸಿಕ್ಕಿದ್ದಕ್ಕೆ ಜಿಲ್ಲೆಯ ಜನತೆ ಕೂಡ ಸಂಭ್ರಮಿಸಿದ್ದರು. ಆದರೆ ಬೆಳಕು ಸರಿದು ಕತ್ತಲು ಕವಿದಂತೆ ಸೋಮವಾರ ಸಂಜೆ ಹೊತ್ತಿಗೆ ಆಗಲೇ ಅವರ ಮಂತ್ರಿ ಪದವಿ ಕೈತಪ್ಪಿದ್ದಕ್ಕೆ ಜಿಲ್ಲೆಯ ಜನತೆಗೆ ಬಾರಿ ನಿರಾಸೆಯಾಯಿತು. ಎರಡು ಬಾರಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಒಂದು ಬಾರಿ ಸೋಲು ಕಂಡು ಹಾಗೆ ಎರಡು ಬಾರಿ ಕಾಂಗ್ರೆಸ್ ಪಕ್ಷದ ಆದೇಶಕ್ಕೆ ಬೆಲೆಕೊಟ್ಟು ತ್ಯಾಗದ ಸಂಕೇತವಾಗಿ ಎಂಎಲ್ಎ ಚುನಾವಣೆ ಕಣದಿಂದ ಹಿಂದೆ ಸರಿದು ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಯಾವುದೇ ಮುಜುಗರ ಆಗದಂತೆ ನಡೆದುಕೊಂಡ ಗಾಯತ್ರಿ ಶಾಂತೇಗೌಡರು ಸಹಜವಾಗಿ ಮಂತ್ರಿ ಪದವಿಗೆ ಅರ್ಹರು ಕೂಡ. ಜಿಲ್ಲೆಯ ಕ್ಷೇತ್ರದ ಹಾಗೂ ಸ್ಥಳೀಯ ಕಾರ್ಯಕರ್ತರು ಪಕ್ಷದ ಮುಖಂಡರುಗಳು ಮತ್ತು ಜನರಿಗೆ ಸಾಮಾನ್ಯ ರೀತಿಯಲ್ಲಿ ಸ್ಪಂದಿಸುತ್ತಿದ್ದ ಇವರು 2018ರ ಚುನಾವಣೆಯಲ್ಲಿ ಬಿ. ಎಲ್. ಶಂಕರ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬಳಸಿ ಚಿಕ್ಕಮಗಳೂರು ಎಂಎಲ್ಎ ಟಿಕೆಟ್ ತಂದಾಗ ಮಾಧ್ಯಮದವರ ಮುಂದೆ ಭಾವುಕರಾಗಿ ಕಣ್ಣೀರಿಟ್ಟಿದ್ದು ಬಿಟ್ಟರೆ ಮೊನ್ನೆ ಪಟ್ಟಿಯಲ್ಲಿ ಮಂತ್ರಿ ಸ್ಥಾನ ಘೋಷಿಸಿ ಕೊನೆ ಗಳಿಗೆಯಲ್ಲಿ ಅವರ ಹೆಸರನ್ನು ಕೈಬಿಟ್ಟಾಗ ಅದೇ ಭಾವುಕತೆ ಅವರ ಮುಖದಲ್ಲಿತ್ತು. ಚಿಕ್ಕಮಗಳೂರು ಜಿಲ್ಲೆಗೆ (ಜನತೆಗೆ) ಕೈತಪ್ಪಿದ ಮಂತ್ರಿ ಪದವಿಯ ಸಂಕೇತವಾಗಿತ್ತು ಆ ಬಾವುಕತೆ.
ಜನರಿಂದ ನೇರವಾಗಿ ಆಯ್ಕೆಯಾಗದ ಕಾರಣಕ್ಕೋ ಅಥವಾ ಬೆಂಬಲಿಗರ ದೊಡ್ಡ ಪಡೆ ಇಲ್ಲದೇ ಏನೋ ಇಂದು ಚಿಕ್ಕಮಗಳೂರಿನಲ್ಲಿ ಗಾಯತ್ರಿ ಶಾಂತಿ ಗೌಡರಿಗೆ ಮಂತ್ರಿ ಪದವಿ ಕೈತಪ್ಪಿದ್ದಕ್ಕೆ ಬಹಿರಂಗವಾಗಿ ಎಲ್ಲೂ ಪ್ರತಿಭಟನೆಗಳಾಗಲಿಲ್ಲ. ಇವರಿಂದ ಸಹಾಯ ಪಡೆದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮತ್ತು ಹಿಂಬಾಲಕರುಗಳು ಬೀದಿಗಿಳಿದು ಪ್ರತಿಭಟನೆ ಮಾಡಲಿಲ್ಲ. ಬದಲಾಗಿ ಅವರ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳಿಗಷ್ಟೇ ಸೀಮಿತವಾಯಿತು. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಅವರು ರಾಜಕೀಯ ಜೀವನದುದ್ದಕ್ಕೂ ತಮ್ಮ ಸುತ್ತಮುತ್ತ ಬಹುಪರಾಕ್ ಹಾಕುವ ಬೆಂಬಲಿಗರ ಪಡೆಯನ್ನು ಇಟ್ಟುಕೊಳ್ಳಲಿಲ್ಲ ಅದೇ ಅವರ ಸರಳ ರಾಜಕಾರಣಕ್ಕೆ ಸಾಕ್ಷಿಯಾಗಿತ್ತು.
ತಮ್ಮ ಮಗನ ಭವಿಷ್ಯಕ್ಕೋಸ್ಕರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಾಯತ್ರಿ ಶಾಂತಗೌಡರನ್ನು ಬಲಿಪಶು ಮಾಡಿದರು. ಅವರ ಮಂತ್ರಿ ಸ್ಥಾನ ತಪ್ಪಲು ಸಿದ್ದರಾಮಯ್ಯನವರ ಕೈವಾಡವಿದೆ. ಹಾಗೇ ಸಿದ್ದರಾಮಯ್ಯನವರ ಒಲವು ಮಾಜಿ ಮಂತ್ರಿ ಉಮಾಶ್ರೀ ಪರವಾಗಿದೆ ಎಂದು ಮಾಧ್ಯಮದರೊಡನೆ ಸೇರಿ ದಿಕ್ಕು ತಪ್ಪಿಸುವ ಕೆಲಸಕ್ಕೆ ಕೆಲವು ಅಗೋಚರ ಶಕ್ತಿಗಳು ಮುಂದಾಗಿವೆ, ಆದರೆ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾದ ಜಿಲ್ಲಾ ಪ್ರಭಾವಿ ಕುರುಬ ಜನಾಂಗದ ಮುಖಂಡರಾದ ಗಾಯತ್ರಿ ಶಾಂತೇಗೌಡರಿಗೆ ಮೂರು ಬಾರಿ ಪರಿಷತ್ ಚುನಾವಣಾ ಟಿಕೆಟ್ ಕೊಡಿಸಿ ಎರಡು ಬಾರಿ ಅವರ ಗೆಲುವಿಗೆ ಸಹಕರಿಸಿ ಮತ್ತು ಅವರನ್ನು ಕೆಪಿಸಿಸಿ ಸದಸ್ಯರನ್ನಾಗಿ ಮಾಡಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಅವರಿಗೆ ಒಂದು ಗೌರವ ಮತ್ತು ಗುರುತನ್ನು ತಂದು ಕೊಟ್ಟವರು ಇದೇ ಸಿದ್ದರಾಮಯ್ಯನವರು ಎಂದು ಜಿಲ್ಲಾ ಮತ್ತು ರಾಜ್ಯದ ಜನತೆಗೆ ತಿಳಿಯದ ವಿಷಯವೇನಲ್ಲ.
ಇಂದು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷ ಇದಕ್ಕೆ 5 ಸ್ಥಾನ ಗೆಲ್ಲುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕುರುಬ ಜನಾಂಗದ ಇದೇ ಗಾಯತ್ರಿ ಶಾಂತೇಗೌಡರು, ಮುಂದೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇವರಿಗೆ ಮಂತ್ರಿ ಸ್ಥಾನವನ್ನು ವಂಚಿಸಿ ಈ ಪ್ರಭಾವಿ ರಾಜಕಾರಣಿಯನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ತೀವ್ರವಾದ ಹಿನ್ನಡೆಯಾಗುವುದಂತೂ ಖಚಿತ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮತ್ತು ಜಿಲ್ಲೆಯ ಜನತೆಯ ಅಭಿಪ್ರಾಯವಾಗಿದೆ.
ಈ ಹಿಂದೆ ಎಸ್ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಮೋಟ್ಟಮ್ಮ, ಡಿ. ಬಿ ಚಂದ್ರೇಗೌಡ ಮತ್ತು ಸಗೀರ್ ಅಹಮದ್ ಸೇರಿ ಮೂರು ಜನ ಮಂತ್ರಿಗಳನ್ನ ಈ ಜಿಲ್ಲೆ ಹೊಂದಿತ್ತು. ನಮ್ಮ ಜಿಲ್ಲೆ ಕಂಡ ಕೊನೆಯ ಮಹಿಳಾ ಮಂತ್ರಿ ಮೋಟಮ್ಮನವರು. ಇದೀಗ ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರೆದಂತಾಗಿದೆ ನಮ್ಮ ಜಿಲ್ಲೆಯ ಪ್ರಸ್ತುತ ಪರಿಸ್ಥಿತಿ. ಅದ್ಯಾವ ಶಕ್ತಿಗಳು ಸದ್ಯದ ಪರಿಸ್ಥಿತಿಗೆ ನಮ್ಮ ಜಿಲ್ಲೆಗೆ ಮಂತ್ರಿ ಸ್ಥಾನವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿವೆ ಎಂದು ಮುಂದಿನ ದಿನಗಳಲ್ಲಿ ಕಾಯ್ದು ನೋಡೋಣ.
ಮಾನ್ಯ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ಇಂದು ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷನಿಷ್ಠ, ಸರಳ ಮತ್ತು ಚಿಕ್ಕಮಗಳೂರಿನ ಪ್ರಶ್ನಾತೀತ ಕಾಂಗ್ರೆಸ್ ನಾಯಕಿಯಾದ ಗಾಯತ್ರಿ ಶಾಂತೇಗೌಡರಿಗೆ ಮಂತ್ರಿ ಪದವಿ ಕೊಟ್ಟು ಚಿಕ್ಕಮಗಳೂರು ಜನತೆಗೆ, ಒಂದು ಜನಾಂಗಕ್ಕೆ, ಒಂದು ಮಹಿಳೆಗೆ ನ್ಯಾಯವನ್ನು ಒದಗಿಸಿ ಕೊಡಬೇಕೆಂದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕೆಂದು ಪಕ್ಷಾತೀತವಾಗಿ ಚಿಕ್ಕಮಗಳೂರು ಜನತೆ ಬಯಸುತ್ತಿದ್ದಾರೆ.
✍🏻ಬರಹ ಕೃಪೆ.✍🏻

ಮಧು K. ದುರ್ಗ
(ಚಿಕ್ಕಮಗಳೂರು ಮಧು).
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

